ಭಾನುವಾರ, ಏಪ್ರಿಲ್ 11, 2021
33 °C
ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಸೂಚನೆ

ಅಕ್ರಮ ಗಣಿಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಬಾರದು. ಅಕ್ರಮ ಚಟುವಟಿಕೆ ನಡೆಸುತ್ತಿರುವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರು ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಗೆ ಸೋಮವಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಮೊಗ್ಗದಲ್ಲಿ ನಡೆದ ಜಿಲೆಟಿನ್‌ ಸ್ಫೋಟ ಪ್ರಕರಣವನ್ನು ಪ್ರಸ್ತಾಪಿಸಿದ ಸಚಿವರು, ಜಿಲ್ಲೆಯಲ್ಲಿ ಇಂತಹ ದುರಂತ ಸಂಭವಿಸದಂತೆ ಮಾಡಲು ಕೈಗೊಂಡಿರುವ ಕ್ರಮಗಳ ವಿವರಿಸುವಂತೆ ಗಣಿ ಇಲಾಖೆಯ ಉಪನಿರ್ದೇಶಕಿ ಡಾ.ಲಕ್ಷ್ಮಮ್ಮ ಅವರನ್ನು ಕೇಳಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಮ್ಮ ಅವರು, ‘ಈಗಾಗಲೇ ಗಣಿ ಗುತ್ತಿಗೆ ಪಡೆದವರು, ಮಾಲೀಕರಿಗೆ ಎಲ್ಲ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಸ್ಫೋಟಕಗಳ ಸಂಗ್ರಹ ಹಾಗೂ ಸಾಗಣೆ ವಿಚಾರವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಅವರು ಗಣಿ ಗುತ್ತಿಗೆದಾರೊಂದಿಗೆ ಸಭೆ ನಡೆಸುತ್ತಿದ್ದಾರೆ. ಮತ್ತೊಮ್ಮೆ ಎಲ್ಲ ಗಣಿಗಳಿಗೆ ಭೇಟಿ ನೀಡಿ ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ’ ಎಂದರು. 

ಸುರೇಶ್‌ ಕುಮಾರ್‌ ಹಾಗೂ ಇತರ ಶಾಸಕರು, ‘ಜಿಲ್ಲೆಯಲ್ಲಿ ಎಷ್ಟು ಕಡೆಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿವೆ’ ಎಂದು ಪ್ರಶ್ನಿಸಿದರು. 

‘ಈ ಹಿಂದೆ 17 ಕಡೆಗಳಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯನ್ನು ತಡೆಯಲಾಗಿದೆ’ ಎಂದು ಲಕ್ಷ್ಮಮ್ಮ ಅವರು ಮಾಹಿತಿ ನೀಡಿದರು. 

ಶಾಸಕ ಆರ್‌.ನರೇಂದ್ರ ಅವರು ಮಾತನಾಡಿ, ‘ಜಿಲ್ಲೆಯಾದ್ಯಂತ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ನನ್ನ ಕ್ಷೇತ್ರದಲ್ಲೇ ನಡೆಯುತ್ತಿದೆ. ಅವರನ್ನು ಹೇಳುವವರೂ ಇಲ್ಲ ಕೇಳುವವರೂ ಇಲ್ಲ. ಇಂತಹದ್ದಕ್ಕೆ ಕಡಿವಾಣ ಹಾಕಬೇಕು’ ಎಂದರು. 

ತಾಲ್ಲೂಕು ಪ್ರತಿನಿಧಿ ಮಹೇಶ್‌ ಅವರು ಮಾತನಾಡಿ, ‘ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಲಾಗುತ್ತಿದೆ. ಗುತ್ತಿಗೆ ಒಂದು ಕಡೆ ಪಡೆದಿದ್ದರೆ, ಗಣಿಗಾರಿಕೆ ಇನ್ನೊಂದು ಕಡೆ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಮ್ಮ ಅವರು, ‘ಅಕ್ರಮ ಗಣಿಗಾರಿಕೆ ಬಗ್ಗೆ ಮತ್ತೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು. 

ಸುರೇಶ್‌ ಕುಮಾರ್‌ ಅವರು ಮಾತನಾಡಿ, ‘ಶಿವಮೊಗ್ಗದಲ್ಲಿ ನಡೆದ ಘಟನೆ ನಮಗೂ ಎಚ್ಚರಿಕೆ ಗಂಟೆಯಾಗಬೇಕು. ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಡಬೇಡಿ. ಅನಾಹುತ ಸಂಭವಿಸಿದರೆ ನೀವೇ ಹೊಣೆಗಾರರಾಗುತ್ತೀರಿ’ ಎಂದು ಎಚ್ಚರಿಸಿದರು. 

ವಾರದಲ್ಲಿ ಒತ್ತುವರಿ ತೆರವುಗೊಳಿಸಿ: ‘ಹನೂರು ತಾಲ್ಲೂಕಿನ ರಾಮಗುಡ್ಡ ಕೆರೆಯ ಒತ್ತುವರಿಯನ್ನು ವಾರದಲ್ಲಿ ತೆರವುಗೊಳಿಸಬೇಕು’ ಎಂದು ಸುರೇಶ್‌ ಕುಮಾರ್‌ ಅವರು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ಸೂಚನೆ ನೀಡಿದರು. 

ಜಿಲ್ಲಾಡಳಿತ ಕೈಗೊಂಡಿರುವ ಕೆರೆ ಒತ್ತುವರಿ ತೆರವು ಅಭಿಯಾನದ ವಿಷಯ ಪ್ರಸ್ತಾಪವಾದ ಸಂದರ್ಭದಲ್ಲಿ ಮಾತನಾಡಿದ ಹನೂರು ಶಾಸಕ ಆರ್‌.ನರೇಂದ್ರ ಅವರು, ‘ನನ್ನ ಕ್ಷೇತ್ರದ ರಾಮಗುಡ್ಡ ಕೆರೆ 13 ಎಕರೆಯಷ್ಟು ಒತ್ತುವರಿಯಾಗಿದೆ. ಕೃಷಿಕರೊಬ್ಬರು ಆ ಜಾಗದಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಎರಡು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಸೆಸ್ಕನವರು ಅದಕ್ಕೆ ವಿದ್ಯುತ್‌ ಸಂಪರ್ಕವನ್ನೂ ನೀಡಿದ್ದಾರೆ. ಮೂಲ ದಾಖಲೆಯೇ ನೀರಾವರಿ ಇಲಾಖೆಯ ಬಳಿ ಇದ್ದಂತೆ ಇಲ್ಲ’ ಎಂದರು. 

ಸಣ್ಣ ನೀರಾವರಿ ಇಲಾಖೆಯ ಕಿರಿಯ ಎಂಜಿನಿಯರ್‌ ಮಾತನಾಡಿ, ‘ಏಳು ಎಕರೆ ಒತ್ತುವರಿಯಾಗಿದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಿವೆ’ ಎಂದರು. 

ಸುರೇಶ್‌ ಕುಮಾರ್‌ ಅವರು ಮಾತನಾಡಿ, ‘ಜಿಲ್ಲಾಧಿಕಾರಿ ಅವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಈ ವಿಚಾರವಾಗಿ ಸಭೆ ನಡೆಸಿ ವಾರದ ಒಳಗೆ ಒತ್ತುವರಿ ತೆರವುಗೊಳಿಸಲು ಕ್ರಮ ವಹಿಸಿ’ ಎಂದು ಸೂಚಿಸಿದರು. 

ನಿಗಮಗಳ ಕಾರ್ಯನಿರ್ವಹಣೆಗೆ ಅಸಮಾಧಾನ
ಡಾ.ಬಿ.ಆರ್‌.ಅಂಬೇಡ್ಕರ್‌ ನಿಗಮ, ವಾಲ್ಮೀಕಿ ನಿಗಮ ಸೇರಿದಂತೆ ವಿವಿಧ ನಿಗಮಗಳ ಕಾರ್ಯವೈಖರಿಯ ಬಗ್ಗೆ ಸಚಿವರು, ಶಾಸಕರಾದ ನರೇಂದ್ರ, ಎನ್‌.ಮಹೇಶ್‌, ಸಿ.ಪುಟ್ಟರಂಗಶೆಟ್ಟಿ, ಸಿ.ಎಸ್‌.ನಿರಂಜನಕುಮಾರ್‌ ಅವರು ಅಸಮಾಧಾನ ವ್ಯಕ್ತಪಡಿಸಿದರು. 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಗಂಗಾಕಲ್ಯಾಣ ಯೋಜನೆ ಅಡಿಯಲ್ಲಿ ನಾಲ್ಕೈದು ವರ್ಷಗಳಿಂದ ಕೊಳವೆ ಬಾವಿ ಕೊರೆಯಿಸಿ, ವಿದ್ಯುತ್‌ ಸಂಪರ್ಕ ನೀಡದೇ ಇರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ‘ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅವರು ಎಲ್ಲ ನಿಗಮಗಳ ವ್ಯವಸ್ಥಾಪಕರ ಸಭೆಯನ್ನು ಪ್ರತಿ ತಿಂಗಳು ನಡೆಸಿ, ಕಾರ್ಯಕ್ರಮ ಅನುಷ್ಠಾನಗಳ ಮೇಲ್ವಿಚಾರಣೆ ನಡೆಸಬೇಕು’ ಎಂದು ಸೂಚಿಸಿದರು.  

ಸಭೆಗೆ ಗೈರು: ಹಲವು ಇಲಾಖೆಗಳ ಮುಖ್ಯಸ್ಥರು ಸಭೆಗೆ ಗೈರಾಗಿರುವುದನ್ನು ಗಮನಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಎಲ್ಲರಿಗೂ ಕಾರಣಕೇಳಿ ನೋಟಿಸ್‌ ನೀಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್‌ ಭೊಯರ್‌ ನಾರಾಯಣರಾವ್ ಅವರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ ಇದ್ದರು. ‌

ಪ್ರೌಢಶಾಲೆ, ಪ್ರಥಮ ಪಿಯುಸಿ ತರಗತಿ ಆರಂಭಿಸಲು ಸಲಹೆ
ರಾಜ್ಯದಲ್ಲಿ ಎಂಟು, ಒಂಬತ್ತು ಹಾಗೂ ಪ್ರಥಮ ಪಿಯುಸಿ ತರಗತಿಗಳನ್ನು ಆರಂಭಿಸಲು ಮತ್ತು ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ತರಗತಿಗಳನ್ನು ಇಡೀ ದಿನಕ್ಕೆ ವಿಸ್ತರಿಸುವ ಸಂಬಂಧ ಸಚಿವ ಸುರೇಶ್‌ ಕುಮಾರ್‌ ಅವರು ಶಾಸಕರು ಹಾಗೂ ಇತರ ಜನಪ್ರತಿನಿಧಿಗಳ ಅಭಿಪ್ರಾಯ ಕೇಳಿದರು. 

ಎಲ್ಲ ಶಾಸಕರು ಹಾಗೂ ಪ್ರತಿನಿಧಿಗಳು ತರಗತಿಗಳನ್ನು ಆರಂಭಿಸುವುದು ಸೂಕ್ತ ಎಂಬ ಸಲಹೆ ನೀಡಿದರು. 

ಸುಳ್ಳು ಮಾಹಿತಿಗೆ ನೋಟಿಸ್‌: ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ಗಳನ್ನು ತೆರೆಯಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಶಾಸಕ ಆರ್.ನರೇಂದ್ರ ಅವರು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಭಾಗೀರಥಿ ಅವರನ್ನು ತರಾಟೆಗೆ ತೆಗೆದುಕೊಂಡರು. 

ತರಗತಿಗಳು ಆರಂಭವಾದರೂ ಹಾಸ್ಟೆಲ್‌ಗಳನ್ನು ತೆರೆಯದೇ ಇರುವುದರಿಂದ ಮಕ್ಕಳು ಬರುತ್ತಿಲ್ಲ ಎಂದು ಶಾಸಕ ಸಚಿವರ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಮಾತನಾಡಿದ ಭಾಗೀರಥಿ ಅವರು, ಈಗಾಗಲೇ ಹಾಸ್ಟೆಲ್‌ಗಳನ್ನು ತೆಗೆಯಲಾಗಿದೆ ಎಂದು ಸಮಜಾಯಿಷಿ ನೀಡಿದರು. 

ನಂತರ ಶಾಸಕರು ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಾಗ ವಿದ್ಯಾರ್ಥಿನಿಯರ ಹಾಸ್ಟೆಲ್‌, ಪಿಯುಸಿ ಮಕ್ಕಳ ಹಾಸ್ಟೆಲ್‌ ತೆರೆದಿಲ್ಲ ಎಂದು ಗೊತ್ತಾಯಿತು. ಇದನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಶಾಸಕ, ಉಪನಿರ್ದೇಶಕಿ ವಿರುದ್ಧ ಕೂಗಾಡಿದರು. ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿದರು. 

ಜಿಲ್ಲಾಧಿಕಾರಿ ಅವರು ಮಾತನಾಡಿ, ‘ನಿಮಗೆ ತಪ್ಪು ಮಾಹಿತಿ ನೀಡಿದ ಸಹಾಯಕ ನಿರ್ದೇಶಕರಿಗೆ ನೋಟಿಸ್‌ ಜಾರಿ ಮಾಡಿ ವಿವರಣೆ ಕೇಳಿ’ ಎಂದು ಬಾಗೀರಥಿ ಅವರಿಗೆ ಸೂಚಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು