ಶನಿವಾರ, ಮಾರ್ಚ್ 6, 2021
18 °C
ಲಾಕ್‌ಡೌನ್‌ ಸಡಿಲಿಕೆಯ ಮೊದಲ ದಿನ ತೆರೆದ ಮಳಿಗೆಗಳು, ಪಾಲನೆಯಾಗದ ಅಂತರ ಕಾಯ್ದುಕೊಳ್ಳುವ ನಿಯಮ, 43 ದಿನಗಳ ಬಳಿಕ ಸಂಚರಿಸಿದ ಬಸ್‌

ಜನ ಸಂಚಾರ ಅಧಿಕ, ವಹಿವಾಟು ಬಿರುಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌–19ರ ತಡೆಗೆ ಹೇರಲಾಗಿದ್ದ ಎರಡನೇ ಹಂತದ ಲಾಕ್‌ಡೌನ್‌ ಸಡಿಲಿಕೆ ಮಾಡಿದ ನಂತರದ ಮೊದಲ ದಿನ ಜಿಲ್ಲೆಯಾದ್ಯಂತ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಾಣಿಜ್ಯ ವಹಿವಾಟು ಚುರುಕಿನಿಂದ ನಡೆಯಿತು.

ಎಲ್ಲ ಕಡೆಯೂ ಜನರ ಸಂಚಾರ ಹೆಚ್ಚಿತ್ತು. ಬಹುತೇಕರು ಮಾರ್ಚ್‌ 24ರ ನಂತರ ಇದೇ ಮೊದಲ ಬಾರಿಗೆ ಮನೆಯಿಂದ ಹೊರಗಡೆ ಬಂದರು. ಕೆಎಸ್‌ಆರ್‌ಟಿಸಿ ಬಸ್‌ಗಳು 43 ದಿನಗಳ ನಂತರ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಓಡಾಡಿತು. ಆಸ್ಪತ್ರೆಗಳು, ಸರ್ಕಾರಿ ಕಚೇರಿ, ಕೆಲವು ಅಂಗಡಿ ಮುಂಗಟ್ಟುಗಳಲ್ಲಿ ಜನರ ಸಂಖ್ಯೆ ಹೆಚ್ಚಿತ್ತು. ಕೆಲವು ಕಡೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆಯಾದರೆ, ಇನ್ನೂ ಕೆಲವೆಡೆ ಆಗಲಿಲ್ಲ. 

ವಾಹನಗಳ ಶೋರೂಂಗಳು ಸೇರಿದಂತೆ ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು ತೆರೆದವು. ಬಟ್ಟೆ ಅಂಗಡಿ ಸೇರಿದಂತೆ ಹಲವು ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಜಿಲ್ಲಾಡಳಿತ ಭವನದಲ್ಲಿರುವ ಕಚೇರಿಗಳು ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳು ತೆರೆದಿದ್ದವು. ಸಿಬ್ಬಂದಿಯ ಸಂಖ್ಯೆಯೂ ಹೆಚ್ಚಿತ್ತು. 

15 ಬಸ್‌ಗಳ ಸಂಚಾರ

ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳ ನಡುವೆ ಒಟ್ಟು 15 ಕೆಎಸ್‌ಆರ್‌ಟಿಸಿ ಬಸ್‌ಗಳು ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಸಂಚರಿಸಿದವು. ಚಾಮರಾಜನಗರ, ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆಗಳಿಂದ ತಲಾ ಐದು ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. 

ಚಾಮರಾಜನಗರದಿಂದ ಸಂತೇಮರಹಳ್ಳಿ, ಯಳಂದೂರು ಮತ್ತು ಕೊಳ್ಳೇಗಾಲ, ಇತ್ತ ಉಡಿಗಾಲ, ತೆರಕಣಾಂಬಿ ಹಾಗೂ ಗುಂಡ್ಲುಪೇಟೆಗೆ ಸಂಚರಿಸಿತು. ಕೊಳ್ಳೇಗಾಲದಿಂದ ಕಾಮಗೆರೆ, ಹನೂರು, ರಾಮಾಪುರ, ಕೌದಳ್ಳಿವರೆಗೆ ಬಸ್‌ಗಳು ಸಂಚರಿಸಿದವು. ಪ್ರತಿ ಬಸ್‌ನಲ್ಲೂ ಗರಿಷ್ಠ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು. 

ಎಲ್ಲ ನಿಲ್ದಾಣಗಳಲ್ಲಿ ಪ್ರತಿಯೊಬ್ಬ ಪ್ರಯಾಣಿಕರನ್ನೂ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿಯೇ ಒಳಗಡೆ ಬಿಡಲಾಗುತ್ತಿತ್ತು. ಬಸ್‌ಗಳಲ್ಲೂ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿತ್ತು. ಮುಖಗವಸು ಧರಿಸಬೇಕು, ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು, ಉಗುಳಬಾರದು ಸೇರಿದಂತೆ ಎಲ್ಲ ಮುಂಜಾಗ್ರತಾ ನಿಯಮಗಳನ್ನು ಪಾಲನೆ ಮಾಡುವಂತೆ ನಿಲ್ದಾಣದಲ್ಲಿ ಧ್ವನಿವರ್ಧಕದ ಮೂಲಕ ಹೇಳಲಾಗುತ್ತಿತ್ತು. ವಯಸ್ಸಾದವರಿಗೆ, ಮಕ್ಕಳು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಪ್ರಯಾಣಕ್ಕೆ ಅವಕಾಶ ನೀಡಿರಲಿಲ್ಲ. ಬಸ್‌ಗಳಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಟ್ರಿಪ್‌ನ ಬಳಿಕ ಬಸ್‌ಗೆ ಸೋಂಕು ನಿವಾರಕವನ್ನು ಸಿಂಪಡಿಸಲಾಗುತ್ತಿತ್ತು. ಸಿಬ್ಬಂದಿ ಕೂಡ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದುದು ಕಂಡು ಬಂತು. 

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌ ಅವರು ಚಾಮರಾಜನಗರ ಹಾಗೂ ಕೊಳ್ಳೇಗಾಲದ ಬಸ್‌ ನಿಲ್ದಾಣಗಳಿಗೆ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲಿಸಿದರು. ಪ್ರಯಾಣಿಕರೊಂದಿಗೆ ಸಮಾಲೋಚನೆ ನಡೆಸಿದರು. ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚಿಸಿದರು. 

‘ಸೋಮವಾರದ ಕಾರ್ಯನಿರ್ವಹಣೆ ಸಮಾಧಾನಕರವಾಗಿತ್ತು. ಕೊಳ್ಳೇಗಾಲ ಭಾಗಕ್ಕೆ ಹೋಗುವವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಗುಂಡ್ಲುಪೇಟೆಗೆ ಹೆಚ್ಚಿನ ಪ್ರಯಾಣಿಕರು ಹೋಗಲಿಲ್ಲ. ಪ್ರತಿಯೊಂದು ಬಸ್‌ನಲ್ಲಿ ಸರಾಸರಿ 20ರಿಂದ 25ರಷ್ಟು ಪ್ರಯಾಣಿಕರು ಸಂಚರಿಸಿದರು’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್‌.ಶ್ರೀನಿವಾಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಬಸ್‌ಗಳಲ್ಲೂ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಿದ್ದೇವೆ. ಬಸ್‌ಗಳನ್ನು ಪ್ರತಿ ಟ್ರಿಪ್‌ ನಂತರವೂ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು. 

‘ಎರಡು ಮೂರು ದಿನಗಳ ನಂತರ ಇನ್ನಷ್ಟು ಬಸ್‌ಗಳ ಸಂಚಾರ ನಡೆಸುವ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಆಟೊ ಜಪ್ತಿ, ಪಾಸ್‌ಗಾಗಿ ಸರತಿ ಸಾಲು

ಲಾಕ್‌ಡೌನ್‌ ಸಡಿಲಿಕೆಯಾಗಿದ್ದರೂ, ಆಟೊಗಳ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಹಾಗಿದ್ದರೂ ಹಲವು ಆಟೊಗಳು ಸಂಚಾರ ನಡೆಸುತ್ತಿದ್ದವು. ಪೊಲೀಸರು ಕಾರ್ಯಾಚರಣೆ ನಡೆಸಿ 25 ಆಟೊಗಳನ್ನು ನಗರದಲ್ಲಿ ಜಪ್ತಿ ಮಾಡಿದರು. ನಂತರ ಎಚ್ಚರಿಕೆ ನೀಡಿ ಆಟೊಗಳನ್ನು ಕೊಟ್ಟರು. 

ಈ ಬಗ್ಗೆ ‘ಪ್ರಜಾವಾಣಿ’ಗೆ ‍ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರು, ‘ಆಟೊಗಳಿಗೆ ಅವಕಾಶ ಕೊಟ್ಟರೆ ಜನರ ಓಡಾಟಕ್ಕೆ ಹೆಚ್ಚಾಗುತ್ತದೆ ಎಂಬ ಉದ್ದೇಶದಿಂದ ಅನುಮತಿ ನೀಡಿಲ್ಲ. ಅನುಮತಿ ಕೊಡುವುದಕ್ಕೂ ಮೊದಲು, ಆಟೊಗಳಲ್ಲಿ ಎಷ್ಟು ಜನರನ್ನು ಹಾಕಬಹುದು, ಏನೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ಎರಡು ಮೂರು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು. 

ಹೊರ ಜಿಲ್ಲೆಗಳಿಗೆ ಸಂಚರಿಸಲು ಪಾಸ್‌ಗಾಗಿ ಜನರು ನಗರದ ಡಿವೈಎಸ್‌ಪಿ ಕಚೇರಿ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಈ ಮೊದಲು ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲೇ ‍‌ಪಾಸ್‌ ನೀಡಲಾಗುತ್ತಿತ್ತು. ದೂರದ ಊರಿನಿಂದ ಬರುವವರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವುದಕ್ಕಾಗಿ ಡಿವೈಎಸ್‌ಪಿ ಕಚೇರಿಗಳು ಹಾಗೂ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ಅರ್ಜಿ ಸಲ್ಲಿಸಲು ಪೊಲೀಸ್‌ ಇಲಾಖೆ ಅರ್ಜಿ ಸಲ್ಲಿಸಿದೆ. 

ಜಿಲ್ಲಾಸ್ಪತ್ರೆಯಲ್ಲಿ ಜನವೋ ಜನ

ಸೋಮವಾರ ಜಿಲ್ಲಾಸ್ಪತ್ರೆಯಲ್ಲಿ ಜನಸಂದಣಿ ಹೆಚ್ಚಿತ್ತು. ಭಾರಿ ಪ್ರಮಾಣದಲ್ಲಿ ಹೊರ ರೋಗಿಗಳು ಬಂದಿದ್ದರು. ಆಸ್ಪತ್ರೆ ಎದುರು ದೊಡ್ಡ ಸರತಿ ಸಾಲೇ ಇತ್ತು. 

ಲಾಕ್‌ಡೌನ್‌ ಜಾರಿಯಾದ ನಂತರ ಆಸ್ಪತ್ರೆಗೆ ಬರುವವರ ಸಂಖ್ಯೆ ಇಳಿದಿತ್ತು. ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದಕ್ಕೆ ಜನರು ಬರುತ್ತಿರಲಿಲ್ಲ. ನಿಯಮಗಳು ಸಡಿಲಿಕೆಯಾಗಿರುವುದರಿಂದ ಹತ್ತಿರದ ಊರುಗಳಿಂದ ಜನರು ಹೆಚ್ಚು ಜನರು ಬಂದಿದ್ದರು. ಸುರಕ್ಷಿತ ಅಂತರ ನಿಯಮವನ್ನು ಜನರು ಪಾಲನೆ ಮಾಡಲಿಲ್ಲ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಸರ್ಜನ್‌ ಡಾ.ಕೃಷ್ಣಪ್ರಸಾದ್‌ ಅವರು, ‘ಹೊರರೋಗಿಗಳ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಭಾನುವಾರದವರೆಗೂ 500ರಿಂದ 600 ಮಂದಿ ಚಿಕಿತ್ಸೆಗೆ ಬರುತ್ತಿದ್ದರು. ಸೋಮವಾರ 700ಕ್ಕೂ ಹೆಚ್ಚು ಬಂದಿದ್ದರು. ಬಿಎಸ್‌ಎನ್‌ಎಲ್‌ ಇಂಟರ್‌ನೆಟ್‌ ಸೇವೆ ಸರಿ ಇಲ್ಲದಿರುವುದರಿಂದ ನೋಂದಣಿ ಹಾಗೂ ದಾಖಲಾತಿ, ಬಿಡಗಡೆ ಪ್ರಕ್ರಿಯೆಗೆ ತೊಡಕಾಯಿತು. ಆ ಕಾರಣಕ್ಕೆ ಜನರು ಹೆಚ್ಚು ಕಾಯಬೇಕಾಯಿತು’ ಎಂದು ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು