ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ತೆಕ್ಕೆಗೆ ಕೊಳ್ಳೇಗಾಲ ನಗರಸಭೆ

ಅಧ್ಯಕ್ಷರಾಗಿ ರೇಖಾ, ಉಪಾಧ್ಯಕ್ಷರಾಗಿ ಎ.ಪಿ.ಶಂಕರ್ ಅವಿರೋಧ ಆಯ್ಕೆ; ಕಾರ್ಯಕರ್ತರ ಸಂಭ್ರಮ
Published : 5 ಸೆಪ್ಟೆಂಬರ್ 2024, 14:17 IST
Last Updated : 5 ಸೆಪ್ಟೆಂಬರ್ 2024, 14:17 IST
ಫಾಲೋ ಮಾಡಿ
Comments

ಕೊಳ್ಳೇಗಾಲ: ಇಲ್ಲಿನ ನಗರಸಭೆಯ ನೂತನ ಅಧ್ಯಕ್ಷರಾಗಿ ರೇಖಾ ಹಾಗೂ ಉಪಾಧ್ಯಕ್ಷರಾಗಿ ಎ.ಪಿ.ಶಂಕರ್ ಅವರು ಅವಿರೋಧವಾಗಿ ಗುರುವಾರ ಆಯ್ಕೆಯಾದರು.

ನಗರಸಭೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಇಬ್ಬರೂ ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಉಪ ವಿಭಾಗಾಧಿಕಾರಿ ಮಹೇಶ್ ಹೇಳಿದರು.

ನೂರಾರು ಮಂದಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರಸಭೆಯ ಮುಂದೆ ಸಮಾವೇಶಗೊಂಡು ಶಾಸಕ, ಸಂಸದರಿಗೆ ಹಾಗೂ ಅಧ್ಯಕ್ಷರಿಗೆ ಜೈಕಾರ ಕೂಗುವ ಮೂಲಕ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಂತರ ನಗರದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ನಡೆಸಿ ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ‘ಕಾಂಗ್ರೆಸ್ ಅಧಿಕಾರ ಹಿಡಿಯುವುದರಲ್ಲಿ ಅನುಮಾನವೇ ಇರಲಿಲ್ಲ. ಈ ಗೆಲುವು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಗೆಲುವು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೆಲುವು. ಕಾರ್ಯಕರ್ತರಿಗೆ ಮೊದಲನೆಯದಾಗಿ ಶುಭಾಶಯ ತಿಳಿಸುತ್ತೇನೆ. ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರೇಖಾ ಹಾಗೂ ಉಪಾಧ್ಯಕ್ಷ ಎ.ಪಿ.ಶಂಕರ್ ಅವರು ಪ್ರಾಮಾಣಿಕವಾಗಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಬೇಕು’ ಎಂದು ಹೇಳಿದರು.

‘ನಗರಸಭೆಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವುದು ಇವರಿಬ್ಬರ ಕರ್ತವ್ಯವಾಗಿದೆ. ಎಲ್ಲಾ ಸದಸ್ಯರು ಒಟ್ಟಾಗಿ ಸೇರಿ ನಗರಸಭೆಯನ್ನು ಮುನ್ನಡೆಸಬೇಕು. ಕಾಂಗ್ರೆಸ್ ಮಾತ್ರವಲ್ಲದೇ ಬಿಜೆಪಿ ಹಾಗೂ ಇತರ ಸದಸ್ಯರೂ ಒಮ್ಮತದಿಂದ ಆಯ್ಕೆ ಮಾಡಿ ಗೆಲ್ಲಿಸಿದ್ದಾರೆ. ನನ್ನ ಜೊತೆ ಯಾರು ಪ್ರಾಮಾಣಿಕವಾಗಿ ಇರುತ್ತಾರೋ ಅವರಿಗೆ ನಾನೂ ಪ್ರಾಮಾಣಿಕವಾಗಿ ಕೆಲಸ ಮಾಡಿ ಕೊಡುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಅನುಕೂಲಗಳನ್ನು ಸಹ ಮಾಡಿಕೊಡುತ್ತೇನೆ’ ಎಂದು ಭರವಸೆ ನೀಡಿದರು.

ಸಂಸದ ಸುನಿಲ್ ಬೋಸ್ ಮಾತನಾಡಿ, ‘ಶಾಸಕರ ಮಾರ್ಗದರ್ಶನದಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಯಾಗಿದೆ. ಇಬ್ಬರೂ ನಗರಸಭೆ ಆಡಳಿತವನ್ನು, ಸಾರ್ವಜನಿಕರ ಕೆಲಸವನ್ನು ಉತ್ತಮವಾಗಿ ಮಾಡಬೇಕು. ಪಕ್ಷವನ್ನು ಅಭಿವೃದ್ಧಿಪಡಿಸಬೇಕು. ಮುಂದಿನ ದಿನಗಳಲ್ಲಿ ಅನುದಾನ ತಂದು ನಗರಸಭೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುತ್ತೇನೆ’ ಎಂದರು.

ಎರಡನೇ ಅವಕಾಶ: ಕಳೆದ ವರ್ಷವೂ ಅಧ್ಯಕ್ಷರಾಗಿದ್ದ ರೇಖಾ ಮತ್ತೆ ಎರಡನೇ ಬಾರಿಗೆ ಅಧಿಕಾರ ಪಡೆದಿದ್ದರಾರೆ. ಅವರ ಪತಿ ರಮೇಶ್ ಅವರು ಸಹ ಅಧ್ಯಕ್ಷರಾಗಿದ್ದರು. ರೇಖಾ ಮಾತನಾಡಿ, ‘ಹಿರಿಯರ ಮಾರ್ಗದರ್ಶನದಂತೆ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಉತ್ತಮವಾಗಿ ಮಾಡಿಕೊಡ‌ಲಾಗುವುದು’ ಎಂದರು.

ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಶಾಸಕರು ಸಂಸದರು ಹಾಗೂ ನಗರಸಭೆ ಸದಸ್ಯರು ಮುಖಂಡರೆಲ್ಲಾ ಒಟ್ಟಾಗಿ ಸೇರಿ ಡಾ. ಬಿಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು
ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಶಾಸಕರು ಸಂಸದರು ಹಾಗೂ ನಗರಸಭೆ ಸದಸ್ಯರು ಮುಖಂಡರೆಲ್ಲಾ ಒಟ್ಟಾಗಿ ಸೇರಿ ಡಾ. ಬಿಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು

ವಿಪ್‌ಗಿಲ್ಲ ಬೆಲೆ; ಬಿಜೆಪಿಗೆ ಮುಖಭಂಗ

ಕಾಂಗ್ರೆಸ್ 12 ಬಿಜೆಪಿ 13 ಪಕ್ಷೇತರ 4 ಬಿಎಸ್‌ಪಿ 2 ಸೇರಿ ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾದರೂ ಸದಸ್ಯರ ಗೊಂದಲದಿಂದ ಕಳೆದ ವರ್ಷ ಅಧಿಕಾರ ಕಳೆದುಕೊಂಡಿತ್ತು. ಈ ಬಾರಿ ಮನಸ್ಸು ಮಾಡಿದ್ದರೆ ಅಧಿಕಾರವನ್ನು ಹಿಡಿಯಬಹುದಿತ್ತು. ಆದರೆ ಸದಸ್ಯರಾರೂ ಚುನಾವಣೆಗೆ ಸ್ಪರ್ಧಿಸದೇ ಪಕ್ಷಕ್ಕೆ ದೊಡ್ಡ ಮುಖಭಂಗ ಉಂಟಾಗಿದೆ ಕಾಂಗ್ರೆಸ್‌ನೊಂದಿಗೆ ಪಕ್ಷೇತರರು ಒಬ್ಬ ಬಿಎಸ್‌ಪಿ ಸದಸ್ಯರೂ ಮಾತ್ರವಲ್ಲದೇ ಮೂವರು ಬಿಜೆಪಿ ಸದಸ್ಯರಾದ ಮಾನಸ ಧರಣೇಶ್ ನಾಗಣ್ಣ ಅವರು ಕಳೆದೆರಡು ವರ್ಷಗಳಿಂದಲೂ ಗುರುತಿಸಿಕೊಂಡಿದ್ದರು.

ಚುನಾವಣೆ ಎರಡು ದಿನ ಇರುವಾಗ ಬಿಜೆಪಿಯ ಉಳಿದ ಆರು ಸದಸ್ಯರೂ ಸಹ ಚುನಾವಣೆಯಿಂದ ಹಿಂದೆ ಸರಿದು ಕಾಂಗ್ರೆಸ್ ಬೆಂಬಲಕ್ಕೆ ನಿಂತರು. ಬಿಜೆಪಿಯಿಂದ ಉಪಾಧ್ಯಕ್ಷ ಸ್ಥಾನಕ್ಕೆ ಪರಮೇಶ್ ಅವರನ್ನು ಆಯ್ಕೆ ಮಾಡಿ ಸದಸ್ಯರಿಗೆ ವಿಪ್ ನೋಟಿಸ್‌ ಜಾರಿ ಮಾಡಿ  ಮನೆಗೆ ತೆರಳಿ ಅಂಟಿಸಿ ಬಂದರೂ ಸ್ಪರ್ಧೆಗೆ ಸೂಚಕರ ಸಹಿ ದೊರೆಯಲಿಲ್ಲ. ಗುರುವಾರ ಬೆಳಿಗ್ಗೆ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಸದಸ್ಯರಾದ ಮಾನಸ ಧರಣೇಶ್ ನಾಗಣ್ಣ ಜಿ.ಪಿ.ಶಿವಕುಮಾರ್ ಕವಿತಾ ರಾಮಕೃಷ್ಣ ನಾಗಸಂದ್ರಮ್ಮ ಪವಿತ್ರಾ ಸೇರಿದಂತೆ ಅನೇಕ ಮಂದಿ ಸದಸ್ಯರು ಶಾಸಕ ಕೃಷ್ಣಮೂರ್ತಿ ಅವರ ಜೊತೆ ಉಪಹಾರ ಸೇವಿಸುತ್ತಿದ್ದುದು ಸಾರ್ವಜನಿಕರನ್ನು ಅಚ್ಚರಿಗೊಳಿಸಿತು.

ಲಕೋಟೆ ಮೂಲಕ ಅಭ್ಯರ್ಥಿ ಆಯ್ಕೆ

ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರೇಖಾ ಹಾಗೂ ಪುಷ್ಪಲತಾ ನಡುವೆ ಬಾರಿ ಪೈಪೋಟಿ ನಡೆದಿತ್ತು. ಇಬ್ಬರು ಸಹ ಶಾಸಕರು ಸಂಸದರು ಹಾಗೂ ನಿಗಮ ಮಂಡಳಿ ಅಧ್ಯಕ್ಷರ ಜೊತೆ ಅನೇಕ ಬಾರಿ ಚರ್ಚೆ ನಡೆಸಿ ಅಧ್ಯಕ್ಷ ಸ್ಥಾನಕ್ಕೆ ಮನವಿ ಸಹ ಮಾಡಿದ್ದರು. ಕಾಂಗ್ರೆಸ್‌ನಲ್ಲೂ 2 ಗುಂಪುಗಳಾಗಿದ್ದವು.

ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಮಧ್ಯಪ್ರವೇಶಿಸಿ ಕಾಂಗ್ರೆಸ್ ಸದಸ್ಯರನ್ನು ಹಾಗೂ ಕೆಲವು ಬಿಜೆಪಿ ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಿದ್ದರು. ಬಳಿಕ ಬುಧವಾರ ಮೈಸೂರಿನಲ್ಲಿ ಕಾಂಗ್ರೆಸ್ ವರಿಷ್ಠರ ಜೊತೆ ಎರಡು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿ ನಗರಸಭಾ ಸದಸ್ಯರಿಂದ ಅಭಿಪ್ರಾಯಗಳನ್ನು ಪಡೆದುಕೊಂಡರು. ಬಳಿಕ ಗುರುವಾರ ಬೆಳಿಗ್ಗೆ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿ ಎಲ್ಲಾ ನಗರಸಭಾ ಸದಸ್ಯರಿಗೂ ರೇಖಾ ಹಾಗೂ ಎ.ಪಿ.ಶಂಕರ್ ಅವರ ಆಯ್ಕೆಯನ್ನು ಸೂಚಿಸಿರುವ ಲಕೋಟೆ ನೀಡಿ ಸದಸ್ಯರು ಮತ ನೀಡಬೇಕು ಎಂದು ವಿಪ್‌ ಜಾರಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT