ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೈನೋದ್ಯಮದಲ್ಲಿ ಖುಷಿ ಕಂಡ ಮಹದೇವಸ್ವಾಮಿ

30 ರಾಸುಗಳ ಸಾಕಣೆ: 2 ಎಕೆರೆಯಲ್ಲಿ ಕೃಷಿ
Published : 13 ಸೆಪ್ಟೆಂಬರ್ 2024, 6:16 IST
Last Updated : 13 ಸೆಪ್ಟೆಂಬರ್ 2024, 6:16 IST
ಫಾಲೋ ಮಾಡಿ
Comments

ಸಂತೇಮರಹಳ್ಳಿ: ಹೈನುಗಾರಿಕೆ ಮಾಡುವುದು ಹೊಸದೇನಲ್ಲ. ಆದರೆ, ಹೈನೋದ್ಯಮದಲ್ಲಿ ಯಶಸ್ಸು ಪಡೆಯುವುದು ಹಾಗೂ ಖರ್ಚು ಕಡಿಮೆ ಮಾಡಿ ಲಾಭ ಹೆಚ್ಚಿಸುವುದು ಜಾಣ್ಮೆಯ ವಿಚಾರ.

ಅಂತಹ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ ಹೆಗ್ಗವಾಡಿಪುರ ಗ್ರಾಮದ ಎನ್‌ರಿಚ್ ಮಹದೇವಸ್ವಾಮಿ. ಕೃಷಿಗೆ ಪೂರಕವಾಗಿ ಹೈನೋದ್ಯಮ ಮಾಡುತ್ತಿರುವ ಮಹದೇವಸ್ವಾಮಿ ದೇಸಿ ನಾಟಿ ಹಸುಗಳ ಜತೆಗೆ ವಿವಿಧ ತಳಿಗಳ ಹಸುಗಳನ್ನು ಸಾಕುತ್ತಾ ಹೈನುಗಾರಿಕೆ ಮಾಡುತ್ತಿರುವುದು ವಿಶೇಷ.

ಕುದೇರು ಮುಖ್ಯ ರಸ್ತೆಯಲ್ಲಿರುವ ಎರಡು ಎಕರೆ ಜಮೀನಿನಲ್ಲಿ ಎನ್‌ರಿಚ್ ಡೈರಿ ಫಾರ್ಮಿಂಗ್ ಹೆಸರಿನಲ್ಲಿ ಡೈರಿ ನಿರ್ಮಿಸಿಕೊಂಡಿರುವ ಅವರು, 30 ರಾಸುಗಳನ್ನು ಸಾಕಿದ್ದಾರೆ. ಇವುಗಳಲ್ಲಿ 15 ಹಸುಗಳು ಮಾತ್ರ ಹಾಲು ನೀಡುತ್ತಿವೆ. ಹೈನುಗಾರಿಕೆಯ ಜತೆಗೆ 1 ಎಕರೆಯಲ್ಲಿ ತೆಂಗು, ಬಾಳೆ ಹಾಗೂ ಮತ್ತೊಂದು ಎಕರೆ ಜಮೀನಿನಲ್ಲಿ ಹಸುಗಳಿಗೆ ಮೇವು ಬೆಳೆಸುತ್ತಿದ್ದಾರೆ.

ಉತ್ತಮ ಸೌಲಭ್ಯಗಳನ್ನು ಹೊಂದಿರುವ ವಿಶಾಲವಾದ ಕೊಟ್ಟಿಗೆಯನ್ನು ನಿರ್ಮಾಣ ಮಾಡಿದ್ದಾರೆ. ಗಾಳಿ ಬೆಳಕು ಉತ್ತಮವಾಗಿ ಬರುವಂತೆ ಕಿಟಕಿಗಳ ವ್ಯವಸ್ಥೆ ಕಲ್ಪಿಸಿದ್ದಾರೆ. ಮೇಲ್ಛಾವಣಿಗೆ ಕೂಲ್ ಶೀಟ್ ಹಾಕಿದ್ದು ಬೇಸಗೆಯಲ್ಲೂ ರಾಸುಗಳಿಗೆ ಕಿರಿಕಿರಿ ಉಂಟಾಗುವುದಿಲ್ಲ.

ಸೊಳ್ಳೆ, ಕೀಟಗಳು ಕೊಟ್ಟಿಗೆ ಒಳಗೆ ಬಾರದಂತೆ ಸ್ಕ್ರೀನ್‌ಗಳನ್ನು ಅಳವಡಿಸಿದ್ದಾರೆ. ಬೇಸಿಗೆ ಸಮಯದಲ್ಲಿ ರಾಸುಗಳಿಗೆ ಉಷ್ಣಾಂಶ ಹೆಚ್ಚಾಗಬಾರದು ಎಂದು ಅಲ್ಲಲ್ಲಿ ಫ್ಯಾನ್‌ಗಳನ್ನು ಅಳವಡಿಕೆ ಮಾಡಿದ್ದಾರೆ. ಹಸುವಿನ ಗಂಜಲ ನೇರವಾಗಿ ಹೊರಹೋಗುವ ವ್ಯವಸ್ಥೆ ಮಾಡಿದ್ದಾರೆ.

ಹಸುಗಳು ಮುಂಜಾನೆ ಮತ್ತು ಸಂಜೆ ಸೇರಿ ಪ್ರತಿದಿನ 120 ಲೀಟರ್ ಹಾಲು ಕೊಡೊತ್ತವೆ. ಖಾಸಗಿ ಡೈರಿಯ ಸಿಬ್ಬಂದಿ ಸ್ಥಳಕ್ಕೆ ಬಂದು ಹಾಲು ಖರೀದಿಸಿ ಹೋಗುತಾರೆ. ಚಾಮೂಲ್ ಘಟಕಕ್ಕೆ ಸರಬರಾಜು ಮಾಡುವ ಸಹಕಾರ ಸಂಘಗಳಿಗೂ ಹಾಲು ಮಾರಾಟ ಮಾಡಲಾಗುತ್ತದೆ. ಪ್ರತಿ ಲೀಟರ್‌ಗೆ ₹ 30 ರಿಂದ ₹ 35ರವರೆಗೂ ದರ ಇದ್ದು, 10 ದಿನಗಳಿಗೆ ₹ 50 ಸಾವಿರ ಆದಾಯ ಬರುತ್ತದೆ.

ಕೂಲಿ ಕಾರ್ಮಿಕರು ಹಾಗೂ ಮೇವಿನ ಖರ್ಚು ₹ 30 ಸಾವಿರ ಕಳೆದು ₹ 20 ಸಾವಿರದಷ್ಟು ಹಣ ಉಳಿತಾಯವಾಗುತ್ತದೆ. ಕೊಟ್ಟಿಗೆ ಹಸುಗಳ ನಿರ್ವಹಣೆಗೆ 3 ಮಂದಿ ಕಾರ್ಮಿಕರಿದ್ದಾರೆ. ಚಾಮೂಲ್ ನೀಡುವ ಪಶು ಆಹಾರ (ಫೀಡ್ಸ್) ಹಾಗೂ ಒಣ ಮೇವನ್ನು ಹಾಲು ಕರೆಯುವ ಮುನ್ನ ಹಸುಗಳಿಗೆ ನೀಡಲಾಗುತ್ತದೆ. ಹಾಲು ಕರೆದ ನಂತರ ಅವುಗಳನ್ನು ಸ್ವಚ್ಛಗೊಳಿಸಿ ಬಯಲಿಗೆ ಮೇವು ತಿನ್ನಲು ಬಿಡಲಾಗುತ್ತದೆ. ಜಮೀನಿನಲ್ಲಿಯೇ ಬೆಳೆಸುವ ಹಸಿ ಮೇವನ್ನು ಯಂತ್ರಗಳ ಮೂಲಕ ಕತ್ತರಿಸಿ ಹಸಿ ಮತ್ತು ಒಣ ಮೇವಾಗಿ ನೀಡಲಾಗುತ್ತದೆ ಎನ್ನುತ್ತಾರೆ ಮಹದೇವ ಸ್ವಾಮಿ.

ಹಸುಗಳಿಗೆ ಆಹಾರ ಎಷ್ಟು ಮುಖ್ಯವೋ ಆರೋಗ್ಯ ರಕ್ಷಣೆಯು ಅಷ್ಟೇ ಮುಖ್ಯ. ಹವಾಮಾನಕ್ಕೆ ಅನುಗುಣವಾಗಿ ಬರುವ ರೋಗಗಳಿಗೆ ಪಶು ವೈದ್ಯಾಧಿಕಾರಿಗಳಿಂದ ಲಸಿಕೆ ಹಾಕಿಸಲಾಗುತ್ತದೆ. ಚಾಮೂಲ್ ಪಶು ವೈದ್ಯಾಧಿಕಾರಿಗಳು ಬಂದು ಹಸುಗಳ ಯೋಗ ಕ್ಷೇಮ ನೋಡುತ್ತಾರೆ. ಹಸುಗಳ ಸಗಣಿಯಿಂದ ಉತ್ತಮ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಜಮೀನುಗಳಿಗೆ ಬಳಸಲಾಗುತ್ತಿದೆ. ಕೃಷಿಗೆ ರಸಾಯನಿಕ ಗೊಬ್ಬರ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದ್ದು ಸಾವಯವ ಕೃಷಿಗೆ ಒತ್ತು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

‘ಹೈನುಗಾರಿಕೆಯಿಂದ ಆರ್ಥಿಕ ಉನ್ನತಿ’

ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ರೈತರ ಪಾಲಿಗೆ ವರದಾನ. ಯಾವುದೇ ಕೃಷಿ ವ್ಯವಸಾಯದಲ್ಲಿ 3 ಹಾಗೂ 6 ತಿಂಗಳಿಗೆ ಒಮ್ಮೆ ಮಾತ್ರ ಹಣ ಕಾಣಬಹುದು. ದೈನಂದಿನ ವ್ಯವಹಾರದಲ್ಲಿ ಪ್ರತಿದಿನ ಹಣ ಗಳಿಸಲು ಹೈನುಗಾರಿಕೆ ರೈತರಿಗೆ ಪ್ರಯೋಜನವಾಗಿದೆ ಎನ್ನುತ್ತಾರೆ ಎನ್‌ರಿಚ್ ಮಹದೇವಸ್ವಾಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT