ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಶಾಲಾ ಕಾಲೇಜಿನ ಮೊದಲ ದಿನ ಹಾಜರಾತಿ ಕಡಿಮೆ

ಕೋವಿಡ್‌ ನಿಯಮಗಳ ಪಾಲನೆ; ಉತ್ಸಾಹದಿಂದಲೇ ಬಂದ ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ
Last Updated 1 ಜನವರಿ 2021, 13:51 IST
ಅಕ್ಷರ ಗಾತ್ರ

ಚಾಮರಾಜನಗರ: ಹೊಸ ವರ್ಷದ ಮೊದಲ ದಿನವಾದ ಶುಕ್ರವಾರ ಜಿಲ್ಲೆಯಾದ್ಯಂತ 2020–21ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಯಿತು.ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು 9 ತಿಂಗಳ ಬಳಿಕ ತರಗತಿಗಳಿಗೆ ಹಾಜರಾದರು.

6ರಿಂದ 9ನೇ ತರಗತಿ ವರೆಗಿನ ವಿದ್ಯಾರ್ಥಿಗಳು ವಿದ್ಯಾಗಮ ಕಾರ್ಯಕ್ರಮದಲ್ಲಿ ಭಾಗಿಯಾದರು. ಮೊದಲ ದಿನ ಪ್ರೌಢ ಶಾಲೆಗಳು ಹಾಗೂ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಬಂದವರು ಉತ್ಸಾಹದಿಂದಲೇ ತರಗತಿಯಲ್ಲಿ ಕುಳಿತು ಪಾಠ ಕೇಳಿದರು. ನಗರ, ಪಟ್ಟಣ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲೇ ಹೆಚ್ಚಿನ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳತ್ತ ಮುಖ ಮಾಡಿದರು.

ಸಂಭ್ರಮದ ಸ್ವಾಗತ: ಕೋವಿಡ್‌ ಕಾಟ ಆರಂಭವಾದ ನಂತರ ಮುಚ್ಚಿದ್ದ ಶಾಲೆಗಳು ದೀರ್ಘ ಕಾಲದ ನಂತರ ತೆರೆದಿದ್ದುದರಿಂದ ಶಾಲಾ, ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಆತ್ಮೀಯವಾಗಿ ಬರಮಾಡಿಕೊಂಡರು. ಹೆಚ್ಚಿನ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂವು ನೀಡುವ ಮೂಲಕ ಸ್ವಾಗತಿಸಿದರು. ಕೆಲವು ಕಡೆಗಳಲ್ಲಿ ಶಾಲೆಗಳನ್ನು ಶೃಂಗರಿಸಲಾಗಿತ್ತು. ರಂಗೋಲಿ, ತಳಿರು ತೋರಣಗಳು ಗಮನಸೆಳೆದವು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ನಗರದ ಚೆನ್ನೀಪುರಮೋಳೆ ಶಾಲೆಗೆ ತೆರಳಿ ಮಕ್ಕಳಿಗೆ ಹೂ ನೀಡುವ ಮೂಲಕ ಸ್ವಾಗತಿಸಿದರು. ಕೋವಿಡ್‌ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು. ಕೋವಿಡ್‌ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು.

ಹಾಜರಾತಿ ಕಡಿಮೆ: ಹಾಜರಾತಿ ಕಡ್ಡಾಯವಲ್ಲ ಎಂದು ಸರ್ಕಾರ ಮೊದಲೇ ಹೇಳಿತ್ತು. ಮೊದಲ ದಿನವಾಗಿದ್ದರಿಂದ ಪ್ರೌಢ ಶಾಲೆಗಳಲ್ಲಿ ಹಾಗೂ ಪಿಯು ಕಾಲೇಜುಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇತ್ತು.

ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ 12,100 ಮಕ್ಕಳಿದ್ದು, ಶುಕ್ರವಾರ 4,402 ವಿದ್ಯಾರ್ಥಿಗಳು ಮಾತ್ರ ತರಗತಿಗಳಿಗೆ ಹಾಜರಾಗಿದ್ದಾರೆ. ಇವರಲ್ಲಿ 2,320 ಮಂದಿ ಬಾಲಕರು ಹಾಗೂ 2,082 ಬಾಲಕಿಯರು.

‘ಬೆಳಿಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ತರಗತಿಗಳು ನಡೆದವು. ಮೊದಲ ದಿನ ಶೇ 36.38ರಷ್ಟು ಹಾಜರಾತಿ ಇತ್ತು. ನಗರ, ಪಟ್ಟಣ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಮಕ್ಕಳು ಹಾಜರಾಗಿದ್ದಾರೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲ ಶಾಲೆಗಳನ್ನು ತೆರೆಯಬೇಕು ಎಂದು ಸೂಚನೆ ನೀಡಿದ್ದೆವು. ಎಲ್ಲ ಸರ್ಕಾರಿ ಪ್ರೌಢಶಾಲೆಗಳನ್ನು ತೆರೆಯಲಾಗಿದೆ. ಬಹುತೇಕ ಎಲ್ಲ ಖಾಸಗಿ ಶಾಲೆಗಳೂ ಆರಂಭವಾಗಿವೆ. ಯಾರೂ ತೆರೆದಿಲ್ಲ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದ್ವಿತೀಯ ಪಿಯುಸಿ: ಶೇ 24ರಷ್ಟು ಹಾಜರಿ

ಜಿಲ್ಲೆಯಲ್ಲಿರುವ 61 ಪಿಯು ‌ಕಾಲೇಜುಗಳಲ್ಲಿ ಶೇ 24ರಷ್ಟು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮೊದಲ ದಿನ ತಗರತಿಗಳಿಗೆ ಹಾಜರಾಗಿದ್ದಾರೆ. ಇವರಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಪಿಯು ಇಲಾಖೆ ಉಪನಿರ್ದೇಶಕ ಡಿ.ಎಸ್‌.ಕೃಷ್ಣಮೂರ್ತಿ ಅವರು, ‘ದ್ವಿತೀಯ ಪಿಯುಸಿಯಲ್ಲಿ 6,118 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 1,447 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದಾರೆ. 2,817 ವಿದ್ಯಾರ್ಥಿಗಳಿದ್ದು, ಇದರಲ್ಲಿ 506 ಮಂದಿ ಮೊದಲ ದಿನ ಪಾಠ ಕೇಳಿದ್ದಾರೆ. 3,301 ವಿದ್ಯಾರ್ಥಿನಿಯರಿದ್ದು, ಶುಕ್ರವಾರ 941 ಮಂದಿ ಹಾಜರಾಗಿದ್ದಾರೆ’ ಎಂದರು.

ಸರ್ಕಾರಿ ಕಾಲೇಜಿನಲ್ಲಿ ಕಡಿಮೆ: ಸರ್ಕಾರಿ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಹನೂರು ತಾಲ್ಲೂಕಿನ ಕಾಮಗೆರೆ ಪಿಯು ಕಾಲೇಜುನಲಕ್ಲಿ 50 ವಿದ್ಯಾರ್ಥಿಗಳ ಪೈಕಿ ಇಬ್ಬರು ಮಾತ್ರ ಹಾಜರಾಗಿದ್ದರು. ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿತ್ತು. ಗುಂಡ್ಲುಪೇಟೆಯ ಜೆಎಸ್‌ಎಸ್‌ ಕಾಲೇಜಿನಲ್ಲಿ 101 ವಿದ್ಯಾರ್ಥಿಗಳ ಪೈಕಿ 98 ಮಂದಿ ಹಾಜರಾಗಿದ್ದರು.

‘ಹಾಜರಾತಿ ಕಡ್ಡಾಯ ಇಲ್ಲದೇ ಇದ್ದುದರಿಂದ, ಹಾಸ್ಟೆಲ್‌ಗಳು ಇನ್ನೂ ಆರಂಭವಾಗದೇ ಇರುವುದರಿಂದ ಹಾಗೂ ಬಸ್‌ ಪಾಸ್‌ ಮಾಡಿಸದೇ ಇರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವ ಸಾಧ್ಯತೆ ಇದೆ. ಸೋಮವಾರದಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ’ ಎಂದು ಕೃಷ್ಣಮೂರ್ತಿ ಅವರು ತಿಳಿಸಿದರು.

ಕೋವಿಡ್‌ ನಿಯಮ ಪಾಲನೆ

ಶಾಲಾ ಕಾಲೇಜುಗಳಲ್ಲಿ ಕೋವಿಡ್‌ –19 ಮುಂಜಾಗ್ರತಾ ನಿಯಮಗಳನ್ನು ಪಾಲಿಸಲು ಹೆಚ್ಚು ಒತ್ತು ನೀಡಲಾಯಿತು. ಬೋಧಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಒತ್ತು ನೀಡಲಾಯಿತು. ತರಗತಿಗಳಲ್ಲಿ ಕೂಡ ಡೆಸ್ಕ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಮಾತ್ರ ಅವಕಾಶ ಕಲ್ಪಿಸಲಾಯಿತು.

ಕೆಲವು ಕಡೆಗಳಲ್ಲಿ ಪೋಷಕರೇ ಶಾಲಾ ಕಾಲೇಜುವರೆಗೆ ಬಂದು ಮಕ್ಕಳನ್ನು ಬಿಟ್ಟು ಹೋದರು. ಕೆಲವು ಖಾಸಗಿ ಕಾಲೇಜುಗಳು ಪೋಷಕರ ಸಭೆಯನ್ನೂ ನಡೆಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT