ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನ ಧಾರಣೆ ಏರುಮುಖ; ಕಲ್ಲಂಗಡಿ ದಾಂಗುಡಿ

ಟೊಮೆಟೊ ಅಗ್ಗ, ದಪ್ಪ ಮೆಣಸಿನಕಾಯಿ ತುಟ್ಟಿ, ದ್ರಾಕ್ಷಿ ಬೆಲೆ ಇಳಿಕೆ
Last Updated 14 ಫೆಬ್ರುವರಿ 2022, 17:00 IST
ಅಕ್ಷರ ಗಾತ್ರ

ಚಾಮರಾಜನಗರ: ಶಿವರಾತ್ರಿ ಹತ್ತಿರವಾಗುತ್ತಿದ್ದಂತೆಯೇ ಹೂವುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬಿಡಿ ಹೂವಿನ ಮಾರುಕಟ್ಟೆಯಲ್ಲಿ ವಿವಿಧ ಹೂವುಗಳ ದರದಲ್ಲಿ ಏರಿಕೆ ಕಂಡು ಬಂದಿದೆ.

ವಾರದಿಂದೀಚೆಗೆ ಶುಭ ಸಮಾರಂಭಗಳ ಸಂಖ್ಯೆಯೂ ಹೆಚ್ಚಾಗಿದ್ದು, ಹೂವಿಗೆ ಬೇಡಿಕೆ ಸೃಷ್ಟಿಯಾಗಿದೆ. ಬೇಡಿಕೆ ಇರುವ ದಿನಗಳಲ್ಲಿ ಕುಸುಮಗಳ ಬೆಲೆ ಹೆಚ್ಚಾಗುತ್ತದೆ. ಗ್ರಾಹಕರು ಕಡಿಮೆಯಾದಂತೆ ಬೆಲೆ ಇಳಿಕೆಯಾಗುತ್ತಿದೆ. ವಾರದಿಂದ ನಿಧಾನವಾಗಿ ಧಾರಣೆಯಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

‘ಎರಡು ದಿನದಿಂದ ಹೂವಿಗೆ ಬೇಡಿಕೆ ಹೆಚ್ಚಿತ್ತು. ಬೆಲೆಯೂ ಜಾಸ್ತಿ ಇತ್ತು. ಸೋಮವಾರ ಸ್ವಲ್ಪ ಕಡಿಮೆಯಾಗಿದೆ’ ಎಂದು ಚೆನ್ನೀಪುರ ಮೋಳೆಯ ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ವಾರ ಕನಕಾಂಬರ ಕೆ.ಜಿ.ಗೆ ₹ 400 ಇತ್ತು. ಈ ವಾರ ₹ 200 ಹೆಚ್ಚಾಗಿ ₹ 600ಕ್ಕೆ ತಲುಪಿದೆ. ಕಾಕಡ, ಸೇವಂತಿಗೆ ಹೂವುಗಳ ಬೆಲೆ ₹ 200ಕ್ಕೇರಿದೆ.

ಕಳೆದ ವಾರದವರೆಗೂ ಕೆ.ಜಿ.ಗೆ ₹ 20–₹ 30ರ ಆಸುಪಾಸಿನಲ್ಲಿದ್ದ ಚೆಂಡು ಹೂವು ಕೂಡ ಈ ವಾರ ಬೆಲೆ ಹೆಚ್ಚಿಸಿಕೊಂಡಿದೆ. ವ್ಯಾಪಾರಿಗಳು ಕೆ.ಜಿ.ಗೆ ₹ 50–₹ 60ರ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಬಟನ್‌ ಗುಲಾಬಿಗೂ ಬೇಡಿಕೆ ಸೃಷ್ಟಿಯಾಗಿದ್ದು ಕೆ.ಜಿ.ಗೆ ₹ 160 ಇದೆ.

ಟೊಮೆಟೊ ಇಳಿಕೆ: ತರಕಾರಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಈ ವಾರ ಮತ್ತೆ ಇಳಿದಿದೆ. ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ. ಟೊಮೆಟೊಗೆ ₹ 10 ಇದೆ. ಕಳೆದ ವಾರ ₹ 15 ಇತ್ತು.

ಬೀಟ್‌ರೂಟ್‌ ಬೆಲೆ ಕೆ.ಜಿ.ಗೆ ₹ 20 ಕಡಿಮೆಯಾಗಿ ₹ 40ಕ್ಕಿಳಿದಿದೆ. ಗೆಡ್ಡೆಕೋಸು ₹ 10 ಅಗ್ಗವಾಗಿದೆ. ₹ 20ಕ್ಕೆ ಒಂದು ಕೆ.ಜಿ. ಸಿಗುತ್ತಿದೆ. ₹ 50 ಇದ್ದ ಬೆಂಡೆಕಾಯಿ ಧಾರಣೆ ₹ 40ಕ್ಕೆ ಕುಸಿದಿದೆ.

ದಪ್ಪಮೆಣಸಿನಕಾಯಿ ಬೆಲೆ ₹ 20 ಹೆಚ್ಚಾಗಿದೆ. ಕಳೆದ ವಾರ ₹ 60 ಇತ್ತು. ಈ ವಾರ ₹ 80ಕ್ಕೇರಿದೆ. ತೊಗರಿಕಾಯಿ ಬೆಲೆ ₹ 10 ಜಾಸ್ತಿಯಾಗಿ ₹ 60 ಆಗಿದೆ.

ಮಾಂಸ ಮಾರುಕಟ್ಟೆಯಲ್ಲಿ ಚಿಕನ್‌, ಮಟನ್‌ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಕಲ್ಲಂಗಡಿ ದಾಂಗುಡಿ

ಹಣ್ಣುಗಳ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಂಗಡಿ ಬರುವುದಕ್ಕೆ ಆರಂಭವಾಗಿದೆ.

ಗಾಢ ಹಸಿರು ಬಣ್ಣ, ಸಣ್ಣ ಗಾತ್ರದ ಕಲ್ಲಂಗಡಿಯು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಕೆ.ಜಿ.ಗೆ ₹ 20ರಂತೆ ಮಾರಾಟವಾಗುತ್ತಿದೆ. ಸ್ಥಳೀಯ ರೈತರು ಪೂರೈಸುತ್ತಿದ್ದಾರೆ. ಹೊರಗಡೆಯಿಂದಲೂ ಬರುತ್ತಿದೆ.

ಹೆದ್ದಾರಿ ಬದಿಗಳಲ್ಲಿ ಹಣ್ಣುಗಳ ಅಂಗಡಿಗಳಲ್ಲಿ ಕಲ್ಲಂಗಡಿ ಹಣ್ಣುಗಳ ಮಾರಾಟದ ಭರಾಟೆ ಜೋರಾಗಿದೆ.

ಉಳಿದಂತೆ ದ್ರಾಕ್ಷಿಯು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗುತ್ತಿದ್ದು, ಬೆಲೆಯೂ ಕಡಿಮೆಯಾಗಿದೆ. ತಳ್ಳುಗಾಡಿಗಳಲ್ಲೂ ವ್ಯಾಪಾರಿಗಳು ದ್ರಾಕ್ಷಿ ಗೊಂಚಲುಗಳನ್ನು ರಾಶಿ ಹಾಕಿ ಮಾರಾಟದಲ್ಲಿ ತೊಡಗಿದ್ದಾರೆ.

ಹಾಪ್‌ಕಾಮ್ಸ್‌ನಲ್ಲಿ ಸಾಮಾನ್ಯ ದ್ರಾಕ್ಷಿಯ ಬೆಲೆ ಕೆ.ಜಿ.ಗೆ ₹ 80 ಇದೆ. ಸೀಡ್‌ಲೆಸ್‌ ಕಪ್ಪು ದ್ರಾಕ್ಷಿಯ ಬೆಲೆ ಕೂಡ ಇಳಿಕೆಯಾಗಿದ್ದು, ಕೆ.ಜಿ.ಗೆ ₹ 140ಕ್ಕೆ ಸಿಗುತ್ತಿದೆ.

ಸೇಬು ಹಾಗೂ ದಾಳಿಂಬೆಗಳ ದುಬಾರಿ ದರ ಮುಂದುವರಿದಿದ್ದು, ಕೆ.ಜಿ.ಗೆ ₹ 140 ಇದೆ. ₹ 80 ಇದ್ದ ಕಿತ್ತಳೆ, ಮೂಸಂಬಿ ₹ 70ಕ್ಕೆ ಸಿಗುತ್ತಿವೆ.ಸಪೋಟಾ ಬೆಲೆ ಕೆ.ಜಿ.ಗೆ ₹ 20 ಕಡಿಮೆಯಾಗಿ ₹ 40 ಆಗಿದೆ. ಬಾಳೆಹಣ್ಣುಗಳ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT