ಶುಕ್ರವಾರ, ಡಿಸೆಂಬರ್ 3, 2021
27 °C
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ: ಮೂರೂವರೆ ವರ್ಷದಲ್ಲಿ ₹ 6.58 ಕೋಟಿ ಹಂಚಿದ ಶಾಸಕ ಎನ್.ಮಹೇಶ್

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ: ಸಮುದಾಯ ಭವನಗಳಿಗೆ ಶುಕ್ರದೆಸೆ

ನಾ.ಮಂಜುನಾಥಸ್ವಾಮಿ‌ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಶಾಸಕರ ನಿಧಿ ಬಳಕೆಯಲ್ಲಿ ಜಿಲ್ಲೆಯಲ್ಲೇ ಎರಡನೇ ಸ್ಥಾನ ದಲ್ಲಿರುವ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಮಹೇಶ್ ಕೂಡ ಅನುದಾನದ ಸಿಂಹಪಾಲನ್ನು ಸಮು ದಾಯ ಭವನಗಳ ನಿರ್ಮಾಣಕ್ಕೆ ಹಂಚಿಕೆ ಮಾಡಿದ್ದಾರೆ. 

ಶಿಕ್ಷಣ ಕ್ಷೇತ್ರಕ್ಕೆ ಉಳಿದ ಶಾಸಕರಿಗಿಂತ ಹೆಚ್ಚು ಅನುದಾನ ನೀಡಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿಯಂತಹ ಮೂಲ ಸೌಕರ್ಯ ಕಲ್ಪಿಸುವುದಕ್ಕೆ ಸ್ವಲ್ಪ ಹಣ ಕೊಟ್ಟಿದ್ದಾರೆ. ಮೊದಲ ಬಾರಿ ಶಾಸಕರಾಗಿದ್ದರೂ; ಪ್ರದೇಶಾಭಿವೃದ್ಧಿ ನಿಧಿಯನ್ನು ಪರಿಣಾಮಕಾರಿಯಾಗಿ ಬಳಸಿರುವುದು ವಿಶೇಷ. 

2018–19ರಿಂದ ಇಲ್ಲಿಯವರೆಗೆ ನಾಲ್ಕು ವರ್ಷದ ಅವಧಿಗೆ ₹ 7 ಕೋಟಿ ಅನುದಾನ ನಿಗದಿಯಾಗಿದ್ದು, ಈವರೆಗೆ ₹ 6.58 ಕೋಟಿ ವೆಚ್ಚದ ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದೆ. ಮೊದಲ ಮೂರು ವರ್ಷಗಳಲ್ಲಿ ಪೂರ್ಣ ₹ 2 ಕೋಟಿ ಅನುದಾನವನ್ನು ಎನ್‌.ಮಹೇಶ್‌ ಬಳಸಿಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ (2021–22) ಈಗಾಗಲೇ ₹ 1.57 ಕೋಟಿ ವೆಚ್ಚದ ಕಾಮಗಾರಿಗಳನ್ನು ಕ್ಷೇತ್ರದಲ್ಲಿ ಕೈಗೆತ್ತಿಕೊಳ್ಳಲಾಗಿದೆ. 

ಇದುವರೆಗೆ ಬಳಕೆ ಮಾಡಿರುವ ₹ 6.58 ಕೋಟಿ ಅನುದಾನದಲ್ಲಿ ₹ 5.07 ಕೋಟಿ ಮೊತ್ತವನ್ನು ಅವರು ಸಮುದಾಯ ಭವನಗಳಿಗೆ ನೀಡಿದ್ದಾರೆ. ₹ 63.5 ಲಕ್ಷವನ್ನು ಶಿಕ್ಷಣ ಕ್ಷೇತ್ರಕ್ಕೆ ವ್ಯಯ ಮಾಡಿದ್ದಾರೆ. ₹ 30.21 ಲಕ್ಷ ಅನುದಾನವನ್ನು ಮೂಲ ಸೌಕರ್ಯ ಗಳಿಗೆ ನೀಡಿದ್ದಾರೆ. 

ಮೊದಲ ಮೂರು ವರ್ಷದಲ್ಲಿ ಕ್ರಮವಾಗಿ 14, 13, 10 ಕಾಮಗಾರಿ ಗಳಿಗೆ ಅನುಮೋದನೆ ದೊರೆತಿದೆ. ಶೇ 90ಕ್ಕೂ ಹೆಚ್ಚಿನ ಮೊತ್ತವನ್ನು ಕಟ್ಟಡ ನಿರ್ಮಾಣ ಒಳಗೊಂಡಂತೆ ಶಾಶ್ವತ ಕಾಮಗಾರಿಗಳಿಗೆ ಮೀಸಲಿಟ್ಟಿದ್ದಾರೆ.

‘ಬಿಡುಗಡೆಯಾದ ಬಹುತೇಕ ಅನುದಾನವನ್ನು ಕಾಲಮಿತಿಗೆ ಒಳಪಟ್ಟು ಬಳಕೆ ಮಾಡಲಾಗಿದೆ. ಮುಂದಿನ ಅವಧಿ ಯಲ್ಲಿ ಅಂಗನವಾಡಿ, ಅಂಗವಿಕಲರು, ಪಶು ಆಸ್ಪತ್ರೆ ಮತ್ತು ಶಿಕ್ಷಣ ಕ್ಷೇತ್ರವನ್ನು ಪರಿಗಣಿಸಿ ಅನುದಾನ ಒದಗಿಸಬೇಕಿದೆ’ ಎಂದು ಶಾಸಕ ಎನ್‌.ಮಹೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೂ ಹೆಚ್ಚಿನ ಅನುದಾನ ತಂದಿದ್ದು, ಮುಂದಿನ ದಿನಗಳಲ್ಲಿ ಗುಡಿಸಲು ರಹಿತ ಕ್ಷೇತ್ರ ಮಾಡುವತ್ತ ಚಿಂತನೆ ನಡೆಸಬೇಕಿದೆ. 2020-21ನೇ ಸಾಲಿನಲ್ಲಿ ₹ 1.57 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅಷ್ಟೂ ಮೊತ್ತಕ್ಕೆ ಕಾಮಗಾರಿ ಪಟ್ಟಿ ಸಲ್ಲಿಸಲಾಗಿದೆ. ಇವು ಮುಂದುವರೆದ ಕಾಮಗಾರಿ ಆಗಿದ್ದು, ಸಿಂಹಪಾಲು ಸಮುದಾಯ ಭವನಗಳಿಗೆ ಮೀಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಸಕ್ತ ಸಾಲಿನ ಅನುದಾನದಲ್ಲಿ ₹ 50 ಲಕ್ಷವನ್ನು ಕೋವಿಡ್‌ ನಿರ್ವಹಣೆಗೆ ನೀಡಿದ್ದಾರೆ. ಇದನ್ನು ಸಂತೇಮರಹಳ್ಳಿ, ಯಳಂದೂರು ಆಸ್ಪತ್ರೆಗಳಿಗೆ ಆಂಬುಲೆನ್ಸ್ ಖರೀದಿಸಲು ಬಳಸಲಾಗಿದೆ.

ಕೋವಿಡ್‌–19 ಕಾರಣಕ್ಕೆ ವಿಳಂಬ

‘ಸಾಮಾನ್ಯವಾಗಿ ಶಾಸಕರ ನಿಧಿಯಡಿ ಕಾಮಗಾರಿಗಳಿಗೆ ಅನುದಾನ ಸಕಾಲಕ್ಕೆ ಬಿಡುಗಡೆ ಆಗುತ್ತದೆ. ಆದರೆ, ಕೋವಿಡ್‌, ನೆರೆ ಮೊದಲಾದ ಕಾರಣಕ್ಕೆ ಸ್ವಲ್ಪ ವಿಳಂಬವಾಗಿದೆ. ಕೋವಿಡ್‌ನ ಕಾರಣಕ್ಕಾಗಿ ಪ್ರಸಕ್ತ ಸಾಲಿನ ಕಾಮಗಾರಿ ಸಲ್ಲಿಸುವುದು ಮತ್ತು ಅನುಮೋದನೆ ಪ್ರಕ್ರಿಯೆಗೆ ಕೊಂಚ ಹಿನ್ನಡೆಯಾಗಿದೆ. ಹಾಗಿದ್ದರೂ, ಬಹುತೇಕ ಅನುದಾನ ಸದ್ಬಳಕೆ ಆಗಿದೆ’ ಎಂದು ಎನ್‌.ಮಹೇಶ್ ತಿಳಿಸಿದರು.

ಸ್ಮಾರ್ಟ್ ತರಗತಿಗಳ ಕೊಡುಗೆ

ಮಹೇಶ್‌ ಶಾಸಕರ ನಿಧಿಯಲ್ಲಿ ಶಿಕ್ಷಣಕ್ಕೂ ಒತ್ತು ನೀಡಿದ್ದು, ಕ್ಷೇತ್ರ ವ್ಯಾಪ್ತಿಯ 20 ಪ್ರೌಢಶಾಲೆಗಳಲ್ಲಿ ಸ್ಮಾರ್ಟ್‌ ತರಗತಿ ಸ್ಥಾಪಿಸಲು ₹ 35 ಲಕ್ಷ ವಿನಿಯೋಗಿಸಿದ್ದಾರೆ. 

ಪ್ರೊಜೆಕ್ಟರ್‌, ಕಂಪ್ಯೂಟರ್‌, ಸ್ಮಾರ್ಟ್‌ ಬೋರ್ಡ್‌, ಇಂಟರ್‌ನೆಟ್‌ ಸಂಪರ್ಕ ಸೇರಿದಂತೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮಕ್ಕಳಿಗೆ ಬೋಧನೆ ಮಾಡುವ ಸಲಕರಣೆಗಳನ್ನು ಸ್ಮಾರ್ಟ್‌ ತರಗತಿಯಲ್ಲಿ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲೆಗಳಿಗೆ ಅನುದಾನ ನೀಡಿ ಸ್ಮಾರ್ಟ್‌ ತರಗತಿ ಆರಂಭಿಸುವ ಆಶಯವನ್ನು ಶಾಸಕರು ವ್ಯಕ್ತಪಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು