ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲೂ ಜನ ಸಂದಣಿ

ಡಿ ಗ್ರೂಪ್ ನೌಕರರು, ಭದ್ರತಾ ಸಿಬ್ಬಂದಿ, ಪೌರ ಕಾರ್ಮಿಕರ ಕೊರತೆ‌
Last Updated 25 ಅಕ್ಟೋಬರ್ 2021, 16:29 IST
ಅಕ್ಷರ ಗಾತ್ರ

ಚಾಮರಾಜನಗರ: ಯಡಬೆಟ್ಟದಲ್ಲಿ ಸೋಮವಾರ ಆರಂಭಗೊಂಡ 450 ಹಾಸಿಗೆ ಸಾಮರ್ಥ್ಯದ ಬೋಧನಾ ಆಸ್ಪತ್ರೆಯಲ್ಲಿ ಮೊದಲ ದಿನವೇ ಜನಸಂದಣಿ ಗೋಚರಿಸಿತು.

ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ, ಮಕ್ಕಳು ಹಾಗೂ ಕೋವಿಡ್‌ ವಿಭಾಗಗಳನ್ನು ಬಿಟ್ಟು, ತುರ್ತು ಚಿಕಿತ್ಸೆ ಸೇರಿದಂತೆ ಎಲ್ಲ ವಿಭಾಗಗಳೂ ಹೊಸ ಆಸ್ಪತ್ರೆಯಲ್ಲಿ ಕಾರ್ಯಾರಂಭ ಮಾಡಿವೆ.

ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದ ಹೊರರೋಗಿಗಳನ್ನು ಅಲ್ಲಿನ ಸಿಬ್ಬಂದಿ ಹೊಸ ಆಸ್ಪತ್ರೆಗೆ ಕಳುಹಿಸಿದರು.

ಮೊದಲ ದಿನ ಗೊಂದಲ: ಬಹುತೇಕ ಹೊರ ರೋಗಿ ವಿಭಾಗಗಳು ಹೊಸ ಆಸ್ಪತ್ರೆಯ ನೆಲ ಮಹಡಿಯಲ್ಲಿವೆ. ಹಳೆಯ ಜಿಲ್ಲಾಸ್ಪತ್ರೆಯ ವ್ಯವಸ್ಥೆಗೆ ಹೊಂದಿಕೊಂಡಿದ್ದ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಹೊಸ ಆಸ್ಪತ್ರೆಯಲ್ಲಿನ ವ್ಯವಸ್ಥೆ ಕೊಂಚ ಗೊಂದಲ ಉಂಟು ಮಾಡಿತು.

ಜನರಿಗೆ ಮಾರ್ಗದರ್ಶನ ನೀಡುವುದಕ್ಕಾಗಿ ವೈದ್ಯಕೀಯ ಕಾಲೇಜಿನ ಆಡಳಿತ ಸಿಬ್ಬಂದಿ, ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರನ್ನು ನಿಯೋಜಿಸಿದ್ದರು.

ಎಲ್ಲ ವಿಭಾಗಗಳ ವೈದ್ಯರು ‌ಕರ್ತವ್ಯದಲ್ಲಿದ್ದರು. ಪ್ರತಿ ಸೋಮವಾರ ಜಿಲ್ಲಾಸ್ಪತ್ರೆಯಲ್ಲಿ ಇರುವಷ್ಟು‌‌ ಜನರು‌ ಇಲ್ಲದಿದ್ದರೂ; ರೋಗಿಗಳ ಸಂಖ್ಯೆ ಕಡಿಮೆ ಇರಲಿಲ್ಲ. ಹೊಸ ಆಸ್ಪತ್ರೆಯು ವಿಶಾಲವಾಗಿರುವುದರಿಂದ ಹೆಚ್ಚು ದಟ್ಟಣೆ ಇದ್ದಂತೆ ಭಾಸವಾಗಲಿಲ್ಲ.

ನೆಲ ಮಹಡಿ ಸೇರಿದಂತೆ ಐದು ಮಹಡಿ ಹೊಂದಿರುವ ಆಸ್ಪತ್ರೆಯ ನಾಲ್ಕು ಮಹಡಿಗಳಲ್ಲಿ ಜನರ ಓಡಾಟ ಕಂಡು ಬರಲಿಲ್ಲ.ವೈದ್ಯಕೀಯ ಸಲಕರಣೆ ಹಾಗೂ ಅಗತ್ಯ ಪೀಠೋಪಕರಣಗಳನ್ನು ಬಿಟ್ಟು ಉಳಿದ ಪೀಠೋಪಕರಣಗಳ ಸ್ಥಳಾಂತರ ಇನ್ನೂ ಆಗಿಲ್ಲ.

'ಮೂರು ವಿಭಾಗಗಳನ್ನು ಬಿಟ್ಟು ಉಳಿದ ಎಲ್ಲ ವಿಭಾಗಗಳನ್ನು ಇಲ್ಲಿಗೆ ಸ್ಥಳಾಂತರಿಸಿದ್ದೇವೆ. ಒಂದೆರಡು ವಾರ ಸಾರ್ವಜನಿಕರಿಗೆ ಅನಾನುಕೂಲವಾಗಬಹುದು. ಆದರೆ, ಸ್ಥಳಾಂತರ ಆಗುವುದು ಅನಿವಾರ್ಯ. ಎಲ್ಲವೂ ವ್ಯವಸ್ಥಿತವಾಗಿ ಆಗಲು ಒಂದು ತಿಂಗಳು ಬೇಕಾಗಬಹುದು' ಎಂದು ಜಿಲ್ಲಾ ಸರ್ಜನ್ ಡಾ.ಶ್ರೀನಿವಾಸ ಮತ್ತು ವೈದ್ಯಕೀಯ ಕಾಲೇಜಿನ ಡೀನ್ ಡಾ.ಡಿ.ಎಂ.ಸಂಜೀವ್ 'ಪ್ರಜಾವಾಣಿ'ಗೆ ತಿಳಿಸಿದರು.

ಸಿಬ್ಬಂದಿ ಕೊರತೆ: ಪ್ರಸ್ತಾವ

ಹೊಸ ಆಸ್ಪತ್ರೆಗೆ ಡಿ ಗ್ರೂಪ್ ನೌಕರರು, ಭದ್ರತಾ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರ ಕೊರತೆ‌ ಕಾಡುತ್ತಿದ್ದು, ಸದ್ಯಕ್ಕೆ ಜಿಲ್ಲಾಸ್ಪತ್ರೆಯ ಸಿಬ್ಬಂದಿಯನ್ನೇ ಬಳಸಿಕೊಂಡು‌ ನಿರ್ವಹಿಸಲಾಗುತ್ತಿದೆ.

'ನಮಗೆ ವೈದ್ಯರು, ವೈದ್ಯಕೀಯ ಸಿಬ್ಬಂದಿಯ ಕೊರತೆ ಅಷ್ಟೇನೂ ಇಲ್ಲ. ಗ್ರೂಪ್ ಡಿ ನೌಕರರು, ಭದ್ರತಾ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ತಕ್ಷಣ ಅಗತ್ಯವಿದೆ. 380 ಸಿಬ್ಬಂದಿ ಬೇಕು. ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೇವೆ. ನೇಮಕಾತಿಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ' ಎಂದು ಡೀನ್ ಡಾ.ಡಿ.ಎಂ.ಸಂಜೀವ್ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT