ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಯ್‌ ಈಗ ‘ಮಿಸ್ಟರ್ ಕರ್ನಾಟಕ’

ಕೆಸ್ತೂರು ಗ್ರಾಮದಿಂದ ರಾಜಧಾನಿಗೆ ಸೇರಿ ಜಿಮ್ ಅಪ್ಪಿಕೊಂಡ ಯುವಕ
Published 25 ಮೇ 2024, 7:55 IST
Last Updated 25 ಮೇ 2024, 7:55 IST
ಅಕ್ಷರ ಗಾತ್ರ

ಯಳಂದೂರು: ಭಾರತದಲ್ಲಿ ಯೋಗ, ವ್ಯಾಯಾಮ, ಕರಾಟೆ ಯುವ ಜನರನ್ನು ಇನ್ನಿಲ್ಲದಂತೆ ಸೆಳೆಯುತ್ತದೆ. ತೂಕ ಇಳಿಸಿಕೊಳ್ಳಲು ಯುವ ಜನರು ಹಲವು ಕಸರತ್ತುಗಳನ್ನು ನಡೆಸುತ್ತಾರೆ. ಸಿನಿಮಾ ಮತ್ತು ಕ್ರೀಡಾ ಸೆಲೆಬ್ರಿಟಿಗಳನ್ನು ನೋಡುತ್ತ, ಅವರಂತೆ ಕಾಣಬೇಕೆಂಬ ಉತ್ಕಟೆತೆಯಲ್ಲಿ ‘ಜಿಮ್’ ಸಿದ್ಧಿಸಿಕೊಂಡ ಅಪರೂಪದ ಪಟುಗಳು ಗ್ರಾಮೀಣ ಭಾಗದಲ್ಲೂ ಇದ್ದಾರೆ. ಅವರಲ್ಲೊಬ್ಬರು ತಾಲ್ಲೂಕಿನ ಕೆಸ್ತೂರಿನ ಅಜಯ್‌ ಎಂ. 

‘ಮಿಸ್ಟರ್ ಕರ್ನಾಟಕ’ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದು ಬೀಗಿದ್ದಾರೆ ಅಜಯ್‌. 

ಅಜಯ್‌ 23ರ ಯುವಕ. ತಂದೆ ಮಾದೇಶ್ ಕೃಷಿಕರು. ತಾಯಿ ಚಿನ್ನಮ್ಮ ಗೃಹಿಣಿ. ಮಗ ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂಬುದು ಇವರ ಕನಸು. ಹಾಗಾಗಿ, ಬಾಲ್ಯದಲ್ಲಿ ಯಳಂದೂರು ಮತ್ತು ಕೊಳ್ಳೇಗಾಲದಲ್ಲಿ ಓದಿಸಿದರು. ಈಗ ಇವರು ಐಟಿಐ ಪೂರೈಸಿ, ಬಿಇಎಲ್‌ನಲ್ಲಿ ದುಡಿಯುತ್ತ ಬಿಡುವಿನ ಸಮಯದಲ್ಲಿ ಜಿಮ್‌ನಲ್ಲಿ ದೇಹವನ್ನು ಹುರಿಗೊಳಿಸುತ್ತಿದ್ದಾರೆ. ಅಲ್ಲದೇ ತರಬೇತುದಾರರಾಗಿ ಗುರುತಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ದೇಹದಾರ್ಢ್ಯದಲ್ಲಿ ಇನ್ನಷ್ಟು ಸಾಧನೆ ಮಾಡುವ ಕನಸು ಇವರದು. 

‘ಪ್ರೌಢಶಾಲೆಯಲ್ಲಿ ಇದ್ದಾಗ ಮನಸ್ಸು ಜಿಮ್‌ನತ್ತ ಹೊರಳಿತು. ಸಿನಿಮಾಗಳಲ್ಲಿ ನಾಯಕ ಜಿಮ್ ಮಾಡುತ್ತ ಆಕರ್ಷಕ ದೇಹದಾರ್ಢ್ಯ ಸಿದ್ಧಿಸಿಕೊಳ್ಳುವುದನ್ನು ಕಂಡು ಪುಳಕಿತನಾಗುತ್ತಿದ್ದೆ. ಸಹಪಾಠಿಗಳನ್ನು ಹೊಂದಿಸಿಕೊಂಡು ಊರಿನಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ಜಿಮ್ ಅಭ್ಯಾಸ ಶುರುಮಾಡಿದೆ. ನನ್ನ ಹುಚ್ಚಾಟ ಕಂಡು ಪೋಷಕರು ಗದರಿದರು. ಸ್ನೇಹಿತರು ದೂರಾದರು. ಒಟ್ಟಾರೆ, ಮನದ ಮೂಲೆಯಲ್ಲಿ ಸುಪ್ತವಾಗಿದ್ದ ಜಿಮ್ ಕಲಿಯುವ ಆಸೆ ಬೆಂಗಳೂರಿಗೆ ಬಂದಾಗ ಗರಿ ಬಿಚ್ಚಿತು’ ಎನ್ನುತ್ತಾರೆ ಅಜಯ್.

‘ಹಳ್ಳಿಯಲ್ಲಿ ಜಿಮ್ ತರಬೇತಿ ಪಡೆಯುವ ಬಗ್ಗೆ ತಿಳಿದಿರಲಿಲ್ಲ. ಗೆಳೆಯರಿಗೂ ಇದರ ಬಗ್ಗೆ ಗೊತ್ತಿರಲಿಲ್ಲ, ಕಲಿಕೆ ಸಮಯ ತಂದೆಯಿಂದ ಒಂದೆರಡು ಬಾರಿ ಏಟು ಬಿದ್ದಿತ್ತು. ಬೆಂಗಳೂರಿನಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ ಅಪ್ರೆಂಟಿಸ್ ಉದ್ಯೋಗ ಸಿಕ್ಕಾಗ ಜಿಮ್ ಕಲಿಯುವ ಆಸೆಗೆ ರೆಕ್ಕೆ ಬಂದಿತು. ಈ ಸಮಯ ಮಿಸ್ಟರ್ ವರ್ಡ್ ವಿಜೇತ ಪವನ್ ಶೆಟ್ಟಿ ಪರಿಚಿತರಾದರು. ನನ್ನ ಆಸೆಯನ್ನು ಅಭಿವ್ಯಕ್ತಿಪಡಿಸಿದಾಗ ಅವಕಾಶ ನೀಡಿದರು. ಕೆಲಸದ ನಡುವೆ ಸಮಯ ಹೊಂದಿಸಿಕೊಂಡು ಜಿಮ್ ತರಬೇತಿ ಪಡೆದೆ. 80 ದಿನಗಳಲ್ಲಿ ಸ್ಪರ್ಧೆಗೆ ಅಣಿಯಾಗುವ ಹಂತ ತಲುಪಿದೆ’ ಎಂದು ಅವರು ಹೇಳಿದರು. 

ನ್ಯಾಚುರಲ್ ಬಾಡಿ ಬಿಲ್ಡರ್

‘ನನ್ನ ಆಸಕ್ತಿಗೆ ನೆರವಾದವರು ಗುರು ಪವನ್ ಶೆಟ್ಟಿ. ಇವರೇ ಮೊದಲ ಕೋಚ್. ಆರ್ಥಿಕ ಅಡಚಣೆ ನಡುವೆಯೂ ಜಿಮ್ ಹೋರಾಟಕ್ಕೆ ಪ್ರೋತ್ಸಾಹ ಮತ್ತು ಸ್ಪೂರ್ತಿ ತುಂಬಿದರು. ತರಬೇತಿ ಪಡೆದ ಮೊದಲ ಯತ್ನದಲ್ಲಿ 2023 ಅಕ್ಟೋಬರ್‌ನಲ್ಲಿ ನಡೆದ 75 ಕೆಜಿಯೊಳಗಿನ ‘ಮಿಸ್ಟರ್ ಕರ್ನಾಟಕ’ದಲ್ಲಿ ಭಾಗವಹಿಸಲು ಮಾರ್ಗದರ್ಶನ ಮಾಡಿದರು. ಮೂರನೇ ವಿಭಾಗದಲ್ಲಿ ಪ್ರಶಸ್ತಿ ಒಲಿಯಿತು. ಇದು ಮುಂದೆ ರಾಷ್ಟ್ರ ಮಟ್ಟದ ಜಿಮ್ ಸ್ಪರ್ಧೆ ಮಾಡುವಂತೆ ನನಗೆ ಪ್ರೇರಣೆ ನೀಡಿದೆ’ ಎಂದು ಅಜಯ್ ಬಿಚ್ಚಿಟ್ಟರು.

ಜಿಮ್‌ನಲ್ಲಿ ಪುಷ್ ಅಪ್ ಲ್ಯಾಟ್ ಪುಲ್ ಡೌನ್ ಫ್ಲಾಟ್ ಬೆಂಚ್ ಮತ್ತು ಡಂಬೆಲ್ ಪ್ರೆಸ್ ಕೇಬಲ್ ಕರ್ಲ್ ಸೇರಿದಂತೆ ಇನ್ನಿತರ ಕಠಿಣ ಕಸರತ್ತುಗಳನ್ನು ನಿರ್ವಹಿಸಲು ಔಷಧಗಳನ್ನು ಬಳಸುವವರು ಇದ್ದಾರೆ. ಆದರೆ ನಾನು ದೇಹ ದಂಡನೆ ಸಿಕ್ಸ್ ಪ್ಯಾಕ್ ಮತ್ತು ಜೀರೋ ಸೈಜ್  ಇರಲು ನೈಸರ್ಗಿಕ ವಿಧಾನ ಅನುಸರಿಸುತ್ತೇನೆ. ಇದರಿಂದ ದೇಹದ ಸ್ನಾಯು ಮತ್ತು ಮಾಂಸ ಖಂಡಗಳು ದೀರ್ಘಾವಧಿ ತನಕ ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ. ದೇಹವನ್ನು ಒತ್ತಡ ರಹಿತವಾಗಿ ಹೃದಯ ಮತ್ತು ಮನಸ್ಸು ಸಹ ಸ್ಪಂದಿಸಲು ಈ ವಿಧಾನ ಸೂಕ್ತ’ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT