ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆಮಹದೇಶ್ವರ ವನ್ಯಧಾಮ: ಸ್ಥಳಾಂತರಕ್ಕೆ ಮುಂದೆ ಬಂದ ಮತ್ತೆರಡು ಗ್ರಾಮ

ಚಂಗಡಿ ಸ್ಥಳಾಂತರ ಯೋಜನೆ ಪ್ರೇರಣೆ
Last Updated 18 ಜೂನ್ 2020, 19:30 IST
ಅಕ್ಷರ ಗಾತ್ರ

ಹನೂರು (ಚಾಮರಾಜನಗರ): ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಚಂಗಡಿ ಎಂಬ ಕುಗ್ರಾಮದ ಸ್ಥಳಾಂತರ ಪ್ರಕ್ರಿಯೆ ಆರಂಭವಾಗುತ್ತಲೇ, ಅದೇ ವನ್ಯಧಾಮದಲ್ಲಿರುವ ತೋಕೆರೆ ಮತ್ತು ಮೆದಗನಾಣೆಯ ನಿವಾಸಿಗಳು ಕೂಡ ಸ್ಥಳಾಂತರಗೊಳ್ಳಲು ಮುಂದೆ ಬಂದಿದ್ದಾರೆ.

ವನ್ಯಧಾಮದ ಪಾಲಾರ್ ವನ್ಯಜೀವಿ ವ್ಯಾಪ್ತಿಯಲ್ಲಿರುವ ಈ ಎರಡು ಗ್ರಾಮಗಳು ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಜನರ ಜೀವನ ನಡೆಸುವುದು ಕಷ್ಟಕರವಾಗಿದೆ. ಚಂಗಡಿ ಗ್ರಾಮ ಸ್ಥಳಾಂತರ ಯೋಜನೆಯಿಂದ ಪ್ರೇರಣೆ ಪಡೆದಿರುವ ಈ ಗ್ರಾಮದ ಜನರು ತಮಗೂ ಬೇರೆ ಕಡೆ ಪುನರ್‌ವಸತಿ ಕಲ್ಪಿಸುವಂತೆ ಅರಣ್ಯಧಿಕಾರಿಗಳಿಗೆ ಮೌಖಿಕವಾಗಿ ಮನವಿ ಸಲ್ಲಿಸಿದ್ದಾರೆ.

ತೋಕೆರೆ ಗ್ರಾಮದಲ್ಲಿ ನಿವಾಸಿಗಳೊಂದಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು, ಒಂದು ಸುತ್ತಿನ ಸಭೆಯನ್ನೂ ನಡೆಸಿದ್ದಾರೆ. ‘ಗ್ರಾಮ ತೊರೆಯಲು ಸಿದ್ಧರಿದ್ದು, ನಮಗೆ ಬೇರೆ ಕಡೆ ಪುನರ್ ವಸತಿ ವ್ಯವಸ್ಥೆ ಕಲ್ಪಿಸಿ’ ಎಂದು ನಿವಾಸಿಗಳು ಒಪ್ಪಿಗೆ ಪತ್ರವನ್ನೂ ನೀಡಿದ್ದಾರೆ.

ತೋಕೆರೆ ಗ್ರಾಮದಲ್ಲಿ ಬೇಡಗಂಪಣ ಸಮುದಾಯದ 44 ಕುಟುಂಬಗಳು ವಾಸವಿವೆ. ಮೆದಗನಾಣೆ ಗ್ರಾಮದಲ್ಲಿ ಸೋಲಿಗರ26 ಹಾಗೂ ಎರಡು ಬೇಡಗಂಪಣ ಕುಟುಂಬಗಳಿವೆ.

ವರ್ಷದ ಪ್ರಯತ್ನ: ವರ್ಷದ ಹಿಂದೆ ಅರಣ್ಯ ಅಧಿಕಾರಿಗಳು ತೋಕೆರೆಗೆ ತೆರಳಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದಾಗ 44 ಕುಟುಂಬದವರು, ಬೇರೆ ಕಡೆ ವ್ಯವಸ್ಥೆ ಮಾಡಿಕೊಟ್ಟರೆ ಗ್ರಾಮ ಬಿಟ್ಟು ಬರುವುದಾಗಿ ಅರಣ್ಯಾಧಿಕಾರಿಗಳ ಮುಂದೆ ಹೇಳಿಕೊಂಡಿದ್ದರು. ಆಸ್ತಿಗೆ ಸಂಬಂಧಿಸಿದ ಹಕ್ಕು ಪತ್ರಗಳ ಪ್ರತಿಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದರು.

ಈಗ ಚಂಗಡಿ ಗ್ರಾಮಸ್ಥರಿಗೆ ಪುನರ್‌ವಸತಿ ಕಲ್ಪಿಸುವ ಯೋಜನೆಗೆ ರಾಜ್ಯ ಸರ್ಕಾರ ಸಮ್ಮತಿಸುತ್ತಿದ್ದಂತೆಯೇ, ಅಧಿಕಾರಿಗಳನ್ನು ಮತ್ತೆ ಭೇಟಿ ಮಾಡಿ, ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.ವಡಕೆಹಳ್ಳದ ಬಳಿ ಸ್ಥಳ ನೀಡಬೇಕೆಂದೂ ಬೇಡಿಕೆ ಇಟ್ಟಿದ್ದಾರೆ.

‘ಮಕ್ಕಳ‌ ಶೈಕ್ಷಣಿಕ ಹಿತದೃಷ್ಟಿ ಹಾಗೂ ವಯೋವೃದ್ಧರ ಆರೋಗ್ಯ ಸ್ಥಿತಿ ಕಂಡು ವರ್ಷದ ಹಿಂದೆ ಗ್ರಾಮ ತೊರೆಯಲು ನಿರ್ಧರಿಸಿದ್ದೆವು. ಜಮೀನುಗಳಲ್ಲಿ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಕಾಡು ಪ್ರಾಣಿಗಳು ಜಮೀನಿಗೆ ನುಗ್ಗಿ ಫಸಲು ನಾಶಗೊಳಿಸುತ್ತವೆ. ಜೀವ ಭಯದಲ್ಲೇ ಇರುವಂತಾಗಿದೆ’ ಎಂದು ತೋಕರೆ ಮುಖಂಡ ಈರಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

--

ಮಕ್ಕಳ ಶಿಕ್ಷಣ, ಆರೋಗ್ಯ ದೃಷ್ಟಿಯಿಂದ ಗ್ರಾಮ ತೊರೆಯಲು ನಿರ್ಧರಿಸಿದ್ದಾರೆ. ಅವರಿಗೆ ಪುನರ್ ವಸತಿ ಕಲ್ಪಿಸಲು ಇಲಾಖಾ ಮಟ್ಟದಲ್ಲಿ ಕ್ರಮವಹಿಸಲಾಗುವುದು
ವಿ. ಏಡುಕುಂಡಲು, ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT