ಶನಿವಾರ, ಅಕ್ಟೋಬರ್ 1, 2022
20 °C
ಕ್ವಿಟ್‌ ಇಂಡಿಯಾ ಚಳವಳಿ ನೆನಪು, ನಗರದಲ್ಲಿ ಮೆರವಣಿಗೆ

ಚಾಮರಾಜನಗರ: ಖಾದಿ ಧ್ವಜ ಬಳಕೆಗೆ ಆಗ್ರಹಿಸಿ ಧ್ವಜ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಧ್ವಜ ಸಂಹಿತೆಗೆ ತಿದ್ದುಪಡಿ ತಂದು ಪಾಲಿಸ್ಟರ್‌ ಹಾಗೂ ಕೃತಕ ನೂಲಿನಿಂದ ಮಾಡಿದ ತ್ರಿವರ್ಭ ಧ್ವಜಗಳನ್ನು ಬಳಸಲು ಅವಕಾಶ ನೀಡಿರುವುದನ್ನು ಖಂಡಿಸಿ, ಖಾದಿ ಬಟ್ಟೆಯ ಧ್ವಜವನ್ನು ಮಾತ್ರ ಬಳಸಬೇಕು ಎಂದು ಆಗ್ರಹಿಸಿ ಧ್ವಜ ಸತ್ಯಾಗ್ರಹ ಸಮಿತಿ ಆಶ್ರಯದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು. 

ಆಗಸ್ಟ್‌ 9ರ ಕ್ವಿಟ್‌ ಇಂಡಿಯಾ ನೆನಪಿನ ಅಂಗವಾಗಿ ನಗರದಲ್ಲಿ ಹಿರಿಯ ನಾಗರಿಕರು, ಖಾದಿ ಪ್ರೇಮಿಗಳು ರ‍್ಯಾಲಿಯನ್ನೂ ನಡೆಸಿದರು.

ನಗರದ ಸತ್ಯಮಂಗಲ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಸೇರಿದ ಪ್ರತಿಭಟನಕಾರರು, ಖಾದಿ ಧ್ವಜಗಳನ್ನು ಹಿಡಿದು ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸಿದೆ ಮೆರವಣಿಗೆ ಆರಂಭಿಸಿದರು. ಸುಲ್ತಾನ್‌ ಷರೀಫ್‌ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡೀವಿಯೇಷನ್‌ ರಸ್ತೆ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ಮಾರ್ಗದಲ್ಲಿ ಸಾಗಿದ ಮೆರವಣಿಗೆ ಜಿಲ್ಲಾಡಳಿತ ಭವನದ ಗೇಟಿನ ಬಳಿ ಮುಕ್ತಾಯವಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಏಕತಾ ಪರಿಷತ್‌ನ ರಾಜ್‌ಗೋಪಾಲ್‌, ‘ಧ್ವಜ ಎಂದರೆ, ಬರೀ ಬಟ್ಟೆಯ ಚೂರಲ್ಲ. ಅದು ಹಲವು ಮೌಲ್ಯಗಳನ್ನು, ಭ‌ರವಸೆಗಳನ್ನು ಪ್ರತಿಪಾದಿಸುತ್ತದೆ. ನಮ್ಮ ದೇಶದಲ್ಲಿರುವ ಬಡತನವನ್ನು ಹೋಗಲಾಡಿಸುವ, ಕೋಮು ಸೌಹಾರ್ದವನ್ನು ಕಾಪಾಡುವ ಭರವಸೆಯನ್ನು ಧ್ಚಜ ನೀಡುತ್ತದೆ. ಎಲ್ಲರೂ ಖಾದಿ ಬಟ್ಟೆಯಿಂದ ಮಾಡಿದ ಧ್ವಜವನ್ನೇ ಬಳಸಬೇಕು. ನಮ್ಮ ನೇಕಾರರು ಸಂಕಷ್ಟದಲ್ಲಿದ್ದಾರೆ. ಖಾದಿ ಧ್ವಜ ಬಳಸಿದರೆ ಗ್ರಾಮೀಣ ಭಾಗದಲ್ಲಿ ದೊಡ್ಡ ಮಟ್ಟದ ಉದ್ಯೋಗ ಸೃಷ್ಟಿಯಾಗಲಿದೆ’ ಎಂದರು. 

ಧ್ವಜ ಸತ್ಯಾಗ್ರಹ ಸಮಿತಿಯ ಡಾ.ಕಾಳ ಚೆನ್ನೇಗೌಡ ಮಾತನಾಡಿ, ‘ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತಂದಿರುವುದು ಸರಿಯಲ್ಲ. ರಾಷ್ಟ್ರಧ್ವಜಕ್ಕೆ ಗೌರವ ಘನತೆ ಇದೆ. ಸರ್ಕಾರ ಅದನ್ನೂ ರಾಜಕೀಯಕ್ಕೆ ಬಳಸುತ್ತಿದೆ. ಸಂಹಿತೆಗೆ ಮಾಡಿರುವ ತಿದ್ದುಪಡಿಯಿಂದಾಗಿ ಗ್ರಾಮೀಣ ಭಾಗದ ನೇಕಾರರಿಗೆ ತೀವ್ರ ತೊಂದರೆಯಾಗಿದೆ’ ಎಂದು ದೂರಿದರು. 

ಪತ್ರಕರ್ತ ಜಿ.ಪಿ.ಬಸವರಾಜು ಮಾತನಾಡಿ, ‘ಧ್ವಜ ಒಂದು ಸಂಕೇತ. ಅದರಲ್ಲಿ ಅನೇಕ ಸಂಗತಿಗಳಿವೆ. ನಮ್ಮ ಸಂವಿಧಾನದ ಪ್ರಶ್ನೆ ಇದೆ. ಇವತ್ತು ನಾವು ಕಷ್ಟದಲ್ಲಿದ್ದೇವೆ. ಸಂವಿಧಾನವನ್ನು ಗಾಳಿಗೆ ತೂರಲಾಗುತ್ತಿದೆ. ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳುತ್ತಿದ್ದಾರೆ. ಸಂಸತ್ತಿನಲ್ಲಿ ಹಾಗೂ ಸಾರ್ವಜನಿಕವಾಗಿ ಚರ್ಚೆ ಮಾಡದೆ ಧ್ವಜ ಸಂಹಿತೆಗೆ ತಿದ್ದುಪಡಿ ತಂದಿದ್ದಾರೆ’ ಎಂದು ಕಿಡಿ ಕಾರಿದರು. 

ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್‌.ಜಯದೇವ ಮಾತನಾಡಿ, ‘ರಾಷ್ಟ್ರೀಯ ಧ್ವಜವು ದೇಶಭಕ್ತಿ, ಸಂಯಮ, ಸ್ವಾವಲಂಬನೆ, ಸರಳ ಜೀವನ ಮುಂತಾದ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಖಾದಿಯು ಶೋಷಣೆಮುಕ್ತ ಸಮಾಜದ ಕನಸನ್ನು ಬಿತ್ತುತ್ತದೆ. ಖಾದಿ ಬಾವುಟದ ಗಾಂಧೀಜಿ ಅವರ ಶ್ರಮ ಇದೆ. ಆದರೆ, ಈಗಿನ ಸರ್ಕಾರಕ್ಕೆ ಗಾಂಧಿಯೂ ಬೇಡ, ಖಾದಿಯೂ ಬೇಡ ಕಾರ್ಪೊರೇಟ್‌ನವರು ಮಾತ್ರ ಬೇಕು, ಹೀಗಾಗಿ ಖಾದಿ ಧ್ವಜವೂ ಅವಜ್ಞೆಗೆ ಗುರಿಯಾಗಿದೆ’ ಎಂದರು. 

ಪರಿಸರವಾದಿ ದೊರೆಸ್ವಾಮಿ ಅವರು, ಎಲ್ಲರೂ ಖಾದಿ ಬಟ್ಟೆಯಿಂದ ಮಾಡಿದ ಧ್ವಜಗಳನ್ನೇ ಬಳಸಬೇಕು ಎಂದು ಮನವಿ ಮಾಡಿದರು. 

ಅಹಿಂಸಾತ್ಮಕ ಉತ್ಪಾದನೆ ಪರ ಹೋರಾಟದಲ್ಲಿ ಸಕ್ರಿಯವಾಗಿರುವ ಜಿಲ್‌, ರಂಗಕರ್ಮಿ ಕೆ.ವೆಂಟಕರಾಜು, ಹುಚ್ಚೇಗೌಡ, ಮಹದೇವಸ್ವಾಮಿ, ಅಬ್ರಾರ್‌ ಅಹಮದ್‌, ಚಿತ್ರಾ, ಲತಾ, ಪ್ರಭುಸ್ವಾಮಿ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು