ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಸಿನ್‌’ ನಿರ್ಮಾಣದ ಹಿಂದೆ ಕನ್ನಡಿಗನ ಶ್ರಮ

Published 6 ಫೆಬ್ರುವರಿ 2024, 5:44 IST
Last Updated 6 ಫೆಬ್ರುವರಿ 2024, 5:44 IST
ಅಕ್ಷರ ಗಾತ್ರ

ಚಾಮರಾಜನಗರ: ಕರ್ನಾಟಕದ ಗಡಿ, ಕೋಲಾರದಿಂದ 20 ಕಿ.ಮೀ ದೂರದಲ್ಲಿರುವ ಆಂಧ್ರಪ್ರದೇಶದ ಪಾಲಸಮುದ್ರಂನಲ್ಲಿ ಜನವರಿ 16ರಂದು ಪ್ರಧಾನಿ ಮೋದಿ ಅವರು ದೇಶಕ್ಕೆ ಸಮರ್ಪಿಸಿದ ಸೀಮಾ ಸುಂಕ, ಪರೋಕ್ಷ ತೆರಿಗೆಗಳು ಮತ್ತು ಮಾದಕವಸ್ತುಗಳ ರಾಷ್ಟ್ರೀಯ ಅಕಾಡೆಮಿ (ನಾಸಿನ್‌) ನಿರ್ಮಾಣದ ಹಿಂದೆ ಕನ್ನಡಿಗರೊಬ್ಬರು, ವಿಶೇಷವಾಗಿ ಜಿಲ್ಲೆಯರೊಬ್ಬರ ಶ್ರಮ ಇದೆ.   

500 ಎಕರೆ ವಿಶಾಲ ಪ್ರದೇಶದಲ್ಲಿ, 1,500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ, ಐಆರ್‌ಎಸ್‌ಗೆ (ಭಾರತೀಯ ಕಂದಾಯ ಸೇವೆ) ಸಂಬಂಧಿಸಿದ ಈ ದೊಡ್ಡ ಕ್ಯಾಂಪಸ್‌ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡವರು ಗುಂಡ್ಲುಪೇಟೆ ತಾಲ್ಲೂಕಿನ ಸವಕನಹಳ್ಳಿಪಾಳ್ಯ ಗ್ರಾಮದ ಜಿ.ನಾರಾಯಣಸ್ವಾಮಿ ಅವರು. 

ಬೆಂಗಳೂರಿನ ‘ನಾಸಿನ್‌’ನಲ್ಲಿ ಹೆಚ್ಚುವರಿ ಮಹಾ ನಿರ್ದೇಶಕರಾಗಿ (ಎಡಿಜಿ) ಕರ್ತವ್ಯ ನಿರ್ವಹಿಸುತ್ತಿರುವ ಅವರು ಪಾಲಸಮುದ್ರಂನಲ್ಲಿರುವ ಅಕಾಡೆಮಿಯ ಪ್ರಭಾರ ಹೊಣೆಯನ್ನೂ ನಿರ್ವಹಿಸುತ್ತಿದ್ದಾರೆ.   

1992ರ ಬ್ಯಾಚ್‌ನ ಐಆರ್‌ಎಸ್‌ ಅಧಿಕಾರಿಯಾಗಿರುವ ನಾರಾಯಣಸ್ವಾಮಿ ಅವರು, ಭಾರತೀಯ ಗುಪ್ತಚರ ಸಂಸ್ಥೆ ‘ರಾ’ನಲ್ಲಿಯೂ ಕೆಲಸ ಮಾಡಿದ್ದಾರೆ. ಮಾಲ್ಡೀವ್ಸ್‌, ಕೀನ್ಯಾದಂತಹ ರಾಷ್ಟ್ರಗಳಲ್ಲೂ ಸೇವೆ ಸಲ್ಲಿಸಿದ್ದಾರೆ. 

ಗುಂಡ್ಲುಪೇಟೆಯ ಡಿಬಿಜಿಜೆ ಕಾಲೇಜು, ನಂಜನಗೂಡಿನ ಜೆಎಸ್‌ಎಸ್‌ ಪಿಯು ಕಾಲೇಜುಗಳಲ್ಲಿ ಓದಿ ಮತ್ತು ಮೈಸೂರಿನಲ್ಲಿ ಉನ್ನತ ವ್ಯಾಸಂಗ ಮಾಡಿ ಯುಪಿಎಸ್‌ಸಿ ಬರೆದು ಐಆರ್‌ಎಸ್‌ಗೆ ಸೇರ್ಪಡೆಗೊಂಡ ಅವರು, 32 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ಸದ್ಯ ಕೇಂದ್ರ ತೆರಿಗೆ ಮತ್ತು ಸೀಮಾ ಸುಂಕ ಇಲಾಖೆಯಲ್ಲಿ ಪ್ರಧಾನ ಆಯುಕ್ತರ ಶ್ರೇಣಿಯ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 

17 ತಿಂಗಳಲ್ಲಿ ಕಾಮಗಾರಿ: ಐಆರ್‌ಎಸ್‌ ಪ್ರೊಬೇಷನರಿ ಅಧಿಕಾರಿಗಳಿಗೆ ತರಬೇತಿ ನೀಡುವ ಕ್ಯಾಂಪಸ್‌ ನಿರ್ಮಾಣ ಯೋಜನೆ ಕೇಂದ್ರದ ಮಹತ್ವಕಾಂಕ್ಷಿ ಯೋಜನೆಯಾಗಿತ್ತು. ಇದರ ನಿರ್ಮಾಣದ ಮೇಲ್ವಿಚಾರಣೆಯ ಹೊಣೆಯನ್ನು ಸರ್ಕಾರ ಜಿ.ನಾರಾಯಣಸ್ವಾಮಿ ನೇತೃತ್ವದ ತಂಡಕ್ಕೆ ನೀಡಿತ್ತು. 

2022ರ ಜುಲೈನಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿತ್ತು. 2023ರ ಡಿಸೆಂಬರ್‌ನಲ್ಲಿ ಕಾಮಗಾರಿ ಮುಕ್ತಾಯವಾಗಿ ಜನವರಿ 16ರಂದು ಉದ್ಘಾಟನೆಯಾಗಿದೆ. ನಿಗದಿತ ಅವಧಿಗೂ ಮುನ್ನ ನಾರಾಯಣಸ್ವಾಮಿ ಮತ್ತು ತಂಡ ಯೋಜನೆ ಕಾರ್ಯಗತಗೊಳಿಸಿದೆ.  

‘ಐಎಎಸ್‌ ಅಧಿಕಾರಿಗಳಿಗೆ ಮಸ್ಸೂರಿಯಲ್ಲಿ, ಐಪಿಎಸ್‌ ಅಧಿಕಾರಿಗಳಿಗೆ ಹೈದರಾಬಾದ್‌ನಲ್ಲಿ ತರಬೇತಿ ಅಕಾಡೆಮಿ ಇರುವಂತೆ, ಐಆರ್‌ಎಸ್‌ ಅಧಿಕಾರಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಹೊಸ ಕ್ಯಾಂಪ‍ಸ್‌ ನಿರ್ಮಾಣವಾಗಿದೆ’ ಎಂದು ಜಿ.ನಾರಾಯಣ‌ಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಯೋಜನೆ ಅನುಷ್ಠಾನದ ಹೊಣೆಯನ್ನು ಸರ್ಕಾರ ನಮಗೆ ವಹಿಸಿತ್ತು. ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಿ ಕ್ಯಾಂಪಸ್‌ ನಿರ್ಮಿಸಲಾಗಿದೆ. ಹೊಸ ತಂತ್ರಜ್ಞಾನ ಆಧಾರಿತವಾಗಿ ಮತ್ತು ಪರಿಸರ ಸ್ನೇಹಿಯಾಗಿ ನಿರ್ಮಿಸಲಾಗಿದೆ’ ಎಂದರು. 

‘ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿರಿಯ ಅಧಿಕಾರಿಗಳು ನನ್ನ ಮೇಲೆ ನಂಬಿಕೆ ಇಟ್ಟು, ಈ ಯೋಜನೆ ಕಾರ್ಯಗತಗೊಳಿಸುವ ದೊಡ್ಡ ಅವಕಾಶ ನೀಡಿದ್ದರು. ‌ಇದು ನನಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ, ನಮ್ಮ ಜಿಲ್ಲೆ ಹಾಗೂ ನನ್ನ ಗ್ರಾಮವೂ ಹೆಮ್ಮೆ ತರುವ ಸಂಗತಿ’ ಎಂದು ಅವರು ಸಂತಸ ವ್ಯಕ್ತಪಡಿಸಿದರು. 

ಪರಿಸರ ಸ್ನೇಹಿ ಕ್ಯಾಂಪಸ್‌

500 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿರುವ ನಾಸಿನ್ ಸಂಪೂರ್ಣವಾಗಿ ಪರಿಸರಸ್ನೇಹಿ. ಪರಿಸರಕ್ಕೆ ಪೂರಕವಾಗಿರುವ ತಂತ್ರಜ್ಞಾನ ಬಳಿಸಿ ನಿರ್ಮಿಸಲಾಗಿದೆ. ಸೋಲಾರ್‌ ಪಾರ್ಕ್‌ ಕೂಡ ಇದೆ.  ‘ಪರಿಸರ ಸ್ನೇಹಿ ಕಟ್ಟಡಗಳಿಗೆ ನೀಡಲಾಗುವ ಅತ್ಯುನ್ನತ ರೇಟಿಂಗ್‌ ‘ಗೃಹ ಫೈವ್‌ ಸ್ಟಾರ್‌’ ರೇಟಿಂಗ್‌ ಈ ಕ್ಯಾಂಪಸ್‌ಗೆ ಸಿಕ್ಕಿದೆ. ಪ್ರಧಾನಿಯವರ ಮಹತ್ವಾಕಾಂಕ್ಷೆಯ ‘ಮಿಷನ್‌ ಕರ್ಮಯೋಗಿ’ ಅಡಿಯಲ್ಲಿ ಕಾರ್ಯರೂಪಕ್ಕೆ ಮೊದಲ ಯೋಜನೆ ಇದು’ ಎಂದು ನಾರಾಯಣಸ್ವಾಮಿ ಅವರು ವಿವರಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT