ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ ಮಾನ ತೆಗೆದ ಸಂಸದರು: ವಾಗ್ದಾಳಿ

ಚಾಮರಾಜನಗರ ತಲುಪಿದ ಕೆಆರ್‌ಎಸ್‌ ಪಕ್ಷದ ಬೈಕ್‌ ಜಾಥಾ
Published 21 ಫೆಬ್ರುವರಿ 2024, 4:39 IST
Last Updated 21 ಫೆಬ್ರುವರಿ 2024, 4:39 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯದ ಸಂಸದರು ಸಂಸತ್ತಿನಲ್ಲಿ ನಮ್ಮ ರಾಜ್ಯದ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ ಎಂದು ಕೆಆರ್‌ಎಸ್‌ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಗಳವಾರ ದೂರಿದರು. 

ಕಾಂಗ್ರೆಸ್‌ ಮತ್ತು ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವುದಕ್ಕಾಗಿ ಹಮ್ಮಿಕೊಂಡಿರುವ ಬೈಕ್‌ ಜಾಥಾ ಮಂಗಳವಾರ ಸಂಜೆ ನಗರ ತಲುಪಿದ್ದು, ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. 

ರಾಜ್ಯದ ಅಭಿವೃದ್ಧಿ ಮತ್ತು ಕ್ಷೇತ್ರಗಳಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನಿಸಬೇಕಾದ ಸಂಸದರು, ಪ್ರಧಾನಿ ಮೋದಿ ಮುಂದೆ ಸುಮ್ಮನೆ ಕುಳಿತುಕೊಳ್ಳುತ್ತಾರೆ. ಐದು ವರ್ಷಗಳಲ್ಲಿ ಸಂಸತ್ತಿನಲ್ಲಿ ಒಮ್ಮೆಯೂ ಮಾತನಾಡದ ಒಂಬತ್ತು ಸಂಸದರಿದ್ದು, ಅದರಲ್ಲಿ ನಮ್ಮ ರಾಜ್ಯದವರೇ ನಾಲ್ವರಿದ್ದಾರೆ. ವಿ.ಶ್ರೀನಿವಾಸ ಪ್ರಸಾದ್‌, ಅನಂತಕುಮಾರ್ ಹೆಗಡೆ, ಬಿ.ಎನ್.ಬಚ್ಚೇಗೌಡ ಮತ್ತು ರಮೇಶ್‌ ಜಿಗಜಿಣಗಿ ಅವರು ಸುಮ್ಮನೆ ಕುಳಿತಿದ್ದಾರೆ’ ಎಂದು ಕಿಡಿ ಕಾರಿದರು. 

ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರನ್ನು ಟೀಕಿಸಿದ ದೀಪಕ್‌, ‘ವಯಸ್ಸಾದ ಬಳಿಕ ರಾಜಕೀಯದಿಂದ ನಿವೃತ್ತಿ ಪಡೆಯಬೇಕಿತ್ತು. ಆದರೆ, ಅದನ್ನು ಬಿಟ್ಟು ಕಾಂಗ್ರೆಸ್‌ ಟಿಕೆಟ್‌ ನೀಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿಗೆ ಸೇರ್ಪಡೆಗೊಂಡು ಚುನಾವಣೆಯನ್ನು ಗೆದ್ದು, ಸಂಬಳ ಪಡೆಯುವುದಕ್ಕಾಗಿ ಆರು ತಿಂಗಳಿಗೊಮ್ಮೆ ದೆಹಲಿಗೆ ಹೋಗಿ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕುತ್ತಿದ್ದರು’ ಎಂದರು. 

ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್.ಜೀವನ್ ಮಾತನಾಡಿ, ‘ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿ ಮತ್ತು ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿಯನ್ನು ಬೆಂಬಲಿಸಿ ಎಂದು ರಾಜ್ಯದ ಜನರನ್ನು ಕೋರಲು ‘#ಕರ್ನಾಟಕಕ್ಕಾಗಿನಾವು’ ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ ಬೈಕ್ ಜಾಥಾ ಹಮ್ಮಿಕೊಂಡಿದೆ. ದೇವನಹಳ್ಳಿಯಲ್ಲಿ ಸೋಮವಾರ ಜಾಥಾಗೆ ಚಾಲನೆ ನೀಡಲಾಗಿತ್ತು. 3000 ಕಿ.ಮೀ ಸಾಗಲಿದೆ’ ಎಂದು ತಿಳಿಸಿದರು.

ಕೆಆರ್‌ಎಸ್‌ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ರಘುಪತಿ ಭಟ್, ಜಿಲ್ಲಾಧ್ಯಕ್ಷ ಗಣೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ಇತರೆ ಪದಾಧಿಕಾರಿಗಳು, ಕಾರ್ಯಕರ್ತರು ಜಾಥಾದಲ್ಲಿ ಭಾಗವಹಿಸಿದ್ದರು. 

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಗೃತಿ ಜಾಥಾ ನಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT