ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆ: ಶಾಸಕ ಎನ್ ಮಹೇಶ್ ಭೇಟಿ, ಸಾಂತ್ವನ

ಕಾಂಗ್ರೆಸ್‌ ಮುಖಂಡರಿಂದಲೂ ಭೇಟಿ, ವೈಯಕ್ತಿಕ ಧನ ಸಹಾಯ
Last Updated 3 ಜೂನ್ 2021, 17:11 IST
ಅಕ್ಷರ ಗಾತ್ರ

ಚಾಮರಾಜನಗರ: ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡತಾಲ್ಲೂಕಿನ ಎಚ್.ಮೂಕಹಳ್ಳಿ ಗ್ರಾಮದ ರೈತ ಮಹಾದೇವಪ್ಪ ಅವರ ಮನೆಗೆ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್‌.ಮಹೇಶ್‌ ಅವರು ಗುರುವಾರ ಭೇಟಿ ನೀಡಿ, ರೈತನ ಹಿರಿಯ ಮಗಳು ಜ್ಯೋತಿ ಹಾಗೂ ಅಳಿಯ ಸುರೇಶ್‌ ಅವರಿಗೆ ಸಾಂತ್ವನ ಹೇಳಿದರು.

ಜ್ಯೋತಿ ಅವರಿಗೆ ವೈಯಕ್ತಿಕವಾಗಿ ಪರಿಹಾರ ನೀಡಿ, ಧೈರ್ಯ ತುಂಬಿದರು.

'ಕೋವಿಡ್‌ ಬಂದರೆ ನೆರೆಹೊರೆ ಜನರು ಸಂತ್ರಸ್ತರೊಡನೆ ಪ್ರೀತಿ ವಿಶ್ವಾಸದಿಂದ ಮಾತನಾಡಿ,ನೆರೆ ಹೊರೆಯವರಿಗೆ ಅಗತ್ಯ ಇರುವ ನೆರವು ಕಲ್ಪಿಸಲು ಮುಂದಾಗಬೇಕು. ಕೋವಿಡ್-19 ತಾತ್ಕಾಲಿಕವಾಗಿ ಇದ್ದು, ಔಷಧೋಪಚಾರ ಸಿಗುತ್ತಿದ್ದಂತೆಯೇ ಇಲ್ಲವಾಗುತ್ತದೆ. ಹಾಗಾಗಿ, ಗ್ರಾಮೀಣ ಭಾಗದ ಜನರು ವೈರಾಣು ಸಮಸ್ಯೆಗೆ ಹೆದರಬಾರದು. ಭಯದಿಂದ ಆತ್ಮಹತ್ಯೆಮಾಡಿಕೊಳ್ಳುವ ದಿಸೆಯಲ್ಲಿ ಚಿಂತಿಸಬಾರದು' ಎಂದರು.

ಹಿರಿಯ ಮಗಳು ಗ್ರಾಮದಲ್ಲಿ ಇರಲು ಒಲವು ವ್ಯಕ್ತಪಡಿಸಿದರೆ, ಮನೆ ನಿರ್ಮಿಸಿಕೊಡಲಾಗುವುದು ಹಾಗೂ ವ್ಯವಸಾಯದ ಭೂಮಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಿ ಕೊಡುವ ಭರವಸೆ ನೀಡಿದರು.

ಕಾಂಗ್ರೆಸ್‌ ಮುಖಂಡರಿಂದ ಸಾಂತ್ವನ, ನೆರವು:ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಹಾಗೂ ಮುಖಂಡ ಕೆ.ಪಿ.ಸದಾಶಿವಮೂರ್ತಿ ಅವರು ಗುರುವಾರ ಮಹಾದೇವಪ್ಪ ಅವರ ಮನೆಗೆ ಭೇಟಿ ನೀಡಿ, ಹಿರಿಯ ಮಗಳು ಜ್ಯೋತಿ ಹಾಗೂ ಆಕೆಯ ಪತಿ ಸುರೇಶ್‌ಗೆ ಸಾಂತ್ವನ ಹೇಳಿ, ವೈಯಕ್ತಿಕ ಧನಸಹಾಯ ಮಾಡಿದರು.

ಈ ವೇಳೆ ಮಾತನಾಡಿದ ಕೆ.ಪಿ.ಸದಾಶಿವಮೂರ್ತಿ ಅವರು, ‘ನನ್ನ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಒಳಪಡುವ ಎಚ್.ಮೂಕಳ್ಳಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೋವು ತರುವಂತಹದ್ದು, ಈ ಘಟನೆಯಿಂದ ಮಾನವ ಕುಲವೇ ತಲೆತಗ್ಗಿಸುವಂತಾಗಿದೆ. ಕೋವಿಡ್‌ಗೆ ಯಾರೊಬ್ಬರೂ ಹೆದರಬಾರದು. ಸೋಂಕಿತರನ್ನು ಕೀಳಾಗಿ ಕಾಣದೆ ಅವರಿಗೆ ಧೈರ್ಯ ತುಂಬಬೇಕು. ಅವರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಪ್ರದರ್ಶಿಸಬೇಕು’ ಎಂದು ಹೇಳಿದರು.

ಪಿ.ಮರಿಸ್ವಾಮಿ ಅವರು ಮಾತನಾಡಿ, ಆತ್ಮಹತ್ಯೆಗೆ ಶರಣಾದ ಮಹಾದೇವಪ್ಪ ಅವರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಎಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆರೆಹಳ್ಳಿ ನವೀನ್, ಮುಖಂಡ ಬೂದಂಬಳ್ಳಿ ಶಂಕರ್, ಗ್ರಾಮದ ಮುಖಂಡರಾದ ಪ್ರಕಾಶ್, ನಂಜುಂಡಸ್ವಾಮಿ, ಮಹದೇವಸ್ವಾಮಿ ಇದ್ದರು.

ಇನ್ನೂ ತಿಳಿದು ಬಾರದ ಕಾರಣ

ಈ ಮಧ್ಯೆ, ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆದರೆ, ಆತ್ಮಹತ್ಯೆಗೆ ಏನು ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಬುಧವಾರ ಸಂಜೆ ಮರಣೋತ್ತರ ಪರೀಕ್ಷೆಗೂ ಮೊದಲು ಎಲ್ಲ ನಾಲ್ಕು ಜನರ ಗಂಟಲು ದ್ರವ ಸಂಗ್ರಹಿಸಿ ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು. ಎಲ್ಲರ ವರದಿಯೂ ನೆಗೆಟಿವ್‌ ಬಂದಿತ್ತು. ಆ ಬಳಿಕ ಮರಣೋತ್ತರ ಪ‍ರೀಕ್ಷೆ ನಡೆಸಿ ಶವಗಳಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ರಾತ್ರಿಯೇ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೋವಿಡ್‌ ಬಂದ ನಂತರ ಊರಿನ ಜನರು ಸರಿಯಾಗಿ ಬೆರೆಯುತ್ತಿರಲಿಲ್ಲ ಎಂಬ ಕಾರಣಕ್ಕೆ ಮಹಾದೇವಪ್ಪ ಅವರು ತೀವ್ರ ನೊಂದಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು.

ಆದರೆ, ಪೊಲೀಸರು ಈ ಎರಡು ಕಾರಣಗಳನ್ನೂ ನಿರಾಕರಿಸುತ್ತಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಅವರು, ‘ತನಿಖೆ ನಡೆಯುತ್ತಿದೆ. ಆತ್ಮಹತ್ಯೆಗೆ ಇನ್ನೂ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಅವರ ಸ್ನೇಹಿತರು, ಕುಟುಂಬದವರೊಂದಿಗೆ ಮಹಾದೇವಪ್ಪ ಅವರು ಯಾವುದೇ ವಿಚಾರ ಹಂಚಿಕೊಂಡಿಲ್ಲ’ ಎಂದರು.

ಊರಿನವರು ಬೆರೆಯುತ್ತಿರಲಿಲ್ಲ ಎಂಬ ಮಾತು ಕೇಳಿ ಬರುತ್ತಿರುವುದರ ಬಗ್ಗೆ ಕೇಳಿದ್ದಕ್ಕೆ, ‘ಅಂತಹ ಸಾಧ್ಯತೆ ಇಲ್ಲ. ಸ್ನೇಹಿತರು ಅವರೊಂದಿಗೆ ಚೆನ್ನಾಗಿಯೇ ಇದ್ದರು. ಎಲ್ಲ ಸಹಕಾರವನ್ನೂ ನೀಡುತ್ತಿದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT