ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಸ್ಕೌಟ್‌ ಅಂಡ್‌ ಗೈಡ್ಸ್‌ ಸಾಧಕಿ ಹರಿಣಿ

ರಾಜ್ಯಪಾಲರಿಂದ ರಾಜ್ಯಮಟ್ಟದ ಪ್ರಶಸ್ತಿ ಸ್ವೀಕರಿಸಿದ ಗೌರವ
Last Updated 3 ಜುಲೈ 2019, 19:45 IST
ಅಕ್ಷರ ಗಾತ್ರ

ಹನೂರು: ಪಟ್ಟಣದ ವಿದ್ಯಾರ್ಥಿನಿ ಆರ್.ಹರಿಣಿ ಅವರು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಸ್ಕೌಟ್‌ ಅಂಡ್ ಗೈಡ್ಸ್‌ನಲ್ಲಿ ತೊಡಗಿಸಿಕೊಂಡು ರಾಜ್ಯಪಾಲರಿಂದ ಪ್ರಶಸ್ತಿ ಪಡೆಯುವ ಮೂಲಕ ಗಮನಸೆಳೆದಿದ್ದಾರೆ.

ಪಟ್ಟಣದ ನಿವಾಸಿ ಆರ್.ರವೀಂದ್ರ ಹಾಗೂ ಶಿವರಾಜಮ್ಮ ಅವರ ಪುತ್ರಿಯಾಗಿರುವ ಹರಿಣಿ, ವಿವೇಕಾನಂದ ಶಾಲೆಯಲ್ಲಿ ಪ್ರೌಢಶಿಕ್ಷಣ ಮುಗಿಸಿ ಪ್ರಸ್ತುತ ಲರ್ನರ್ಸ್ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದಾರೆ. ಕಳೆದ ಶೈಕ್ಷಣಿಕ ವರ್ಷದ 10ನೇ ತರಗತಿಯಲ್ಲಿ ನಡೆದ ಸ್ಕೌಟ್‌ ಅಂಡ್ ಗೈಡ್ಸ್‌ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

8ನೇ ತರಗತಿಯಿಂದಲೇ ಸ್ಕೌಟ್‌ ಅಂಡ್ ಗೈಡ್ಸ್‌ ಸೇರಿದ ಹರಿಣಿ ಮೂರು ವರ್ಷದ ಅವಧಿಯಲ್ಲಿ ಜಿಲ್ಲೆ ಹಾಗೂ ಹೊರಜಿಲ್ಲೆಗಳಲ್ಲೂ ಆಯೋಜಿಸುತ್ತಿದ್ದ ಸಾಕಷ್ಟು ಶಿಬಿರಗಳಲ್ಲಿ ಭಾಗವಹಿಸಿ ತರಬೇತಿ ಪಡೆಯುವುದರ ಜತೆಗೆ ಬಹುಮಾನವನ್ನು ಪಡೆದಿದ್ದಾರೆ.

ಸ್ಕೌಟ್‌ ಮತ್ತು ಗೈಡ್ಸ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಬೇಕು ಎಂಬ ಮಹದಾಸೆಯನ್ನು ಹರಿಣಿ ಹೊಂದಿದ್ದಾರೆ.ಗೌತಮ್ ಶಾಲೆಯ ಕಾರ್ಯದರ್ಶಿ ಆಗಿರುವ ತಂದೆ ಹಾಗೂ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿರುವ ತಾಯಿ ಮಗಳ ಬೆನ್ನಿಗೆ ನಿಂತಿದ್ದಾರೆ.

ಹೊರಜಿಲ್ಲೆಗಳಲ್ಲಿ ನಡೆಯುವ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಮಕ್ಕಳಿಗೆ ಭೌಗೋಳಿಕ ವೈವಿಧ್ಯ ಮನವರಿಕೆಯಾಗುತ್ತದೆ. ಕುಟುಂಬ, ಶಾಲೆ... ಹೀಗೆ ಯಾವುದೇ ಒತ್ತಡವಿಲ್ಲದೆ ಶಿಬಿರದಲ್ಲಿ ಭಾಗವಹಿಸುವುದರಿಂದ ಜೀವನದ ಮೌಲ್ಯಗಳನ್ನು ಅರಿಯಬಹುದಾಗಿದೆ. ಈ ನಿಟ್ಟಿನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ನಮ್ಮ ಶಾಲೆಯ ಮಕ್ಕಳು ಸ್ಕೌಟ್ ಅಂಡ್ ಗೈಡ್ಸ್‌ ವಿಭಾಗಕ್ಕೆ ಸೇರಿ ಸಾಕಷ್ಟು ಬಹುಮಾನಗಳನ್ನು ಪಡೆದಿದ್ದಾರೆ ಎಂದು ಹೇಳುತ್ತಾರೆ ವಿವೇಕಾನಂದ ಶಾಲೆಯ ಮುಖ್ಯಶಿಕ್ಷಕ ಮಧುಸೂದನ್‌.

‘ಪ್ರಾಥಮಿಕ ಶಾಲೆಯಿಂದಲೂ ಇಲ್ಲೇ ಅಭ್ಯಾಸ ಮಾಡಿದ ಹರಿಣಿ ಪ್ರೌಢಶಾಲೆಗೆ ಬಂದ ಬಳಿಕ ಸ್ಕೌಟ್ ಅಂಡ್ ಗೈಡ್ಸ್‌ ವಿಭಾಗಕ್ಕೆ ಸೇರಿದಳು. ಪ್ರತಿ ವರ್ಷವೂ ಉತ್ತಮ ಅಭ್ಯರ್ಥಿ ಎಂಬ ಪ್ರಶಸ್ತಿಗೆ ಭಾಜನರಾಗುತ್ತಿರುವುದು ಅತ್ಯಂತ ಸಂತಸ ತಂದಿದೆ. ಮುಂದಿನ ದಿನಗಳಲ್ಲೂ ನಮ್ಮ ಶಾಲೆಯ ವಿದ್ಯಾರ್ಥಿಗಳು ಇಂತಹ ಶಿಬಿರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಣೆ ನೀಡಲಾಗುತ್ತಿದೆ. ಪಠ್ಯದ ಜತೆಗೆ ಮಕ್ಕಳಲ್ಲಿರುವ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿದ ಪರಿಣಾಮ ವಿದ್ಯಾರ್ಥಿಗಳು ರಾಜ್ಯಮಟ್ಟದ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು’ ಎಂದು ಅವರು ಹೇಳಿದರು.

ಪೋಷಕರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ

‘ಪೋಷಕರ ಉತ್ತಮ ಸಹಕಾರ ಹಾಗೂ ಶಾಲೆಯಲ್ಲಿನ ಶಿಕ್ಷಕರ ಸೂಕ್ತ ಮಾರ್ಗದರ್ಶನದಿಂದಾಗಿ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು’ ಎಂದು ಹೇಳುತ್ತಾರೆ ಹರಿಣಿ.

‘ಸ್ಕೌಟ್ ಅಂಡ್ ಗೈಡ್ಸ್‌ ಸೇರಿದ ಪ್ರಾರಂಭದಲ್ಲಿ ಭಯವಾಗಿತ್ತು. ಶಿಕ್ಷಕರು ಭಯ ಹೋಗಲಾಡಿಸಿ ಧೈರ್ಯ ತುಂಬಿದರು. ಒಂದೆರಡು ಶಿಬಿರಗಳಲ್ಲಿ ಭಾಗವಹಿಸುತ್ತಿದ್ದಂತೆ ಅಭ್ಯಾಸವಾಯಿತು. 10ನೇ ತರಗತಿಯಲ್ಲಿದ್ದಾಗ ಆಯೋಜಿಸಿದ್ದ ಶಿಬಿರ ಅತ್ಯಂತ ಮಹತ್ವವಾದುದು. ಶಾಲೆ, ಮನೆ ಕುಟುಂಬ ಇದಷ್ಟೇ ಜೀವನ ಎಂದುಕೊಂಡಿದ್ದ ನಮಗೆ ಹೊರಜಿಲ್ಲೆಗಳಲ್ಲಿ ನಡೆದ ಶಿಬಿರಗಳು ಅನನ್ಯ ಅನುಭವ ನೀಡಿದವು. ಮುಂದಿನ ದಿನಗಳಲ್ಲಿ ಇದೇ ಚಟುವಟಿಕೆಗಳಲ್ಲಿ ಇನ್ನಷ್ಟು ತೊಡಗಿಸಿಕೊಂಡು ಐಪಿಎಸ್ ಅಧಿಕಾರಿಯಾಗಬೇಕು’ ಎಂದು ಕನಸನ್ನು ಅವರು ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT