ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಮುವಾದಿ ಶಕ್ತಿ ಸೋಲಿಸಲು ಬೆಂಬಲಿಸಿ:ನಾರಾಯಣ

ಸಫಾಯಿ ಕರ್ಮಚಾರಿ, ಪೌರಕಾರ್ಮಿಕ ಸಂಘಟನೆಗಳ ಒಕ್ಕೂಟದ ಬೆಂಬಲ ಕಾಂಗ್ರೆಸ್‌ಗೆ
Published 17 ಏಪ್ರಿಲ್ 2024, 5:52 IST
Last Updated 17 ಏಪ್ರಿಲ್ 2024, 5:52 IST
ಅಕ್ಷರ ಗಾತ್ರ

ಚಾಮರಾಜನಗರ: ‘ ಕೇಂದ್ರ ಸರ್ಕಾರ 10 ವರ್ಷಗಳಲ್ಲಿ ದೇಶದಲ್ಲಿರುವ 12 ಲಕ್ಷ ಮಂದಿ ಸಫಾಯಿ ಕರ್ಮಚಾರಿಗಳಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರಕ್ಕಾಗಿ ಪೌರಕಾರ್ಮಿಕರ ಪಾದಪೂಜೆ ಮಾಡಿದ್ದಾರೆಯೇ ವಿನಾ, ಸಮುದಾಯದವರ ಸಂಕಷ್ಟಕ್ಕೆ ಸ್ಪಂದಿಸಿಲ್ಲ’ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ, ಪೌರಕಾರ್ಮಿಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಮೈಸೂರಿನ ಮಾಜಿ ಮೇಯರ್‌ ನಾರಾಯಣ ಮಂಗಳವಾರ ದೂರಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದಾದ್ಯಂತ ಕಾರ್ಯನಿರ್ವಹಿಸುವ ಸಫಾಯಿ ಕರ್ಮಚಾರಿಗಳಿಗೆ ಸೇವಾ ಭದ್ರತೆ, ಆರೋಗ್ಯ ಭದ್ರತೆ ಸೇರಿದಂತೆ ಗೌರವಯುತವಾಗಿ ಬದುಕಲು ಸೌಲಭ್ಯಗಳು ಬೇಕಾಗಿದೆ. ಕೇಂದ್ರ ಸರ್ಕಾರ ಯಾವುದೇ ಸೌಕರ್ಯಗಳನ್ನು ಕಲ್ಪಿಸಿಲ್ಲ. ಆದರೆ, ರಾಜ್ಯದ ಸರ್ಕಾರ ಪೌರಕಾರ್ಮಿಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದರು. 

‘ಪೌರಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವನ್ನು ರಚನೆ ಮಾಡಿದೆ. ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ನೇರ ಪಾವತಿ ವ್ಯವಸ್ಥೆ ಜಾರಿಗೆ ತಂದಿದೆ. ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರಿಗೆ ಕನಿಷ್ಠ ವೇತನವನ್ನು ₹7000ದಿಂದ ₹17 ಸಾವಿರಕ್ಕೆ ಹೆಚ್ಚಿಸಲಾಗಿದೆ. ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ಮೈಸೂರು ನಗರದ ಕಾಯಂ ಪೌರಕಾರ್ಮಿಕರಿಗೆ 520 ವಸತಿ ಗೃಹಗಳ ಮಾಲೀಕತ್ವ ನೀಡಲಾಗಿತ್ತು. ಇದಲ್ಲದೇ ಹಲವು ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿದೆ’ ಎಂದರು. 

‘ಈ ಬಾರಿಯ ಚುನಾವಣೆಯಲ್ಲಿ ಸಂವಿಧಾನ ವಿರೋಧಿ, ಕೋಮುವಾದಿ ಶಕ್ತಿಗಳನ್ನು ಸೋಲಿಸಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕಾಂಗ್ರೆಸ್‌ ಬೆಂಬಲಿಸಬೇಕು’ ಎಂದು ನಾರಾಯಣ ಮನವಿ ಮಾಡಿದರು. 

‘ಪೌರಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಶಂಕರ ಅಂಕನಶೆಟ್ಟಿಪುರ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ದೇಶದ ಹಿತದೃಷ್ಟಿಯಿಂದ ಈ ಬಾರಿಯ ಚುನಾವಣೆ ಮಹತ್ವದ್ದಾಗಿದ್ದರಿಂದ ನಾವು ಶಂಕರ ಅವರ ಮನವೊಲಿಸಿ ಅವರು ನಾಮಪತ್ರ ವಾಪಸ್‌ ಪಡೆಯುವಂತೆ ಮಾಡಿದೆವು’ ಎಂದರು.

ಮುಖಂಡ ಸಂಘಸೇನಾ ಮಾತನಾಡಿ, ‘ಆದಿ ಕರ್ನಾಟಕ, ಆದಿ ಜಾಂಬವ ಮತ್ತು ಆದಿ ದ್ರಾವಿಡ ಐಕ್ಯತಾ ಸಮಿತಿಯನ್ನು ರಚಿಸಿಕೊಂಡು ನಾವು ಕ್ಷೇತ್ರದಾದ್ಯಂತ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಶಂಕರ ಅವರು ಸ್ಪರ್ಧಿಸಿದ್ದರಿಂದ ಕಾಂಗ್ರೆಸ್‌ಗೆ ಸಮಸ್ಯೆಯಾಗುತ್ತಿತ್ತು. ನಾವು ಮುಖಂಡರೆಲ್ಲ ಸೇರಿ, ಕಣದಿಂದ ಹಿಂದೆ ಸರಿಯುವಂತೆ ಅವರನ್ನು ಮನವೊಲಿಸಿದೆವು’ ಎಂದರು. 

ಶಂಕರ ಅಂಕನಶೆಟ್ಟಿಪುರ ಮಾತನಾಡಿದರು. ಮುಖಂಡರಾದ ಆರ್‌.ಶಿವಣ್ಣ, ಆರ್‌.ದಾಸ್‌, ಚೆಲುವರಾಜು, ಮೈಸೂರು ಪೌರಕಾರ್ಮಿಕರ ಸಂಘದ ಅಧ್ಯಕ್ಷ ಆರ್ಟಿಸ್ಟ್‌ ಎಸ್‌.ನಾಗರಾಜು ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT