ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೀರ ಭಾಗ್ಯ: ಶಾಲಾ ಮಕ್ಕಳಿಗೆ 1 ಕೆಜಿ ಹಾಲಿನಪುಡಿ

ಎರಡು ತಿಂಗಳ ಹಾಲಿನ ಪುಡಿ 81,368 ಮಕ್ಕಳಿಗೆ ವಿತರಣೆ, ಚಾಮುಲ್‌ನಲ್ಲಿ ತಯಾರಿಕೆ
Last Updated 7 ಆಗಸ್ಟ್ 2021, 16:24 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ನಿಂದಾಗಿ ಮನೆಯಲ್ಲೇ ಉಳಿದಿರುವ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಶಿಕ್ಷಣ ಇಲಾಖೆಯು ಕ್ಷೀರ ಭಾಗ್ಯ ಯೋಜನೆಯಡಿ ಕೆನೆಭರಿತ ಹಾಲಿನ ಪುಡಿಯನ್ನು ವಿತರಿಸಿದೆ.

ಜಿಲ್ಲೆಯಲ್ಲಿ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಬರುವ 81,368 ವಿದ್ಯಾರ್ಥಿಗಳಿಗೆ,ಜೂನ್‌ ಮತ್ತು ಜುಲೈ ಅವಧಿಗೆ ತಿಂಗಳಿಗೆ ತಲಾ ಅರ್ಧ ಕೆಜಿಯಂತೆ ತಲಾ 1 ಕೆಜಿ ಹಾಲಿನ ಪುಡಿಯನ್ನು ವಿತರಿಸಲಾಗಿದೆ.

ಚಾಮರಾಜನಗರ ತಾಲ್ಲೂಕಿನ 27,205, ಗುಂಡ್ಲುಪೇಟೆಯ 18,100, ಕೊಳ್ಳೇಗಾಲದ 11,363, ಹನೂರು ತಾಲ್ಲೂಕಿನ 16,693 ಹಾಗೂ ಯಳಂದೂರಿನ 8,007 ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ.

ತಗರತಿಗಳು ನಡೆಯುತ್ತಿದ್ದಾಗ ಬಿಸಿಯೂಟದೊಂದಿಗೆ ಕ್ಷೀರ ಭಾಗ್ಯ ಯೋಜನೆಯೂ ಜಾರಿಯಲ್ಲಿತ್ತು. ಪ್ರತಿ ವಿದ್ಯಾರ್ಥಿಗೆ 18 ಗ್ರಾಂ ಹಾಲಿನ ಪುಡಿಯನ್ನು ಬಳಸಿ ಮಾಡಿದ 150 ಮಿ.ಲೀನಷ್ಟು ಹಾಲನ್ನು ನೀಡಲಾಗುತ್ತಿತ್ತು. ಕೋವಿಡ್‌ ಹಾವಳಿಯಿಂದಾಗಿ ಶಾಲೆಗಳು ಬಂದ್‌ ಆದ ನಂತರ ಬಿಸಿಯೂಟದ ಬದಲಿಗೆ ಪಡಿತರವನ್ನು ಮಕ್ಕಳಿಗೆ ನೀಡಲಾಗುತ್ತಿತ್ತು. ಆದರೆ, ಕ್ಷೀರ ಭಾಗ್ಯ ಯೋಜನೆ ಸ್ಥಗಿತಗೊಂಡಿತ್ತು.

ಈ ವರ್ಷದ ಮೇ ತಿಂಗಳಲ್ಲಿ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ಮಗುವಿಗೆ ತಿಂಗಳಿಗೆ ಅರ್ಧ ಕೆಜಿ ಹಾಲಿನ ಪುಡಿಯನ್ನು ವಿತರಿಸುವಂತೆ ಮನವಿ ಮಾಡಿದ್ದರು. ಇದರಿಂದ ಮಕ್ಕಳಿಗೂ ಪೌಷ್ಟಿಕಾಂಶ ಸಿಕ್ಕಿದಂತಾಗುತ್ತದೆ. ರಾಜ್ಯದ ಹೈನುಗಾರರಿಗೂ ಅನುಕೂಲವಾಗುತ್ತದೆ ಎಂದು ಹೇಳಿದ್ದರು.

ಈ ಮನವಿಗೆ ಸ್ಪಂದಿಸಿದ್ದ ರಾಜ್ಯ ಸರ್ಕಾರ, ಜೂನ್‌ ತಿಂಗಳಲ್ಲಿ ಕ್ಷೀರ ಭಾಗ್ಯ ಯೋಜನೆಯನ್ನು ಮತ್ತೆ ಜಾರಿಗೆ ತರಲು ನಿರ್ಧರಿಸಿ, ಜೂನ್‌ ಮತ್ತು ಜುಲೈ ತಿಂಗಳಲ್ಲಿ ಶಾಲಾ ಮಕ್ಕಳಿಗೆ ತಲಾ ಅರ್ಧ ಕೆಜಿ ಹಾಲಿನ ಪುಡಿ ವಿತರಿಸಲು ಆದೇಶಿಸಿತ್ತು. ಇದಕ್ಕೆ ₹163 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು.ಅದರಂತೆ, ರಾಜ್ಯದಾದ್ಯಂತ ವಿತರಣೆ ಕಾರ್ಯ ಪ್ರಗತಿಯಲ್ಲಿದ್ದು, ಜಿಲ್ಲೆಯಲ್ಲೂ ಬಹುತೇಕ ಪೂರ್ಣಗೊಂಡಿದೆ.

ಕುದೇರಿನಲ್ಲಿ ತಯಾರಿ: ‘ಕ್ಷೀರ ಭಾಗ್ಯ ಯೋಜನೆಗಾಗಿ ಜಿಲ್ಲೆಗೆ ₹2.36 ಕೋಟಿ ಬಿಡುಗಡೆಯಾಗಿದೆ. ತಾಲ್ಲೂಕಿನ ಕುದೇರಿನಲ್ಲಿರುವ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ (ಚಾಮುಲ್‌) ಘಟಕದಲ್ಲಿ ಹಾಲಿನ ಪುಡಿ ತಯಾರಿಸಲಾಗಿದೆ’ ಎಂದು‌ಅಕ್ಷರ ದಾಸೋಹ ವಿಭಾಗದ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೂನ್‌ ಮತ್ತು ಜುಲೈ ತಿಂಗಳಿಗೆ ಸಂಬಂಧಿಸಿದಂತೆ ಹಾಲಿನಪುಡಿ ವಿತರಿಸಲು ಸರ್ಕಾರದಿಂದ ಆದೇಶ ಬಂದ ಕೂಡಲೇ, ನಮ್ಮ ಜಿಲ್ಲೆಯಲ್ಲಿ ಮಕ್ಕಳಿಗೆ ಎಷ್ಟು ಹಾಲಿನ ಪುಡಿ ಬೇಕು ಎಂಬುದನ್ನು ಲೆಕ್ಕ ಹಾಕಿ, ಚಾಮುಲ್‌ಗೆ ಪುಡಿ ತಯಾರಿಸಲು ಕಾರ್ಯಾದೇಶ ನೀಡಲಾಗಿತ್ತು. ಹಾಲಿನ ಪುಡಿಯ ಗುಣಮಟ್ಟವನ್ನು ಖಾತ್ರಿ ಪಡಿಸಿಕೊಂಡ ನಂತರವೇ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

81,368 ಮಕ್ಕಳಿಗೆ ತಲಾ 1 ಕೆಜಿಯಂತೆ 81.36 ಟನ್‌ಗಳಷ್ಟು ಹಾಲಿನ ಪುಡಿ ತಯಾರಿಸಿ ಹಂಚಿಕೆ ಮಾಡಲಾಗಿದೆ. ಪೋಷಕರು/ವಿದ್ಯಾರ್ಥಿಗಳನ್ನು ಕರೆಸಿ ಹಾಲಿನಪುಡಿ ನೀಡಲಾಗಿದೆ

- ಎನ್‌.ಗುರುಲಿಂಗಯ್ಯ, ಶಿಕ್ಷಣಾಧಿಕಾರಿ ಅಕ್ಷರ ದಾಸೋಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT