ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆದಿವಾಸಿಗಳ ಕುರಿತ ಜ್ಞಾನ ಭಂಡಾರ ‘ಕಾನು’

ಬಿಳಿಗಿರಿರಂಗನ ಬೆಟ್ಟದ ಆದಿವಾಸಿ ಆರೋಗ್ಯ ಸಂಪನ್ಮೂಲ ಕೇಂದ್ರದ ಆವರಣದಲ್ಲಿ ಇಂದು ‘ಕಾನು’ ಉದ್ಘಾಟನೆ
Published : 25 ಆಗಸ್ಟ್ 2024, 6:07 IST
Last Updated : 25 ಆಗಸ್ಟ್ 2024, 6:07 IST
ಫಾಲೋ ಮಾಡಿ
Comments

ಚಾಮರಾಜನಗರ: ಆದಿವಾಸಿಗಳ ನೆಲಮೂಲದ ಸಂಸ್ಕೃತಿ, ಸಂಪ್ರದಾಯ, ಆಚಾರ–ವಿಚಾರ, ಇತಿಹಾಸ, ಹೋರಾಟ, ಜೀವನಶೈಲಿ, ಆಹಾರ ಪದ್ಧತಿ, ಹೀಗೆ ಸಮಗ್ರ ಮಾಹಿತಿ ಒಂದೇ ಸೂರಿನಡಿ ಅಧ್ಯಯನಕ್ಕೆ ಲಭ್ಯವಾಗಬೇಕು ಹಾಗೂ ಮುಂದಿನ ಪೀಳಿಗೆಗೂ ಉಳಿಯಬೇಕು ಎಂಬ ಸದುದ್ದೇಶದಿಂದ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ವಿಶಿಷ್ಟವಾದ ‘ಕಾನು’ ಗ್ರಂಥಾಲಯ ಆರಂಭಿಸಲಾಗಿದೆ.

ಆದಿವಾಸಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಮಾನ ಮನಸ್ಕರ ತಂಡ ಈ ‘ಕಾನು’ ಗ್ರಂಥಾಲಯ ಆರಂಭಿಸಿದ್ದು, ದಕ್ಷಿಣ ಭಾರತ ಸೇರಿದಂತೆ ಎಲ್ಲೆಡೆ ನೆಲೆ ನಿಂತಿರುವ ಆದಿವಾಸಿಗಳ ಇತಿಹಾಸ, ವರ್ತಮಾನ ಹಾಗೂ ಸಂಸ್ಕೃತಿಯನ್ನು ತಿಳಿಸುವ ಮೊದಲ‘ಜ್ಞಾನ ಹಂಚುವ ಕೇಂದ್ರ’ ಎಂಬ ಹೆಗ್ಗಳಿಕೆ ಹೊಂದಿದೆ.

ಆ.25ರಂದು ಬಿಳಿಗಿರಿರಂಗನ ಬೆಟ್ಟದಲ್ಲಿರುವ ಮಾರಿಗುಡಿಯ ಪಕ್ಕದ ಟ್ರೈಬಲ್ ಹೆಲ್ತ್ ರಿಸೋರ್ಸ್ ಸೆಂಟರ್ (ಆದಿವಾಸಿ ಆರೋಗ್ಯ ಸಂಪನ್ಮೂಲ ಕೇಂದ್ರದ) ಆವರಣದಲ್ಲಿ ‘ಕಾನು’ ಕಾರ್ಯಾರಂಭ ಮಾಡುತ್ತಿದ್ದು ದಕ್ಷಿಣ ಭಾರತದ ಆದಿವಾಸಿ ಮುಖಂಡರಿಂದಲೇ ಉದ್ಘಾಟನೆಯಾಗುತ್ತಿದೆ.

ಕಾನು ವಿಶೇಷ: ದೇಶದಲ್ಲಿ ಆದಿವಾಸಿ ಸಮುದಾಯಗಳ ಕುರಿತು ಹೆಚ್ಚು ಅಧ್ಯಯನ, ಸಂಶೋಧನೆಗಳು ನಡೆದಿಲ್ಲ, ಲಭ್ಯವಿರುವ ಮಾಹಿತಿ ಎಲ್ಲರ ಕೈಗೆಟುಕುತ್ತಿಲ್ಲ. ಈ ನಿಟ್ಟಿನಲ್ಲಿ ‘ಕಾನು’ ಆದಿವಾಸಿಗಳ ಕುರಿತಾದ ಸಮಗ್ರ ಅಧ್ಯಯನಕ್ಕೆ ಸಹಕಾರಿಯಾಗಲಿದೆ. ಇಲ್ಲಿ ಆದಿವಾಸಿಗಳ ಕುರಿತಾದ 1,200ಕ್ಕೂ ಹೆಚ್ಚು ಪುಸ್ತಕ, ಲೇಖನ, ಸಂಶೋಧನಾತ್ಮಕ ಬರಹಗಳು ಲಭ್ಯವಿದೆ. ಸೆ.1ರಿಂದ ಎಲ್ಲರಿಗೂ ಗ್ರಂಥಾಲಯ ಮುಕ್ತವಾಗಲಿದೆ.

ಆದಿವಾಸಿಗಳ ಕುರಿತು ಅಧ್ಯಯನ ಮಾಡಲು ಆಸಕ್ತಿ ಹೊಂದಿರುವವರು ಕಾನುವಿನ ಪ್ರಯೋಜನ ಪಡೆದುಕೊಳ್ಳಬಹುದು. ಯುವ ಆದಿವಾಸಿಗಳು ಕೂಡ ಸಮುದಾಯದ ಅಸ್ಮಿತೆಯನ್ನು ಅರಿಯಲು, ಮುಂದಿನ ಪೀಳಿಗೆಗೆ ಉಳಿಸಲು ಕಾನು ನೆರವಾಗಲಿದೆ ಎನ್ನುತ್ತಾರೆ ಇನ್‌ಸ್ಟಿಟ್ಯೂಟ್ ಆಫ್‌ ಪಬ್ಲಿಕ್ ಹೆಲ್ತ್‌ನ ಪ್ರವೀಣ್ ರಾವ್‌.

ಕಾನುವಿಗೆ ನೇರವಾಗಿ ಭೇಟಿ ನೀಡಲಾಗದವರು ಆನ್‌ಲೈನ್ ಮೂಲಕವೂ ಪುಸ್ತಕಗಳನ್ನು ಓದಬಹುದು. ‘ಕೋಹಾ’ ಎಂಬ ಸಾಫ್ಟ್‌ವೇರ್‌ನಲ್ಲಿ ಪುಸ್ತಕಗಳ ಡಿಜಿಟಲೀಕರಣ ಪ್ರಕ್ರಿಯೆ ನಡೆಯುತ್ತಿದೆ.

ಆದಿವಾಸಿ ಸಮುದಾಯಗಳಲ್ಲಿ ಉನ್ನತ ಶಿಕ್ಷಣ ಪಡೆದವರು ಬೆರಳೆಣಿಕೆ ಮಂದಿ ಇದ್ದು ಇವರ ಸಂಖ್ಯೆ ಹೆಚ್ಚಾಗಬೇಕು, ಸಮುದಾಯದ ಅಭಿವೃದ್ಧಿಗೆ ಶ್ರಮಿಸುವವರ ಹಾಗೂ ಧನಿ ಎತ್ತುವವರ ಸಂಖ್ಯೆ ಏರಿಕೆಯಾಗಬೇಕು ಎಂಬ ಉದ್ದೇಶವೂ ಕಾನುವಿನ ಆರಂಭದ ಹಿಂದಿದೆ ಎನ್ನುತ್ತಾರೆ ಪ್ರವೀಣ್ ರಾವ್‌.

ಕಾನು ಗ್ರಂಥಾಲಯದಲ್ಲಿ ಐತಿಹಾಸಿಕ ಮತ್ತು ಸಮಕಾಲೀನ ಬರಹಗಳ ಕುರಿತು ಚರ್ಚೆ, ಸಮಾಲೋಚನೆ ಮತ್ತು ವಿಚಾರ ವಿನಿಮಯಕ್ಕೂ ಅವಕಾಶವಿದೆ. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತೀಯ ಆದಿವಾಸಿ ವಿಷಯಗಳ ಮೇಲೆ ಕೇಂದ್ರೀಕರಿಸಿದ ಕಾರ್ಯಕ್ರಮಗಳನ್ನು ಆಯೋಸಲಾಗುತ್ತದೆ ಎಂದು ವಿವರ ನೀಡಿದರು.

ಬಿಳಿಗಿರಿರಂಗನ ಬೆಟ್ಟದಲ್ಲಿರುವ ಮಾರಿಗುಡಿಯ ಪಕ್ಕದ ಟ್ರೈಬಲ್ ಹೆಲ್ತ್ ರಿಸೋರ್ಸ್ ಸೆಂಟರ್ ಆವರಣದಲ್ಲಿ ‘ಕಾನು’ ಗ್ರಂಥಾಲಯ
ಬಿಳಿಗಿರಿರಂಗನ ಬೆಟ್ಟದಲ್ಲಿರುವ ಮಾರಿಗುಡಿಯ ಪಕ್ಕದ ಟ್ರೈಬಲ್ ಹೆಲ್ತ್ ರಿಸೋರ್ಸ್ ಸೆಂಟರ್ ಆವರಣದಲ್ಲಿ ‘ಕಾನು’ ಗ್ರಂಥಾಲಯ

ಕಾನು ಎಂದರೇನು?

ಕಾನು ಎಂದರೆ ನಿತ್ಯ ಹರಿದ್ವರ್ಣ ಕಾಡು. ಆದಿವಾಸಿಗಳ ಕುರಿತಾದ ಜ್ಞಾನ ಹಂಚುವ ಕೆಲಸವನ್ನು ಕಾನು ಮಾಡಲಿದೆ. ಕಾನು ಸಂಸ್ಥೆಯಲ್ಲ ಆದಿವಾಸಿ ಹಕ್ಕುಗಳು ಮತ್ತು ಸಂಸ್ಕೃತಿ ಸಂರಕ್ಷಣೆಗೆ ಶ್ರಮಿಸುತ್ತಿರುವ ಸಮಾನ ಮನಸ್ಕರು ಹಾಗೂ ಸಂಶೋಧಕರು ಹುಟ್ಟುಹಾಕಿರುವ ಸಾಮೂಹಿಕ ಪ್ರಯತ್ನ. ಜ್ಞಾನದ ಮರವಾಗಿರುವ ಕಾನು ಹೆಮ್ಮರವಾಗಿ ಬೆಳೆಯಬೇಕು ಎಂಬ ಆಶಯ ನಮ್ಮೆಲ್ಲರದ್ದು ಎನ್ನುತ್ತಾರೆ ಇನ್‌ಸ್ಟಿಟ್ಯೂಟ್ ಆಫ್‌ ಪಬ್ಲಿಕ್ ಹೆಲ್ತ್‌ನ ಪ್ರವೀಣ್ ರಾವ್‌.

ಕಾನು ಮೊಳೆತಿದ್ದು ಎಲ್ಲಿ ?

ಆದಿವಾಸಿ ಮುಖಂಡರಾದ ಸಿ.ಮಾದೇಗೌಡ ಕೃಷ್ಣಮೂರ್ತಿ ರತ್ಮಮ್ಮ ಜಡೇಗೌಡರು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಹೆಲ್ತ್‌ನ ನಿರ್ದೇಶಕ ಎನ್‌.ಎಸ್‌.ಪ್ರಶಾಂತ್‌ ಸೇರಿದಂತೆ ಹಲವರು ಈಚೆಗೆ ಆದಿವಾಸಿಗಳ ಕುರಿತು ಪುಸ್ತಕ ಬರೆಯುವ ಕಾರ್ಯಾಗಾರ ಆಯೋಜಿಸಿದ್ದರು. ಅಲ್ಲಿ ದಕ್ಷಿಣ ಭಾರತದ ಎಲ್ಲ ಆದಿವಾಸಿ ಸಮುದಾಯಗಳ ಕುರಿತಾದ ಮಾಹಿತಿ ಒಂದೆಡೆ ಲಭ್ಯವಾಗುವಂತೆ ‘ಕಾನು’ ಗ್ರಂಥಾಯ ಆರಂಭಿಸಲು ನಿರ್ಧರಿಸಿ ಕಾರ್ಯರೂಪಕ್ಕೆ ತರಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT