ಚಾಮರಾಜನಗರ: ಅವಿಭಜಿತ ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾಗಿ 25 ವರ್ಷಗಳು ಕಳೆದರೂ ಚಾಮರಾಜನಗರ ಜಿಲ್ಲೆ ನಿರೀಕ್ಷಿತ ಪ್ರಗತಿ ಕಂಡಿಲ್ಲ. 2.80 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಪ್ರಯಾಣಿಕರ ದಟ್ಟಣೆಗೆ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಸಕಲ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಇಲ್ಲ. ಜಿಲ್ಲೆಗೊಂದು ಮಾದರಿ ಸಾರಿಗೆ ನಿಲ್ದಾಣ ಬೇಕು ಎಂಬ ದಶಕಗಳ ಬೇಡಿಕೆಗೆ ಇದುವರೆಗೂ ಮನ್ನಣೆ ದೊರೆತಿಲ್ಲ.
ಚಾಮರಾಜನಗರದಲ್ಲಿ ಪ್ರಸ್ತತ ಇರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತೀರಾ ಕಿರಿದಾಗಿದೆ. 1 ಎಕರೆ 20 ಗುಂಟೆ ಜಾಗದಲ್ಲಿ ಕಿಷ್ಕಿಂದೆಯಂತಿರುವ ನಿಲ್ದಾಣ ಬಸ್‌ಗಳು ಹಾಗೂ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಕೇವಲ ಏಳು ಅಂಕಣಗಳನ್ನು ಹೊಂದಿರುವ ನಿಲ್ದಾಣದಲ್ಲಿ ಪ್ರತಿದಿನ ಬರೋಬ್ಬರಿ 400ಕ್ಕೂ ಹೆಚ್ಚು ಸಾರಿಗೆ ಬಸ್‌ಗಳು ಬಂದು ನಿಲ್ಲುತ್ತವೆ!
ಚಾಮರಾಜನಗರದಿಂದ ಪ್ರತಿದಿನ ನೇರವಾಗಿ ಬೆಂಗಳೂರು, ಮೈಸೂರು, ತಮಿಳುನಾಡಿನ ತಿರುಪತಿ, ಕೊತಮತ್ತೂರು, ಮಧುರೈ, ಈರೋಡ್, ತಿರಪೂರ್, ಕುಂಭಕೋಣಂ, ಕೇರಳದ ತ್ರಿಶೂರ್ ಸೇರಿದಂತೆ ಹಲವು ಭಾಗಗಳಿಗೆ ಬಸ್‌ಗಳು ಸಂಚರಿಸುತ್ತವೆ. ಇದಲ್ಲದೆ ಜಿಲ್ಲಾ ವ್ಯಾಪ್ತಿಯೊಳಗೆ ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಯಳಂದೂರು ತಾಲ್ಲೂಕುಗಳ ಮೂಲೆ ಮೂಲೆಗೂ ನೂರಾರು ಬಸ್‌ಗಳು ಓಡಾಡುತ್ತವೆ.
ಈಗಿರುವ 7 ಅಂಕಣಗಳಲ್ಲಿ ಗರಿಷ್ಠ 15 ಬಸ್‌ಗಳನ್ನು ಮಾತ್ರ ವ್ಯವಸ್ಥಿತವಾಗಿ ನಿಲ್ಲಿಸಬಹುದು. ಹೆಚ್ಚುವರಿ ಬಸ್‌ಗಳು ನಿಲ್ದಾಣ ಪ್ರವೇಶಿಸಿದರೆ ಅಂಕಣ ಬಿಟ್ಟು ಎಲ್ಲೆಂದರಲ್ಲಿ ನಿಲ್ಲಿಸಬೇಕಾದ ಪರಿಸ್ಥಿತಿ ಇದೆ. ಹಬ್ಬ ಹರಿದಿನ ಹಾಗೂ ರಜಾ ದಿನಗಳಲ್ಲಿ ಕೆ.ಎಸ್.ಆರ್.ಟಿ.ಸಿ ನಿಲ್ದಾಣದ ಒಳ ಹೊಕ್ಕರೆ ಪ್ರಯಾಣಿಕರಿಗೆ ಜಾತ್ರೆ, ಉತ್ಸವಕ್ಕೆ ಪ್ರವೇಶಿಸಿದಂತಹ ಅನುಭವವಾಗುತ್ತದೆ.
ನಿರ್ದಿಷ್ಟ ನಿಲ್ದಾಣದಲ್ಲಿ ಬಸ್ ಹತ್ತಬೇಕಿರುವ ಪ್ರಯಾಣಿಕರು ಅಡ್ಡಾದಿಡ್ಡಿಯಾಗಿ ನಿಂತಿರುವ ಬಸ್‌ಗಳನ್ನು ಹತ್ತಬೇಕಾಗಿದೆ. ಹೀಗೆ ಹತ್ತುವಾಗ ಧುತ್ತನೆ ಎದುರಾಗುವ ಬಸ್‌ಗಳು ಜೀವ ಭಯ ಹುಟ್ಟಿಸುತ್ತವೆ.
ಮಳೆ, ಬಿಸಿಲಲ್ಲಿ ನಿಲ್ಲುವ ಶಿಕ್ಷೆ: ಗುಂಡ್ಲುಪೇಟೆ ತಾಲ್ಲೂಕುಗಳಿಗೆ ತೆರಳುವ ಪ್ರಯಾಣಿಕರು ಬಿಸಿಲು, ಮಳೆಯಲ್ಲಿಯೇ ನಿಂತು ಬಸ್‌ಗಳನ್ನು ಹತ್ತಬೇಕು. ಹೆಸರಿಗೆ 7ನೇ ಅಂಕಣ ಎಂದು ಬರೆಯಲಾಗಿದೆಯಷ್ಟೆ, ನೆತ್ತಿಯ ಮೇಲೆ ನೆರಳಿನ ವ್ಯವಸ್ಥೆ ಮಾಡಿಲ್ಲ. ಮಳೆಗಾಲದಲ್ಲಿ ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳು, ಸಾರ್ವಜನಿಕರು ಮಳೆಯಲ್ಲಿ ತೊಯ್ಯುವ ಶಿಕ್ಷೆ ಅನುಭವಿಸುತ್ತಾರೆ.
ಪಾರ್ಕಿಂಗ್ ಸಮಸ್ಯೆ: ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸಮರ್ಪಕ ವ್ಯವಸ್ಥೆ ಇಲ್ಲ. ನಿಲ್ದಾಣ ಪ್ರವೇಶಿಸುವ ಜಾಗದಲ್ಲಿ ಗರಿಷ್ಠ 50 ದ್ವಿಚಕ್ರ ವಾಹನಗಳ ನಿಲುಗಡೆಗೆ ಮಾತ್ರ ಸ್ಥಳಾವಕಾಶವಿದೆ. ಕಾರು ಸಹಿತ ನಾಲ್ಕು ಚಕ್ರಗಳ ವಾಹನಗಳನ್ನು ನಿಲ್ಲಿಸಲು ಜಾಗವೇ ಇಲ್ಲ.
ಹೊರ ಜಿಲ್ಲೆ ಹಾಗೂ ತಾಲ್ಲೂಕುಗಳಿಗೆ ತೆರಳಲು ದ್ವಿಚಕ್ರ ವಾಹನಗಳಲ್ಲಿ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಬಸ್ ನಿಲುಗಡೆಯಾಗುವ ಸ್ಥಳದಲ್ಲಿಯೇ ವಾಹನಗಳನ್ನು ನಿಲ್ಲಿಸಿ ಹೋಗುತ್ತಾರೆ. ಇದರಿಂದ ಬಸ್‌ಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಪ್ರತಿದಿನ ನಿಲ್ದಾಣ ಪ್ರವೇಶಿಸುವ ದ್ವಿಚಕ್ರ ವಾಹನ ಸವಾರರನ್ನು ತಡೆಯುವುದೇ ನಿಲ್ದಾಣದ ಸಿಬ್ಬಂದಿಗೆ ಸವಾಲಾಗಿದೆ. ನಿಲ್ದಾಣದಲ್ಲಿ ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ ನಿರ್ವಹಣೆ ಕೊರತೆ ಇದೆ.
ಕೊಳ್ಳೇಗಾಲ ಪರಿಸ್ಥಿತಿ: ಇಲ್ಲಿನ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯಗಳು ಇದ್ದರೂ ಅಶುಚಿತ್ವ ಕಾಣುತ್ತಿದೆ. ಬಸ್ ನಿಲ್ದಾಣದ ಆವರಣದಲ್ಲಿ ಕಸದ ರಾಶಿ ಬಿದ್ದಿದೆ. ನಿಲ್ದಾಣದೊಳಗೆ ಬೀದಿನಾಯಿಗಳ ಹಾವಳಿ ಹಾಗೂ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿದೆ.
ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ ಸಮರ್ಪಕವಾಗಿ ನೀರು ಬರುವುದಿಲ್ಲ. ಶೌಚಾಲಯಗಳಿದ್ದರೂ ಗಬ್ಬುನಾರುತ್ತಿದೆ. ಶೌಚಾಲಯಕ್ಕೆ ಮೂತ್ರ ವಿಸರ್ಜನೆ ಮಾಡಲು ಹೋಗಲು ಮೂಗು ಮುಚ್ಚಿಕೊಳ್ಳಬೇಕು ಎಂದು ದೂರುತ್ತಾರೆ ಸಾರ್ವಜನಿಕರು.
ನಿಲ್ದಾಣದಲ್ಲಿ ಕುಳಿತುಕೊಳ್ಳಲು ಹಾಕಿರುವ ಆಸನಗಳು ಮದ್ಯವ್ಯಸನಿಗಳ ಪಾಲಾಗುತ್ತಿವೆ. ನಿಲ್ದಾಣದ ಪಕ್ಕದಲ್ಲಿರುವ ಮದ್ಯದಂಗಡಿಗಳಿಂದ ಕುಡಿದು ಬಂದು ನಿಲ್ದಾಣದಲ್ಲಿ ಮಲಗುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಕೂರಲು ಆಸನಗಳು ಇಲ್ಲದಂತಾಗಿದೆ.
ಗುಂಡ್ಲುಪೇಟೆ– ನೀರಿಗೆ ಪರದಾಟ: ಗುಂಡ್ಲುಪೇಟೆ ಪಟ್ಟಣದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು, ಸಾರ್ವಜನಿಕರು ಪರದಾಡುತ್ತಿದ್ದಾರೆ. ಹಣ ಕೊಟ್ಟು ಬಾಟಲಿ ನೀರು ಖರೀದಿಸಿ ಕುಡಿಯಬೇಕಾದ ಪರಿಸ್ಥಿತಿ ಇದೆ. ಕೇರಳ ಹಾಗೂ ತಮಿಳುನಾಡಿನ ಗಡಿ ಭಾಗದಲ್ಲಿರುವ ಗುಂಡ್ಲುಪೇಟೆ ನಿಲ್ದಾಣದಿಂದ ನಿತ್ಯ ಸಾವಿರಾರು ಅಂತರ ರಾಜ್ಯ ಪ್ರಯಾಣಿಕರು ಸಂಚರಿಸುತ್ತಾರೆ.
ಗ್ರಾಮೀಣ ಭಾಗಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಓಡಾಡುತ್ತಾರೆ. ನಿಲ್ದಾಣದಲ್ಲಿ ಎಚ್.ಎಸ್.ಮಹದೇವಪ್ರಸಾದ್ ಅಭಿಮಾನಿ ಬಳಗದ ವತಿಯಿಂದ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಯಲ್ಲಿದೆ. ಸಿ.ಎಸ್.ನಿರಂಜನ್‍ಕುಮಾರ್ ಶಾಸಕರಾಗಿದ್ದ ಅವಧಿಯಲ್ಲಿ ನಿರ್ಮಾಣಗೊಂಡ ಕಾಯಿನ್ ಹಾಕಿ 20 ಲೀಟರ್ ನೀರು ಪಡೆಯುವ ಘಟಕ ಇನ್ನೂ ಉದ್ಘಾಟನೆಯಾಗಿಲ್ಲ. ವರ್ಷಗಳು ಕಳೆದರೂ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡದ ಬಗ್ಗೆ ಡಿಪೊ ವ್ಯವಸ್ಥಾಪಕ ವಿರುದ್ಧ ಪ್ರಯಾಣಿಕರಾದ ಹೊಂಗಹಳ್ಳಿ ವೆಂಕಟೇಶ್, ಮಹದೇವಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಯಳಂದೂರು ವರದಿ: ಪಟ್ಟಣದ ಹೆದ್ದಾರಿಗೆ ಹೊಂದಿಕೊಂಡಿರುವ ಚಿಕ್ಕ ನಿಲ್ದಾಣದಲ್ಲಿ ಬಸ್‌ಗಳನ್ನು ನಿಲ್ಲಿಸಲು ಚಾಲಕರು ಪರದಾಡಬೇಕಿದೆ. ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಇಲ್ಲವಾಗಿದೆ. ಪ್ರತಿದಿನ ಸ್ವಚ್ಛತೆ ಕಾಣದ ಪರಿಸರದ ನಡುವೆ ಪ್ರಯಾಣಿಕರು ಹೈರಾಣಗಬೇಕಾದ ದುಃಸ್ಥಿತಿ ಇದೆ. ಇಲ್ಲಗಳ ನಡುವೆ ಚಾಲಕರು ಮತ್ತು ನಿರ್ವಾಹಕರು ದಿನ ದೂಡುವುದು ಸಾಮಾನ್ಯ ಎಂಬಂತಾಗಿದೆ.
ಬಸ್ ನಿಲ್ದಾಣಕ್ಕೆ ಮೂಲಸೌಕರ್ಯ ಇಲ್ಲ. ವ್ಯಾಪಾರಿಗಳು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದ್ದು ಪ್ರಯಾಣಿಕರ ಓಡಾಟಕ್ಕೆ ಕಿರಿಕಿರಿಯಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ವಾಹನಗಳನ್ನು ನಿಲ್ದಾಣಕ್ಕೆ ತಂದು ನಿಲ್ಲಿಸಿ ತೆರಳುತ್ತಿದ್ದಾರೆ. ಹಾಗಾಗಿ, ಸೂಕ್ತ ಸ್ಥಳದಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಪ್ರಯಾಣಿಕ ನಂಜುಂಡ ಒತ್ತಾಯಿಸುತ್ತಾರೆ.
ನಿರ್ವಹಣೆ: ಬಾಲಚಂದ್ರ ಎಚ್.
ಪೂರಕ ಮಾಹಿತಿ: ಅವಿನ್ ಪ್ರಕಾಶ್ ವಿ., ನಾ.ಮಂಜುನಾಥಸ್ವಾಮಿ, ಮಲ್ಲೇಶ ಎಂ.
ಪ್ರಸ್ತುತ ಇರುವ ಕೆಎಸ್‌ಆರ್‌ಟಿಸಿ ನಿಲ್ದಾಣ ಬಹಳ ಕಿರಿದಾಗಿದ್ದು ಬಸ್‌ಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸಂತೆಮರಹಳ್ಳಿ ರಸ್ತೆಯಲ್ಲಿರುವ ನಾಲ್ಕು ಎಕರೆ ಜಾಗದಲ್ಲಿ ₹ 32 ಕೋಟಿ ವೆಚ್ಚದಲ್ಲಿ ಸುಸಜ್ಜಿತ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಪಾರ್ಕಿಂಗ್ ಸೌಲಭ್ಯ ಫುಡ್‌ಕೋರ್ಟ್ ಶಾಪಿಂಗ್ ಕಾಂಪ್ಲೆಕ್ಸ್ 12 ಬಸ್ ಬೇ ಕಚೇರಿ ತಳ ಮಹಡಿ ನೆಲಮಹಡಿ ಮೊದಲ ಮಹಡಿ ಸೌಲಭ್ಯಗಳುಳ್ಳ ನಿಲ್ದಾಣ ನಿರ್ಮಾಣವಾಗಲಿದೆ. ಆದರೆ ಪ್ರಸ್ತಾವಕ್ಕೆ ಇನ್ನೂ ಸರ್ಕಾರದ ಒಪ್ಪಿಗೆ ಸಿಕ್ಕಿಲ್ಲ. ಅಶೋಕ್ ಕುಮಾರ್ ಚಾ.ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಕೊಳ್ಳೇಗಾಲ ಬಸ್ ನಿಲ್ದಾಣ ಉತ್ತಮವಾಗಿದೆ. ಆದರೆ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ಮೊದಲು ನಿಲ್ದಾಣವನ್ನು ಸ್ವಚ್ಛಗೊಳಿಸಿ ಪ್ರಯಾಣಿಕರ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು. ಪೂರ್ಣಿಮಾ ಕೊಳ್ಳೇಗಾಲ ಪ್ರತಿದಿನ 78 ಶೆಡ್ಯೂಲ್‌ಗಳಲ್ಲಿ ಬಸ್‌ಗಳು ಸಂಚರಿಸುತ್ತವೆ. ಬಸ್ ನಿಲ್ಲಿಸಲು ಸ್ಥಳದ ಕೊರತೆ ಇದೆ. ಬಸ್ ಹಿಮ್ಮುಖವಾಗಿ ಚಲಿಸಿ ನಿಲ್ಲಿಸಲು ಸಾಧ್ಯವಾಗದ ಸ್ಥಿತಿ ನಿಲ್ದಾಣದಲ್ಲಿದೆ. ನಿತ್ಯ ವಾಹನಗಳ ದಟ್ಟಣೆಯಿಂದ ಸಂಚಾರ ದುಸ್ತರವಾಗುತ್ತಿದೆ. ಜಗಳಗಳಿಗೂ ಕಾರಣವಾಗುತ್ತದೆ. ವೀರಭದ್ರಪ್ಪ ಸಂಚಾರಿ ನಿಯಂತ್ರಕ ಯಳಂದೂರು ಗುಂಡ್ಲುಪೇಟೆಗೆ ಹೋಗುವವರು ಬಿಸಿಲು ಮಳೆಯಲ್ಲಿ ನಿಲ್ಲಬೇಕಿದೆ. ರಕ್ಷಣೆ ಪಡೆಯಲು ಬೇರೆಡೆಗೆ ತೆರಳಿದರೆ ಬಸ್ ಹೊರಟು ಬಿಡುತ್ತದೆ. ಮಳೆಗಾಲದಲ್ಲಿ ತುಂಬಾ ಸಮಸ್ಯೆಯಾಗುತ್ತಿದೆ. ರಕ್ಷಿತಾ ವಿದ್ಯಾರ್ಥಿನಿ
ಗ್ರಾಫಿಕ್ಸ್... ಚಾಮರಾಜನಗರದಿಂದ ಪ್ರತಿದಿನ ಸಂಚರಿಸುವ ಬಸ್‌ಗಳು;595 ಪ್ರತಿದಿನ ಸಂಚರಿಸುವ ಸರಾಸರಿ ಪ್ರಯಾಣಿರ ಸಂಖ್ಯೆ;20100
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.