ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ನರೇಗಾ ‘ಸ್ತ್ರೀ’ ಬಲಕ್ಕೆ ಮಹಿಳಾ ಕಾಯಕೋತ್ಸವ

ಜನವರಿ 15ರಿಂದ ಮಾರ್ಚ್‌ 15ರವರೆಗೆ ಕಾರ್ಯಕ್ರಮ, ಜಿಲ್ಲೆಯ 50 ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನ
Last Updated 4 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸುವುದಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ‘ಮಹಿಳಾ ಕಾಯಕೋತ್ಸವ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ.

ಜನವರಿ 15ರಿಂದ ಮಾರ್ಚ್‌ 15ರವರೆಗೆ ಎರಡು ಹಂತಗಳಲ್ಲಿ ಕಾರ್ಯಕ್ರಮ ಅನುಷ್ಠಾನವಾಗುತ್ತಿದ್ದು, ಜಿಲ್ಲೆಯಲ್ಲೂ ಮೊದಲ ಹಂತದ ಕಾರ್ಯಕ್ರಮ ಜಾರಿಯಾಗಿದೆ.

ರಾಜ್ಯದಲ್ಲಿ ನರೇಗಾ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಶೇ 49ರಷ್ಟಿದೆ. ಇದನ್ನು ಶೇ 5ರಷ್ಟು ಹೆಚ್ಚು ಮಾಡುವ ಗುರಿಯನ್ನು ಇಲಾಖೆ ಹೊಂದಿದೆ.

ಜಿಲ್ಲೆಯಲ್ಲಿ ಶೇ 51.77ರಷ್ಟು ಮಹಿಳೆಯರು ನರೇಗಾ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಶೇ 61.58, ಬೀದರ್‌ನಲ್ಲಿ 53.74, ಬೆಳಗಾವಿಯಲ್ಲಿ ಶೇ 51.91ರಷ್ಟು ಕಲ್ಬುರ್ಗಿಯಲ್ಲಿ ಶೇ 51.15ರಷ್ಟು, ರಾಯಚೂರಿನಲ್ಲಿ 50.90ರಷ್ಟು ಮಹಿಳಾ ಪಾಲ್ಗೊಳ್ಳುವಿಕೆ ಇದೆ. ಉಳಿದ ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ 50ಕ್ಕಿಂತ ಕೆಳಗಡೆ ಇದೆ.

ಎರಡು ಹಂತಗಳ ಕಾರ್ಯಕ್ರಮ: ಜನವರಿ 15ರಿಂದ ಫೆಬ್ರುವರಿ 15ರವರೆಗೆ ಮೊದಲ ಹಂತ ಹಾಗೂ ಫೆ.15ರಿಂದ ಮಾರ್ಚ್‌ 15ರವರೆಗೆ ಎರಡನೇ ಹಂತದಲ್ಲಿ ‘ಮಹಿಳಾ ಕಾಯಕೋತ್ಸವ’ ರೂಪಿಸಲಾಗಿದೆ. ನರೇಗಾದಲ್ಲಿ ಮಹಿಳೆಯರ ಭಾಗಿದಾರಿಕೆ ಕಡಿಮೆ ಇರುವ, ಒಂದು ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ನಾಲ್ಕು ಹಾಗೂ ಎರಡನೇ ಹಂತದಲ್ಲಿ ಆರು ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರ ಕಾಯಕ ಉತ್ಸವ ನಡೆಯಲಿದೆ.

ಜಿಲ್ಲೆಯಲ್ಲಿ: ನರೇಗಾ ಅಡಿ ಜಿಲ್ಲೆಯಲ್ಲಿ 2.06 ಲಕ್ಷ ಕುಟುಂಬಗಳಿಗೆ ಉದ್ಯೋಗ ಕಾರ್ಡ್‌ಗಳನ್ನು ವಿತರಿಸಲಾಗಿದೆ. 4,78,275 ಮಂದಿ ನೋಂದಾಯಿತ ಕಾರ್ಮಿಕರಿದ್ದು, ಈ ಪೈಕಿ 2,32,679 ಮಹಿಳೆಯರು. ನೋಂದಣಿ ಮಾಡಿಕೊಂಡಿರುವ ಕಾರ್ಮಿಕರ ಪೈಕಿ ಮಹಿಳೆಯರು ಶೇ 48.64ರಷ್ಟಿದ್ದಾರೆ.

1,23,368 ಸಕ್ರಿಯ ಉದ್ಯೋಗ ಕಾರ್ಡ್‌ಗಳಿದ್ದು, 2,30,236 ಸಕ್ರಿಯ ಕಾರ್ಮಿಕರಿದ್ದಾರೆ. ಈ ಪೈಕಿ 1,16,683 ಮಂದಿ ಸ್ತ್ರೀಯರು (ತಾಲ್ಲೂಕುವಾರು: ಚಾಮರಾಜನಗರ–37,591, ಗುಂಡ್ಲುಪೇಟೆ–22,792, ಕೊಳ್ಳೇಗಾಲ–,13,509 ಯಳಂದೂರು–13,040, ಹನೂರು–29,651).

50 ಪಂಚಾಯಿತಿಗಳಲ್ಲಿ ಅನುಷ್ಠಾನ: ಜಿಲ್ಲಾ ಪಂಚಾಯಿತಿಯು ಐದು ತಾಲ್ಲೂಕುಗಳಲ್ಲಿ ತಲಾ 10 ಪಂಚಾಯಿತಿಗಳಂತೆ 50 ಗ್ರಾಮ ಪಂಚಾಯಿತಿಗಳನ್ನು ಮಹಿಳಾ ಕಾಯಕೋತ್ಸವಕ್ಕಾಗಿ ಆಯ್ಕೆ ಮಾಡಿದೆ. ಮೊದಲ ಹಂತದಲ್ಲಿ, ತಲಾ ನಾಲ್ಕರಂತೆ 20 ಪಂಚಾಯಿತಿಗಳು ಹಾಗೂ ಎರಡನೇ ಹಂತದಲ್ಲಿ ತಲಾ ಆರರಂತೆ 30 ಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.

ಜನವರಿ 15ರಿಂದಲೇ ಕಾರ್ಯಕ್ರಮ ಶುರುವಾಗಿದ್ದು, 20 ಪಂಚಾಯಿತಿಗಳಲ್ಲಿ ಮಹಿಳೆಯರನ್ನು ಸಂಪರ್ಕಿಸಿ, ಭಾಗವಹಿಸುವಿಕೆ ಹೆಚ್ಚಿಸಲು ಪ್ರೇರೇಪಿಸಲಾಗುತ್ತಿದೆ. ಫೆ.15ರಿಂದ ಮಾರ್ಚ್‌ 15ರವರೆಗೆ 30 ಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಕಾಯಕೋತ್ಸವದ ಉದ್ದೇಶ...

ನರೇಗಾ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದರ ಜೊತೆಗೆ ಗ್ರಾಮೀಣ ಭಾಗದಲ್ಲಿ ಮಹಿಳಾ ಪ್ರಧಾನ ಕುಟುಂಬಗಳನ್ನು ಗುರುತಿಸುವುದು, ಕಾಮಗಾರಿ ನಡೆಯುವ ಸ್ಥ‌ಳಗಳನ್ನು ಮಹಿಳೆ ಮತ್ತು ಮಕ್ಕಳ ಸ್ನೇಹಿಯಾಗಿ ಮಾಡುವುದು. ನರೇಗಾ ಅಡಿಯಲ್ಲಿ ಸ್ವ–ಸಹಾಯ ಸಂಘಗಳ ಭಾಗವಹಿಸುವಿಕೆಗೆ ಉತ್ತೇಜನ ನೀಡುವುದು ಮತ್ತು ಮಹಿಳೆಯರಿಗೆ ತರಬೇತಿ ನೀಡುವುದು ಈ ಕಾರ್ಯಕ್ರಮದ ಉದ್ದೇಶ.

ಮನೆ ಮನೆ ಸಮೀಕ್ಷೆ

‘ನಮ್ಮಲ್ಲಿ ನರೇಗಾದಲ್ಲಿ ಮಹಿಳೆಯರ ಭಾಗವಹಿಸುವಿಕೆ ಶೇ 51.77ರಷ್ಟು ಇದೆ. ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲೂ ಮಹಿಳಾ ಕಾಯಕೋತ್ಸವ ನಡೆಸಲಾಗುತ್ತಿದೆ. ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನರೇಗಾ ಕೆಲಸದಲ್ಲಿ ಭಾಗಿಯಾಗಲು ಮಹಿಳೆಯರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೊಯರ್‌ ನಾರಾಯಣ ರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೊದಲ ಒಂದು ತಿಂಗಳಲ್ಲಿ (ಜ.15–ಫೆ.15)20 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮಹಿಳಾ ಪ್ರಧಾನ ಕುಟುಂಬಗಳನ್ನು ಗುರುತಿಸುವುದಕ್ಕಾಗಿ ಸಮೀಕ್ಷೆ ನಡೆಯುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ. ಈವರೆಗೆ 18,665 ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ.

‘ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ಆಗಬೇಕಾದ ಕೆಲಸಗಳ ಬಗ್ಗೆ ಮಾಹಿತಿ ಪಡೆಯುತ್ತೇವೆ. ನರೇಗಾದ ಅಡಿಯಲ್ಲಿ ಆ ಕೆಲಸಗಳನ್ನು ಮಾಡಲಾಗುತ್ತದೆ. ಮಹಿಳಾ ಸ್ನೇಹಿ ವಾತಾವರಣ ನಿರ್ಮಿಸುವುದರ ಜೊತೆಗೆ, ಅವರು ಮಾಡಬಹುದಾದ ಕೆಲಸಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT