ಸೋಮವಾರ, ಸೆಪ್ಟೆಂಬರ್ 26, 2022
20 °C
600 ವರ್ಷಗಳ ಇತಿಹಾಸ ಹೊಂದಿರುವ ಕೆರೆ, ಸ್ಥಳೀಯರ ಜೀವನಾಡಿ

ಗುಂಡ್ಲುಪೇಟೆ: ಕಾಯಕಲ್ಪಕ್ಕೆ ಕಾದಿದೆ ಹಂಗಳ ದೊಡ್ಡಕೆರೆ

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಭತ್ತ ಬೆಳೆಯಲು ಈ ಭಾಗದ ರೈತರಿಗೆ ವರವಾಗಿದ್ದ ಹಾಗೂ 600 ವರ್ಷಗಳ ಇತಿಹಾಸ ಹೊಂದಿರುವ ಹಂಗಳ ಗ್ರಾಮದ ದೊಡ್ಡಕೆರೆ ಕಾಯಕಲ್ಪಕ್ಕೆ ಕಾದು ನಿಂತಿದೆ.

ಕಳೆ ಗಿಡಗಳು ಆವರಿಸಿ ಹೂಳು ತುಂಬಿ ಕೆರೆ ಸೌಂದರ್ಯ ಕಳೆದುಕೊಂಡಿದೆ. ಸರ್ಕಾರ ಈ ಕೆರೆಯನ್ನು ಅಭಿವೃದ್ಧಿ ಪಡಿಸಬೇಕು ಎಂಬ ಕೂಗು ಪರಿಸರಾಸಕ್ತರದ್ದು. 

63 ಎಕರೆ ಪ್ರದೇಶದಲ್ಲಿ ಕೆರೆ ಹರಡಿಕೊಂಡಿದೆ. ಊಟಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಕರೆ ಇದೆ. ಇದನ್ನು ಅಭಿವೃದ್ಧಿ ಪಡಿಸಿದರೆ ಪ್ರವಾಸಿ ತಾಣವಾಗುವ ಸಾಧ್ಯತೆ ಇದೆ. 

‘ಈ ಕೆರೆ 12 ಅಥವಾ 13ನೇ ಶತಮಾನದಲ್ಲಿ ನಿರ್ಮಾಣವಾಗಿರಬಹುದು. ಹಂಗಳ ಗ್ರಾಮದಲ್ಲಿ ಜೈನರು ವಾಸವಾಗಿದ್ದು, ಪೂಜೆಯ ಅವಶ್ಯಕತೆಗೆ ಎರಡು ಕಲ್ಯಾಣಿಗಳನ್ನು ಕಟ್ಟಿದ್ದರು. ಆ ಬಳಿಕ ಕಲ್ಯಾಣಿಗಳನ್ನು ಒಳಗೊಂಡಂತೆ ಕೆರೆಯನ್ನು ನಿರ್ಮಿಸಿದ್ದಾರೆ. ದೇವಾಲಯದ ಬಳಿ ಇರುವ ಕೆರೆಯ ಕಲ್ಲಿನ ತೂಬಿನ ಮೇಲೆ ಇರುವ ಗಜ ಲಕ್ಷ್ಮಿ ಚಿತ್ರದ ಆಧಾರದಲ್ಲಿ ಹೇಳುವುದಾದರೆ ಈ ಕೆರೆ ಹೊಯ್ಸಳರು ಅಥವಾ ವಿಜಯನಗರದ ಕಾಲದಲ್ಲಿ ನಿರ್ಮಾಣ ಆಗಿದೆ’ ಎಂದು ಸಂಶೋಧಕ ಬೆಂಡರವಾಡಿ ಆನಂದ್  ಹೇಳಿದರು.

ಹೊಯ್ಸಳರು ಮತ್ತು ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಾಣ ಆದ ಕೆರೆಗಳ ಕಲ್ಲಿನ ತೂಬಿನ ಮೇಲೆ ಗಜ ಲಕ್ಷ್ಮಿ ಚಿತ್ರಗಳ ಕೆತ್ತನೆ ಸಾಮಾನ್ಯವಾಗಿ ಕಂಡು ಬರುತ್ತದೆ ಎಂಬುದು ಅವರ ಅಭಿಪ್ರಾಯ. 

ಕಾಡಿನ ಭಾಗದಲ್ಲಿ ಈ ಕೆರೆ ಇರುವುದರಿಂದ ಮಳೆಗಾಲದಲ್ಲಿ ಶೀಘ್ರವಾಗಿ ತುಂಬುತ್ತಿತ್ತು. ಇಲ್ಲಿಂದ ಹರಿದ ನೀರು ಹಳ್ಳ ಕೊಳ್ಳದ ಮೂಲಕ ಸಾಗಿ ಗುಂಡ್ಲುಪೇಟೆ ಹಿರಿಕೆರೆಗೆ, ಬಳಿಕ ಗುಂಡ್ಲುನದಿಗೆ ಸೇರುತ್ತಿತ್ತು. ಗುಂಡ್ಲುನದಿನ ಮೂಲ ಹಂಗಳ ಗ್ರಾಮದ ದೊಡ್ಡಕೆರೆ ಎಂದರೆ ಉತ್ಪ್ರೇಕ್ಷೆಯಲ್ಲ. 

ಮೈಸೂರು ಅರಸರ ಕಾಲದಲ್ಲಿ ಬಂಡೀಪುರ ವಿಹಾರಧಾಮವಾಗಿದ್ದ ಸಂದರ್ಭದಲ್ಲಿ ಮೈಸೂರು ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು ಈ ಭಾಗಕ್ಕೆ ಭೇಟಿ ನೀಡುತ್ತಿದ್ದಾಗ ಹಂಗಳ ಗ್ರಾಮದಲ್ಲಿದ್ದ ಜನರು ನೀರಿನ ಸಮಸ್ಯೆ ಹೇಳಿಕೊಂಡಿದ್ದರು.

‘ಜನರಿಗೆ ನೀರಿನ ಸಮಸ್ಯೆ ನೀಗಿಸಲು ಎರಡು ಬಾವಿಯನ್ನು ಕೊರೆಸಿ ರಾಟೆಯ ಮೂಲಕ ನೀರನ್ನು ತೆಗೆದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ದರು’ ಎಂಬುದನ್ನು ಸ್ಥಳೀಯರು ಸ್ಮರಿಸುತ್ತಾರೆ.

‘ರಾಟೆಯ ಅವಶೇಷಗಳು ಇನ್ನೂ ಇವೆ. 50 ವರ್ಷಗಳ ಹಿಂದಿನವರೆಗೂ ಈ ಬಾವಿಯ ನೀರು ಬಳಕೆಯಾಗುತ್ತಿತ್ತು. ಈ ಕೆರೆ ನೀರನ್ನು ಗ್ರಾಮದ ಜನರು ಎಲ್ಲದಕ್ಕೂ ಅವಲಂಬಿಸಿದ್ದರು.  ಕುಡಿಯಲು ಮಾತ್ರ ಬಾವಿಯಿಂದ ರಾಟೆ ಮೂಲಕ ತೆಗೆಯುತ್ತಿದ್ದರು’ ಎಂದು ಶಿಕ್ಷಕ ಬಸವಣ್ಣ ಅವರು ತಿಳಿಸಿದರು.

ಚಿಕ್ಕದೇವರಾಜ ಒಡೆಯರ್ ಅವರ ಅರಮನೆ ಹಂಗಳ ಗ್ರಾಮದಲ್ಲಿ ಇತ್ತು. ಕಾಲನಂತರ ಅರಮನೆ ಮಠವಾಗಿದೆ. ಇನ್ನೂ ಮಠ ಇದೆ. 

‘ಶೀಘ್ರ ಅಭಿವೃದ್ಧಿ ಪಡಿಸಿ’
‘ಕೆರೆಗಳು ಗ್ರಾಮೀಣ ಜನರ ಜೀವನಾಡಿ. ಅವು ಒಂದೊಂದಾಗಿ ನಾಶವಾಗುತ್ತಾ ಬರುತ್ತಿದ್ದರೂ, ಸರ್ಕಾರವಾಗಲಿ, ಜನರಾಗಲಿ ಎಚ್ಚೆತ್ತುಕೊಳ್ಳುತ್ತಿಲ್ಲ. ಈ ಕೆರೆಯನ್ನು ಶೀಘ್ರ ಅಭಿವೃದ್ಧಿ ಪಡಿಸಬೇಕಿದೆ. ಮೂರು ವರ್ಷಗಳ ಹಿಂದೆ ಕೆರೆಯ ಹೂಳೆತ್ತಿಸಿ, ಏರಿಯನ್ನು ಸರಿಪಡಿಸಿ ಎಂದು ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ನಂತರ ಅವಧಿಯಲ್ಲಿ ಕೆರೆಯಲ್ಲಿ ನೀರು ಕಡಿಮೆಯಾಗಿತ್ತು. ಆಗಬೇಕಿದ್ದ ಅಭಿವೃದ್ಧಿ ಕೆಲಸಗಳು ಅಲ್ಲಿಗೇ ನಿಂತವು’ ಎಂದು ರೈತ ಮುಖಂಡ ಮಹದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

--

ಕೆರೆಗಳು ನೈಸರ್ಗಿಕ ಸಂಪತ್ತು. ಐತಿಹಾಸಿಕ ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಅವುಗಳನ್ನು ರಕ್ಷಿಸುವ ಕೆಲಸ ಆಗಬೇಕು.
-ಆನಂದ್ ಬೆಂಡರವಾಡಿ, ಸಂಶೋಧಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು