ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ:ಕೇಂದ್ರದ ವಿರುದ್ಧ ಆಕ್ರೋಶ, ಪ್ರತಿಭಟನೆ ಶಾಂತಿಯುತ

ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ವಿರುದ್ಧ ಬೀದಿಗಿಳಿದ ಮುಸ್ಲಿಂ ಸಮುದಾಯ, ಪ್ರಗತಿ‍ಪರ ಸಂಘಟನೆಗಳ ಬೆಂಬಲ
Last Updated 24 ಡಿಸೆಂಬರ್ 2019, 10:48 IST
ಅಕ್ಷರ ಗಾತ್ರ

ಚಾಮರಾಜನಗರ: ಕೇಂದ್ರ ಸರ್ಕಾರ ರೂಪಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಪ್ರಸ್ತಾವಿತ ರಾಷ್ಟ್ರೀಯ ಪೌರತ್ವ ನೋಂದಣಿ (‌ಎನ್‌ಆರ್‌ಸಿ) ಜಾರಿ ವಿರೋಧಿಸಿ ಮುಸ್ಲಿಂ ಸಮುದಾಯ ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿತು.

ಎನ್‌ಆರ್‌ಸಿ ಮತ್ತು ಸಿಎಎ ವಿರೋಧಿ ಒಕ್ಕೂಟ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.

ಪ್ರತಿಭಟನೆಗೆ ಜಿಲ್ಲಾ ಪೊಲೀಸ್‌ ಅನುಮತಿ ನೀಡದಿದ್ದರೂ ಸಾವಿರಾರು ಮಂದಿ ಬೀದಿಗಿಳಿದು ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಧರ್ಮ ಆಧರಿತವಾಗಿ ದೇಶವನ್ನು ವಿಭಜಿಸುವ ಈ ಎರಡೂ ಕಾನೂನುಗಳನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು, ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ’ ಎಂದು ಒಕ್ಕೊರಲಿನಿಂದ ಕೂಗಿದರು.

ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್‌ ವಹಿಸಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್‌ ಅವರು ಬಂದೋಬಸ್ತ್‌ನ ನೇತೃತ್ವ ವಹಿಸಿದ್ದರು.

ಕೇಂದ್ರದ ವಿರುದ್ಧ ಆಕ್ರೋಶ: ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಕಾರರು, ನಗರದ ಪ್ರವಾಸಿ ಮಂದಿರದಿಂದ ಡೀವಿಯೇಷನ್‌ ರಸ್ತೆಯ ಮೂಲಕ ಭುವನೇಶ್ವರಿ ವೃತ್ತದವರೆಗೂ ಮೆರವಣಿಗೆ ನಡೆಸಿದರು.

ತ್ರಿವರ್ಣ ಧ್ವಜ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್‌ ಅಂಬೇಡ್ಕರ್‌ ಅವರ ಭಾವಚಿತ್ರಗಳನ್ನು ಹಿಡಿದಿದ್ದ ಪ್ರತಿಭಟನೆ ನಿರತರು, ‘ಸಿಎಎ ವಾಪಸ್‌ ಪಡೆಯಿರಿ’, ‘ಎನ್‌ಆರ್‌ಸಿ ತಡೆಯಿರಿ’, ‘ಭಾರತೀಯ ಸಂವಿಧಾನ ಉಳಿಸಿರಿ’ ಮುಂತಾದ ಬರಹಗಳಿದ್ದ ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತ ಮೆರವಣಿಗೆಯಲ್ಲಿ ಸಾಗಿದರು.

ಭಗತ್‌ ಸಿಂಗ್‌, ಅಂಬೇಡ್ಕರ್‌, ಮಹಾತ್ಮ ಗಾಂಧೀಜಿ, ಚಂದ್ರಶೇಖರ ಆಜಾದ್‌ ಸೇರಿದಂತೆ ಹಲವು ರಾಷ್ಟ್ರನಾಯಕರ ಪರ ಘೋಷಣೆಗಳನ್ನು ಕೂಗುವುದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ‘ಭಾರತ ದೇಶ ನಮ್ಮದು’, ‘ಹಿಂದೂ ಮುಸ್ಲಿಂ ಒಂದು’ ಎಂಬ ಉದ್ಗಾರ ತೆಗೆದರು.

ಬಹಿರಂಗ ಸಭೆ: ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನಕಾರರು ಬಹಿರಂಗ ಸಭೆ ನಡೆಸಿದರು. ಸಭೆಯ ಆರಂಭದಲ್ಲೇ ಎಲ್ಲರೂ ಸಾಮೂಹಿಕವಾಗಿ ರಾಷ್ಟ್ರಗೀತೆಯನ್ನು ಹಾಡಿದರು. ಸಭೆಯಲ್ಲಿ ಮಾತನಾಡಿದವಿವಿಧ ಸಂಘಟನೆಗಳ ಮುಖಂಡರು ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಆಕ್ರೋಶ ಹೊರ ಹಾಕಿದರು.

ರಂಗಕರ್ಮಿ ಹಾಗೂ ನಾಗರಿಕ ಹಕ್ಕುಗಳಿಗಾಗಿ ಜನರ ಒಕ್ಕೂಟದ ಕೆ.ವೆಂಕಟರಾಜು ಮಾತನಾಡಿ, ‘ಸಿಎಎ ಹಾಗೂ ಎನ್‌ಆರ್‌ಸಿಗಳು ಧರ್ಮಾಧರಿತವಾಗಿ ದೇಶವನ್ನು ಒಡೆಯುವ ಕಾನೂನುಗಳು. ಇವೆರಡೂ ಬೇರೆ ಬೇರೆ ಅಲ್ಲ. ಇವುಗಳಿಂದ ಮುಸ್ಲಿಮರಿಗೆ ಮಾತ್ರವಲ್ಲ; ಹಿಂದೂಗಳಿಗೆ ತೊಂದರೆ ಆಗುತ್ತದೆ. ಕೇಂದ್ರ ಸರ್ಕಾರ ಆರು ವರ್ಷಗಳಿಂದ ವಿಭಜಕ ನೀತಿಯನ್ನೇ ಅನುಸರಿಸಿಕೊಂಡು ಬಂದಿದೆ. ಈಗ ಅದು ಅಂತಿಮ ಘಟ್ಟಕ್ಕೆ ತಲುಪುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಒಕ್ಕೂಟದ ಮೌಲಾನಾ ಮಹಮ್ಮದ್‌ ಇಸ್ಮಾಯಿಲ್‌ ರಶೀದಿ ಇಸ್ಮಾಯಿಲ್‌ ಮಾತನಾಡಿ, ‘ಮುಸ್ಲಿಮರು ಈ ದೇಶದ ಪ್ರಜೆಗಳು. ನಾವೂ ಭಾರತೀಯರೇ.ಯಾವುದೇ ಕಾರಣಕ್ಕೂ ಸಿಎಎ ಮತ್ತು ಎನ್‌ಆರ್‌ಸಿಯನ್ನು ನಾವು ಒಪ್ಪುವುದಿಲ್ಲ. ಕೇಂದ್ರ ಸರ್ಕಾರ ಇವುಗಳನ್ನು ಜಾರಿಗೊಳಿಸಲು ಮುಂದಾಗಬಾರದು’ ಎಂದರು.

ಉಪ್ಪಾರ ಸಮುದಾಯದ ಮುಖಂಡ ಜಿ.ಎಂ.ಗಾಡ್ಕರ್‌, ಎಸ್‌ಡಿಪಿಐ ಮುಖಂಡ ಅಬ್ರಾರ್‌ ಅಹಮದ್‌, ದಲಿತಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ, ಬಹುಜನ ವಿದ್ಯಾರ್ಥಿ ಸಂಘದ ಪರ್ವತರಾಜ್ ಮಾತನಾಡಿದರು.

ಎನ್‌ಆರ್‌ಸಿ, ಸಿಎಎ ವಿರೋಧಿ ಒಕ್ಕೂಟದ ಸಂಚಾಲಕ ಮೌಲನಾ ಮುಫ್ತಿ ಜಾಫರ್‌ ಹುಸೇನ್‌, ಆಯೋಜಕರಾದ ಮೌಲಾನ ಮಹಮ್ಮದ್‌ ಮುಸೀನ್‌ ಸಿದ್ದಿಕಿ, ಮೌಲಾನಾ ಮಹಮ್ಮದ್‌ ಉಮ್ಮರ್‌ ಫಾರೂಖಿ ಉಮ್ರಿ, ಮೌಲಾನಾ ಅಬ್ದುಲ್‌ ಖಾದೀರ್‌ ರಶೀದಿ, ಮುಖಂಡರಾದ ಸೈಯದ್‌ ರಫಿ, ಮಹಮ್ಮದ್‌ ಅಸ್ಗರ್‌ ಮುನ್ನಾ, ಎಸ್‌ಡಿಪಿಐ ಮುಖಂಡ ಮಹೇಶ್‌ ಸೇರಿದಂತೆ ಹಲವರು ಇದ್ದರು.

ಅಂಗಡಿಗಳು ಬಂದ್‌

ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ, ಮುಸ್ಲಿಂ ಸಮುದಾಯದವರು ತಮ್ಮ ಅಂಗಡಿಗಳನ್ನು ಸಂಜೆ 5 ಗಂಟೆವರೆಗೂ ಮುಚ್ಚಿದ್ದರು.

ಭದ್ರತೆಯಲ್ಲಿ ನಿರತರಾಗಿದ್ದ ಪೊಲೀಸ್‌ ಸಿಬ್ಬಂದಿಗೆ, ಪ್ರತಿಭಟನೆ ಆಯೋಜಕರು ಗುಲಾಬಿಗಳನ್ನು ಹೂವುಗಳನ್ನು ನೀಡುತ್ತಿದ್ದುದು ಕಂಡು ಬಂತು. ದೇಶದ ಧ್ವಜದ ಮೂರು ಬಣ್ಣಗಳಾದ ಕೇಸರಿ, ಬಿಳಿ ಹಸಿರು ಬಟ್ಟೆಯ ದಿರಿಸು ಧರಿಸಿದ್ದ ಬಾಲಕಿ ಮೆರವಣಿಗೆಯಲ್ಲಿ ಗಮನಸೆಳೆದಳು.

ಸಂಚಾರ ನಿಷೇಧ: ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಭುವನೇಶ್ವರಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಯಿತು. ಪರ್ಯಾಯ ರಸ್ತೆಗಳಲ್ಲಿ ಸಂಚರಿಸುವಂತೆ ಸವಾರರಿಗೆ ಪೊಲೀಸರು ಸೂಚಿಸಿದರು. ಬಹಿರಂಗ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಆ ಮಾರ್ಗದಲ್ಲಿ ಬಂದ ನಾಲ್ಕು ಆಂಬುಲೆನ್ಸ್‌ಗಳಿಗೆ ದಾರಿ ಮಾಡಿಕೊಟ್ಟರು.

ಬಿಗಿ ಬಂದೋಬಸ್ತ್‌

ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು. ಹಾಗಾಗಿ, ಯಾವುದೇ ಅಹಿತಕರ ನಡೆಯಲಿಲ್ಲ. ಶಾಂತಿಯುತವಾಗಿ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌, ‘ಪ್ರತಿಭಟನೆಗೆ ನಾವು ಅನುಮತಿ ನೀಡಿಲ್ಲ. ಆದರೆ, ಒಕ್ಕೂಟ ಹಾಗೂ ಇತರ ಸಂಘಟನೆಗಳು ಸೇರಿ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ಕ್ರಮ ಕೈಗೊಂಡಿದ್ದೇವೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಸಂಘಟಕರು ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ನಂತರ ಕ್ರಮ ಕೈಗೊಳ್ಳಬಹುದು’ ಎಂದು ಹೇಳಿದರು.

ಜಿಲ್ಲಾಧಿಕಾರಿಗೆ ಮನವಿ

ಪ್ರತಿಭಟನೆ ಹಾಗೂ ಬಹಿರಂಗ ಸಭೆಯ ನಂತರ ಆಯೋಜಕರು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

‘ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರೂಪಿಸಿ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿದೆ. ಸಿಎಎ ಮತ್ತು ಎನ್‌ಆರ್‌ಸಿಗಳಿಂದಾಗಿ ಮುಸ್ಲಿಮರಿಗೆ ಅಭದ್ರತೆ ಭಾವನೆ ಉಂಟಾಗಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಒಕ್ಕೂಟ ಬಲವಾಗಿ ಖಂಡಿಸುತ್ತದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ವಾಪಸ್‌ ಪಡೆಯಬೇಕು ಹಾಗೂ ಎನ್‌ಆರ್‌ಸಿಯನ್ನು ದೇಶದಾದ್ಯಂತ ಜಾರಿ ಮಾಡಬಾರದು’ ಎಂದು ಮನವಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT