ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್-ಕೇಸರಿ ಶಾಲು ವಿವಾದ ಕಾಂಗ್ರೆಸ್ ಸೃಷ್ಟಿ: ಕೆ.ಎಸ್.ಈಶ್ವರಪ್ಪ

Last Updated 8 ಫೆಬ್ರುವರಿ 2022, 12:52 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯದಾದ್ಯಂತ ಹರಡುತ್ತಿರುವ ಹಿಜಾಬ್-ಕೇಸರಿ ಶಾಲು ವಿವಾದಕ್ಕೆ ಕಾಂಗ್ರೆಸ್ ಮೂಲ ಕಾರಣ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕಾಂಗ್ರೆಸ್‌ನವರು ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಉಡುಪಿ ಕಾಲೇಜಿನಲ್ಲಿ 96 ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ. 90 ಮಂದಿ ಸಮವಸ್ತ್ರ ಧರಿಸಿಕೊಂಡು ಕಾಲೇಜಿಗೆ ಬರುತ್ತಿದ್ದಾರೆ. ಆರು ವಿದ್ಯಾರ್ಥಿನಿಯರು ಮಾತ್ರ ಹಿಜಾಬ್‌ಗೆ ಅವಕಾಶ ನೀಡಬೇಕು ಎಂದು ಹೇಳುತ್ತಿದ್ದರು. ಕಾಂಗ್ರೆಸ್ ನಾಯಕರು ಅವರಿಗೆ ಬುದ್ಧಿ ಹೇಳಬೇಕಿತ್ತು. ಅದು ಬಿಟ್ಟು ಶಿಕ್ಷಣದಲ್ಲಿ ಧರ್ಮದ ವಿಚಾರವನ್ನು ಎಳೆದು ತಂದು ರಾಜಕಾರಣ ಮಾಡುತ್ತಿದ್ದಾರೆ' ಎಂದರು.

'ಹಿಂದೆ ಗೋ ರಕ್ಷಣೆ ವಿಚಾರದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉಡುಪಿಯಲ್ಲಿ ಇದೇ ರೀತಿ ನಡೆದುಕೊಂಡಿತ್ತು. ಗೋಹತ್ಯೆ ಮಾಡಿದವರನ್ನು ಶಿಕ್ಷಿಸದೆ, ಗೋಮಾತೆಯನ್ನು ರಕ್ಷಿಸಿದವರ ವಿರುದ್ಧ ಕ್ರಮ ಕೈಗೊಂಡಿತ್ತು.‌ ಈ ವಿಚಾರವೂ ವಿವಾದವಾಗಿತ್ತು. ಕಾಂಗ್ರೆಸ್ ಚುನಾವಣೆಯಲ್ಲಿ ಸೋತು ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಂಡಿದ್ದರು. ಈಗ ಈ ವಿವಾದವೂ ಉಡುಪಿಯಲ್ಲೇ ಉಂಟಾಗಿದೆ. ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲೂ ಸೋಲಲಿದೆ' ಎಂದು ಅವರು ಹೇಳಿದರು.

'ಮುಸ್ಲಿಂ ಮಹಿಳೆಯರು ಬೇರೆ ಎಲ್ಲಿ ಬೇಕಾದರೂ ಹಿಜಾಬ್ ಧರಿಸಲಿ. ಶಾಲೆಗಳಲ್ಲಿ ಮಾತ್ರ ಬೇಡ‌ ಎಂಬುದು ನಮ್ಮ‌ ನಿಲುವು. ಅಲ್ಲಿ ಎಲ್ಲರೂ ಸಮವಸ್ತ್ರ ಧರಿಸಿ ಶಿಕ್ಷಣ ಪಡೆಯಬೇಕು. ನಾನು ಎಲ್ಲ‌ ಮಕ್ಕಳಲ್ಲಿ ಇದನ್ನೇ ಕೇಳಿಕೊಳ್ಳುತ್ತೇನೆ' ಎಂದರು.

ಕೋರ್ಟ್ ತೀರ್ಪಿಗೆ ಬದ್ಧ: 'ಈ ವಿಚಾರವನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಸರ್ಕಾರ ಅದರ ತೀರ್ಪಿಗೆ ಬದ್ಧವಾಗಿದೆ' ಎಂದು ಈಶ್ವರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT