ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ: ಮೂಲಸೌಕರ್ಯ ವಂಚಿತ ಹೆಗ್ಗವಾಡಿ ಗ್ರಾಮ

ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದೆ, ನಿವಾಸಿಗಳಿಗೆ ತೊಂದರೆ, ಗಮನ ಹರಿಸಿದ ಪಂಚಾಯಿತಿ ಆಡಳಿತ
Last Updated 22 ಅಕ್ಟೋಬರ್ 2020, 16:30 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಹೋಬಳಿಯ ಹೆಗ್ಗವಾಡಿ ಗ್ರಾಮದ ಬಡಾವಣೆಗಳು ಮೂಲ ಸೌಲಕರ್ಯಗಳಿಂದ ವಂಚಿತವಾಗಿದ್ದು, ಜನಪ್ರತಿನಿಧಿಗಳು ಹಾಗೂ ಗ್ರಾಮಪಂಚಾಯಿತಿಯವರು ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ರಸ್ತೆ ಇದ್ದರೆ ಚರಂಡಿ ಇಲ್ಲ. ಚರಂಡಿ ಇದ್ದರೆ ರಸ್ತೆ ಇಲ್ಲ ಎಂಬಂತಹ ಸ್ಥಿತಿಇಲ್ಲಿನ ಬಡಾವಣೆಗಳಲ್ಲಿದೆ.ಚರಂಡಿ ಇರುವ ಕಡೆಗಳಲ್ಲಿ ಹೂಳು ತೆಗೆಸಿಲ್ಲ. ಚರಂಡಿ ಹಾಗೂ ರಸ್ತೆಯನ್ನೇ ಕಾಣದ ಬಡಾವಣೆಗಳೂ ಇವೆ.‌

ಸಮಸ್ಯೆಗಳನ್ನು ಬಗೆಹರಿಸುವಂತೆ ಅನೇಕ ಬಾರಿ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿಯವರಿಗೆ ಮನವಿ ಮಾಡಿಕೊಂಡಿದ್ದರೂ ಯಾರೂ ಗಮನ ಹರಿಸಿಲ್ಲ ಎಂಬುದು ನಿವಾಸಿಗಳ ದೂರು.

ಗ್ರಾಮದ ಪರಿಶಿಷ್ಟರ ಹಳೆ ಬಡಾವಣೆ ಹಾಗೂ ಹೊಸ ಬಡಾವಣೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಚರಂಡಿಯ ಡೆಕ್ ಕುಸಿದು ಎರಡು ವರ್ಷ ಕಳೆದಿದೆ. ಮುಖ್ಯ ರಸ್ತೆಯಾಗಿರುವುದರಿಂದ ಇಲ್ಲಿ ಜನ ಸಂಚಾರ ಹೆಚ್ಚಾಗಿದೆ. ಎರಡು ವರ್ಷಗಳ ಹಿಂದೆ ಸ್ವಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದ್ದ ಚರಂಡಿಯ ಡೆಕ್‌ ಈಗ ಪೂರ್ಣವಾಗಿ ಕುಸಿದಿದೆ. ಇದರಿಂದ ಜನ ಸಂಚಾರಕ್ಕೆ ತೊಂದರೆಯಾಗಿದೆ. ವಾಹನ ಸಂಚಾರ ಸಾಧ್ಯವೇ ಇಲ್ಲ. ಮಳೆ ಬಂದರೆ ನೀರು ಚರಂಡಿ ಸೇರದೆ ರಸ್ತೆಯಲ್ಲಿ ಹರಿಯುವಂತಾಗಿದೆ.

ಸಿಮೆಂಟ್ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿರುವ ಬಡಾವಣೆಗಳ ಚರಂಡಿಗಳಲ್ಲಿ ಹೂಳು ತೆಗೆದಿಲ್ಲ. ಕಸ ಕಡ್ಡಿಗಳು ತುಂಬಿ ಕೊಳೆತು ನಾರುತ್ತಿವೆ.

‘ವರ್ಷಕೊಮ್ಮೆ ಗ್ರಾಮದಲ್ಲಿ ನಡೆಯುವ ಬಂಡಿ ಜಾತ್ರೆ ಸಮಯದಲ್ಲಿ ಮಾತ್ರ ಗ್ರಾಮಪಂಚಾಯಿತಿಯವರು ಹೂಳು ತೆಗೆಸುತ್ತಾರೆ. ಉಳಿದ ದಿನಗಳಲ್ಲಿ ಗ್ರಾಮಸ್ಥರೇ ತಮ್ಮ ಮನೆಗಳ ಮುಂಭಾಗ ಚರಂಡಿಯ ಹೂಳು ತೆಗೆಯಬೇಕಾಗಿದೆ. ಜತೆಗೆ ಬೆಳೆದಿರುವ ಕಳೆ ಗಿಡಗಳನ್ನು ನಾವೇ ಸ್ವಚ್ಛಗೊಳಿಸಬೇಕಾಗಿದೆ’ ಎಂದು ನಿವಾಸಿ ನಾಗರಾಜು ದೂರುತ್ತಾರೆ.

ಉಪಯೋಗಕ್ಕಿಲ್ಲದ ತೊಂಬೆಗಳು:ಬಡಾವಣೆಯಲ್ಲಿ ಕಿರುನೀರು ಸರಬರಾಜು ಘಟಕದ ಕುಡಿಯುವ ನೀರಿನ ಐದು ತೊಂಬೆಗಳಿವೆ. ಮೂರು ವರ್ಷಗಳಿಂದ ತೊಂಬೆಗಳಿಗೆ ನೀರು ತುಂಬಿಸುತ್ತಿಲ್ಲ. ತೊಂಬೆಗಳ ಸುತ್ತಲೂ ಅನೈರ್ಮಲ್ಯ ಉಂಟಾಗಿದ್ದು, ದನ, ಆಡು ಕುರಿಗಳನ್ನು ಕಟ್ಟುತ್ತಿದ್ದಾರೆ.

ಗ್ರಾಮದ ವೀರಶೈವರ ಬಡಾವಣೆಗಳಲ್ಲಿ ರಸ್ತೆ, ಚರಂಡಿಯನ್ನು ನಿರ್ಮಿಸಿಲ್ಲ. ರಸ್ತೆಗಳು ಹಳ್ಳ ಕೊಳ್ಳಗಳಿಂದ ಕೂಡಿವೆ. ಮಳೆಗಾಲವಾಗಿರುವುದರಿಂದ ರಸ್ತೆಯಲ್ಲಿ ನೀರು ನಿಂತು ಕೊಚ್ಚೆ ಗುಂಡಿಯಂತಾಗಿದೆ. ಜನ ಹಾಗೂ ವಾಹನ ಸಂಚಾರಕ್ಕೆ ತುಂಬಾ ಅಡಚಣೆಯಾಗುತ್ತಿದೆ. ನಿವಾಸಿಗಳು ಕೊಚ್ಚೆಯನ್ನೇ ತುಳಿದು ಮನೆ ಸೇರಬೇಕಾಗಿದೆ.

‘ಗ್ರಾಮದ ಬಡಾವಣೆಗಳಲ್ಲಿ ರಸ್ತೆ ಹಾಗೂ ಚರಂಡಿ ಸಮಸ್ಯೆ ಉಂಟಾಗಿದೆ. ಸಮಸ್ಯೆ ಬಗೆ ಹರಿಸುವಂತೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಯಾರೂ ಗಮನ ಹರಿಸಿಲ್ಲ’ ಎಂದು ಗ್ರಾಮದ ನಂಜುಂಡ ಹಾಗೂ ಶಿವಣ್ಣ ದೂರಿದರು.

ತಕ್ಷಣ ಕಾಮಗಾರಿ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರು ಅವರು, ‘ಗ್ರಾಮದ ಚರಂಡಿ ಸಮಸ್ಯೆ ಹಾಗೂ ಕುಸಿದಿರುವ ಡೆಕ್ ನಿರ್ಮಣಕ್ಕೆ ಕ್ರಿಯಾ ಯೋಜನೆ ತಯಾರಿಸಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಗಿದೆ. ಗುತ್ತಿಗೆ ಪಡೆದವರು ವಿಳಂಬ ಮಾಡಿದ್ದಾರೆ. ತಕ್ಷಣದಿಂದಲೇ ಕಾಮಗಾರಿ ಆರಂಬಿಸುವಂತೆ ಮತ್ತೊಮ್ಮೆ ಸೂಚಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT