ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಯ್‌ ನಾಮಪತ್ರ ತಿರಸ್ಕೃತ, ಭಾರಿ ಹಿನ್ನಡೆ

ಕಸಾಪ ಚುನಾವಣೆ: ಕರ್ನಾಟಕ, ತಮಿಳುನಾಡಿನಲ್ಲಿ ಪರಿಷತ್‌ ಸದಸ್ವತ್ಯ
Last Updated 9 ಏಪ್ರಿಲ್ 2021, 16:45 IST
ಅಕ್ಷರ ಗಾತ್ರ

ಚಾಮರಾಜನಗರ: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ತಮಿಳುನಾಡಿನ ಗಡಿನಾಡು ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿ, ಹಾಲಿ ಅಧ್ಯಕ್ಷ ಬಿ.ಎಸ್‌.ವಿನಯ್‌ ಅವರು ಸಲ್ಲಿಸಿದ್ದ ನಾಮಪತ್ರಗಳು ತಿರಸ್ಕೃತಗೊಂಡಿವೆ.

ಇದರಿಂದಾಗಿ ಎರಡು ಕಡೆಗಳಲ್ಲಿ ಸ್ಪರ್ಧಿಸುವ ‌ಅವರ ಕನಸು ಭಗ್ನವಾಗಿ, ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಅಲ್ಲದೇ, ಕಾನೂನು ಕ್ರಮದ ಭೀತಿಯನ್ನೂ ಎದುರಿಸುತ್ತಿದ್ದಾರೆ.

ವಿನಯ್‌ ಅವರು ಜಿಲ್ಲೆಯಲ್ಲಿ ಹಾಗೂ ತಮಿಳುನಾಡಿನ ತಾಳವಾಡಿಯಲ್ಲಿ ಕಸಾಪ ಸದಸ್ಯತ್ವ ಹೊಂದಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಾಗೇಶ ಸೋಸ್ಲೆ ಅವರು ಚುನಾವಣಾಧಿಕಾರಿ ಅವರಿಗೆ ದೂರು ನೀಡಿದ್ದರು. ‘ಎರಡು ಕಡೆ ಸದಸ್ಯತ್ವ ಹೊಂದುವುದು ಅಪರಾಧ ಹಾಗೂ ಎರಡು ಕಡೆಗಳಲ್ಲಿ ಸ್ಪರ್ಧಿಸುವುದು ಕೂಡ ಕಸಾಪ ನಿಯಮದ ಉಲ್ಲಂಘನೆ. ಹಾಗಾಗಿ, ಅವರ ನಾಮಪತ್ರ ತಿರಸ್ಕರಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದರು.

ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿರುವ ಉಳಿದ ಅಭ್ಯರ್ಥಿಗಳು ಕೂಡ, ವಿನಯ್‌ ಅವರು ಎರಡು ಕಡೆ ಸದಸ್ಯತ್ವ ಹೊಂದಿರುವ ಬಗ್ಗೆ ತಕರಾರು ತೆಗೆದಿದ್ದರು. ಇದರ ಆಧಾರದಲ್ಲಿ ಬೆಂಗಳೂರಿನ ಕೇಂದ್ರ ಕಸಾಪ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳು ವಿನಯ್‌ ಅವರಿಗೆ ಗುರುವಾರ ಸ್ಪಷ್ಟನೆ ಕೋರಿ ನೋಟಿಸ್‌ ನೀಡಿದ್ದರು. ಶನಿವಾರ ಮಧ್ಯಾಹ್ನದ ಒಳಗಾಗಿ ಸಮಜಾಯಿಷಿ ನೀಡುವಂತೆ ಸೂಚಿಸಿದ್ದರು.

ವಿನಯ್‌ ಅವರು ಶನಿವಾರ ನಗರದಲ್ಲಿ ಹಾಗೂ ಬೆಂಗಳೂರಿನಲ್ಲಿ ನೋಟಿಸ್‌ಗೆ ಉತ್ತರ ನೀಡಿದ್ದಾರೆ. ಬೆಂಗಳೂರಿನಲ್ಲಿ ಸಲ್ಲಿಸಿದ್ದ ಉತ್ತರದಲ್ಲಿ, ಗಡಿನಾಟು ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ವಾಪಸ್‌ ಪಡೆಯುವುದಾಗಿ ಹೇಳಿದ್ದರು. ಆದರೆ, ಇದನ್ನು ಒಪ್ಪದ ಅಧಿಕಾರಿಗಳು, ಎರಡು ಕಡೆಗಳಲ್ಲಿ ಸದಸ್ಯತ್ವ ಹೊಂದಿರುವುದು ನಿಯಮಗಳಿಗೆ ವಿರುದ್ಧವಾಗಿರುವುದರಿಂದ ಎಲ್ಲಿಯೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಾಗುವುದಿಲ್ಲ ಎಂದು ಹೇಳಿ ನಾಮಪತ್ರ ತಿರಸ್ಕರಿಸಿದ್ದಾರೆ.

ಜಿಲ್ಲೆಯ ಚುನಾವಣಾಧಿಕಾರಿ ಅವರಿಗೆ ನೀಡಿದ್ದ ಸ್ಪಷ್ಟನೆಯಲ್ಲಿ ಎರಡು ಕಡೆಗಳಲ್ಲಿ ಚುನಾವಣೆಗೆ ಸ್ಪರ್ಧಿಸಬಾರದು ಎಂಬ ನಿಯಮ ಬೈಲಾದಲ್ಲಿ ಇಲ್ಲ ಎಂದು ಹೇಳಿದ್ದರು ಎಂದು ತಿಳಿದು ಬಂದಿದೆ.

ಚುನಾವಣಾ ಅಧಿಕಾರಿಯಾಗಿರುವ ತಹಶೀಲ್ದಾರ್‌ ಅವರ ಅನುಪಸ್ಥಿತಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಮಹದೇಶ ಶೆಟ್ಟಿ ಅವರು ನಾಮಪತ್ರವನ್ನು ತಿರಸ್ಕರಿಸಿ ಆದೇಶ ಹೊರಡಿಸಿದ್ದಾರೆ.

‘ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಮತದಾರನಾಗಿ ನೋಂದಣಿ ಮಾಡಬಾರದು. ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರೂ ಇರಬಾರದು ಎಂದು ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 18 ಹೇಳುತ್ತದೆ. ಇದು ಕಸಾಪದ ನಿಬಂಧನೆಗೆ ವಿರುದ್ಧವಾಗಿದೆ’ ಎಂದು ಅವರು ಆದೇಶದಲ್ಲಿ ಹೇಳಿದ್ದಾರೆ.

ಎರಡು ಕಡೆ ಸದಸ್ಯತ್ವ ಹೊಂದಿರುವುದನ್ನು ವಿನಯ್‌ ಸಮಜಾಯಿಷಿಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿನಯ್‌ ಅವರು, ‘ಎರಡೂ ಕಡೆಗಳಲ್ಲಿ ನಾನು ಚಾಮರಾಜನಗರದ ವಿಳಾಸವನ್ನೇ ನೀಡಿದ್ದೆ. ಎರಡು ಕಡೆಗಳಲ್ಲಿ ಸ್ಪರ್ಧೆ ಮಾಡಬಾರದು ಎಂದು ಬೈಲಾದಲ್ಲಿ ಹೇಳಿಲ್ಲ. ನೋಟಿಸ್‌ಗೆ ಉತ್ತರ ನೀಡುವ ಸಂದರ್ಭದಲ್ಲಿ ಅದನ್ನೇ ಉಲ್ಲೇಖಿಸಿದ್ದೇನೆ’ ಎಂದರು.

ಎರಡು ಕಡೆ ಸದಸ್ಯತ್ವ ಹೊಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ತಾಳವಾಡಿಯಲ್ಲಿ ಹೇಗೆ ನನ್ನ ಹೆಸರು ಬಂತು ಎಂಬುದೇ ಗೊತ್ತಾಗುತ್ತಿಲ್ಲ. ಎಲ್ಲ ಗೋಜಲು ಗೋಜಲಾಗಿದೆ. ಒಂದು ತಿಂಗಳ ಹಿಂದಿನವರೆಗೂ ತಿದ್ದುಪಡಿ ಅವಕಾಶ ಇತ್ತು. ಮೊದಲೇ ಗೊತ್ತಿದ್ದರೆ ಹೆಸರು ತೆಗೆಸುತ್ತಿದ್ದೆ’ ಎಂದು ಹೇಳಿದರು.

ಪ್ರೊ.ಗುರುಸ್ವಾಮಿ ನಾಮಪತ್ರ ವಾಪಸ್

ಈ ಮಧ್ಯೆ, ಮೊದಲಿಗರಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಅವರು ಶುಕ್ರವಾರ ನಾಮಪತ್ರ ವಾಪಸ್‌ ಪಡೆದಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗುರುಸ್ವಾಮಿ ಅವರು, ‘ಹೊಸಬರು, ಹಳಬರು ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಹಳಬರು ಯಾರೂ ನಿಲ್ಲದಿದ್ದರೆ ತಾನೂ ನಿಲ್ಲುವುದಿಲ್ಲ ಎಂದು ವಿನಯ್‌ ಹೇಳಿದ್ದನ್ನು ಕೇಳಿದ್ದೇನೆ. ಹೊಸಬರಿಗೆ ಅವಕಾಶ ನೀಡೋಣ ಎಂಬುದು ನಾಮಪತ್ರ ವಾಪಸ್‌ ಪಡೆಯಲು ಒಂದು ಕಾರಣ. ಕಸಾಪದ ಹಿರಿಯ ಸದಸ್ಯರು, ‘ನೀವು ನಿಂತರೆ ಅವಿರೋಧವಾಗಿ ಆಯ್ಕೆಯಾಗುತ್ತೀರಿ’ ಎಂದು ಹೇಳಿದ್ದರು. ಆದರೆ, ಈಗ ಆ ಪರಿಸ್ಥಿತಿ ಕಾಣುತ್ತಿಲ್ಲ. ಎರಡು ಮೂರು ದಿನಗಳ ಬೆಳವಣಿಗೆಯಿಂದ ಬೇಸರವೂ ಆಗಿದೆ. ಹಿರಿಯನಾದ ನಾನು ಶಿಷ್ಯರು ಹಾಗೂ ಕಿರಿಯರೊಂದಿಗೆ ಸ್ಪರ್ಧಿಸುವುದು ಅಷ್ಟು ಸಮಂಜಸವೂ ಅಲ್ಲ ಎಂಬ ಕಾರಣಕ್ಕೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ’ ಎಂದು ಹೇಳಿದರು.

ಜಿಲ್ಲಾ ಕಸಾಪದ ಮಾಜಿ ಅಧ್ಯಕ್ಷರಾದ ನಾಗಮಲ್ಲಪ್ಪ, ಸೋಮಶೇಖರ ಬಿಸಲವಾಡಿ ಹಾಗೂ ಇತರ ಹಿರಿಯ ಸದಸ್ಯರು ಮಲೆಯೂರು ಗುರುಸ್ವಾಮಿ ಅವರನ್ನು ಭೇಟಿ ಮಾಡಿ ಚುನಾವಣೆಗೆ ಸ್ಪರ್ಧಿಸುವಂತೆ ಮನವೊಲಿಸಿದ್ದರು.

‌ಕಣದಲ್ಲಿ ಏಳು ಮಂದಿ

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಇಚ್ಛಿಸಿ ಒಂಬತ್ತು ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಪ್ರೊ. ಮಲೆಯೂರು ಗುರುಸ್ವಾಮಿ ಅವರು ನಾಮಪತ್ರ ವಾಪಸ್‌ ಪಡೆದಿದ್ದಾರೆ. ಬಿ.ಎಸ್‌.ವಿನಯ್‌ ಅವರ ನಾಮಪತ್ರ ತಿರಸ್ಕೃತವಾಗಿದೆ. ಹೀಗಾಗಿ ಕಣದಲ್ಲಿ ಏಳು ಮಂದಿ ಉಳಿದಿದ್ದಾರೆ.

ನಾಮಪತ್ರ ವಾಪಸ್‌ ಪಡೆಯಲು ಇದೇ 12ರವರೆಗೂ ಕಾಲಾವಕಾಶ ಇದೆ. ಯಾರೊಬ್ಬರೂ ವಾಪಸ್ ಪಡೆಯದಿದ್ದರೆ, ಅಧ್ಯಕ್ಷ ಸ್ಥಾನಕ್ಕೆ ಸಿ.ಎಂ.ನರಸಿಂಹಮೂರ್ತಿ, ನಾಗೇಶ್‌ ಸೋಸ್ಲೆ, ನಿರಂಜನ್‌ಕುಮಾರ್‌, ಶೈಲೇಶ್‌ಕುಮಾರ್‌, ಸ್ನೇಹ, ಶಿವಾಲಂಕಾರಯ್ಯ ಮತ್ತು ರವಿಕುಮಾರ್‌ ಮಾದಾಪುರ ಅವರ ನಡುವೆ ಪೈಪೋಟಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT