ಶನಿವಾರ, ಡಿಸೆಂಬರ್ 3, 2022
19 °C
ಹೂವುಗಳಿಗೆ ಬೇಡಿಕೆ, ಬೆಲೆ ದುಬಾರಿ, ಹಣ್ಣುಗಳು ಯಥಾಸ್ಥಿತಿ

ಕುಸಿದ ಬೀನ್ಸ್‌ ಕ್ಯಾರೆಟ್‌ ಧಾರಣೆ

ಪ‍್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಹಲವು ವಾರಗಳ ನಂತರ ತರಕಾರಿ ಮಾರುಕಟ್ಟೆಯಲ್ಲಿ ಬೀನ್ಸ್‌ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಕ್ಯಾರೆಟ್ ಬೆಲೆಯೂ ಕಡಿಮೆಯಾಗಿದೆ.

ನಗರದ ಹಾಪ್‌ಕಾಮ್ಸ್‌ನಲ್ಲಿ ಸೋಮವಾರ ಬೀನ್ಸ್‌ ಕೆಜಿಗೆ ₹20 ಇತ್ತು. ಕಳೆದವಾರದವರೆಗೂ ₹40 ಇತ್ತು. ತಿಂಗಳ ಹಿಂದೆ ಒಂದು ಕೆಜಿ ಬೀನ್ಸ್‌ ಖರೀದಿಗೆ ₹60 ರಿಂದ ₹80ರವರೆಗೂ ತೆರಬೇರಬೇಕಿತ್ತು. 

ಮಾರುಕಟ್ಟೆಗೆ ಬೀನ್ಸ್‌ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಬೆಲೆ ಕಡಿಮೆಯಾಗಿದೆ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ತಿಳಿಸಿದರು. 

ಕ್ಯಾರೆಟ್‌ ಬೆಲೆಯಲ್ಲೂ ₹10 ಇಳಿಕೆಯಾಗಿದೆ. ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಕೆಜಿಗೆ ₹30 ಇದೆ. ಹೋದವಾರದವರೆಗೂ ₹40 ಇತ್ತು. 

ಉಳಿದಂತೆ ಟೊಮೆಟೊ ಬೆಲೆ (₹15) ಯಥಾಸ್ಥಿತಿ ಮುಂದುವರಿದಿದೆ. ಈರುಳ್ಳಿ ಕೆಜಿಗೆ ₹40 ಇದೆ. ಸೌತೆಕಾಯಿ ₹20ಕ್ಕೆ ಸಿಗುತ್ತಿದೆ. ದಪ್ಪಮೆಣಸಿನಕಾಯಿಯ ದುಬಾರಿ ಬೆಲೆ (₹80) ಈ ವಾರವೂ ಮುಂದುವರಿದಿದೆ. ಗೆಡ್ಡೆಕೋಸು ಬೇಡಿಕೆ ಉಳಿಸಿಕೊಂಡಿದ್ದು, ಕೆಜಿಗೆ ₹60 ಕೊಡಬೇಕು. 

ಚಳಿಗಾಲ ಆರಂಭವಾಗಿರುವುದರಿಂದ ಅವರೆಕಾಯಿ ಹಾಗೂ ತೊಗರಿಕಾಯಿಗೆ ಬೇಡಿಕೆ ಬಂದಿದ್ದು, ಕೆಜಿಗೆ ₹60 ಇದೆ. ಇವೆರಡಕ್ಕೂ ಬೇಡಿಕೆ ಹೆಚ್ಚಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು. ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಹಣ್ಣುಗಳ ಬೆಲೆ ಸ್ಥಿರ: ಹಣ್ಣುಗಳ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ. ಹಾಪ್‌ಕಾಮ್ಸ್‌ನಲ್ಲಿ ಸೇಬಿಗೆ ₹100 ಇದೆ. ಮೂಸಂಬಿ, ಕಿತ್ತಳೆ ₹80ಕ್ಕೆ ಸಿಗುತ್ತಿದೆ. ದಾಳಿಂಬೆಯ ದುಬಾರಿ ಬೆಲೆ (₹160) ಮುಂದುವರಿದಿದೆ. ಕಲ್ಲಂಗಡಿಗೆ ಕೆಜಿಗೆ ₹40 ಇದೆ. ಬಾಳೆಹಣ್ಣುಗಳ ಬೆಲೆಯಲ್ಲೂ ವ್ಯತ್ಯಾಸವಾಗಿಲ್ಲ. 

ಚಿಲ್ಲರೆ ಮಾಂಸ ಮಾರುಕಟ್ಟೆಯಲ್ಲಿ ಚಿಕನ್‌ ಬೆಲೆ ₹160ರಿಂದ ₹190ರವರೆಗೂ ಇದೆ. ಮಟನ್‌ ಧಾರಣೆ ಯಥಾಸ್ಥಿತಿ ಮುಂದುವರಿದಿದೆ. 

ಹೂವಿಗೆ ಬೆಲೆ ಹೆಚ್ಚಳ: ದೀಪಾವಳಿ ಹಬ್ಬದ ಬಳಿಕ ಕುಸಿದಿದ್ದ ಹೂವುಗಳ ಧಾರಣೆ ಈ ವಾರ ಕೊಂಚ ಹೆಚ್ಚಾಗಿದೆ. 

ಚೆಂಡು ಹೂ, ಬಟನ್‌ ಗುಲಾಬಿ, ಸುಗಂಧರಾಜ ಬಿಟ್ಟರೆ ಉಳಿದ ಹೂವುಗಳ ಬೆಲೆ ಹೆಚ್ಚಿದೆ. 

ಚೆನ್ನೀಪುರ ಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕೆಜಿ ಕನಕಾಂಬರಕ್ಕೆ ಸೋಮವಾರ ₹1,200ರಿಂದ ₹1600 ರವರೆಗೆ ಬೆಲೆ ಇತ್ತು. 

ಕಾಕಡಕ್ಕೆ ₹240ರಿಂದ ₹280, ಮರ್ಲೆಗೆ ₹320, ಸೇವಂತಿಗೆ ಕೆಜಿಗೆ ₹60ರಿಂದ ₹80ರರೆಗೆ ಬೆಲೆ ಇದೆ. 

‘ಮದುವೆ, ಗೃಹ ಪ್ರವೇಶಗಳಂತಹ ಶುಭ ಸಮಾರಂಭಗಳು ಸಾಕಷ್ಟು ನಡೆಯುತ್ತಿದ್ದು, ಹೂವುಗಳಿಗೆ ಬೇಡಿಕೆ ಇದೆ. ಹಾಗಾಗಿ, ಬೆಲೆಯಲ್ಲೂ ಕೊಂಚ ಏರಿಕೆ ಕಂಡು ಬಂದಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು