ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ದ್ರಾಕ್ಷಿಯ ಭರಾಟೆ: ಕಲ್ಲಂಗಡಿಗೂ ಗ್ರಾಹಕರಿಂದ ಹೆಚ್ಚಿನ ಬೇಡಿಕೆ

ತರಕಾರಿ, ಹೂವುಗಳ ಧಾರಣೆ ಯಥಾಸ್ಥಿತಿ
Last Updated 23 ಫೆಬ್ರುವರಿ 2022, 4:19 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಮಾರುಕಟ್ಟೆಯಲ್ಲಿ ಈಗ ದ್ರಾಕ್ಷಿಯ ಭರಾಟೆ.ಹಣ್ಣಿನ ಅಂಗಡಿಗಳಲ್ಲಿ, ತಳ್ಳುಗಾಡಿಗಳಲ್ಲಿ ದ್ರಾಕ್ಷಿ ಭಾರಿ ಪ್ರಮಾಣದಲ್ಲಿ ಕಾಣಿಸುತ್ತಿದೆ.

ದ್ರಾಕ್ಷಿ ಋತು ಆರಂಭಗೊಂಡು ವಾರಗಳು ಉರುಳಿದ್ದರೂ, ಈಗ ಮಾರುಕಟ್ಟೆಗೆ ಹೆಚ್ಚು ಆವಕವಾಗುತ್ತಿದೆ. ಹೀಗಾಗಿ ಬೆಲೆಯೂ ಕಡಿಮೆಯಾಗಿದೆ.

ಹಾಪ್‌ಕಾಮ್ಸ್‌ ಸೇರಿದಂತೆ ಎಲ್ಲ ಕಡೆಗಳಲ್ಲಿ ಸಾಮಾನ್ಯ ದ್ರಾಕ್ಷಿಗೆ ಕೆಜಿಗೆ ₹80 ಇದೆ. ಹಾಪ್‌ಕಾಮ್ಸ್‌ನಲ್ಲಿ ಕಪ್ಪು ದ್ರಾಕ್ಷಿ ಲಭ್ಯವಿದ್ದು, ಕೆಜಿಗೆ ₹140 ಇದೆ.

ತಳ್ಳುಗಾಡಿಗಳಲ್ಲಿ ಮಾರಾಟ ಮಾಡುವ ವ್ಯಾಪಾರಿಗಳೂ ಇನ್ನೂ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.ದ್ರಾಕ್ಷಿ ಗೊಂಚಲುಗಳ ರಾಶಿಯನ್ನು ಕಂಡು ಆಕರ್ಷಿತರಾಗುವ ಗ್ರಾಹಕರು, ಖರೀದಿಯಲ್ಲಿ ತೊಡಗುತ್ತಿದ್ದಾರೆ.

‘ಈಗಿನ ದ್ರಾಕ್ಷಿ ಹೆಚ್ಚು ಸಿಹಿಯಾಗಿದ್ದು, ಗ್ರಾಹಕರು ಸಾಮಾನ್ಯವಾಗಿ ಅರ್ಧ, ಒಂದು ಕೆಜಿ ಖರೀದಿಸುತ್ತಿದ್ದಾರೆ‘ ಎಂದು ಹೇಳುತ್ತಾರೆ ವ್ಯಾಪಾರಿಗಳು.

ಕಲ್ಲಂಗಡಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆ ಬರುತ್ತಿದ್ದು, ಕೆಜಿಗೆ ₹20ರಿಂದ ₹25 ಬೆಲೆ ಇದೆ.

ಗಾಢ ಹಸಿರು ಬಣ್ಣ ಹಾಗೂ ಗಾತ್ರದಲ್ಲಿ ಚಿಕ್ಕದಾಗಿರುವ ಕಲ್ಲಂಗಡಿಗೆ ಹಾಪ್‌ಕಾಮ್ಸ್‌ನಲ್ಲಿ ₹20 ಇದೆ. ಹಸಿರು ಬಣ್ಣದ ನಾಮ್‌ಧಾರಿ ಕಲ್ಲಂಗಡಿಗೆ ಕೆಜಿಗೆ ₹25 ಇದೆ.

‘ಬೇಸಿಗೆ ಸಮಯವಾಗಿರುವುದರಿಂದ ಎರಡೂ ರೀತಿಯ ಕಲ್ಲಂಗಡಿಗೂ ಗ್ರಾಹಕರಿಂದ ಬೇಡಿಕೆ ಇದೆ’ ಎಂದು ಹೇಳುತ್ತಾರೆ ಹಾಪ್‌ಕಾಮ್ಸ್‌ ವ್ಯಾಪಾರಿ ಮಧು.

ಧಾರಣೆ ಸ್ಥಿರ: ಹಣ್ಣುಗಳ ಪೈಕಿ ಕಿತ್ತಳೆ, ಮೂಸಂಬಿ ಬಿಟ್ಟು ಇತರ ಹಣ್ಣುಗಳ ಬೆಲೆ ಸ್ಥಿರವಾಗಿದೆ.

ಹಾಪ್‌ಕಾಮ್ಸ್‌ನಲ್ಲಿ ಸೇಬಿನ ಬೆಲೆ ಕೆಜಿಗೆ ₹140 ಮುಂದುವರಿದಿದೆ. ದಾಳಿಂಬೆಗೂ ಇಷ್ಟೇ ಬೆಲೆ ಇದೆ. ಉಳಿದಂತೆ ಏಲಕ್ಕಿ ಬಾಳೆ (₹40), ಪಪ್ಪಾಯಿ (₹25), ಸಪೋಟಾ (₹40) ಬೆಲೆ ಇದೆ.

ಈರುಳ್ಳಿ ಕೊಂಚ ತುಟ್ಟಿ: ತರಕಾರಿಗಳ ಪೈಕಿ ಈರುಳ್ಳಿಯ ಬೆಲೆ ಈ ವಾರ ಕೆಜಿಗೆ ₹5 ಜಾಸ್ತಿಯಾಗಿದೆ.

ಹಾಪ್‌ಕಾಮ್ಸ್‌ನಲ್ಲಿ ಕಳೆದವಾರದವರೆಗೆ ಕೆಜಿಗೆ 35 ಇತ್ತು. ಸೋಮವಾರ ₹40ಕ್ಕೆ ಏರಿದೆ. ಕೆಜಿ ಬೆಳ್ಳುಳ್ಳಿಗೆ ₹20 ಹೆಚ್ಚಾಗಿ ₹60ಕ್ಕೆ ತಲುಪಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಬೀಟ್‌ರೂಟ್‌ ಹಾಗೂ ಬದನೆಕಾಯಿಗಳ ಬೆಲೆ ₹10 ಕಡಿಮೆಯಾಗಿದೆ.

ಉಳಿದಂತೆ ಟೊಮೆಟೊ (₹10), ಕ್ಯಾರೆಟ್‌ (₹60), ಬೀನ್ಸ್‌ (₹40), ಆಲೂಗಡ್ಡೆ (₹30) ಸೇರಿದಂತೆ ಇತರ ತರಕಾರಿಗಳ ಧಾರಣೆ ಯಥಾಸ್ಥಿತಿ ಮುಂದುವರಿದಿದೆ.

ಅವರೆಕಾಯಿ ಸೀಸನ್‌ ಮುಗಿಯುತ್ತಾ ಬಂದಿದ್ದು, ಈಗ ಮಾರುಕಟ್ಟೆಗೆ ಹೆಚ್ಚು ಬರುತ್ತಿಲ್ಲ. ಹಸಿ ಬಟಾಣಿ, ತೊಗರಿಕಾಯಿಗಳಿಗೆ ಈಗಲೂ ಬೇಡಿಕೆ ಕಂಡು ಬರುತ್ತಿದೆ.

ಚಿಲ್ಲರೆ ಮಾಂಸ ಮಾರುಕಟ್ಟೆಯಲ್ಲಿ ಚಿಕನ್, ಮಟನ್‌ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಕಾಕಡ ಏರಿಕೆ, ಚೆಂಡು ಹೂವು ಇಳಿಕೆ
ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಈ ವಾರ ಬಹುತೇಕ ಎಲ್ಲ ಹೂವುಗಳ ಬೆಲೆ ಸ್ಥಿರವಾಗಿದೆ. ಕಾಕಡ ಹಾಗೂ ಚೆಂಡುಹೂಗಳ ಬೆಲೆಯಲ್ಲಿ ಏರಿಳಿತ ಕಂಡು ಬಂದಿದೆ. ಕಳೆದ ವಾರಕ್ಕೆ ಹೋಲಿಸಿದರೆ ಕಾಕಡ ಬೆಲೆ ಕೆಜಿಗೆ ₹80 ಹೆಚ್ಚಾಗಿದೆ. ಸೋಮವಾರ ₹280 ಇತ್ತು.

ಕಳೆದ ವಾರ ಕೆಜಿಗೆ ₹50ರಿಂದ ₹60ರಷ್ಟಿದ್ದ ಚೆಂಡು ಹೂವಿನ ಬೆಲೆ ₹20ರಿಂದ ₹30ಕ್ಕೆ ಕುಸಿದಿದೆ.

’ಶಿವರಾತ್ರಿ ಹಬ್ಬಕ್ಕೆ ಇನ್ನು ಒಂದು ವಾರ ಇರುವುದರಿಂದ ಮುಂದಿನ ವಾರ ಹೂವಿನ ಧಾರಣೆಯಲ್ಲಿ ಏರಿಕೆ ಕಂಡು ಬರಬಹುದು‘ ಎಂದು ಬಿಡಿಹೂವಿನ ವ್ಯಾಪಾರಿ ರವಿ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT