ಮಹದೇಶ್ವರ ಬೆಟ್ಟ (ಚಾಮರಾಜನಗರ): ಇಲ್ಲಿನ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ದೇವಾಲಯದಲ್ಲಿ ಮಹದೇಶ್ವರ ಸ್ವಾಮಿಯ ಶಿವರಾತ್ರಿ ಜಾತ್ರಾ ರಥೋತ್ಸವ ಸೋಮವಾರ ಬೆಳಿಗ್ಗೆ ವಿಜೃಂಭಣೆಯಿಂದ ನಡೆಯಿತು.
ವಿವಿಧ ಊರುಗಳಿಂದ ಬಂದಿದ್ದ ಸಾವಿರಾರು ಭಕ್ತರು ಮಾದಪ್ಪನ ತೇರಿಗೆ ಸಾಕ್ಷಿಯಾದರು.
ಮುಗಿಲು ಮುಟ್ಟಿದ ಉಘೇ ಮಾದಪ್ಪ ಘೋಷ: ರಥೋತ್ಸವದ ಅಂಗವಾಗಿ ಸೋಮವಾರ ಮುಂಜಾನೆಯಿಂದಲೇ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು.
ಸ್ವಾಮಿಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಬಿಳಿ ಆನೆಯ ಮೂರ್ತಿ ಮೇಲೆ ಪ್ರತಿಷ್ಠಾಪಿಸಿ ದೇವಾಲಯದ ಒಳಾಂಗಣದಲ್ಲಿ ಪ್ರದಕ್ಷಿಣೆ ಮಾಡಲಾಯಿತು.
ನಂತರ ಉತ್ಸವ ಮೂರ್ತಿಯನ್ನು ದೇವಾಲಯದ ಹೊರ ಆವರಣಕ್ಕೆ ತಂದು ರಥಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಲಾಯಿತು.
ಬೆಳಿಗ್ಗೆ 10.05 ಸಮಯಕ್ಕೆ ಸರಿಯಾಗಿ ಮಹದೇಶ್ವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲಾಯಿತು. ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರ ನೇತೃತ್ವದಲ್ಲಿ ವಿಧಿ ವಿಧಾನಗಳು ನೆರವೇರಿದವು.
ಸಾವಿರಾರು ಭಕ್ತರ ಉಘೇ ಉಘೇ ಮಹದೇಶ್ವರ, ಮಾದಪ್ಪ ಎಂಬ ಘೋಷಗಳ ನಡುವೆ ತೇರನ್ನು ಎಳೆಯಲಾಯಿತು. ದೇವಾಲಯಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಲಾಯಿತು.
ಹರಕೆ ಹೊತ್ತುಕೊಂಡಿದ್ದ ಭಕ್ತರು ಹಣ್ಣು, ನಾಣ್ಯ ದವಸ ಧಾನ್ಯಗಳನ್ನು ತೇರಿಗೆ ಎಸೆದರು.
ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ 5ನೇ ದಿನ ರಥೋತ್ಸವ ನಡೆದಿದ್ದು, ರಾತ್ರಿ ಕೊಂಡೋತ್ಸವದೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.