ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ನಾಗಶ್ರೀ ಅಸಮಾಧಾನ ಶಮನ, ಸೋಮಣ್ಣಗೆ ಬೆಂಬಲ ಘೋಷಣೆ

Last Updated 16 ಏಪ್ರಿಲ್ 2023, 14:03 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಪಕ್ಷದ ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್‌ ಅವರನ್ನು ಮನವೊಲಿಸಲು ವ‌ರಿಷ್ಠರು ಯಶಸ್ವಿಯಾಗಿದ್ದು, ಪಕ್ಷದ ಅಭ್ಯರ್ಥಿ ಸಚಿವ ಸಿ.ಸೋಮಣ್ಣ ಅವರಿಗೆ ನಾಗಶ್ರೀ ಬೆಂಬಲ ಘೋಷಿಸಿದ್ದಾರೆ.

ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ನಾಗಶ್ರೀ ಟಿಕೆಟ್‌ ಸಿಗದೇ ಇದ್ದುದರಿಂದ ಅಸಮಾಧಾನಗೊಂಡಿದ್ದರು. ಬೆಂಬಲಿಗರು, ಕಾರ್ಯಕರ್ತರು ಬಂಡಾಯ ಎದ್ದು, ಪಕ್ಷೇತರ ಅಭ್ಯರ್ಥಿಯಾಗುವಂತೆ ಒತ್ತಡ ಹಾಕಿದ್ದರು. ನಿರ್ಧಾರ ಕೈಗೊಳ್ಳಲು ನಾಗಶ್ರೀ ಎರಡು ದಿನಗಳ ಕಾಲಾವಕಾಶ ಕೇಳಿದ್ದರು. ಇದರ ನಡುವೆ ಸ್ವತಃ ಸೋಮಣ್ಣ, ಜಿಲ್ಲಾ ಚುನಾವಣಾ ಉಸ್ತುವಾರಿ ಡಾ.ದಿಲೀಪ್‌ ಜೈಸ್ವಾಲ್‌, ಮೈಸೂರು ಪ್ರಭಾರಿ ಮೈ.ವಿ.ರವಿಶಂಕರ್‌ ಅವರ ಮನೆಗೆ ಭೇಟಿ ನೀಡಿ ಮನವೊಲಿಸುವ ಯತ್ನ ಮಾಡಿದ್ದರು. ಸೋಮಣ್ಣ ಪತ್ನಿ ಶೈಲಜಾ ಕೂಡ ಭೇಟಿ ಮಾಡಿ ಬೆಂಬಲ ಕೋರಿದ್ದರು.

ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಕರೆ ಮಾಡಿ, ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಸೂಚಿಸಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ ನಾಗಶ್ರೀ, ‘ಕ್ಷೇತ್ರ, ಜಿಲ್ಲೆಯಲ್ಲಿ ಬಿಜೆಪಿಯನ್ನೇ ಗೆಲ್ಲಿಸುವುದು ನನ್ನ ಗುರಿ, ಪಕ್ಷದ ತೀರ್ಮಾನಕ್ಕೆ ಬದ್ಧಳಾಗಿ ಅಭ್ಯರ್ಥಿ ಸೋಮಣ್ಣ ಅವರನ್ನು ಬೆಂಬಲಿಸುತ್ತೇನೆ. ಬಂಡಾಯ, ಇಲ್ಲವೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಯೋಚನೆಗಳು ನನ್ನಲ್ಲಿಲ್ಲ. ಪಕ್ಷದ ವರಿಷ್ಠರ ತೀರ್ಮಾನದಂತೆ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವುದು ನಮ್ಮ ಗುರಿ’ ಎಂದರು.

‘ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದೆ. ವರಿಷ್ಠರು ಈ ಬಾರಿ ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾಸ ಇತ್ತು. ಆದರೆ, ಪಕ್ಷದ ಹೈಕಮಾಂಡ್ ಸಚಿವ ವಿ. ಸೋಮಣ್ಣ ಅವರಿಗೆ ಟಿಕೆಟ್ ನೀಡಿದೆ. ಟಿಕೆಟ್‌ ತಪ್ಪಿದ್ದರಿಂದ ಬೇಸರವಾಗಿದ್ದು ನಿಜ. ಮೌನವಾಗಿದ್ದೆ. ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಿರಲಿಲ್ಲ. ಎರಡು ದಿನಗಳ ಕಾಲಾವಕಾಶ ಕೇಳಿದ್ದೇನೆ. ಹಿರಿಯ ಮುಖಂಡರು, ಬೆಂಬಲಿಗರು, ಹಿತೈಷಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬಂದಿದ್ದು, ಪಕ್ಷದ ತೀರ್ಮಾನವನ್ನು ಗೌರವಿಸುವ ಜೊತೆಗೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಶ್ರಮಿಸುತ್ತೇನೆ’ ಎಂದರು.

'ನನ್ನ ಬೆಂಬಲಿಗರು ಹಾಗೂ ಹಿತೈಷಿಗಳು ಪಕ್ಷದ ವಿರುದ್ದ ಅಸಮಾಧಾನಗೊಂಡು ಬಂಡಾಯ ಹಾಗೂ ಪಕ್ಷೇತರವಾಗಿ ಸ್ಪರ್ಧೆ ಮಾಡುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮತ್ತೆ ಕೆಲವರು ಪಕ್ಷದಲ್ಲಿ ಮುಂದುವರಿಯುವಂತೆ ತಿಳಿಸಿದ್ದರು. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಸಿದ್ದಾಂತದಲ್ಲಿ ಬಿಜೆಪಿಯನ್ನು ಸಂಘಟನೆ ಮಾಡುವವವರು ನಾವು. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಶ್ರಮಿಸುತ್ತೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ ಮಾಡುವುದು ನಮ್ಮ ಉದ್ದೇಶವಾಗಿದೆ’ ಎಂದು ಹೇಳಿದರು.

‘ಸಂಸದ ವಿ. ಶ್ರೀನಿವಾಸಪ್ರಸಾದ್ ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆದುಕೊಂಡಿದ್ದೇನೆ. ಅವರು ನನ್ನ ಪರವಾಗಿ ಧ್ವನಿಯಾಗಿದ್ದರು. ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಸೇರಿದಂತೆ ಅನೇಕ ರಾಜ್ಯ ನಾಯಕರು ಕರೆ ಮಾಡಿ, ಪಕ್ಷ ಸೂಕ್ತವಾದ ನಿರ್ಧಾರ ತೆಗೆದುಕೊಂಡಿದೆ. ನಿಮಗೆ ದುಃಖವಾಗಿರುವುದು ಸಹಜ. ಪಕ್ಷ ಸಂಘಟನೆಯಲ್ಲಿ ಮುಂದುವರಿಯುವಂತೆ ಸೂಚನೆ ಕೊಟ್ಟಿದ್ದಾರೆ. ಸಚಿವ ವಿ.ಸೋಮಣ್ಣ ಮತ್ತು ಅವರ ಪತ್ನಿ ಕೂಡ ನಿವಾಸಕ್ಕೆ ಭೇಟಿ ನೀಡಿದ್ದರು. ಪಕ್ಷ ತಾಯಿ ಸಮನವಾಗಿತ್ತು. ಪಕ್ಷದ ಹಿತವನ್ನು ಬಲಿಕೊಡುವ ವ್ಯಕ್ತಿ ನನ್ನಲ್ಲ. ಜೆಡಿಎಸ್ ಮುಖಂಡರು ಸಹ ಸಂಪರ್ಕ ಮಾಡಿದ್ದರು. ಎಂಟು ವರ್ಷಗಳಿಂದ ಬಿಜೆಪಿ ಶಿಸ್ತಿನ ಶಿಪಾಯಿಯಾಗಿ ದುಡಿಯುತ್ತಿದ್ದು, ಮುಂದಿನ ದಿನಗಳಲ್ಲಿ ಅವಕಾಶ ದೊರೆಯುತ್ತವೆ’ ಎಂಬ ಅತ್ಮವಿಶ್ವಾಸ ಇದೆ’ ಎಂದರು.

ಜಿಲ್ಲೆ ಅಭಿವೃದ್ದಿಯಾಗಬೇಕಾಗಿದೆ. ಅದಕ್ಕಾಗಿ ಕಾಂಗ್ರೆಸ್ ಅನ್ನು ಸೋಲಿಸಬೇಕು ಎಂಬುವುದು ನಮ್ಮೆಲ್ಲರ ಒಗ್ಗಟ್ಟಿನ ತೀರ್ಮಾನ. ಹಿತೈಷಿಗಳು ಹಾಗೂ ಅಭಿಮಾನಿಗಳು ಚುನಾವಣೆಯಲ್ಲಿ ಬಿಜೆಪಿ ಪರವಾಗಿ ದುಡಿಯುವಂತೆ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ’ ಎಂದು ನಾಗಶ್ರೀ ಪ‍್ರತಾಪ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT