ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಕಾವೇರಿ ನೀರಿನ ಹರಿವು

ಕೊಳ್ಳೇಗಾಲ ತಾಲ್ಲೂಕಿನ ನದಿತೀರದ ಗ್ರಾಮಸ್ಥರಿಂದ ಕಾವೇರಿಗೆ ಪೂಜೆ
Last Updated 1 ಜುಲೈ 2021, 4:00 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಕೊಡಗು, ಕೇರಳದ ವಯನಾಡು ಭಾಗದಲ್ಲಿ ಮಳೆಯಾಗುತ್ತಿರುವುದು ಹಾಗೂ ಕೆಆರ್‌ಎಸ್‌, ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಕಾವೇರಿ ನದಿ ಮೈದುಂಬಲು ಆರಂಭಿಸಿರುವುದು ತಾಲ್ಲೂಕಿನ ನದಿ ತಟದ ರೈತರಲ್ಲಿ ಮಂದಹಾಸ ಮೂಡಿಸಿದೆ.

ಮಳೆಯಾಗುತ್ತಿದ್ದರೂ, ಕೆಆರ್‌ಎಸ್‌, ಕಬಿನಿ ಜಲಾಶಯಗಳು ಇನ್ನೂ ಭರ್ತಿಯಾಗಿಲ್ಲ. ಹಾಗಿದ್ದರೂ, ಎರಡೂ ಜಲಾಶಯಗಳಿಂದನದಿಗೆ 5,500 ಕ್ಯುಸೆಕ್‌ಗಳಷ್ಟು ನೀರನ್ನು ಬಿಡಲಾಗುತ್ತಿದೆ.

ತಾಲ್ಲೂಕಿನ ಮೂಲಕ ಹಾದು ಹೋಗುವ ಕಾವೇರಿ ಹನೂರು ತಾಲ್ಲೂಕಿನ ಹೊಗೆನಕಲ್‌ ನಂತರ ತಮಿಳುನಾಡಿನತ್ತ ಹರಿಯುತ್ತದೆ.

ಸ್ಥಳೀಯರಿಂದ ಕಾವೇರಿ ನದಿ ಪೂಜೆ: ಮಳೆಗಾಲದಲ್ಲಿ ನದಿಯ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆಯೇ ನದಿ ದಂಡೆಯಲ್ಲಿರುವ ಗ್ರಾಮಗಳ ಜನರು ಕಾವೇರಿ ನದಿಗೆ ಪೂಜೆ ಸಲ್ಲಿಸುತ್ತಾರೆ. ನೂರಾರು ವರ್ಷಗಳಿಂದ ಈ ಸಂಪ್ರದಾಯ ಜಾಲ್ತಿಯಲ್ಲಿದ್ದು, ಈಗಲೂ ಜನರು ಅದನ್ನು ಪಾಲಿಸುತ್ತಾ ಬಂದಿದ್ದಾರೆ.

ಪ್ರತಿ ವರ್ಷ ಜೂನ್ ಹಾಗೂ ಜುಲೈ ತಿಂಗಳಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತ‌ದೆ. ಆ ಸಮಯದಲ್ಲಿ ನದಿ ತೀರದ ಗ್ರಾಮದವರು ನದಿಗೆ ಸಾಂಪ್ರದಾಯದಂತೆ ಪೂಜೆ ಮಾಡಿ, ನದಿಯಿಂದ ನೀರನ್ನು ಮನೆಗೆ ತಂದು ಬೆಲ್ಲದ ಅನ್ನವನ್ನು ಮಾಡಿ ಸೇವಿಸುತ್ತಾರೆ’ ಎಂದು ದಾಸನಪುರ ಗ್ರಾಮದ ಗಣೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೊಚ್ಚಿಕೊಂಡು ಬಂದ ಕಸದ ರಾಶಿ: ನದಿಯ ಹರಿವು ಹೆಚ್ಚಾದ ಕಾರಣ ನದಿಪಾತ್ರದಲ್ಲಿ ಅಲ್ಲಲ್ಲಿ ನಿಂತ ಕಸದ ರಾಶಿಗಳು ಈಗ ನೀರಿನೊಂದಿಗೆ ಬರುತ್ತಿವೆ. ನದಿಯ ಇಕ್ಕೆಲ್ಲಗಳಲ್ಲೂ ಕೊಚ್ಚಿಕೊಂಡು ಕಸದ ರಾಶಿ, ನದಿತೀರದ ಗ್ರಾಮಗಳ ವ್ಯಾಪ್ತಿಯ ದಂಡೆಯಲ್ಲಿ ರಾಶಿ ಬಿದ್ದಿವೆ.

ರೈತರಲ್ಲಿ ಮಂದಹಾಸ

ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. ನದಿಯ ನೀರನ್ನು ಕೆರೆ–ಕಟ್ಟೆಗಳಿಗೆ ಹಾಗೂ ನಾಲೆಗಳಿಗೆ ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಕಾವೇರಿ ನೀರಾವರಿ ನಿಗಮವನ್ನು ಒತ್ತಾಯಿಸಿದ್ದಾರೆ.

‘ಅನೇಕ ಗ್ರಾಮಗಳಲ್ಲಿ ಕೆರೆ–ಕಟ್ಟೆಗಳು ನೀರಿಲ್ಲದೆ ಒಣಗಿವೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ ಕಾವೇರಿ ನದಿ ಸಮೀಪದ ಕೆರೆ–ಕಟ್ಟೆಗಳು ಭರ್ತಿಯಾಗುತ್ತಿವೆ. ಈ ನೀರನ್ನೇ ನಂಬಿ ಅನೇಕ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತೇವೆ’ ಎಂದು ಧನಗರೆ ಗ್ರಾಮದ ರೈತ ಜೀವನ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT