ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾಪಾರ್ವತಿ ಜಾತ್ರೆ; ಉತ್ಸವ ಮೂರ್ತಿ ಮೆರವಣಿಗೆ

ಹೂವಿನ ಮಂಟಪದಲ್ಲಿ ಕಂಗೊಳಿಸಿದ ಮೂರ್ತಿ: ಸಾವಿರಾರು ಭಕ್ತರು ಭಾಗಿ
Published 9 ಜುಲೈ 2024, 13:57 IST
Last Updated 9 ಜುಲೈ 2024, 13:57 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ದೇಶಿಪುರ ಗ್ರಾಮದಲ್ಲಿ ಕಸಕಲಪುರದ ಮಹಾಪಾರ್ವತಿ ಅಮ್ಮನ ಕೊಂಡ ಮತ್ತು ಜಾತ್ರಾ ಮಹೋತ್ಸವ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸೋಮವಾರ ರಾತ್ರಿ ಗ್ರಾಮದಿಂದ ಛತ್ರಿ, ಚಾಮರದೊಂದಿಗೆ ಸಕಲ ಮರ್ಯಾದೆಗಳು ಮತ್ತು ಕನ್ನಕನ್ನಡಿ, ನಂದಿಧ್ವಜ, ಮಂಗಳವಾದ್ಯದೊಂದಿಗೆ ಅಮ್ಮನ ಉತ್ಸವಮೂರ್ತಿ ಮತ್ತು ಆಭರಣಗಳೊಡನೆ ಅರಣ್ಯದಲ್ಲಿರುವ ದೇವಾಲಯಕ್ಕೆ ಕೊಂಡೊಯ್ದರು.

ಅಲ್ಲಿ ಅಮ್ಮನ ಮೂರ್ತಿಯನ್ನು ಚಿನ್ನಾಭರಣಗಳು ಮತ್ತು ನಾನಾ ಬಗೆಯ ಪುಷ್ಪಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ನಂತರ ಬಾಯಿಬೀಗ, ಇತರೆ ಹರಕೆಗಳನ್ನು ಸಲ್ಲಿಸಲಾಯಿತು. ಮಂಗಳವಾರ ಬೆಳಗಿನ ಜಾವ 5 ಗಂಟೆಗೆ ಕೊಂಡೋತ್ಸವ, ನಂತರ ಎಡೆಪೂಜೆ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನೆರವೇರಿಸಿದ ನಂತರ ಗ್ರಾಮಸ್ಥರು ಗ್ರಾಮಕ್ಕೆ ವಾಪಸ್ಸಾದರು.

ಅಲಂಕೃತವಾದ ಅಡ್ಡಪಲ್ಲಕ್ಕಿ (ಹೂವಿನ ಮಂಟಪ)ಯಲ್ಲಿ ಅಮ್ಮನವರ ಉತ್ಸವ ಮೂರ್ತಿ ಇರಿಸಿ ಪೂಜೆ ಸಲ್ಲಿಸಲಾಯಿತು. ನಂತರ ನಂದಿಧ್ವಜ, ವೀರಭದ್ರ ಕುಣಿತ, ಮಂಗಳವಾದ್ಯ, ತಮಟೆ ಇತರೆ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಭಕ್ತರು ಅಡ್ಡಪಲ್ಲಕ್ಕಿಗೆ ಹೂವು ಸಮರ್ಪಿಸಿದರು. ಮೆರವಣಿಯಲ್ಲಿ ಯುವಕರು ಕಲಾತಂಡಗಳ ತಾಳಕ್ಕೆ ನೃತ್ಯ ಮಾಡಿ ಸಂಭ್ರಮಿಸಿದರು. ಮನೆ ಮುಂದೆ ರಂಗೋಲಿ ಹಾಕಿ ಉತ್ಸವ ಬರಮಾಡಿಕೊಂಡ ಜನರು ಪೂಜೆ ಸಲ್ಲಿಸುವ ಮೂಲಕ ಭಕ್ತಿ ಮೆರೆದರು.

ಪ್ರತಿ ವರ್ಷದಂತೆ ತಾಲ್ಲೂಕಿನ ನಾನಾ ಕಡೆಗಳಿಂದ ರೈತರು ತಮ್ಮ ಜಾನುವಾರುಗಳನ್ನು ಕರೆ ತಂದು ಪಂಜು ಹಚ್ಚುವ ಮೂಲಕ ಹರಕೆ ಪೂರೈಸಿದರು. ಶಾಸಕ ಎಚ್.ಎಂ.ಗಣೇಶಪ್ರಸಾದ್ ಗ್ರಾಮಕ್ಕೆ ಭೇಟಿ ನೀಡಿ ಮೆರವಣಿಗೆಗೆ ಪೂಜೆ ಸಲ್ಲಿಸಿದರು.

ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದ ಅಂಕದ ಸಮೀಪವಿರುವ ದೇವಾಲಯ ಸಮುಚ್ಛಯದಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಘಟಕದ ವತಿಯಿಂದ ಆಲತ್ತೂರು ಮತ್ತು ಬರಗಿ ಮಾರ್ಗಗಳಲ್ಲಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಗುಂಡ್ಲುಪೇಟೆ ಠಾಣೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT