ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮಾಸ್ಕ್‌ ಧರಿಸದಿದ್ದರೆ ದಂಡ ಖಚಿತ

ಜಿಲ್ಲಾಡಳಿತ, ಪೊಲೀಸ್‌ ಇಲಾಖೆಯಿಂದ ಮಾಸ್ಕ್‌ ಜಾಗೃತಿ ಅಭಿಯಾನ
Last Updated 4 ಜನವರಿ 2022, 14:56 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ನ 3ನೇ ಅಲೆ ತಡೆಯುವ ಉದ್ದೇಶದಿಂದ ಜಿಲ್ಲಾಡಳಿತವು ಜನರಲ್ಲಿ ಕೋವಿಡ್‌ ನಿಯಮ ಪಾಲನೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದೆ.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಮಂಗಳವಾರ, ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ, ಸುರಕ್ಷಿತ ಅಂತರ ಕಾಪಾಡುವ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ಎಲ್ಲರ ಸಹಕಾರ ಬೇಕು: ನಗರದ ಭುವನೇಶ್ವರಿ ವೃತ್ತದಲ್ಲಿ ಮಾಸ್ಕ್‌ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ’ರಾಜ್ಯದ ಬೇರೆ ಜಿಲ್ಲೆಯಲ್ಲಿ ಕೋವಿಡ್‌ನ ಮೂರನೇ ಅಲೆ, ಓಮೈಕ್ರಾನ್‌ ವೈರಸ್‌ ವೇಗವಾಗಿ ಹರಡುತ್ತಿದೆ. ಇದರ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಕೋವಿಡ್‌ ನಿಯಮ ಪಾಲಿಸುವುದರ ಮೂಲಕ ಜನರು ಕೂಡ ಸಹಕಾರ ನೀಡಬೇಕು’ ಎಂದರು.

‘ಕೋವಿಡ್ ಲಸಿಕಾಕರಣ ಉತ್ತಮ ಪ್ರಗತಿ ಸಾಧಿಸಿದೆ. ಮೊದಲ ಡೋಸ್ ನೀಡಿಕೆಯಲ್ಲಿ ಶೇ 98ರಷ್ಟು ಗುರಿ ಸಾಧಿಸಿದೆ. 2ನೇ ಡೋಸ್ ನೀಡಿಕೆಯಲ್ಲಿ ಶೇ 77ರಷ್ಟು ಪ್ರಗತಿಯಾಗಿದ್ದು, ಕೆಲವೇ ದಿನಗಳಲ್ಲಿ ನಿಗದಿತ ಸಾಧನೆಯಾಗಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ 15ರಿಂದ 18ರ ವಯಸ್ಸಿನ ಶಾಲಾ ಮಕ್ಕಳಿಗೂ ಲಸಿಕೆ ನೀಡಲಾಗುತ್ತಿದೆ. ಮೂರನೇ ಅಲೆ ಹರಡದಂತೆ ಎಲ್ಲರೂ ಎಚ್ಚರದಿಂದ ಇರಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ದಂಡ ಖಚಿತ:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಮಾತನಾಡಿ ‘ಎರಡು ತಿಂಗಳಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಕಡಿಮೆಯಾಗಿದ್ದರಿಂದ ಜನರು ಮಾಸ್ಕ್ ಧರಿಸುವುದನ್ನೇ ಮರೆತಿದ್ದಾರೆ. ಮುಂದಿನ ದಿನಗಳಲ್ಲಿ ಸಂಕ್ರಾಂತಿ ಸೇರಿದಂತೆ ಇತರ ಹಬ್ಬ‌ಗಳು ಇರುವುದರಿಂದ ಜನರು ಕೋವಿಡ್ ತಡೆಗಾಗಿ ಸುರಕ್ಷತಾ ಕ್ರಮ ಪಾಲಿಸಬೇಕು. ಜಿಲ್ಲೆಯಲ್ಲಿ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ಮಾಸ್ಕ್ ಧರಿಸದವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕು’ ಎಂದರು.

ಬಳಿಕ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಎಲ್ಲ ಅಧಿಕಾರಿಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ವಿವಿಧ ಅಂಗಡಿಗಳಿಗೆ ತೆರಳಿ ಅಂಗಡಿ ಮಾಲೀಕರು ಹಾಗೂ ಜನರಿಗೆ ಮಾಸ್ಕ್ ಧರಿಸುವಂತೆ ಅರಿವು ಮೂಡಿಸಿದರು. ಚಾಮರಾಜೇಶ್ವರ ದೇವಾಲಯಕ್ಕೂ ತೆರಳಿ ಅಲ್ಲಿ ಸೇರಿದ್ದ ಜನರಿಗೂ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದರು.

‘3ನೇ ಅಲೆ ಎದುರಿಸಲು ಸಕಲ ಸಿದ್ಧತೆ’

ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ‘ಜಿಲ್ಲೆಯಲ್ಲಿ ಕೋವಿಡ್‌ನ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಪ್ರತಿ ದಿನವೂ 2,200 ಕೋವಿಡ್‌ ಪರೀಕ್ಷೆ ನಡೆಸಲು ಸರ್ಕಾರ ಸೂಚಿಸಿದೆ. ನಮಗೆ ಇದುವರೆಗೆ 800 ಪರೀಕ್ಷೆಗಳ ಗುರಿ ಇತ್ತು. ನಮ್ಮಲ್ಲಿ ಈಗ 1300–1400 ಪರೀಕ್ಷೆ ನಡೆಯುತ್ತಿವೆ. ಸರ್ಕಾರ ನಿಗದಿ ಪಡಿಸಿದ ಗುರಿಯಷ್ಟು ಮಾಡಲು ಕ್ರಮವಹಿಸಲಾಗುವುದು’ ಎಂದರು.

ಸಂಪರ್ಕ ಪತ್ತೆ: ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಪತ್ತೆ ಹಚ್ಚುವುದರಲ್ಲಿ ಇಡೀ ರಾಜ್ಯದಲ್ಲಿ ನಾವು ಮುಂದೆ ಇದ್ದೇವೆ. ಸದ್ಯ ಹೆಚ್ಚು ಪ್ರಕರಣ ಇಲ್ಲ. ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ಸಾಕಷ್ಟು ಆಮ್ಲಜನಕ ಉತ್ಪಾದಕ ಘಟಕಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 6,000 ಲೀಟರ್‌ ಆಮ್ಲಜನಕ ಸಂಗ್ರಹ ಸಾಮರ್ಥ್ಯದ ಘಟಕದ ಜೊತೆಗೆ 20 ಸಾವಿರ ಲೀಟರ್‌ ಸಂಗ್ರಹ ಸಾಮರ್ಥ್ಯದ ಹೆಚ್ಚುವರಿ ಘಟಕವೂ ಇದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT