ಚಾಮರಾಜನಗರ: ಇದೇ 26ರಂದು ನಡೆಯಲಿರುವ ಮತದಾನದ ಸಂದರ್ಭದಲ್ಲಿ ಮತಕೇಂದ್ರಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಮತದಾರರು ಮತ ಹಾಕಲು ಅನುಕೂಲ ಕಲ್ಪಿಸುವ ಹಿತದೃಷ್ಠಿಯಿಂದ ಅಂದು ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರದೇಶಗಳಲ್ಲಿ ಸಂತೆ ಮತ್ತು ಎಲ್ಲ ತರಹದ ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶಿಲ್ಪಾ ನಾಗ್ ಆದೇಶಿಸಿದ್ದಾರೆ. ನಿಷೇಧಾಜ್ಞೆ: ಇದೇ 25ರ ಮಧ್ಯರಾತ್ರಿ 12 ಗಂಟೆಯಿಂದ 26ರ ಮಧ್ಯರಾತ್ರಿ 12ಗಂಟೆಯವರೆಗೆ ಜಿಲ್ಲೆಯ 983 ಮತಗಟ್ಟೆಗಳ ಸುತ್ತಲಿನ 100 ಮೀ ಅಂತರದೊಳಗೆ ಕೆಲ ಷರತ್ತುಗಳನ್ನು ವಿಧಿಸಿ ನಿಷೇಧಾಜ್ಞೆ ಜಾರಿಗೊಳಿಸಿ ಶಿಲ್ಪಾ ನಾಗ್ ಆದೇಶ ಹೊರಡಿಸಿದ್ದಾರೆ.