ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ತರಕಾರಿ, ಹಣ್ಣುಗಳ ಬೆಲೆ ಗಗನಕ್ಕೆ

₹100ರ ಗಡಿ ದಾಟಿದ ಬೀನ್ಸ್‌, ಸ್ಥಳೀಯವಾಗಿ ಲಭ್ಯ ತರಕಾರಿಗಳು ಅಗ್ಗ
Last Updated 1 ಜೂನ್ 2021, 9:41 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ ಎರಡನೇ ಅಲೆ ನಿಯಂತ್ರಣಕ್ಕಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಹೇರಲಾಗಿರುವ ಲಾಕ್‌ಡೌನ್‌ ನಿರ್ಬಂಧಗಳಿಂದಾಗಿ ಕೆಲವು ತರಕಾರಿಗಳು ಹಾಗೂ ಹಣ್ಣುಗಳ ಬೆಲೆ ಗಗನಕ್ಕೆ ಏರಿದೆ.

ಸ್ಥಳೀಯವಾಗಿ ಹೆಚ್ಚು ಲಭ್ಯವಿಲ್ಲದ ತರಕಾರಿಗಳು ಹಾಗೂ ಹಣ್ಣುಗಳು ಗ್ರಾಹಕರ ಜೇಬು ಸುಡುತ್ತಿವೆ. ತರಕಾರಿಗಳ ಪೈಕಿ ಬೀನ್ಸ್‌ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ₹80 ಇದ್ದರೆ, ಹೊರ ಮಾರುಕಟ್ಟೆಯಲ್ಲಿ ₹100ರಿಂದ ₹120ರವರೆಗೆ ಇ‌ದೆ. ತಳ್ಳುಗಾಡಿ ವ್ಯಾಪಾರಿಗಳು ಕೆಜಿ ಬೀನ್ಸ್‌ಗೆ ₹120ಕ್ಕೆ ಮಾರಾಟ ಮಾರಾಟ ಮಾಡುತ್ತಿದ್ದಾರೆ.

ವಹಿವಾಟಿಗೆ ನಿರ್ದಿಷ್ಟ ಸಮಯ ನಿಗದಿ ಮಾಡಿರುವುದರಿಂದ ಗ್ರಾಹಕರು ಅದೇ ಸಮಯಕ್ಕೆ ಮಾರುಕಟ್ಟೆಗೆ ಹೋಗಿ ತರಕಾರಿ ಹಾಗೂ ಹಣ್ಣುಗಳನ್ನು ಖರೀದಿಸಬೇಕಿದೆ. ಗ್ರಾಹಕರಿಂದ ಏಕಕಾಲದಲ್ಲಿ ಬೇಡಿಕೆ ಬರುತ್ತಿರುವುದರಿಂದ ತರಕಾರಿಗಳ ಬೆಲೆಯಲ್ಲಿ ಏರುಮುಖವಾಗಿದೆ ಎಂದು ಹೇಳುತ್ತಾರೆ ಮಾರುಕಟ್ಟೆಯನ್ನು ಬಲ್ಲವರು.

ಹಾಪ್‌ಕಾಮ್ಸ್‌ನಲ್ಲಿ ಕ್ಯಾರೆಟ್‌ ಬೆಲೆ ಕೆಜಿಗೆ ₹30 ಇದೆ. ಹೊರಗಡೆ ಇನ್ನೂ ಜಾಸ್ತಿ ಇದೆ. ಎರಡು ವಾರಗಳ ಹಿಂದೆ ಕೆಜಿಗೆ ₹20ಕ್ಕೆ ಸಿಗುತ್ತಿದ್ದ ಮೂಲಂಗಿ ಈಗ ₹40 ಆಗಿದೆ. ಸ್ಥಳೀಯವಾಗಿ ಹೆಚ್ಚು ಲಭ್ಯವಿರುವ ಟೊಮೆಟೊ ಬೆಲೆ ಹಾಪ್‌ಕಾಮ್ಸ್‌ನಲ್ಲಿ ₹10 ಇದೆ. ಬೆಂಡೇಕಾಯಿ, ಹೀರೇಕಾಯಿಗಳ ಧಾರಣೆ ₹50ಕ್ಕೆ ಏರಿದೆ. ಈರುಳ್ಳಿ ಬೆಲೆ ₹28ಕ್ಕೆ ಏರಿದೆ. ಹೊರಗಡೆ ಇನ್ನೂ ಐದಾರು ರೂಪಾಯಿ ಹೆಚ್ಚಿದೆ.

‘ಬೀನ್ಸ್‌ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ. ಲಾಕ್‌ಡೌನ್‌ ಕಾರಣಕ್ಕೆ ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಹಾಗಾಗಿ, ದರ ಹೆಚ್ಚಾಗಿದೆ. ಗ್ರಾಹಕರಿಂದ ಬರುವ ಬೇಡಿಕೆಗೆ ಅನುಗುಣವಾಗಿ ಧಾರಣೆ ಏರಿಳಿತವಾಗುತ್ತಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಟೊಮೆಟೊ, ಕ್ಯಾರೆಟ್‌, ಸೊಪ್ಪುಗಳ ಬೆಲೆಯಲ್ಲಿ ಹೆಚ್ಚು ವ್ಯತ್ಯಾಸವಾಗಿಲ್ಲ. ಇವೆಲ್ಲ ಸ್ಥಳೀಯವಾಗಿ ಹೆಚ್ಚು ಪೂರೈಕೆಯಾಗುತ್ತಿವೆ’ ಎಂದು ಅವರು ಮಾಹಿತಿ ನೀಡಿದರು.

ಹಣ್ಣುಗಳು ತುಟ್ಟಿ: ಲಾಕ್‌ಡೌನ್‌ ಆರಂಭವಾದಾಗಿನಿಂದ ಹಣ್ಣುಗಳ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ. ಬಾಳೆ ಹಣ್ಣುಗಳನ್ನು ಬಿಟ್ಟು, ಬಹುತೇಕ ಉಳಿದೆಲ್ಲ ಹಣ್ಣುಗಳ ಬೆಲೆ ₹100ರ ಮೇಲಿದೆ.

ಹಾಪ್‌ಕಾಮ್ಸ್‌ನಲ್ಲಿ ಸೇಬಿಗೆ ಕೆಜಿಗೆ ₹200 ಇದೆ. ಮೂಸಂಬಿ, ಕಿತ್ತಳೆಗೆ ₹140, ದಾಳಿಂಬೆಗೂ ಅಷ್ಟೇ (₹140) ಇದೆ.

ರೈತರ ಜಮೀನುಗಳಲ್ಲಿ ಪಪ್ಪಾಯಿ ಹಣ್ಣು ಕೊಳೆತು ಹೋಗುತ್ತಿದ್ದರೂ, ಅಂಗಡಿಗಳಲ್ಲಿ ಕೆಜಿಗೆ ₹30 ಬೆಲೆ ಇದೆ. ವಿವಿಧ ತಳಿಗಳ ಮಾವಿನ ಹಣ್ಣುಗಳ ಧಾರಣೆ ₹60ರಿಂದ ₹80 ಇದೆ.

‘ಮೂಸಂಬಿ, ಕಿತ್ತಳೆ, ಸೇಬು ಹಣ್ಣುಗಳು ಮೈಸೂರು ಹಾಗೂ ಇತರ ಕಡೆಗಳಿಂದ ಪೂರೈಕೆಯಾಗುತ್ತವೆ. ಎರಡು ವಾರಗಳ ಹಿಂದೆ ಮೂಸಂಜಿ ಬೆಲೆ ₹80–₹100ರ ಆಸುಪಾಸಿನಲ್ಲಿತ್ತು. ಈಗ ಹೆಚ್ಚಾಗಿದೆ’ ಎಂದು ಮಧು ಅವರು ಮಾಹಿತಿ ನೀಡಿದರು.

ಬಿಡಿ ಹೂವಿನ ಮಾರುಕಟ್ಟೆ ಬಂದ್‌

ಲಾಕ್‌ಡೌನ್‌ ನಿಯಮಗಳು ಜಾರಿಯಾದಾಗಿನಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಹೂವಿನ ವಹಿವಾಟು ಸ್ತಬ್ಧಗೊಂಡಿದೆ. ನಗರಕ್ಕೆ ಸಮೀಪದ ಚೆನ್ನೀಪುರದಮೋಳೆಯಲ್ಲಿ ಬಿಡಿ ಹೂವಿನ ಮಾರುಕಟ್ಟೆ ಇದೆ. ಲಾಕ್‌ಡೌನ್‌ ಆರಂಭಗೊಂಡ ನಂತರ ಇಲ್ಲಿ ವಹಿವಾಟು ಸ್ಥಗಿತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಪಾರಿಗಳೇ ಅಂಗಡಿಗಳನ್ನು ನಡೆಸುತ್ತಿಲ್ಲ.

ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಕೆಲವರು ಸಣ್ಣ ಪ್ರಮಾಣದಲ್ಲಿ ಹೂವಿನ ವ್ಯಾಪಾರ ಮತ್ತೆ ಆರಂಭಿಸಿದ್ದಾರೆ. ಆದರೆ, ಬೇಡಿಕೆ ಇಲ್ಲದಿರುವುದರಿಂದ ವ್ಯಾಪಾರ ನಡೆಯುತ್ತಿಲ್ಲ ಎಂದು ಹೇಳುತ್ತಾರೆ ವ್ಯಾಪಾರಿಗಳು.

‘ನಮ್ಮಲ್ಲಿ ಲಾಕ್‌ಡೌನ್‌ ಜಾರಿಯಾದಾಗಿನಿಂದ ವಹಿವಾಟು ನಿಲ್ಲಿಸಿದ್ದೇವೆ. ವ್ಯಾಪಾರ ನಡೆದರೆ ಜನರು ಬರುತ್ತಾರೆ. ಕೋವಿಡ್‌ ಸಂದರ್ಭದಲ್ಲಿ ಅದು ಸುರಕ್ಷಿತವಲ್ಲ ಎಂಬ ಕಾರಣಕ್ಕೆ ವ್ಯಾಪಾರ ಮಾಡದಿರಲು ಎಲ್ಲರೂ ಒಟ್ಟಾಗಿ ತೀರ್ಮಾನಿಸಿದ್ದೇವೆ’ ಎಂದು ಬಿಡಿಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT