ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ತಿಕ ಮಾಸದ ಜಾತ್ರೆಗೆ ಮಹದೇಶ್ವರ ಬೆಟ್ಟ ಸಜ್ಜು, ಬೆಳಗಲಿದೆ ಮಹಾಜ್ಯೋತಿ

ಮಹದೇಶ್ವರ ಬೆಟ್ಟ: ಸಾವಿರಾರು ಭಕ್ತರು ಬರುವ ನಿರೀಕ್ಷೆ, ತೆಪ್ಪೋತ್ಸವ ರದ್ದು, ಎಂದಿನಂತೆ ದೀಪೋತ್ಸವ
Last Updated 28 ನವೆಂಬರ್ 2021, 13:08 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾಗಿರುವ, ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯವು ಕಡೆ ಕಾರ್ತಿಕ ಸೊಮವಾರದಂದು (ನ.29) ನಡೆಯಲಿರುವ ಜಾತ್ರೆ ಹಾಗೂ ದೀಪೋತ್ಸವಕ್ಕೆ ಸಜ್ಜಾಗಿದೆ.

ಕಾರ್ತಿಕ ಮಾಸದ ಪ್ರತಿ ಸೋಮವಾರ ವಿಶೇಷ ಪೂಜೆಗಳು ದೇವಾಲಯದಲ್ಲಿ ನಡೆಯುತ್ತವೆ. ಕೊನೆಯ ಸೋಮವಾರದಂದು ವಿಶೇಷ ಪೂಜೆ, ತೆಪ್ಪೋತ್ಸವ, ದೀಪದ ಒಡ್ಡಿನ ಗಿರಿಯಲ್ಲಿ ದೀಪೋತ್ಸವ ನಡೆಯುತ್ತದೆ.

ಈ ಬಾರಿ ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ತೆಪ್ಪೋತ್ಸವಕ್ಕೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಹಾಗಾಗಿ, ತೆಪ್ಪೋತ್ಸವ ರದ್ದಾಗಿದೆ. ಉಳಿದಂತೆ ದೀಪದಗಿರಿ ಒಡ್ಡುವಿನಲ್ಲಿ ಮಹಾಜ್ಯೋತಿ ಬೆಳಗುವ ಕಾರ್ಯಕ್ರಮ ನಡೆಯಲಿದೆ.

ಕಾರ್ತಿಕ ಮಾಸದ ಜಾತ್ರೆಗೆ ಬೆಟ್ಟಕ್ಕೆ ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪವಾಡಪುರುಷ ಮಹದೇಶ್ವರನ ದರ್ಶನ ಪಡೆಯುತ್ತಾರೆ. ಕೋವಿಡ್‌ ಕಾರಣಕ್ಕೆ ಕಳೆದ ವರ್ಷ ಜಾತ್ರೆ ಸರಳವಾಗಿ ನಡೆದಿತ್ತು. ದಸರಾ ಬಳಿಕ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಸೋಮವಾರದ ವಿಶೇಷ ದಿನದಂದು 40 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡುವ ನಿರೀಕ್ಷೆಯನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಇಟ್ಟುಕೊಂಡಿದೆ. ಕೆಎಸ್‌ಆರ್‌ಟಿಸಿ ಕೂಡ ಹೆಚ್ಚುವರಿಯಾಗಿ 100 ಬಸ್‌ಗಳ ಸೌಲಭ್ಯ ಒದಗಿಸಲಿದೆ.

ಕಾರ್ತಿಕ ವಿಶೇಷ ಪೂಜೆ ಹಾಗೂ ದೀಪೋತ್ಸವಕ್ಕಾಗಿ ಪ್ರಾಧಿಕಾರವು ವಿಶೇಷ ಸಿದ್ಧತೆಗಳನ್ನು ಮಾಡಿದೆ. ದೇವಾಲಯಕ್ಕೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ದೇವಾಲಯದ ಒಳಾವರಣದಲ್ಲಿ ಹೂವಿನ ಅಲಂಕಾರ ಮಾಡಲಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಪ್ರಸಾದ ವಿತರಣೆಗಾಗಿ 1.5 ಲಕ್ಷ ಲಾಡು ಸಿದ್ಧಪಡಿಸಲಾಗಿದೆ. ಬೇಡಿಕೆಗೆ ಅನುಗುಣವಾಗಿ ಹೆಚ್ಚು ತಯಾರಿಸಲು ಪ್ರಾಧಿಕಾರದ ಸಿಬ್ಬಂದಿ ಸಜ್ಜುಗೊಂಡಿದ್ದಾರೆ. ಇಡೀ ದಿನ ದಾಸೋಹ ಇರಲಿದ್ದು, ತಿಂಡಿ ವ್ಯವಸ್ಥೆ ಮಾತ್ರ ಇರಲಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿದ್ಧತೆಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು, ‘ದೊಡ್ಡ ಕಲ್ಯಾಣಿ ಕಾಮಗಾರಿ ನಡೆಯುತ್ತಿರುವುದರಿಂದ ತೆಪ್ಪೋತ್ಸವ ನಡೆಯುವುದಿಲ್ಲ. ಜಿಲ್ಲಾಡಳಿತದಿಂದಲೂ ತಪ್ಪೋತ್ಸವಕ್ಕೆ ಅನುಮತಿ ಸಿಕ್ಕಿಲ್ಲ. ಉಳಿದಂತೆ ಎಲ್ಲ ಆಚರಣೆಗಳೂ ನಡೆಯಲಿವೆ. ದಾಸೋಹದಲ್ಲಿ ತಿಂಡಿ ವ್ಯವಸ್ಥೆ ಮಾತ್ರ ಇರಲಿದೆ. ಕೆಎಸ್‌ಆರ್‌ಟಸಿಯು 100 ವಿಶೇಷ ಬಸ್‌ಗಳ ಸೇವೆ ಪದಗಿಸಲಿದೆ’ ಎಂದು ಹೇಳಿದರು.

ಪವಾಡ ಪುರುಷನ ದೀಪೋತ್ಸವ

ಬೆಟ್ಟದಲ್ಲಿರುವ ದೀಪದ ಗಿರಿ ಒಡ್ಡುವಿನಲ್ಲಿ ಕಡೆ ಕಾರ್ತಿಕ ಸೋಮವಾರದಂದು ದೊಡ್ಡ ದೀಪವನ್ನು ಉರಿಸುವ ಸಂಪ್ರದಾಯವಿದೆ.

ಮಹದೇಶ್ವರರು ಬೆಟ್ಟದ ದೀಪದ ಗಿರಿ ಒಡ್ಡಿನಲ್ಲಿ ಬಂದು ಐಕ್ಯವಾಗಲು ಸ್ಥಳವನ್ನು ಹುಡುಕುತ್ತಾರೆ. ಬೆಟ್ಟಗುಡ್ಡಗಳೆಲ್ಲವೂ ಕತ್ತಲುಮಯವಾಗಿದ್ದರಿಂದ ಒಡ್ಡಿನಲ್ಲಿ ತಮ್ಮ ಪವಾಡದಿಂದ ಜ್ಯೋತಿ ಬೆಳಗಿಸುತ್ತಾರೆ. ಈ ಜ್ಯೋತಿಯೇ ಮುಂದೆ ಬೆಟ್ಟದಲ್ಲಿನ ಗ್ರಾಮಸ್ಥರ ಮನೆ ಮನೆಗಳಲ್ಲಿ ಪ್ರಕಾಶಿಸುವಂತಾಗುತ್ತದೆ. ದೀಪಾವಳಿ ಮುಗಿದ ಬಳಿಕ ಬರುವಂತಹ ನಾಲ್ಕು ಕಾರ್ತಿಕ ಸೋಮವಾರಗಳಂದು ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಮಾಡಿ ಕೊನೆಯ ಕಾರ್ತಿಕ ಸೋಮವಾರದಂದು ದೀಪದಗಿರಿ ಒಡ್ಡಿನಲ್ಲಿ ಮಹಾಜ್ಯೋತಿ ಬೆಳಗಿಸಲಾಗುತ್ತದೆ. ಈ ಜ್ಯೋತಿಯನ್ನು ಕಂಡು ಸ್ವಾಮಿಯ ಆಶೀರ್ವಾದ ಪಡೆದರೆ ತಮ್ಮೆಲ್ಲ ಕಷ್ಟಗಳು ಬೆಂಕಿಯಂತೆ ಉರಿದುಹೋಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.

--

ತೆಪ್ಪೋತ್ಸವ ಬಿಟ್ಟು ಉಳಿದೆಲ್ಲ ಆಚರಣೆಗಳೂ ಇರಲಿವೆ. ಮಹದೇಶ್ವರಸ್ವಾಮಿ ದರ್ಶನಕ್ಕೆ ಬರುವ ಭಕ್ತಾದಿಗಳಿಗಾಗಿ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ
ಜಯವಿಭವಸ್ವಾಮಿ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT