ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಬಿಸಿಲ ಬೇಗೆ ನಡುವೆ ಪ್ರಚಾರದ ‘ಕಾವು’

ಕಾಂಗ್ರೆಸ್‌, ಬಿಜೆಪಿಯಿಂದ ಬಿರುಸಿನ ಪ್ರಚಾರ, ಬಿಎಸ್‌ಪಿಯಿಂದಲೂ ಸಿದ್ಧತೆ
Published 8 ಏಪ್ರಿಲ್ 2024, 7:39 IST
Last Updated 8 ಏಪ್ರಿಲ್ 2024, 7:39 IST
ಅಕ್ಷರ ಗಾತ್ರ

ಚಾಮರಾಜನಗರ: ವಾತಾವರಣದ ಉಷ್ಣತೆ 40 ಡಿಗ್ರಿ ಸೆಲ್ಸಿಯಸ್‌ ತಲುಪುತ್ತಿದೆ. ಬಿಸಿಲ ಝಳದ ನಡುವೆ ರಾಜಕಾರಣಿಗಳು, ಪಕ್ಷದ ಕಾರ್ಯಕರ್ತರು ಬೀದಿಗೆ ಇಳಿದಿದ್ದಾರೆ. ಕಾರಣ ಲೋಕಸಭಾ ಚುನಾವಣೆ. ಬಿಸಿಲಿನಿಂದಾದ ಬಳಲಿಕೆಯ ನಡುವೆಯೇ ಪಕ್ಷದ ಅಭ್ಯರ್ಥಿ ಪರವಾಗಿ ಮತಭಿಕ್ಷೆ ಕೇಳುತ್ತಿದ್ದಾರೆ. 

ಇದೇ 26ರಂದು ನಡೆಯಲಿರುವ ಮತದಾನಕ್ಕಿನ್ನು 19 ದಿನಗಳಷ್ಟೇ ಬಾಕಿ ಇದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಶಾಸಕರು, ಮುಖಂಡರ ಮತಯಾಚನೆ ಬಿರುಸು ಪಡೆದಿದೆ. ಯುಗಾದಿ, ರಂಜಾನ್‌ ನಂತರ ಪ್ರಚಾರದ ಭರಾಟೆ ಇನ್ನಷ್ಟು ತೀವ್ರಗೊಳ್ಳುವುದು ಖಚಿತ. 

ನೆತ್ತಿ ಸುಡುವ ಬಿಸಿಲಿನ ನಡುವೆಯೇ ಪಕ್ಷಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಬಿಸಿನ ತೀವ್ರತೆ ಹೆಚ್ಚಿರುವುದರಿಂದ ಬೆಳಿಗ್ಗೆ ಬೇಗ ಆರಂಭಿಸಿ 12 ಗಂಟೆಯವರೆಗೆ ಪ್ರಚಾರ ನಡೆಸಿ, ನಂತರ ಸ್ವಲ್ಪ ಬಿಡುವು ನೀಡಿ, ಸಂಜೆ ನಾಲ್ಕು ಗಂಟೆಯ ನಂತರ 7 ಗಂಟೆಯವರೆಗೂ ಪ್ರಚಾರ ನಡೆಸುತ್ತಿದ್ದಾರೆ. 

ಗ್ರಾಮೀಣ, ಹೋಬಳಿ, ವಿಧಾನಸಭಾ ಕ್ಷೇತ್ರವಾರು ಮಟ್ಟಗಳಲ್ಲಿ ಪ್ರಚಾರ ನಡೆಯುತ್ತಿದೆ. ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪ್ರತಿ ಮನೆಗೂ ಅಭ್ಯರ್ಥಿಗಳಿಗೆ ಭೇಟಿ ನೀಡುವುದು ಅಸಾಧ್ಯ. ಹೀಗಾಗಿ, ಅವರು ಹೋಬಳಿ ಮಟ್ಟ, ತಾಲ್ಲೂಕು ಕೇಂದ್ರ, ಜಿಲ್ಲಾ ಕೇಂದ್ರಗಳಲ್ಲಿ ಪ್ರಚಾರ ನಡೆಸಿದರೆ, ತಳ ಮಟ್ಟದಲ್ಲಿ ಕಾರ್ಯಕರ್ತರು, ಸ್ಥಳೀಯ ಮುಖಂಡರು, ಪಕ್ಷಗಳ ಪದಾಧಿಕಾರಿಗಳು ಮತ ಯಾಚನೆ ಮಾಡುತ್ತಿದ್ದಾರೆ. 

‘ಪ್ರತಿ ಬಾರಿಯೂ ವಿಧಾನಸಭೆ, ಲೋಕಸಭಾ ಚುನಾವಣೆ ಮಾರ್ಚ್‌–ಮೇ ಅವಧಿಯಲ್ಲೇ ಬರುತ್ತದೆ. ಹಾಗಾಗಿ, ಬಿಸಿಲಿನಲ್ಲಿ ಪ್ರಚಾರ ನಡೆಸುವುದು ಅನಿವಾರ್ಯ. ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಿದೆ. ಮತದಾನಕ್ಕೆ ಹೆಚ್ಚು ದಿನಗಳಿಲ್ಲ. ಬಿಸಿಲು ಎಂದು ಸುಮ್ಮನಿದ್ದರೆ ಎಲ್ಲ ಮತದಾರರನ್ನು ತಲುಪುವುದಕ್ಕೆ ಆಗುವುದಿಲ್ಲ. ಹಾಗಾಗಿ, ಬಿಸಿಲಿದ್ದರೂ ಆಗಾಗ ವಿಶ್ರಾಂತಿ ಪಡೆದು ಪ್ರಚಾರ ನಡೆಸುತ್ತಿದ್ದೇವೆ’ ಎಂದು ಹೇಳುತ್ತಾರೆ ಪಕ್ಷಗಳ ಮುಖಂಡರು. 

ಬಿಜೆಪಿ ಕಾರ್ಯತಂತ್ರ:  ಚುನಾವಣಾ ವೇಳಾಪಟ್ಟಿ ಪ್ರಕಟವಾಗುದ್ದಕ್ಕಿಂತ ಮೊದಲೇ, ಎಸ್‌. ಬಾಲರಾಜು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದ ಬಿಜೆಪಿಯು, ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಘೋಷಿಸುವ ಹೊತ್ತಿಗೆ ಎಲ್ಲ ಕ್ಷೇತ್ರಗಳಲ್ಲೂ ಪದಾಧಿಕಾರಿಗಳು, ಕಾರ್ಯಕರ್ತರ ಸಭೆ ನಡೆಸಿತ್ತು. ನಾಮಪತ್ರ ಸಲ್ಲಿಸಿದ ಬಳಿಕ ಮನೆ ಮನೆ ಪ್ರಚಾರ, ಸಂಘ ಸಂಸ್ಥೆಗಳ ಭೇಟಿ ಮಾಡಿ ಮತಯಾಚನೆ ಮಾಡುತ್ತಿದೆ. ಭಾನುವಾರ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ ಅಗರ್ವಾಲ್‌ ಅವರು ನಗರಕ್ಕೆ ಭೇಟಿ ನೀಡಿ ಕೋರ್‌ ಕಮಿಟಿ, ಚುನಾವಣಾ ನಿರ್ವಹಣಾ ಸಮಿತಿಯೊಂದಿಗೆ ಸಭೆ ನಡೆಸಿದ್ದಾರೆ. ಕಳೆದ ಬಾರಿ ಕ್ಷೇತ್ರದಲ್ಲಿ ಖಾತೆ ತೆರೆದಿರುವ ಬಿಜೆಪಿಯು, ಈ ಬಾರಿಯೂ ಗೆಲ್ಲುವ ಉಮೇದಿನಲ್ಲಿದೆ. 

ಕಾಂಗ್ರೆಸ್‌ ಬಿರುಸಿನ ಪ್ರಚಾರ, ಸಭೆ: ಅಭ್ಯರ್ಥಿ ಆಯ್ಕೆಗೆ ವಿಳಂಬವಾಗಿದ್ದರೂ, ಸುನಿಲ್‌ ಬೋಸ್‌ ಅವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ, ಪ್ರಚಾರದ ಆಖಾಡಕ್ಕೆ ಇಳಿದಿರುವ ಕಾಂಗ್ರೆಸ್‌ ಮುಖಂಡರು, ಪದಾಧಿಕಾರಿಗಳು ಬಿರುಸಿನ ಮತಯಾಚನೆಯಲ್ಲಿ ತೊಡಗಿದ್ದಾರೆ. ಕ್ಷೇತ್ರಗಳ ಶಾಸಕರು ಪ್ರಚಾರದ ನೇತೃತ್ವ ವಹಿಸಿದ್ದಾರೆ. ಪದಾಧಿಕಾರಿಗಳು, ಮುಖಂಡರೊಂದಿಗೆ ಮನೆ ಮನೆಗೆ ತೆರಳುತ್ತಿದ್ದಾರೆ. ಸಚಿವರು ಕೂಡ ಕ್ಷೇತ್ರದ ವಿವಿಧ ಭಾಗಗಳಿಗೆ ಭೇಟಿ ನೀಡಿ ಮುಖಂಡರು, ಕಾರ್ಯಕರ್ತರನ್ನು, ಸಮುದಾಯದ ಮುಖಂಡರನ್ನು ಭೇಟಿ ಮಾಡುತ್ತಿದ್ದಾರೆ. 

ಇದೇ 12ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಪ್ರಮುಖರು ಕೊಳ್ಳೇಗಾಲ ಮತ್ತು ನಂಜನಗೂಡಿನಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. 

ಕೊನೆಕ್ಷಣದಲ್ಲಿ ಅಭ್ಯರ್ಥಿಯನ್ನು ಬದಲಿಸಿರುವ ಬಿಎಸ್‌ಪಿ ಕೂಡ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಆರಂಭಿಸಿದೆ. ಮುಂದೆ ಪ್ರಚಾರದ ರೂಪು ರೇಷೆ ಸಿದ್ಧಪಡಿಸಲು ಭಾನುವಾರ ಮುಖಂಡರು ಸಭೆ ಸೇರಿ ಚರ್ಚಿಸಿದ್ದಾರೆ.  

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಕೋಡಹಳ್ಳಿಯಲ್ಲಿ ಪ್ರಚಾರ ನಿರತ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಮಂಗಲ ಶಿವಕುಮಾರ್‌ ಹಾಗೂ ಮುಖಂಡರು
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಕೋಡಹಳ್ಳಿಯಲ್ಲಿ ಪ್ರಚಾರ ನಿರತ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಮಂಗಲ ಶಿವಕುಮಾರ್‌ ಹಾಗೂ ಮುಖಂಡರು
ನಮ್ಮ ಪ್ರಚಾರ ಬಿರುಸಿನಿಂದ ನಡೆಯುತ್ತಿದೆ. ಬಿಸಿಲಿಲಿದ್ದರೂ ಮತಯಾಚನೆ ನಡೆಸುತ್ತಿದ್ದೇವೆ. ಸಿಎಂ 12ಕ್ಕೆ ಬರಲಿದ್ದಾರೆ. ರಾಷ್ಟ್ರೀಯ ನಾಯಕರು ಪ್ರಚಾರ ನಡೆಸುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ
ಪಿ.ಮರಿಸ್ವಾಮಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ
ನಾವು ಪ್ರಚಾರ ಆರಂಭಿಸಿದ್ದೇವೆ. ಹಬ್ಬದ ಬಳಿಕ ಇನ್ನಷ್ಟು ಬಿರುಸು ಪಡೆಯಲಿದೆ. ಪ್ರಚಾರ ರೂಪುರೇಷೆಗಳ ಬಗ್ಗೆ ಮುಖಂಡರು ಕಾರ್ಯಕರ್ಯರೊಂದಿಗೆ ಚರ್ಚಿಸುತ್ತಿದ್ದೇವೆ
ಎನ್‌.ನಾಗಯ್ಯ ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ
ಬಿರುಸಿನಿಂದ ಪ್ರಚಾರ ನಡೆಸುತ್ತಿದ್ದೇನೆ. ಮಹಾಶಕ್ತಿ ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಮತಯಾಚನೆ ಮಾಡುತ್ತಿದ್ದೇವೆ. ಒಳ್ಳೆಯ ಸ್ಪಂದನೆ ಇದೆ. ರಾಜ್ಯ ನಾಯಕರು ಕೂಡ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ
ಪ್ರೊ. ಮಲ್ಲಿಕಾರ್ಜುನಪ್ಪ ಬಿಜೆಪಿಯ ಲೋಕಸಭಾ ಕ್ಷೇತ್ರ ಸಂಚಾಲಕ
ಬರಲಿದ್ದಾರೆಯೇ ತಾರಾ ಪ್ರಚಾರಕರು?
ಬಿಜೆಪಿ ಮತ್ತು ಕಾಂಗ್ರೆಸ್‌ನ ರಾಜ್ಯ ನಾಯಕರು ಜಿಲ್ಲೆಗೆ ಬಂದು ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ರಾಷ್ಟ್ರೀಯ ಮಟ್ಟದ ತಾರಾ ಪ್ರಚಾರಕರು ಬರಲಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.  ಪ್ರಧಾನಿ ಮೋದಿ ಅವರು ಕ್ಷೇತ್ರಕ್ಕೆ ಬಂದರೆ ಅನುಕೂಲ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ. ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಒಟ್ಟಾಗಿ ಸೇರಿಸಿ ಒಂದು ಕಡೆಗೆ ಭೇಟಿ ನೀಡಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ ಎಂದು ಹೇಳುತ್ತಾರೆ ಮುಖಂಡರು.  ‘ಬಹುತೇಕ ಅವರು ಮೈಸೂರಿಗೆ ಭೇಟಿ ನೀಡುವ ನಿರೀಕ್ಷೆ ಇದೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ’ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಜಿಲ್ಲೆಗೆ ಭೇಟಿ ನೀಡುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದು ಹೇಳುತ್ತಾರೆ ಮುಖಂಡರು. ರಾಹುಲ್‌ ಗಾಂಧಿ ಅವರು ವಯನಾಡು ಕ್ಷೇತ್ರ ಜಿಲ್ಲೆಗೆ ಹತ್ತಿರದಲ್ಲಿರುವುದರಿಂದ ಅವರು ಪ್ರಚಾರಕ್ಕೆ ಬಂದರೂ ಬರಬಹುದು ಎಂದು ಹೇಳುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT