ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್. ಮಹೇಶ್ ವಿರುದ್ಧ ಪ್ರತಿಭಟನೆಗೆ ಆಕ್ರೋಶ

Last Updated 11 ಆಗಸ್ಟ್ 2021, 16:43 IST
ಅಕ್ಷರ ಗಾತ್ರ

ಚಾಮರಾಜನಗರ: ಇತ್ತೀಚೆಗೆ ಬಿಜೆಪಿ ಸೇರಿರುವ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ವಿರುದ್ಧ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ ಗುರುವಾರ (ಆ.12) ಪ್ರತಿಭಟನೆ ನಡೆಸುವ ನಿರ್ಧಾರವನ್ನು ಅವರ ಅಭಿಮಾನಿ ಬಳಗ ಖಂಡಿಸಿದೆ.

ಮಹೇಶ್ ಅವರ ವಿರುದ್ಧ ಅವಹೇಳನಕಾರಿಯಾದ ಪದಗಳನ್ನು ಬಳಸಿ ಕರಪತ್ರ ಹಂಚಲಾಗಿದೆ ಎಂದು ಆರೋಪಿಸಿರುವ ಬಳಗದವರು, ಒಕ್ಕೂಟದ ಪದಾಧಿಕಾರಿಗಳ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡುವುದಾಗಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್.ಮಹೇಶ್ ಅಭಿಮಾನಿ ಬಳಗದ ಕೆಂಪನಪುರ ಸಿದ್ದರಾಜು ಅವರು, ‘ಜಿಲ್ಲಾ ಪ್ರಗತಿಪರ ಸಂಘಟನೆಗಳ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಮಹೇಶ್ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಮಹೇಶ್ ಅವರನ್ನು ಜನಾಂಗ ದ್ರೋಹಿ... ಮುಂತಾದ ಅವಹೇಳನಕಾರಿಯಾದ ಪದಗಳನ್ನು ಬಳಸಿ ಕರಪತ್ರ ಮುದ್ರಿಸಿ ಹಂಚಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪತ್ರಿಕಾಗೋಷ್ಠಿ ‌ಮಾಡಿ ರಾಜೀನಾಮೆ ಕೊಡಲಿ ಎಂದು ಹೇಳಿದವರಲ್ಲಿ ಒಬ್ಬರು ಜೆಡಿಎಸ್ ಮುಖಂಡರು, ಇನ್ನೊಬ್ಬರು ಕಾಂಗ್ರೆಸ್ ಕಾರ್ಪೊರೇಟರ್. ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಅವರಿಗೆ ಮಹೇಶ್ ಅವರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ತಾಯಿಯೇ (ಪಕ್ಷ) ಮನೆಯಿಂದ ಆಚೆ ಹಾಕಿದ ಕಾರಣಕ್ಕೆ ಮಹೇಶ್ ಅವರು ರಾಜಕೀಯ ನೆಲೆ ಕಂಡು ಕೊಳ್ಳಲು ಬಿಜೆಪಿ ಸೇರಿದ್ದಾರೆ. ಇದರಲ್ಲಿ ತಪ್ಪೇನಿದೆ? ಕಾರ್ಯಕರ್ತರು ಹಾಗೂ ಬೆಂಬಲಿಗರ ಒತ್ತಾಯದಿಂದ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ’ ಎಂದು ಸಿದ್ದರಾಜು ಅವರು ಹೇಳಿದರು.

‘ಬಿಎಸ್‌ಪಿ ಅಥವಾ ಬಹುಜನ ಚಳವಳಿ ಯಾವಾಗಲೂ ಒಂದು ಜನಾಂಗಕ್ಕೆ ಸೀಮಿತವಾಗಿರಲಿಲ್ಲ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು, ಅಲ್ಪ ಸಂಖ್ಯಾತ ಸಮುದಾಯದವರು ಎಲ್ಲರೂ ಅದರಲ್ಲಿ ಭಾಗಿಯಾಗಿದ್ದರು. ಇವರು ಅದನ್ನು ಒಂದು ಜನಾಂಗಕ್ಕೆ ಸೀಮಿತ ಮಾಡಿದ್ದಾರೆ. ಇವರಿಗೆ ಪ್ರತಿಭಟನೆ ನಡೆಸಲು ಯಾರು ಹಣಕಾಸಿನ ನೆರವು ನೀಡುತ್ತಾರೆ ಎಂಬುದು ಗೊತ್ತಿದೆ. ಅವರ ವಿರುದ್ಧ ಪ್ರತಿಭಟನೆ ನಡೆಸಲು ನಾವೂ ಸಿದ್ಧ’ ಎಂದರು.

ರಾಜಕೀಯವಾಗಿ ಎದುರಿಸಲಿ: ‘ತಾವು ಯಾಕೆ ಬಿಜೆಪಿ ಸೇರಿದೆ ಎಂಬುದನ್ನು ಮಹೇಶ್ ಅವರು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಒಂದೇ ಒಂದು‌ ನೋಟಿಸ್ ಕೊಡದೆ ಏಕಾಏಕಿ ಅವರನ್ನು ಬಿಎಸ್‌ಪಿಯಿಂದ ಉಚ್ಚಾಟಿಸಲಾಗಿತ್ತು. ಎರಡು ವರ್ಷ ಅವರು ತಟಸ್ಥರಾಗಿದ್ದರು. ಪಕ್ಷದಿಂದ ಕರೆ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಅಲ್ಲಿಂದ ಯಾವುದೇ ಸೂಚನೆ ಬಾರದೇ ಇದ್ದುದರಿಂದ, ನಮ್ಮ ಒತ್ತಾಯಕ್ಕೆ‌ ಮಣಿದು ಬಿಜೆಪಿ ಸೇರಿದ್ದಾರೆ’ ಎಂದು ಅಭಿಮಾನಿ ಬಳಗದ ಮಾದೇಶ್ ಉಪ್ಪಾರ ಹೇಳಿದರು.

‘ಮಹೇಶ್ ಅವರ ಮೇಲೆ‌ ಯಾರೂ ವೈಯಕ್ತಿಕವಾಗಿ ದಾಳಿ‌ ನಡೆಸುವುದು ಬೇಡ. ಅವರನ್ನು ಚುನಾವಣೆಯ ಸಂದರ್ಭದಲ್ಲಿ ರಾಜಕೀಯವಾಗಿ ಎದುರಿಸಲಿ’ ಎಂದು ಸವಾಲು ಹಾಕಿದರು.

ಅಭಿಮಾನಿ‌ ಬಳಗದ ಆಲೂರು‌ಮಲ್ಲು, ಚಿನ್ನಸ್ವಾಮಿ, ದುಗ್ಗಟ್ಟಿ ಮಹೇಶ್, ರಮೇಶ್ ನಾಯ್ಕ, ಪರ್ವತರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT