ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ನಿರ್ವಹಣೆ, ಅರಣ್ಯ ಇಲಾಖೆ ಅಸಹಕಾರಕ್ಕೆ ಅತೃಪ್ತಿ

ಸಂಸದ ವಿ.ಶ್ರೀನಿವಾಸ ಪ್ರಸಾದ್‌ ನೇತೃತ್ವದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ, ಉಸ್ತುವಾರಿ ಸಮಿತಿ ಸಭೆ
Last Updated 12 ಜನವರಿ 2021, 13:38 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಸುವರ್ಣಾವತಿ ಜಲಾಶಯದಿಂದ ಪುಣಜನೂರಿನ ತಮಿಳುನಾಡಿನ ಗಡಿವರೆಗಿನ ರಾಷ್ಟ್ರೀಯ ಹೆದ್ದಾರಿ 209ರ ನಿರ್ವಹಣೆ ಹಾಗೂ ಅರಣ್ಯ ಇಲಾಖೆಯ ಅಸಹಕಾರದ ಬಗ್ಗೆ ಸಂಸದ ವಿ.ಶ್ರೀನಿವಾಸ ಪ್ರಸಾದ್‌, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎನ್‌.ಮಹೇಶ್‌ ಹಾಗೂ ಸಿ.ಎಸ್‌.ನಿರಂಜನಕುಮಾರ್‌ ಅವರು ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ ಹಾಗೂ ಸುವರ್ಣಾವತಿ ಜಲಾಶಯದಿಂದ ಪುಣಜನೂರುವರೆಗೆ ಹೆದ್ದಾರಿಯ ಅಗಲ ಕಡಿಮೆ ಇರುವುದರ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಆಯಿತು.

ತಮಿಳುನಾಡಿನ ಕಡೆಯಿಂದ ಬರುವ ರಾಷ್ಟ್ರೀಯ ಹೆದ್ದಾರಿ ಸಾಕಷ್ಟು ಅಗಲವಾಗಿ ಚೆನ್ನಾಗಿದೆ. ಅದೇ ನಮ್ಮ ರಾಜ್ಯಕ್ಕೆ ಬರುವಾಗ ಹೆದ್ದಾರಿ ಕಿರಿದಾಗಿದೆ. ರಸ್ತೆಯೂ ಕಿರಿದಾಗಿದೆ. ರಾಷ್ಟ್ರೀುಯ ಹೆದ್ದಾರಿ ಎಂದರೆ ಎಲ್ಲ ರಾಜ್ಯಗಳಲ್ಲೂ ಒಂದೇ ರೀತಿ ಇರಬೇಕು. ನಮ್ಮಲ್ಲಿ ಮಾತ್ರ ಈ ರೀರಿ ಯಾಕಿದೆ. ರಸ್ತೆ ಹದಗೆಟ್ಟಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ತಿಳಿಸಿದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ‘ಆ ರಸ್ತೆಯನ್ನು ಸ್ವಲ್ಪ ಅಗಲ ಮಾಡುವುದಕ್ಕೂ ಅರಣ್ಯ ಇಲಾಖೆಯವರು ಅವಕಾಶ ಕೊಡುವುದಿಲ್ಲ. ಇತ್ತೀಚೆಗೆ ಒಂದು ಜೆಸಿಬಿಯನ್ನು ಜಪ್ತಿ ಮಾಡಿದ್ದಾರೆ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ.ಜಿ.ಸಂತೋಷ್‌ಕುಮಾರ್‌ ಅವರು, ‘ಈಗ ಇರುವ ರಸ್ತೆಯನ್ನೇ ದುರಸ್ತಿ ಮಾಡುವುದಕ್ಕೆ ತೊಂದರೆ ಇಲ್ಲ. ಆದರೆ, ರಸ್ತೆಯನ್ನು ವಿಸ್ತರಿಸಲು ಅವಕಾಶ ಇಲ್ಲ. ಅದಕ್ಕೆ ಕೇಂದ್ರದ ಮಟ್ಟದಲ್ಲಿ ಅನುಮತಿ ಬೇಕಾಗುತ್ತದೆ. ಪೋರ್ಟಲ್‌ನಲ್ಲಿ ಮನವಿ ಸಲ್ಲಿಸಬೇಕು’ ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಶ್ರೀಧರ್‌ ಅವರು ಮಾತನಾಡಿ, ‘ಸದ್ಯ, ಈಗ ಇರುವ ರಸ್ತೆಯ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಈಗ ಮಳೆ ಬರುತ್ತಿರುವುದರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಳೆ ನಿಂತ ತಕ್ಷಣ ಮತ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದರು.

ಪರ್ಯಾಯ ಹೆದ್ದಾರಿಯ ಪ್ರಸ್ತಾಪ
‘ಅರಣ್ಯ ಪ್ರದೇಶವಾಗಿರುವುದರಿಂದ ಈಗ ಇರುವ ಹೆದ್ದಾರಿಯನ್ನೇ ವಿಸ್ತರಿಸಲು ಕಷ್ಟವಾಗುತ್ತಿದೆ. ಆನೆ ಕಾರಿಡಾರ್‌ ಆಗಿರುವುದರಿಂದ 10 ಕಡೆಗಳಲ್ಲಿ ಅಂಡರ್‌ಪಾಸ್‌ ಆಗಬೇಕು ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ನಿರ್ಮಾಣಕ್ಕೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ, ಇದೇ ವ್ಯಾಪ್ರಿಯಲ್ಲಿ ಪರ್ಯಾಯ ಮಾರ್ಗದ ಪ್ರಸ್ತಾವವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿದೆ. ಅದಕ್ಕೆ ಮೌಖಿಕ ಅನುಮತಿಯೂ ಸಿಕ್ಕಿದೆ’ ಎಂದು ಶ್ರೀಧರ್‌ ಅವರು ಮಾಹಿತಿ ನೀಡಿದರು.

‘ಚಿಕ್ಕಹೊಳೆ ಜಲಾಶಯದಿಂದ ಪುಣಜನೂರಿನ ಗಡಿವರೆಗೆ ಈಗ 24.28ಕಿ.ಮೀ ದೂರ ಇದೆ. ಹೊಸ ಪ್ರಸ್ತಾವಿತ ರಸ್ತೆಯು ಚಿಕ್ಕಹೊಳೆಯಿಂದ ತಮಿಳುನಾಡಿನ ತಾಳವಾಡಿ ಭಾಗವಾಗಿ ನಂತರ ಪುಣಜನೂರು ಸೇರುತ್ತದೆ. ಇದು 22.35 ಕಿ.ಮೀ ದೂರ ಇದೆ. ಈಗಿನ ರಸ್ತೆಗೆ ಹೋಲಿಸಿದರೆ 2 ಕಿ.ಮೀ ಕಡಿಮೆಯಾಗುತ್ತದೆ. ಇಲ್ಲಿ ಅರಣ್ಯ ಪ್ರದೇಶವೂ ಕಡಿಮೆ ಇದೆ. ಅಂದಾಜು ಎಂಟು ಕಿ.ಮೀ ಉದ್ದದ ರಸ್ತೆಯನ್ನು ನಾಲ್ಕು ಪಥವಾಗಿ ಅಭಿವೃದ್ಧಿ ಪಡಿಸಲು ಅವಕಾಶ ಇದೆ. ಈಗಿರುವ ಹೆದ್ದಾರಿ 5.5 ಮೀಟರ್‌ ಅಗಲವಿದ್ದರೆ, ಹೊಸ ರಸ್ತೆಯನ್ನು 10.5 ಮೀಟರ್‌ ಅಗಲಕ್ಕೆ ನಿರ್ಮಿಸಬಹುದು’ ಎಂದು ವಿವರಿಸಿದರು.

‘ಇದಕ್ಕಾಗಿ 44 ಹೆಕ್ಟೇರ್‌ ಜಮೀನು ಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ. ಅರಣ್ಯ ಭೂಮಿಯ ಪರಿವರ್ತನೆ ಆಗಬೇಕು. ಅದಕ್ಕಾಗಿ ಮುಖ್ಯ ವನ್ಯಜೀವಿ ಪರಿಪಾಲಕರು ಹಾಗೂ ವನ್ಯಜೀವಿ ಮಂಡಳಿಯ ಅನುಮತಿ ಬೇಕಾಗುತ್ತದೆ. ಈ ಪ್ರಕ್ರಿಯೆಗೆ ತಿಂಗಳುಗಳೇ ಬೇಕು. ಅನುಮತಿ ನೀಡಿದ ನಂತರ ಕಾಮಗಾರಿಯನ್ನು ಆರಂಭಿಸಬಹುದು’ ಎಂದರು.

ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಮಾತನಾಡಿ, ‘ಹೆದ್ದಾರಿ ವಿಷಯ ಅತ್ಯಂತ ಗಂಭೀರವಾಗಿದ್ದು, ಈ ಸಭೆಯಲ್ಲಿ ಪದೇ ಪದೇ ಇದೇ ವಿಚಾರ ಪ್ರಸ್ತಾಪವಾಗಬಾರದು. ಇದರ ಬಗ್ಗೆ ಜಿಲ್ಲಾಧಿಕಾರಿ ಅವರು ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬೇಗ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಕೊಳ್ಳೇಗಾಲ ನಗರ ವ್ಯಾಪ್ತಿಯಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಪಾದಚಾರಿ ಮಾರ್ಗ ನಿರ್ಮಿಸದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಶಾಸಕ ಎನ್‌.ಮಹೇಶ್‌ ಅವರು ತರಾಟೆಗೆ ತೆಗೆದುಕೊಂಡರು.

ಚಾಮರಾಜನಗರದಲ್ಲಿ ಜೋಡಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದೇ, ಯೋಜನೆಯನ್ನು ಮುಕ್ತಾಯಗೊಳಿಸಿರುವುದಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನರೇಗಾ: ಕೆಲಸ ಮಾಡದವರಿಗೂ ಕೂಲಿ
‘ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ) ಅಡಿಯಲ್ಲಿ ಕೆಲಸ ಮಾಡದವರಿಗೂ ಕೂಲಿ ಪಾವತಿಯಾಗಿದೆ. ಈ ಬಗ್ಗೆ ಕ್ರಮ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಶಾಸಕ ಸಿ.ಎಸ್‌.ನಿರಂಜನ ‌ಕುಮಾರ್‌ ಅವರು ದೂರಿದರು.

‘ಎನ್‌.ಮಹೇಶ್‌ ಅವರು ಮಾತನಾಡಿ, ‘ನರೇಗಾ ಅಡಿಯಲ್ಲಿ ಎಂಜಿನಿಯರ್‌ಗಳು ಅಕ್ರಮ ಎಸಗುತ್ತಿದ್ದಾರೆ. ಪಿಡಿಒಗಳು ಹಾಗೂ ಕಂಪ್ಯೂಟರ್‌ ಆಪರೇಟರ್‌ಗಳು ತಮ್ಮ ಸಂಬಂಧಿಕರು ಅಥವಾ ತಮಗೆ ಬೇಕಾದವರಿಗೆ ಗುತ್ತಿಗೆ ನೀಡುತ್ತಿದ್ದಾರೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೊಯರ್‌ ನಾರಾಯಣ ರಾವ್‌ ಅವರು, ‘ಈಗ ಲೆಕ್ಕ ಪರಿಶೋಧನೆ ನಡೆಯುತ್ತಿದೆ. ಅಕ್ರಮ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲಸ ಮಾಡದೇ ದುಡ್ಡು ಪಡೆದವರಿಂದ ಹಣವನ್ನು ವಾಪಸ್‌ ಪಡೆಯಲಾಗುತ್ತಿದೆ’ ಎಂದರು.

ಭತ್ತ ಖರೀದಿ ವಿಳಂಬಕ್ಕೆ ಅಸಮಾಧಾನ
ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಭತ್ತ ಖರೀದಿ ವಿಳಂಬ ಆಗುತ್ತಿರುವುದರ ಬಗ್ಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಪ್ರಸ್ತಾಪಿಸಿದರು. ಖರೀದಿ ಮಾಡದಿರುವುದರಿಂದ ರೈತರು ಕಡಿಮೆ ಬೆಲೆಗೆ ಖಾಸಗಿಯವರಿಗೆ ಮಾರಾಟ ಮಾಡಬೇಕಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಸಿ.ಎನ್‌.ರುದ್ರಸ್ವಾಮಿ ಅವರು, ‘ಖರೀದಿ ಕೇಂದ್ರ ತೆರೆದು ನೋಂದಣಿ ಮಾಡಿಕೊಂಡಿದ್ದೇವೆ. ಅಕ್ಕಿ ಸಂಗ್ರಹಿಸಲಿರುವ ಗಿರಣಿಗಳು ಖರೀದಿ ಏಜೆನ್ಸಿಗೆ ಆಸ್ತಿ ಅಡಮಾನ ಇಡಬೇಕಿತ್ತು. ‌ಗಿರಣಿ ಮಾಲೀಕರು ಹಿಂದೇಟು ಹಾಕಿದ್ದರಿಂದ ಖರೀದಿ ಆರಂಭವಾಗಿರಲಿಲ್ಲ. ಈಗ ಒಂದು ಗಿರಣಿ ಮುಂದೆ ಬಂದಿದ್ದು, ಮಂಗಳವಾರದಿಂದ ಖರೀದಿ ಆರಂಭಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಇದ್ದರು.

ವರ್ಷದ ಬಳಿಕ, ಎರಡು ಗಂಟೆ ಸಭೆ
ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಹಾಗೂ ಉಸ್ತುವಾರಿ ಸಮಿತಿ ಸಭೆಯು ನಿಯಮದ ಪ್ರಕಾರ, ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕು. ಈ ಹಿಂದೆ 2020ರ ಜನವರಿ 27ರಂದು ನಡೆದಿತ್ತು. ನಂತರ ಕೋವಿಡ್‌ ಕಾರಣದಿಂದ ನಡೆದಿರಲಿಲ್ಲ.

ವಿ.ಶ್ರೀನಿವಾಸ ಪ್ರಸಾದ್‌ ಅವರು ಸಂಸದರಾಗಿ ಆಯ್ಕೆಯಾದ ಮೇಲೆ ನಡೆಯುತ್ತಿರುವ ಎರಡನೇ ಸಭೆ ಇದು. 12 ಗಂಟೆಗೆ ಆರಂಭಗೊಂಡು ಎರಡು ಗಂಟೆಗೆ ಮುಕ್ತಾಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT