ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಹೆಚ್ಚಿದ ಹರಕೆ ಸೇವೆ, ಹಿಗ್ಗಿದ ಆದಾಯ

ಶಿವರಾತ್ರಿ ಜಾತ್ರೆ ಬಳಿಕ ಹೆಚ್ಚಿದ ಭಕ್ತರ ಸಂಖ್ಯೆ, ತಡ ರಾತ್ರಿವರೆಗೂ ದಾಸೋಹ
Last Updated 24 ಮಾರ್ಚ್ 2021, 3:39 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಶಿವರಾತ್ರಿ ಜಾತ್ರಾ ಮಹೋತ್ಸವದ ನಂತರ ಇಲ್ಲಿನ ಪ್ರಸಿದ್ಧ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದ್ದು, ಹ‌ರಕೆ ಉತ್ಸವ ಮಾಡಿಸುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ. ಇದರಿಂದಾಗಿ ದೇವಾಲಯದ ಆದಾಯವೂ ಹಿಗ್ಗಿದೆ.

ಪ್ರತಿ ವರ್ಷ ಶಿವರಾತ್ರಿ ಜಾತ್ರೆ ನಡೆಯುವ ಐದು ದಿನಗಳ ಕಾಲ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಬರುತ್ತಾರೆ. ಈ ಬಾರಿಮಾರ್ಚ್‌ 10ರಿಂದ 14ರವರೆಗೆ ಜಾತ್ರೋತ್ಸವ ನಡೆದಿತ್ತು. ಕೋವಿಡ್‌ ಕಾರಣಕ್ಕೆ ಬೆಟ್ಟ ವ್ಯಾಪ್ತಿಯ ಜನರನ್ನು ಬಿಟ್ಟು, ಹೊರ ಭಾಗದವರನ್ನು ನಿರ್ಬಂಧಿಸಲಾಗಿತ್ತು. ಜಾತ್ರೆ ಮುಗಿದ ನಂತರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಕೆಲವು ದಿನಗಳಿಂದ ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ ರಾತ್ರಿ 11 ಗಂಟೆಯವರೆಗೂ ಅನ್ನ ದಾಸೋಹ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಗೆ ದಾಸೋಹ ಆರಂಭವಾಗುತ್ತದೆ. ಕಡಿಮೆ ಭಕ್ತರಿದ್ದರೆ ರಾತ್ರಿ 10ಗಂಟೆಗೆ ಮುಕ್ತಾಯವಾಗುತ್ತದೆ.

ಹೆಚ್ಚಿದ ಹರಕೆ ಸೇವೆ: ಶಿವರಾತ್ರಿ ಜಾತ್ರೆ ಸಂದರ್ಭದಲ್ಲಿ ಹೆಚ್ಚಿನ ಭಕ್ತರು ವಿವಿಧ ಉತ್ಸವಗಳನ್ನು ಹರಕೆ ರೂಪದಲ್ಲಿ ನಡೆಸುತ್ತಾರೆ. ಈ ಬಾರಿ ಜಾತ್ರಾ ಸಮಯದಲ್ಲಿ ಹರಕೆ ತೀರಿಸಲಾಗದ ಭಕ್ತರು ಈಗ ‌ಉತ್ಸವ ಸೇವೆಗಳನ್ನು ಮಾಡುತ್ತಿದ್ದಾರೆ. ನಾಲ್ಕೈದು ದಿನಗಳಿಂದ ಈ ಸಂಖ್ಯೆ ಹೆಚ್ಚಾಗಿದೆ.

ಮಾರ್ಚ್‌ 18ರಿಂದ ಸೋಮವಾರದವರೆಗೆ (ಮಾರ್ಚ್‌ 22) 1,125 ಭಕ್ತರು ಚಿನ್ನದ ರಥೋತ್ಸವ ಸೇವೆ ಮಾಡಿದ್ದಾರೆ (ಒಂದು ಟಿಕೆಟ್‌ ಶುಲ್ಕ ಶುಲ್ಕ ₹3001). ಸೋಮವಾರ ಒಂದೇ ದಿನ 387 ಭಕ್ತರು ಚಿನ್ನದ ತೇರಿನ ಹರಕೆ ತೀರಿಸಿದ್ದಾರೆ. ಇದಲ್ಲದೇ 256 ಮಂದಿ ಬಸವವಾಹನ, 942 ಮಂದಿ ಹುಲಿ ವಾಹನ ಹಾಘೂ 69 ಮಂದಿ ರುದ್ರಾಕ್ಷಿ ವಾಹನ ಉತ್ಸವ ನಡೆಸಿದ್ದಾರೆ.

ಆದಾಯದ ವಿವರ: ಐದು ದಿನಗಳಲ್ಲಿ ಚಿನ್ನದ ತೇರಿನ ಉತ್ಸವದಿಂದ ₹33,76,125 ಆದಾಯ ಬಂದಿದೆ.ಮುಡಿಸೇವೆಯಲ್ಲಿ ₹ 4,60,960, ಲಾಡು ಪ್ರಸಾದ ಮಾರಾಟದಿಂದ ₹15,57,695, ಇತರೆ ಸೇವೆಗಳಿಂದ 17,82,747 ರೂ ಸಂಗ್ರಹವಾಗಿದೆ. ಇದಲ್ಲದೇ, ಗೇಟ್‌ ಪ್ರವೇಶ ಶುಲ್ಕ, ವಸತಿ ಗೃಹ, ವಿಶೇಷ ಪ್ರವೇಶ ಶುಲ್ಕ ಸೇರಿದಂತೆ ಇತರ ಸೇವಾಶುಲ್ಕಗಳಿಂದ ಬಂದ ಆದಾಯ ಪ್ರತ್ಯೇಕ.

ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ನೀಡಿರುವ ಮಾಹಿತಿ ಪ್ರಕಾರ, ಸೋಮವಾರ ಒಂದೇ ದಿನ ಎಲ್ಲ ಸೇವೆಗಳಿಂದ ₹29.10 ಲಕ್ಷ ಆದಾಯ ಬಂದಿದೆ.

‘ಪ್ರತಿ ದಿನ 20ರಿಂದ 25 ಸಾವಿರ ಭಕ್ತರು ಕ್ಷೇತ್ರಕ್ಕೆ ಬರುತ್ತಿದ್ದಾರೆ. ಬೆಳಿಗ್ಗೆ 7ರಿಂದ ದಾಸೋಹ ಆರಂಭಿಸುತ್ತೇವೆ. ಭಕ್ತರ ಸಂಖ್ಯೆಗೆ ಅನುಗುಣವಾಗಿ ರಾತ್ರಿ 11 ಗಂಟೆಯವರೆವಿಗೂ ದಾಸೋಹ ನಡೆಸುತ್ತೇವೆ’ ಎಂದು ಜಯವಿಭವಸ್ವಾಮಿ ಅವರು ಹೇಳಿದರು.

‘ಮಕ್ಕಳಿಗೆ ಹಾಲುಣಿಸುವ ಕೊಠಡಿ ಬೇಕು’
‘ಕ್ಷೇತ್ರಕ್ಕೆ ಬರುವವರ ಸಂಖ್ಯೆ ಹೆಚ್ಚಿರುವುದರಿಂದ ಆದಾಯ ಹೆಚ್ಚಾಗಿದೆ. ಅಭಿವೃದ್ಧಿ ಕಾರ್ಯಗಳು ಕೂಡ ನಡೆಯುತ್ತಿದೆ. ಭಕ್ತರಿಗೆ ಇನ್ನಷ್ಟು ಮೂಲ ಸೌಕರ್ಯ ಕಲ್ಪಿಸುವ ಅಗತ್ಯವಿದೆ. ದೇವಾಲಯದ ಆಸುಪಾಸಿನಲ್ಲಿ ಮಹಿಳೆಯರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ ಹಾಗೂ ಶೌಚಾಲಯಗಳನ್ನು ನಿರ್ಮಿಸುವುದಕ್ಕೆ ಒತ್ತು ನೀಡಬೇಕು’ ಎಂದು ಕೌದಳ್ಳಿಯಿಂದ ಬಂದಿದ್ದ ಭಕ್ತ ಶಿವಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು, ‘ಮಕ್ಕಳಿಗೆ ಹಾಲುಣಿಸುವ ಕೇಂದ್ರ ತೆರೆಯಬೇಕು ಎಂಬ ಅಭಿಪ್ರಾಯ ಸರಿಯಾದುದು. ಇದನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT