ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲಾ ಶಾಸನಗಳಿಗೆ ಬೇಕಿದೆ ರಕ್ಷಣೆ

ಕನ್ನಡ ನಾಡು– ನುಡಿ ಬಿಂಬಿಸುವ ಹಳೆಯ ಲಿಪಿ–ಕುರುಹುಗಳ ಅವಗಣನೆ
Last Updated 31 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಅಲ್ಲಲ್ಲಿ ಹಿಂದಿನ ಕಾಲದ ಶಿಲಾ ಶಾಸನಗಳು, ರಚನೆಗಳು ಪತ್ತೆಯಾಗಿವೆ. ಆದರೆ, ಚರಿತ್ರೆಯ ಮಹತ್ವದ ಭಾಗವಾಗಿ ಪುರಾತನ ಕಾಲದಲ್ಲಿ ರಚಿಸಲಾಗಿರುವ ‌ಈ ಕನ್ನಡ ಶಾಸನಗಳು, ದತ್ತಿ ಶಾಸನ, ಲಿಪಿಗಳು ರಕ್ಷಣೆ ಇಲ್ಲದೆ ಸೊರಗುತ್ತಿವೆ.

ಹಳೆಗನ್ನಡ ಸಾಹಿತ್ಯ ಹೊತ್ತ ಈ ಶಿಲಾ ಬರಹಗಳು ಕನ್ನಡಿಗರ ಸೌಭಾಗ್ಯದ ಸಂಕೇತ.ವೀರಗಲ್ಲುಗಳು ಪರಾಕ್ರಮದ ದ್ಯೋತಕ. ಅಂದಿನ ಆಡಳಿತಗಾರರು ಗ್ರಾಮದ ವಿಸ್ತೀರ್ಣ ಹಾಗೂ ದಾನಪತ್ರಗಳ ಒಕ್ಕಣೆಗಳನ್ನು ಅಕ್ಷರ ರೂಪದಲ್ಲಿ ಬಿಚ್ಚಿಟ್ಟಿದ್ದಾರೆ. ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ತಾಲ್ಲೂಕಿನಲ್ಲಿ ನಡೆಯುತ್ತಿಲ್ಲ ಎಂಬುದು ಜನರ ಬೇಸರ.

ಗ್ರಾಮೀಣ ಭಾಗಗಳಲ್ಲಿರುವ ಕೆಲವು ದೇವಾಲಯ ಕಂಬಗಳಲ್ಲಿ ಇರುವ ಕನ್ನಡ ಬರಹಗಳ ಮೇಲೆ ಬಣ್ಣ ಬಳಿಯಲಾಗಿದೆ. ಕೆಲವೆಡೆ ಶಾಸನಗಳನ್ನು ಉಜ್ಜಿ ವಿರೂಪಗೊಳಿಸಲಾಗಿದೆ. ಹಲವು ಕಲ್ಲಿನ ಮೂರ್ತಿಗಳು, ರಾಜ ವಿಗ್ರಹಗಳು ಮತ್ತು ಶಿಲೆಯಲ್ಲಿ ಅರಳಿದ ದ್ವಾರಪಾಲಕರ ಮೇಲೆ ಸುಣ್ಣ ಹಚ್ಚಿ ಐತಿಹಾಸಿಕ ದಾಖಲೆಗಳನ್ನು ಮರೆಮಾಚಲಾಗಿದೆ ಎಂದು ಸಾಹಿತಿ ಗುಂಬಳ್ಳಿಬಸವರಾಜು ಬೇಸರ ವ್ಯಕ್ತಪಡಿಸಿದರು.

ಯರಿಯೂರು ಶಾಂತ ವೀರಭದ್ರೇಶ್ವರ ದೇಗುಲದ ಹಳೆಗನ್ನಡ ಶಾಸನ, ವಡೆಗೆರೆಯ ಬಿದ್ದಾಂಜನೇಯ ದೇಗುಲದ ಬಳಿಯ ಶುದ್ಧ ಕನ್ನಡ ಬರಹಗಳು, ಬಿಳಿಗಿರಿರಂಗನಬೆಟ್ಟದ ಕಂಬದ ಶಾಸನವು ಅಧ್ಯಯನದ ದೃಷ್ಟಿಯಿಂದ ಪ್ರಾಮುಖ್ಯತೆ ಗಳಿಸಿದೆ ಎಂದು ಕವಿ ಮಹದೇವಸ್ವಾಮಿ ತಿಳಿಸಿದರು.

ಕಲ್ಲಿನ ಕೆತ್ತನೆಗಳಲ್ಲಿ ಸ್ಥಳೀಯ ದೇವ ದೇವತೆಯರ ಚಿತ್ರ, ಪ್ರಾಣಿಗಳ ರಚನೆ,ಕಲ್ಲನ್ನು ಕಲೆಯಾಗಿಸುವ ಶೈಲಿ ಕರಗತ ಮಾಡಿಕೊಂಡಿದ್ದ ದ್ರಾವಿಡ, ಹೊಯ್ಸಳ ಮತ್ತು ಚೋಳಅರಸರ ಕಾಲದ ಶಾಸನಗಳನ್ನು ಕೆಲ ಗ್ರಾಮಗಳಲ್ಲಿ ಕೆತ್ತಿ ನಿಲ್ಲಿಸಲಾಗಿದೆ.ಚಕ್ರವರ್ತಿ, ಮಂಡಲಾಧೀಶ್ವರರ ಪರಾಕ್ರಮದ ವರ್ಣನೆಗಳನ್ನು ಶಾಸನಗಳಲ್ಲಿ ವಿವರಿಸಲಾಗಿದೆ.ಇವು ಹಳೆಗನ್ನಡ ಬರಹದಲ್ಲಿದ್ದು, ಸಂಸ್ಕೃತ ಭೂಯಿಷ್ಠವಾಗಿವೆ. ಈ ಪೈಕಿ ಒಂದನ್ನು ಪಟ್ಟಣದಗೌರೀಶ್ವರ ದೇಗುಲದಲ್ಲಿ ಸಂರಕ್ಷಿಸಲಾಗಿದೆ.

ಲಭ್ಯ ಇರುವ ಕನ್ನಡದ ಶಾಸನಗಳು ಮತ್ತು ಸ್ಮಾರಕಗಳನ್ನು ಇತಿಹಾಸ ಸಂಶೋಧಕರು ಪತ್ತೆಹಚ್ಚಿ ಬೆಳಕು ಚೆಲ್ಲಬೇಕು ಎನ್ನುತ್ತಾರೆ ಕನ್ನಡ ಭಾಷಾ ಅಭಿಮಾನಿಗಳು.

ಇತಿಹಾಸದ ಆಕರಗಳು

ಅಲ್ಲಲ್ಲಿ ಕಾಣಸಿಗುವ ಕನ್ನಡ ಶಾಸನಗಳು ವೈಶಿಷ್ಟ್ಯಪೂರ್ಣವಾಗಿವೆ. ಕನ್ನಡದ ಜೊತೆಗೆಸಂಸ್ಕೃತ ಮತ್ತು ತಮಿಳು ಭಾಷೆಯ ಹತ್ತಾರು ಕಲ್ಲಿನ ರಚನೆಗಳು ನಾಡಿನ ಚರಿತ್ರೆಯನ್ನು ಕಟ್ಟಿಕೊಡುತ್ತವೆ. ಭಾಷಾ ಸಾಮರಸ್ಯ, ಪ್ರಾಚೀನತೆ ಮತ್ತು ಲಿಪಿಗಳ ಅಧ್ಯಯನಕ್ಕೆ ಇವು ಪ್ರಮುಖ ಆಕರವಾಗಿವೆ.

ಅಗರದ ರಾಮೇಶ್ವರ, ಲಕ್ಷ್ಮಿನರಸಿಂಹ ದೇವಾಲಯಗಳ ನಿರ್ಮಾಣದಲ್ಲಿ ಚೋಳರ ಪ್ರಭಾವ, ಯರಿಯೂರು ದೇಗುಲ ಸ್ಥಾಪನೆಗೆ ಹೊಯ್ಸಳರು, ಯಳಂದೂರು ಬಳೇಮಂಟಪಗಳ ರಚನೆಗೆ ಮುದ್ದನಾಡಿನ ಅರಸರು,ಬಿಳಿಗಿರಿ ರಂಗನಾಥಸ್ವಾಮಿ ಆಲಯಕ್ಕೆ ದತ್ತಿ ನೀಡಿದ ವಿಷಯಗಳನ್ನು ಶಾಸನಗಳಿಂದತಿಳಿಯಬಹುದು ಎಂದು ಇತಿಹಾಸ ಸಂಶೋಧಕ ಮತ್ತು ಕೆಸ್ತೂರು ಶಾಲಾ ಶಿಕ್ಷಕ ರಘು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT