ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಶಿವರಾತ್ರಿ | ಮಾದಪ್ಪನ ಕ್ಷೇತ್ರದಲ್ಲಿ ಭಕ್ತರ ದಂಡು: ಎಣ್ಣೆ ಮಜ್ಜನ ಸೇವೆ

Last Updated 18 ಫೆಬ್ರುವರಿ 2023, 9:43 IST
ಅಕ್ಷರ ಗಾತ್ರ

ಚಾಮರಾಜನಗರ/ಮಹದೇಶ್ವರ ಬೆಟ್ಟ: ಜಿಲ್ಲೆಯಾದ್ಯಂತ ಜನರು ಶಿವರಾತ್ರಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದು, ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಶನಿವಾರ ಲಕ್ಷಕ್ಕೂ ಹೆಚ್ಚು ಭಕ್ತರು ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು.

ಬೆಟ್ಟದಲ್ಲಿ ಐದು ದಿನಗಳ‌ ಮಹಾಶಿವರಾತ್ರಿ ಜಾತ್ರೆಗೆ ಶುಕ್ರವಾರವೇ ಚಾಲನೆ ನೀಡಲಾಗಿದ್ದು, ಎರಡನೇ ಹಾಗೂ ಶಿವರಾತ್ರಿ ದಿನವಾದ ಶನಿವಾರ ಮಹದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ, ವಿವಿಧ ಅಭಿಷೇಕಗಳು, ವಿಶೇಷ ಪೂಜೆಗಳು ನೆರವೇರಿದವು.

ಪಾದಯಾತ್ರೆಯ ಮೂಲಕ ಬೆಟ್ಟಕ್ಕೆ ಬಂದಿದ್ದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಮಹದೇಶ್ವರ ಸ್ವಾಮಿಯ ದರ್ಶನ ಮಾಡಿ ಹರಕೆ ತೀರಿಸಿದರು.

ಮೂರು ದಿನಗಳ ಅವಧಿಯಲ್ಲಿ ಒಂದೂವರೆ ಲಕ್ಷದಷ್ಟು ಜನರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ವಿವಿಧ ಸೇವೆ: ಜಿಲ್ಲೆ, ಹೊರ ಜಿಲ್ಲೆ ಹಾಗೂ ನೆರೆಯ ತಮಿಳುನಾಡಿನಿಂದ ಬಂದಿರುವ ಭಕ್ತರು ಹುಲಿ ವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪ ಸೇವೆಗಳನ್ನು ನೆರವೇರಿಸಿದರು. ದೇವಾಲಯದ ಹೊರ ಆವರಣದಲ್ಲಿ ಉರುಳು ಸೇವೆ ಮಾಡಿದರು. ಈಡುಕಾಯಿ ಒಡೆದು, ದೂಪ ಹಚ್ಚಿ ಹರಕೆ ತೀರಿಸಿದರು.

ಸೋಮಣ್ಣ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಶನಿವಾರ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಿನಗಳಿಂದ ಪಾದಯಾತ್ರೆಯಲ್ಲಿ ವಿವಿಧ ಜಿಲ್ಲೆಗಳಿಂದ 1.5 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಇವತ್ತು ಲಕ್ಷಕ್ಕೂ ಹೆಚ್ಚು ಮಂದಿ ಬಂದಿದ್ದಾರೆ. ಭಕ್ತರಿಗೆ ಮೂಲಸೌಕರ್ಯ ಗಳನ್ನು‌ ಕಲ್ಪಿಸಲಾಗಿದೆ' ಎಂದರು.

ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಎಸ್ ಪಿ ಪದ್ಮಿನಿ ಸಾಹು, ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಗೀತಾ ಹುಡೇದ, ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು ಇತರರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT