ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಬೀನ್ಸ್‌ ಮತ್ತೆ ತುಟ್ಟಿ, ಹೂವಿನ ಬೆಲೆ ಇಳಿಕೆ

ಗಣೇಶ ಹಬ್ಬದ ಬಳಿಕ ಹೂವಿಗೆ ಬೇಡಿಕೆ ಕುಸಿತ: ಹಣ್ಣು–ಮಾಂಸ ದರ ಸ್ಥಿರ
Last Updated 13 ಸೆಪ್ಟೆಂಬರ್ 2021, 16:35 IST
ಅಕ್ಷರ ಗಾತ್ರ

ಚಾಮರಾಜನಗರ: ಗಣೇಶ ಹಬ್ಬದ ಬಳಿಕ ಮಾರುಕಟ್ಟೆಯಲ್ಲಿ ಹೂವಿನ ಬೇಡಿಕೆ ಕುಸಿದಿದ್ದು, ಧಾರಣೆ ಕಡಿಮೆಯಾಗಿದೆ. ತರಕಾರಿಗಳ ಪೈಕಿ ಬೀನ್ಸ್‌ ಮತ್ತೆ ತುಟ್ಟಿಯಾಗಿದೆ. ಹಣ್ಣು, ಮಾಂಸಗಳ ದರ ಸ್ಥಿರವಾಗಿದೆ.

ಗೌರಿ–ಗಣೇಶ ಹಬ್ಬದ ಸಂದರ್ಭದಲ್ಲಿ ವಿವಿಧ ಹೂವುಗಳಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆಯಲ್ಲೂ ಕೊಂಚ ಹೆಚ್ಚಳವಾಗಿತ್ತು. ಹಬ್ಬ ಕಳೆಯುತ್ತಿದ್ದಂತೆಯೇ ಬೇಡಿಕೆಯೂ ಕಡಿಮೆಯಾಗಿದ್ದು, ಬೆಲೆಯೂ ಇಳಿದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗಲಿದ್ದು, ದಸರಾ ಹಬ್ಬದವರೆಗೂ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವ ಮಲ್ಲಿಗೆಯನ್ನು ಬಿಟ್ಟರೆ, ಉಳಿದ ಹೂವುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬಿಡಿ ಹೂವಿನ ಮಾರುಕಟ್ಟೆಯಲ್ಲಿ 1 ಕೆ.ಜಿ. ಮಲ್ಲಿಗೆ ಬೆಲೆ ಸೋಮವಾರ ₹ 360 ಇತ್ತು. ಉಳಿದಂತೆ, ಕನಕಾಂಬರ ₹ 600, ಕಾಕಡ ₹ 60ರಿಂದ ₹ 80, ಸುಗಂಧರಾಜ 1 ಕೆ.ಜಿ.ಗೆ ₹ 80 ಇತ್ತು.

‘ಮೂರು ದಿನಗಳಿಂದ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿದೆ. ದಸರಾದವರೆಗೂ ಇದೇ ಪರಿಸ್ಥಿತಿ ಇರಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ತರಕಾರಿ ಮಾರುಕಟ್ಟೆಯಲ್ಲಿ ಎರಡು ವಾರಗಳಿಂದ ಬೀನ್ಸ್‌ ಬೆಲೆ ಹೆಚ್ಚಾಗಿದ್ದು, ಈ ವಾರವೂ ಮತ್ತೆ ₹ 10 ತುಟ್ಟಿಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ 1 ಕೆ.ಜಿ.ಗೆ ₹ 50 ಇದ್ದ ಬೀನ್ಸ್‌ ಈ ವಾರ ₹ 60 ಆಗಿದೆ. ಹೊರಗಡೆ ಇನ್ನೂ ಹೆಚ್ಚಿನ ಬೆಲೆ ಇದೆ.

‘ಮಳೆಯ ವಾತಾವರಣ ಇರುವುದರಿಂದ ಬೀ‌ನ್ಸ್‌ ಕಡಿಮೆ ಪ್ರಮಾಣದಲ್ಲಿ ಆವಕವಾಗುತ್ತಿದೆ. ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆಯಲ್ಲಿ ಹೆಚ್ಚಳವಾಗಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ತಿಳಿಸಿದರು.

ಹಲವು ತಿಂಗಳುಗಳಿಂದ ಸ್ಥಿರವಾಗಿದ್ದ ಶುಂಠಿಯ ಬೆಲೆ 1 ಕೆ.ಜಿ.ಗೆ ₹ 20ರಷ್ಟು ಇಳಿದಿದೆ. ಕಳೆದ ವಾರದವರೆಗೂ ಹಾಪ್‌ಕಾಮ್ಸ್‌ನಲ್ಲಿ 1 ಕೆ.ಜಿ. ಶುಂಠಿ ಬೆಲೆ ₹ 60 ಇತ್ತು. ಅದೀಗ ₹ 40ಕ್ಕೆ ಇಳಿದಿದೆ.

ಉಳಿದಂತೆ ಟೊಮೆಟೊ (₹ 20), ಈರುಳ್ಳಿ (₹ 30), ಮೂಲಂಗಿ (₹ 20), ಕ್ಯಾರೆಟ್‌ (₹ 40) ಸೇರಿ ಇತರ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಹಣ್ಣುಗಳ ಪೈಕಿ ಸೇಬಿನ ಬೆಲೆ 1 ಕೆ.ಜಿ.ಗೆ ₹ 100 ಆಗಿದೆ. ದ್ರಾಕ್ಷಿ (₹ 120), ದಾಳಿಂಬೆ (₹ 100–₹ 120), ಮೂಸಂಬಿ (₹ 60), ಕಿತ್ತಳೆ (₹ 80) ಬೆಲೆ ಯಥಾಸ್ಥಿತಿ ಮುಂದುವರೆದಿದೆ.

ಮಾಂಸದ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾಂಸದ ದರಗಳಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಮಟನ್‌ ಕೆ.ಜಿ.ಗೆ ₹ 560 ಇದ್ದರೆ, ಚಿಕನ್‌ ₹ 200–₹ 220ರವರೆಗೆ ಧಾರಣೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT