ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳ್ಳೇಗಾಲ ನಗರಸಭೆ ಚುನಾವಣೆ: ಕಾಂಗ್ರೆಸ್‌ನಲ್ಲಿ ಪ್ರವಾಸ ರಾಜಕೀಯ

ಕೊಳ್ಳೇಗಾಲ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ 5ರಂದು ಚುನಾವಣೆ
Published 3 ಸೆಪ್ಟೆಂಬರ್ 2024, 6:14 IST
Last Updated 3 ಸೆಪ್ಟೆಂಬರ್ 2024, 6:14 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೆ.5ರಂದು ಚುನಾವಣೆ ನಿಗದಿಯಾಗಿರುವ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅಧಿಕಾರ ಗದ್ದುಗೆ ಹಿಡಿಯಲು ಕಸರತ್ತು ಜೋರಾಗಿದ್ದು ಕಾಂಗ್ರೆಸ್‌ನಲ್ಲಿ ‘ಪ್ರವಾಸ ರಾಜಕೀಯ’ ನಡೆದಿದೆ. ಸದಸ್ಯರೆಲ್ಲರೂ ‌‌‌‌‌‌‌ಸೋಮವಾರ ಮಡಿಕೇರಿ ಪ್ರವಾಸಕ್ಕೆ ಹೊರಟರು.

ಚುನಾವಣೆಯವರೆಗೂ ಸದಸ್ಯರೆಲ್ಲೂ ಒಂದೆಡೆ ಇರುವಂತೆ ನಾಯಕರು ಸೂಚಿಸಿರುವುದರಿಂದ, ಮೂರು ದಿನಗಳ ಪ್ರವಾಸ ಏರ್ಪಡಿಸಲಾಗಿದೆ. ಮಹಿಳಾ ಸದಸ್ಯರು ಕುಟುಂಬ ಸಮೇತ ಹೋಗಿದ್ದಾರೆ.

ಕಾಂಗ್ರೆಸ್‌ ಸದಸ್ಯರು, ಪಕ್ಷೇತರ ಸದಸ್ಯರು ಹಾಗೂ ಬಿಜೆಪಿಯಿಂದ ಗೆದ್ದು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿರುವ ಸದಸ್ಯರೂ ಪ್ರವಾಸಕ್ಕೆ ಜೊತೆಯಾಗಿದ್ದಾರೆ.

ಪ್ರವಾಸಕ್ಕೆ ಹೊರಟವರು:

ಕಾಂಗ್ರೆಸ್ ಸದಸ್ಯರಾದ ರೇಖಾ, ಪುಷ್ಪಲತಾ, ಸುಶೀಲಾ, ಭಾಗ್ಯಾ, ಸುಮೇರ ಬೇಗಂ, ಶಾಂತರಾಜು, ಮಂಜುನಾಥ್, ಸುರೇಶ್, ರಾಘವೇಂದ್ರ, ಪಕ್ಷೇತರ ಸದಸ್ಯರಾದ ಎ.ಪಿ.ಶಂಕರ್, ಮನೋಹರ್, ಸತ್ಯನಾರಾಯಣ ಗುಪ್ತ, ಕವಿತಾ ಹಾಗೂ ಬಿಜೆಪಿಯಿಂದ ಆಯ್ಕೆಯಾಗಿರುವ ಧರಣೇಶ್, ನಾಗಣ್ಣ, ಮಾನಸ ಪ್ರಭುಸ್ವಾಮಿ ಸೇರಿ 16 ಸದಸ್ಯರು ಪ್ರವಾಸಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ಸದಸ್ಯರಾದ ಸುಮಾ, ಪ್ರಶಾಂತ್, ಮಹದೇವಮ್ಮ ಅನಾರೋಗ್ಯದ ಕಾರಣದಿಂದ ಹೋಗಿಲ್ಲ.

ನಗರಸಭೆಯಲ್ಲಿ 31 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 12, ಬಿಜೆಪಿ 13, ಪಕ್ಷೇತರ 4, ಹಾಗೂ ಬಿಎಸ್‌ಪಿ 2 ಸ್ಥಾನಗಳಲ್ಲಿ ಗೆದ್ದಿದೆ. ಅಧ್ಯಕ್ಷ–ಉಪಾಧ್ಯಕ್ಷರ ಸ್ಥಾನದ ಚುಕ್ಕಾಣಿ ಹಿಡಿಯಬೇಕಾದರೆ 17 ಸದಸ್ಯ ಬಲದ ಮ್ಯಾಜಿಕ್ ನಂಬರ್ ಬೇಕು. ನಾಲ್ವರು ಪಕ್ಷೇತರರು, ಒಬ್ಬರು ಬಿಎಸ್‌ಪಿ, ಹಾಗೂ ಬಿಜೆಪಿ ಮೂವರು ಸದಸ್ಯರು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ.

ಸಂಸದ ಸುನಿಲ್ ಬೋಸ್ ಹಾಗೂ ಶಾಸಕ ಎಆರ್ ಕೃಷ್ಣಮೂರ್ತಿ ಅವರೂ ಮತದಾನ ಮಾಡಿದರೆ, ಅಧಿಕಾರದ ಗದ್ದುಗೆ ಕಾಂಗ್ರೆಸ್‌ಗೆ ಒಲಿಯುವ ಸಾಧ್ಯತೆ ಹೆಚ್ಚು.

ರೇಖಾ–ಪುಷ್ಪಲತಾ ಪೈಪೋಟಿ:

3ನೇ ವಾರ್ಡಿನ ಸದಸ್ಯೆ ರೇಖಾ ಕಳೆದ ಬಾರಿ ಅಧ್ಯಕ್ಷರಾಗಿದ್ದರು. ಅವರ ಪತಿ ರಮೇಶ್ ಕೂಡ ಅಧ್ಯಕ್ಷರಾಗಿದ್ದವರು. ಈ ಬಾರಿ ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿರುವುದರಿಂದ ರೇಖಾ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರಿಗೆ ಸದಸ್ಯೆ  ಪುಷ್ಪಲತಾ ಪೈಪೋಟಿ ನೀಡುತ್ತಿದ್ದಾರೆ.

ಸಚಿವರಾದ ಎಚ್‌.ಸಿ.ಮಹದೇವಪ್ಪ, ವೆಂಕಟೇಶ್, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣ ಅವರ ಬಳಿ ನಿಯೋಗ ತೆರಳಿರುವ ಕಾಂಗ್ರೆಸ್ ನಾಯಕರು ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇರಿಸಿದ್ದಾರೆ. 

ಭೀಮ ನಗರದ ಮುಖಂಡರು ನಾಯಕರನ್ನು ಭೇಟಿಮಾಡಿ ವಾರ್ಡ್‌ನ ಅಭ್ಯರ್ಥಿಗೆ ‘ಅಧ್ಯಕ್ಷ’ ಸ್ಥಾನ ನೀಡಿ ಎಂದು ಕೋರಿದ್ದಾರೆ.

ವರಿಷ್ಠರ ತೀರ್ಮಾನವೇ ಅಂತಿಮ

ಕಾಂಗ್ರೆಸ್ ಪಕ್ಷದಲ್ಲಿ ಇಬ್ಬರ ನಡವೆ ಬಲವಾದ ಪೈಪೋಟಿ ಇದ್ದು ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಚುನಾವಣೆಯ ದಿನ ಉತ್ತರ ಸಿಗಲಿದೆ. ಅದಕ್ಕೂ ಮುನ್ನ ಸೆ.4ರಂದು ರಾತ್ರಿ ಕಾಂಗ್ರೆಸ್ ನಾಯಕರು ಅಧ್ಯಕ್ಷರ ಆಯ್ಕೆ ನಿರ್ಧರಿಸಲಿದ್ದು ಅವರ ಸೂಚನೆಯಂತೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ವರಿಷ್ಠರ ತೀರ್ಮಾನವೇ ಅಂತಿಮ ಎನ್ನುತ್ತಾರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್

ಬಿಜೆಪಿ ಗೆಲುವಿನ ವಿಶ್ವಾಸ

ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯರು ಕೂಡ ಪೈಪೋಟಿ ನಡೆಸಿದ್ದು ಅಧ್ಯಕ್ಷ ಸ್ಥಾನ ಹಿಡಿಯುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಬಿಜೆಪಿಯ ಮೂವರು ಸದಸ್ಯರು ಕಾಂಗ್ರೆಸ್ ಪ್ರವಾಸಕ್ಕೆ ಹೊರಟಿದ್ದರೂ ಪ್ರವಾಸ ಮುಗಿಸಿಕೊಂಡು ಬಂದ ನಂತರ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಗರಸಭಾ ಸದಸ್ಯರು ಪ್ರವಾಸಕ್ಕೆ ಹೊರಟಿರುವ ವಿಷಯ ತಿಳಿದಿಲ್ಲ. ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಅಂತಿಮವಾಗಿಲ್ಲ.ಪಕ್ಷದ ವರಿಷ್ಠರ ತೀರ್ಮಾನದಂತೆ ಅಭ್ಯರ್ಥಿಯ ಆಯ್ಕೆ ಬುಧವಾರ ರಾತ್ರಿ ಅಂತಿಮವಾಗಲಿದೆ.
ಎ.ಆರ್.ಕೃಷ್ಣಮೂರ್ತಿ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT