ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಆಮ್ಲಜನಕ ದುರಂತದ ಬಳಿಕ ಎಚ್ಚೆತ್ತ ಜಿಲ್ಲೆಯ ಶಾಸಕರು

ಕೋವಿಡ್‌ ಎರಡನೇ ಅಲೆ ನಿರ್ವಹಣೆ: ವಿಧಾನಸಭಾ ಸದಸ್ಯರು ಏನು ಮಾಡಿದ್ದಾರೆ?
Last Updated 14 ಜೂನ್ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆ ಏಪ್ರಿಲ್‌ ತಿಂಗಳ ಮೊದಲ ವಾರದಲ್ಲಿ ಆರಂಭಗೊಂಡಿದ್ದರೂ, ಜಿಲ್ಲೆಯ ನಾಲ್ಕೂ ಶಾಸಕರು ಸೋಂಕು ನಿರ್ವಹಣೆಯ ನಿಟ್ಟಿನಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಆರಂಭಿಸಿದ್ದು ಮೇ 2ರಂದು ಸಂಭವಿಸಿದ ಆಮ್ಲಜನಕ ದುರಂತದ ನಂತರ.

ಏಪ್ರಿಲ್‌ ತಿಂಗಳಲ್ಲಿ ಜಿಲ್ಲೆಯ ಕೋವಿಡ್‌ ಪರಿಸ್ಥಿತಿ ನಿರ್ವಹಣೆಯಲ್ಲಿ ಅಧಿಕಾರಿಗಳೇ ಮುಂಚೂಣಿಯಲ್ಲಿದ್ದರು. ಶಾಸಕರು ಸಭೆ ಹಾಗೂ ಆಸ್ಪತ್ರೆ ಭೇಟಿಗಷ್ಟೇ ಸೀಮಿತವಾಗಿದ್ದರು.

ಆಮ್ಲಜನಕ ದುರಂತ ಸಂಭವಿಸಿದ ಬಳಿಕ ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾ ಟಾಸ್ಕ್‌ ಫೋರ್ಸ್‌ ಸಮಿತಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್‌ ಫೋರ್ಸ್‌ ಸಮಿತಿ ರಚಿಸಿದ ಬಳಿಕ, ನಾಲ್ಕೂ ಶಾಸಕರು ಕ್ಷೇತ್ರದಾದ್ಯಂತ ಸುತ್ತಾಟ ನಡೆಸುತ್ತಿದ್ದಾರೆ. ಗ್ರಾಮೀಣ ಜನರಲ್ಲಿ ಕೋವಿಡ್‌ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆಸ್ಪತ್ರೆ, ಕೋವಿಡ್‌ ಕೇರ್‌ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಗಳಲ್ಲೂ ಟಾಸ್ಕ್‌ ಫೋರ್ಸ್‌ ಸಭೆ ನಡೆಸುತ್ತಿದ್ದಾರೆ.

ಗ್ರಾಮೀಣ ಜನರಿಗೆ ಮಾಸ್ಕ್‌, ಸ್ಯಾನಿಟೈಸರ್‌ ವಿತರಿಸುತ್ತಿದ್ದಾರೆ. ಜನರು ಕೋವಿಡ್‌ ಲಸಿಕೆ ಹಾಕುವುದಕ್ಕೂ ಪ್ರೇರೇಪಿಸುತ್ತಿದ್ದಾರೆ. ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳುವುದರ ಜೊತೆಗೆ ಆರ್ಥಿಕವಾಗಿ ದುರ್ಬಲರಾಗಿದ್ದವರಿಗೆ ವೈಯಕ್ತಿಕ ಧನ ಸಹಾಯವನ್ನೂ ಮಾಡುತ್ತಿದ್ದಾರೆ.ಕೋವಿಡ್‌ ನಿರ್ವಹಣೆಗಾಗಿ ಶಾಸಕರ ಕ್ಷೇತ್ರ ಅಭಿವೃದ್ಧಿ ನಿಧಿಯಿಂದ ಹಣವನ್ನೂ ನೀಡಿದ್ದಾರೆ.

ಸಿ.ಪುಟ್ಟರಂಗಶೆಟ್ಟಿ: ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಏಪ್ರಿಲ್‌ 14ರಂದು ಕೋವಿಡ್‌ ದೃಢಪಟ್ಟಿತ್ತು. ಹಾಗಾಗಿ ಮೂರು ವಾರ ಅವರು ಕ್ಷೇತ್ರದಿಂದ ದೂರ ಉಳಿದಿದ್ದರು. ದುರಂತ ಸಂಭವಿಸಿದ ಸಮಯದಲ್ಲಿ ಅವರು ಗುಣಮುಖರಾಗಿದ್ದರು.

ಘಟನೆಯ ಬಳಿಕ ಕ್ಷೇತ್ರದ ವ್ಯಾಪ್ತಿಗೆ ಬರುವ‌ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಟಾಸ್ಕ್‌ ಫೋರ್ಸ್ ಸಭೆಯನ್ನು ನಡೆಸಿದ್ದಾರೆ. ಶಾಸಕರ ಕ್ಷೇತ್ರ ಅಭಿವೃದ್ಧಿ ನಿಧಿಯಿಂದ ₹50 ಲಕ್ಷ ಕೊಟ್ಟಿದ್ದಾರೆ. ಅದರಲ್ಲಿ ಆಂಬುಲೆನ್ಸ್‌ ಖರೀದಿ, ಮಾಸ್ಕ್‌, ಸ್ಯಾನಿಟೈಸರ್‌ ಸೇರಿದಂತೆ ಇನ್ನಿತರ ಪರಿಕರಗಳು, ಆಸ್ಪತ್ರೆಗೆ ಮೂಲಸೌಕರ್ಯ ಹೀಗೆ ಬೇರೆ ಬೇರೆ ಉದ್ದೇಶಕ್ಕೆ ವೆಚ್ಚ ಮಾಡಲಾಗಿದೆ.ಕ್ಷೇತ್ರ ವ್ಯಾಪ್ತಿಯಲ್ಲಿ 180 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದು, ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಧನ ಸಹಾಯವನ್ನೂ ಮಾಡುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಗಳಿಗೆ 2000 ಮಾಸ್ಕ್‌ಗಳನ್ನು ನೀಡುತ್ತಿದ್ದಾರೆ.

ಎನ್‌.ಮಹೇಶ್‌: ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ತಮ್ಮ ಕ್ಷೇತ್ರ ಅಭಿವೃದ್ಧಿ ನಿಧಿಯಿಂದ ₹50 ಲಕ್ಷ ನೀಡಿದ್ದಾರೆ. ಇದರಲ್ಲಿ ಎರಡು ಆಂಬುಲೆನ್ಸ್‌ ಹಾಗೂ ಆಸ್ಪತ್ರೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲಾಗುತ್ತಿದೆ. ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ, ‌ಸಭೆ ನಡೆಸುತ್ತಿದ್ದಾರೆ. ಜೊತೆಗೆ ಲಸಿಕೆ ಹಾಕಲು ಪ್ರೇರೇಪಿಸುತ್ತಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿ, ಕೈಲಾದಷ್ಟು ಧನಸಹಾಯವನ್ನೂ ಮಾಡುತ್ತಿದ್ದಾರೆ.

ಆರ್‌.ನರೇಂದ್ರ: ಹನೂರು ಶಾಸಕ ಆರ್‌.ನರೇಂದ್ರ ಅವರು ಕ್ಷೇತ್ರ ಅಭಿವೃದ್ಧಿ ನಿಧಿಯಿಂದ, ಆಂಬುಲೆನ್ಸ್‌ ಖರೀದಿ ಹಾಗೂ ಇತರ ಸಾಮಗ್ರಿಗಳಿಗಾಗಿ ₹26 ಲಕ್ಷ ನೀಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರಿಗೆ ಮನವಿ ಮಾಡಿ ಮತ್ತೊಂದು ಆಂಬುಲೆನ್ಸ್‌ ಕೊಡುವಂತೆ ಮಾಡಿದ್ದಾರೆ. ಸಂಬಂಧಿಕರು, ಪರಿಚಿತರ ಮೂಲಕ ಹಾಗೂ ವೈಯಕ್ತಿಕವಾಗಿ ಆರೋಗ್ಯ ಇಲಾಖೆಗೆ 24 ಆಮ್ಲಜನಕ ಸಾಂದ್ರಕಗಳು ಹಾಗೂ 50 ಪಲ್ಸ್‌ ಆಕ್ಸಿಮೀಟರ್‌, 5000 ಮಾಸ್ಕ್‌ ಇನ್ನಿತರ ವೈದ್ಯಕೀಯ ಪರಿಕರಗಳನ್ನು ನೀಡುವಂತೆ ಮಾಡಿದ್ದಾರೆ. ಗ್ರಾಮೀಣ ಭಾಗಗಳಿಗೆ ಭೇಟಿ ನೀಡಿ ಸಭೆ ನಡೆಸುವುದರ ಜೊತೆಗೆ ಲಸಿಕೆ ಪಡೆಯುವ ಅಗತ್ಯದ ಬಗ್ಗೆ ಜನರಿಗೆ ತಿಳಿ ಹೇಳುತ್ತಿದ್ದಾರೆ.

ಸಿ.ಎಸ್‌.ನಿರಂಜನಕುಮಾರ್‌: ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಅವರು ತಮ್ಮ ಕ್ಷೇತ್ರ ಅಭಿವೃದ್ಧಿ ನಿಧಿಯಿಂದ, ಆಂಬುಲೆನ್ಸ್‌, ಶವ ಸಾಗಿಸುವ ವಾಹನ ಖರೀದಿ ಹಾಗೂ ಇನ್ನಿತರ ವೆಚ್ಚಕ್ಕಾಗಿ ₹50 ಲಕ್ಷ ನೀಡಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಇದುವರೆಗೆ 80 ಮಂದಿ ಕೋವಿಡ್‌ನಿಂದ ಮೃತಮಟ್ಟಿದ್ದು, ಅವರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವುದರ ಜೊತೆಗೆ ವೈಯಕ್ತಿಕ ಧನ ಸಹಾಯವನ್ನೂ ಮಾಡಿದ್ದಾರೆ.ಪಟ್ಟಣದ ಪೌರಕಾರ್ಮಿಕರಿಗೆ ಮತ್ತು ಕಡುಬಡುವರಿಗೆ, ನಿರಾಶ್ರಿತರಿಗೆ ಆಹಾರದ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದ್ದಾರೆ.

ಜನರು ಎಚ್ಚರಿಕೆಯಿಂದಿರಬೇಕು

ಕೋವಿಡ್‌ ಎರಡನೇ ಅಲೆಯಲ್ಲಿ ನನ್ನ ಕ್ಷೇತ್ರದಲ್ಲೇ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈಗ ಇಳಿಮುಖವಾಗುತ್ತಿದೆ. ಸಂಕಷ್ಟದಲ್ಲಿರುವ ಜನರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ. ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಿ ಸಭೆ ನಡೆಸಿದ್ದೇನೆ. ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಆದರೆ, ಜನರಿಗೆ ಇನ್ನೂ ಭಯ ಬಂದಿಲ್ಲ. ಎಚ್ಚರಿಕೆಯಿಂದ ಇರಬೇಕು.

–ಸಿ.ಪುಟ್ಟರಂಗಶೆಟ್ಟಿ, ಚಾಮರಾಜನಗರ ಶಾಸಕ

ಎಲ್ಲ ಮುನ್ನೆಚ್ಚರಿಕೆ ವ್ಯವಸ್ಥೆ

12 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲೂ ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ವೈದ್ಯರ ಜಾಲವನ್ನು ನಿರ್ಮಿಸಿ ಪ್ರತಿದಿನ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಲಾಗಿದೆ. ಕೋವಿಡ್‌ ಕೇರ್‌ ಕೇಂದ್ರ ಸ್ಥಾಪನೆಮಾಡಿ ಆರೈಕೆ ನೀಡಲು ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ.
– ಎನ್.ಮಹೇಶ್, ಕೊಳ್ಳೇಗಾಲ ಶಾಸಕ

ಯಾರೂ ಮೈಮರೆಯುವಂತಿಲ್ಲ

ಕೋವಿಡ್ ಪರಿಸ್ಥಿತಿ ಈಗ ನಿಧಾನಗತಿಯಲ್ಲಿ ನಿಯಂತ್ರಣಕ್ಕೆ ಬರುತ್ತಿದೆ. ಅಲ್ಲದೇ ಕೋವಿಡ್ ಪರೀಕ್ಷೆ ಪ್ರಮಾಣವನ್ನು ಜಾಸ್ತಿ ಮಾಡಲಾಗಿದೆ. ತಾಲ್ಲೂಕಿನಲ್ಲಿ ಸೋಂಕಿನ ಪ್ರಮಾಣ ದಿನಕ್ಕೆ 25–26ಕ್ಕೆ ಇಳಿದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ಮೈಮರೆಯುವ ಹಾಗಿಲ್ಲ. 21ರವರೆಗೂ ಕಟ್ಟುನಿಟ್ಟಾಗಿ ಇರಬೇಕು. ಜನರು ಎಲ್ಲ ನಿಯಮ ಪಾಲಿಸಬೇಕು.

–ಆರ್.ನರೇಂದ್ರ, ಹನೂರು ಶಾಸಕ

ಸಮಸ್ಯೆ ಉದ್ಭವಿಸದಂತೆ ಮುಂಜಾಗ್ರತಾ ಕ್ರಮ

ಮುಂದಿನ ದಿನಗಳಲ್ಲಿ ಕೋವಿಡ್‌ನಿಂದ ಯಾವುದೇ ಸಮಸ್ಯೆ ಉದ್ಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಪ್ರತಿದಿನ ಅಧಿಕಾರಿಗಳ ಮತ್ತು ಗ್ರಾಮದ ಮುಖಂಡರ ಜೊತೆಗೆ ಸಂಪರ್ಕದಲ್ಲಿದ್ದು ಲಸಿಕೆ ಪಡೆಯುವಂತೆ ಜನರನ್ನು ಉತ್ತೇಜಿಸಲಾಗುತ್ತಿದೆ.ಪ್ರಾರಂಭದಲ್ಲಿ 150-200 ಗಡಿಯಲ್ಲಿದ್ದ ಸೋಂಕಿತರ ಸಂಖ್ಯೆ, ಈಗ 30-40ಕ್ಕೆ ಇಳಿದಿದೆ.

– ಸಿ.ಎಸ್.ನಿರಂಜನ ಕುಮಾರ್, ಗುಂಡ್ಲುಪೇಟೆ ಶಾಸಕ

ಮಾಹಿತಿ: ಸೂರ್ಯನಾರಾಯಣ ವಿ., ನಾ.ಮಂಜುನಾಥಸ್ವಾಮಿ, ಅವಿನ್‌ಪ್ರಕಾಶ್‌, ಬಿ.ಬಸವರಾಜು, ಎಂ.ಮಲ್ಲೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT