ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಯೋಜನೆಗೆ ತಡೆ: ತಮಿಳುನಾಡು ಸರ್ಕಾರ ವಜಾಕ್ಕೆ ಒತ್ತಾಯಿಸಿ ಮನವಿ

Published 22 ಮಾರ್ಚ್ 2024, 13:37 IST
Last Updated 22 ಮಾರ್ಚ್ 2024, 13:37 IST
ಅಕ್ಷರ ಗಾತ್ರ

ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಗೆದ್ದರೆ ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ತಡೆ ಒಡ್ಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ತಮಿಳುನಾಡು ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆಯ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದರು. 

'ತಮಿಳುನಾಡಿನ ಆಡಳಿತಾರೂಢ ಡಿಎಂಕೆಯು ಲೋಕಸಭೆ ಚುನಾವಣೆ  ಸಂಬಂಧ ಬಿಡುಗಡೆ ಮಾಡಿದ ತನ್ನ ಪ್ರಣಾಳಿಕೆಯಲ್ಲಿ, ಕರ್ನಾಟಕದ ಉದ್ದೇಶಿಸಿತ ಮೇಕೆದಾಟು ಯೋಜನೆಗೆ ತಡೆ ಒಡ್ಡಲಾಗುವುದು ಎಂದು ಹೇಳಿದೆ. ಇದು ಖಂಡನೀಯ. ಇದು ದೇಶದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು’ ಎಂದು ಮನವಿಯಲ್ಲಿ ಹೇಳಲಾಗಿದೆ. 

‘ಚುನಾವಣೆ ಸಂದರ್ಭದಲ್ಲಿ ಬೇರೆ ರಾಜ್ಯದ ಕುಡಿಯುವ ನೀರಿನ ಯೋಜನೆಯ ಬಗ್ಗೆ ಮಾತನಾಡಿರುವುದು ಚುನಾವಣಾ ನೀತಿ ಸಂಹಿತೆಯನ್ನು ತಮಿಳುನಾಡು ಸರ್ಕಾರ ಉಲ್ಲಂಘನೆ ಮಾಡಿದಂತೆ ಆಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಲ್ಲಿನ ಮುಖ್ಯಮಂತ್ರಿ ಸ್ಟಾಲಿನ್ ಅಗೌರವ ತೋರಿಸಿದ್ದಾರೆ’ ಎಂದು ದೂರಲಾಗಿದೆ. 

‘ಕರ್ನಾಟಕ ರಾಜ್ಯದ ಮೇಕೆ ದಾಟು ಯೋಜನೆ ಅನುಷ್ಠಾನಗೊಂಡರೆ ರಾಜ್ಯದ ಅನೇಕ ಜಿಲ್ಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಸಿಗುತ್ತದೆ. ಕುಡಿಯುವ ನೀರಿನ ಯೋಜನೆಗೆ ಯಾವುದೇ ಕಾರಣಕ್ಕೂ ಯಾವುದೇ ಸರ್ಕಾರ, ವ್ಯಕ್ತಿ ಅಡ್ಡಿಪಡಿಸಲು ಸಾಧ್ಯವಿಲ್ಲ. ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಕುಡಿಯುವ ನೀರಿನ ಹಕ್ಕು ಪ್ರತಿಯೊಬ್ಬರಿಗೂ ಇದೆ. ತಮಿಳುನಾಡು ಸರ್ಕಾರವನ್ನು ವಜಾ ಮಾಡಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 

ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸ ಗೌಡ, ಪುರುಷೋತ್ತಮ್, ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಾ.ರಾ.ಕುಮಾರ್, ಶ್ರೀಗಂಧ  ಕನ್ನಡ ಯುವವೇದಿಕೆ ಅಧ್ಯಕ್ಷ ರವಿಚಂದ್ರಪ್ರಸಾದ್ ಕಹಳೆ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT