ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಮೂರ್ತಿ ತಯಾರಿಕೆ, ಮಾರಾಟದ ಮೇಲೆ ಕರಿ ಛಾಯೆ

ಇನ್ನೂ ಆರಂಭವಾಗದ ಬೇಡಿಕೆ, ಸಾರ್ವಜನಿಕ ಗಣೇಶೋತ್ಸವದ ನಿರೀಕ್ಷೆಯಲ್ಲಿ ವಿಗ್ರಹ ತಯಾರಕರು, ಮಾರಾಟಗಾರರು
Last Updated 5 ಸೆಪ್ಟೆಂಬರ್ 2021, 15:57 IST
ಅಕ್ಷರ ಗಾತ್ರ

ಚಾಮರಾಜನಗರ: ಗಣೇಶನ ಹಬ್ಬಕ್ಕೆ ಇನ್ನು ಬೆರಳೆಣಿಕೆಯ ದಿನಗಳಷ್ಟೇ ಇದ್ದರೂ ಜನರಲ್ಲಿ ಹಬ್ಬದ ಉತ್ಸಾಹ ಕಂಡು ಬರುತ್ತಿಲ್ಲ. ಮಾರುಕಟ್ಟೆಯಲ್ಲಿ ಗಣೇಶ ವಿಗ್ರಹಗಳ ಮಾರಾಟ ಮಳಿಗೆಗಳು ಕಾಣುತ್ತಿಲ್ಲ.

ವಿಗ್ರಹಗಳ ತಯಾರಕರೂ ಚಿಂತಾಕ್ರಾಂತರಾಗಿದ್ದಾರೆ. ಗಣೇಶ ವಿಗ್ರಹಗಳ ತಯಾರಿಕೆ ಹಾಗೂ ಮಾರಾಟವನ್ನೇ ನಂಬಿ ಬದುಕುವ ಹಲವು ಕುಟುಂಬಗಳು ಜಿಲ್ಲೆಯಲ್ಲಿವೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡಿ ಒಂದಿಷ್ಟು ಹಣ ಸಂಪಾದಿಸುವ ವ್ಯಾಪಾರಿಗಳೂ ಇದ್ದಾರೆ. ಕಳೆದ ವರ್ಷ ಕೋವಿಡ್‌ ವಿಗ್ರಹ ತಯಾರಿಕರು ಹಾಗೂ ಮಾರಾಟಗಾರರ ಬದುಕನ್ನೇ ಅಸ್ತವ್ಯಸ್ತ ಮಾಡಿತ್ತು. ಈ ವರ್ಷವೂ ಕೋವಿಡ್‌ನ ಎರಡನೇ ಅಲೆ ಅಬ್ಬರ ಇಳಿದಿದ್ದರೂ, ಸೋಂಕಿನ ಹಾವಳಿ ಪೂರ್ಣವಾಗಿ ನಿಂತಿಲ್ಲ. ಸರ್ಕಾರ ಷರತ್ತುಗಳಿಗೆ ಒಳಪಟ್ಟು, ಗಣೇಶೋತ್ಸವ ಆಚರಿಸಲು ಅವಕಾಶ ನೀಡಿದ್ದರೂ, ಜಿಲ್ಲಾ ಮಟ್ಟದಲ್ಲಿ ಅದರ ರೂಪುರೂಷೆಗಳು ಇನ್ನೂ ನಿರ್ಧಾರವಾಗಿಲ್ಲ.

ಅದ್ಧೂರಿ ಗಣೇಶೋತ್ಸವ ಇಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದ್ದರೂ, ಕನಿಷ್ಠ ಪಕ್ಷ ಸಾರ್ವಜನಿಕವಾಗಿ ದೊಡ್ಡ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶ ನೀಡಿದರೂ ಸಾಕು ಎಂಬ ನಿರೀಕ್ಷೆಯಲ್ಲಿವಿಗ್ರಹಗಳ ತಯಾರಕರು ಹಾಗೂ ವ್ಯಾಪಾರಿಗಳು ಇದ್ದಾರೆ. ಸರ್ಕಾರದ ನಿರ್ಧಾರದ ಬಗ್ಗೆ ಕಾತರದಿಂದ ಕಾಯುತ್ತಿದ್ದಾರೆ.

ಬಾರದ ಬೇಡಿಕೆ: ಪ್ರತಿ ವರ್ಷ ಗಣೇಶನ ಹಬ್ಬಕ್ಕೆ ಒಂದೆರಡು ತಿಂಗಳುಗಳ ಮುಂಚೆಯೇ ಸಾರ್ವಜನಿಕ ಗಣೇಶೋತ್ಸವ ಹಮ್ಮಿಕೊಳ್ಳುವ ಸಂಘ ಸಂಸ್ಥೆಗಳು ವಿಗ್ರಹ ತಯಾರಕರಲ್ಲಿ ತಮಗೆ ಬೇಕಾದ ಗಣೇಶ ಮೂರ್ತಿಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದರು. ಕಳೆದ ಬಾರಿ ಅದ್ಧೂರಿ ಗಣೇಶೋತ್ಸವಕ್ಕೆ ಸರ್ಕಾರ ನಿರ್ಬಂಧ ಹೇರಿದ್ದರಿಂದ ಎಲ್ಲ ಕಡೆಗಳಲ್ಲೂ ಸರಳವಾಗಿ ಆಚರಣೆ ನಡೆದಿತ್ತು. ಈ ಬಾರಿಯೂ ಕೋವಿಡ್‌ ಇರುವುದರಿಂದ ಸಂಘ ಸಂಸ್ಥೆಗಳು ಇನ್ನೂ ಸ್ಪಷ್ಟಕ್ಕೆ ನಿರ್ಧಾರಕ್ಕೆ ಬರಲಾಗಿಲ್ಲ. ಹಾಗಾಗಿ, ಬೇಡಿಕೆ ಸಲ್ಲಿಸಿಲ್ಲ.

ಇತ್ತ ವಿಗ್ರಹ ತಯಾರಕರು ಕೂಡ ಈ ವರ್ಷ ಹೆಚ್ಚು ಮೂರ್ತಿಗಳನ್ನು ತಯಾರಿಸಲು ಹೋಗಿಲ್ಲ. ಬಹುತೇಕರ ಬಳಿ ಕಳೆದ ವರ್ಷ ಮೂರ್ತಿಗಳ ದಾಸ್ತಾನು ಇದೆ. ಅವುಗಳಿಗೆ ಮತ್ತೆ ಬಣ್ಣ ಬಳಿದು ಹೊಸ ರೂಪ‍ ನೀಡುತ್ತಿದ್ದಾರೆ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎಂದು ಹೇಳುತ್ತಾರೆ ತಯಾರಕರು.

‘ನಮ್ಮ ಕುಟುಂಬದ ಹತ್ತು ಮಂದಿಗೆ ವಿಗ್ರಹಗಳನ್ನು ತಯಾರಿಸುವುದೇ ಕಸುಬು. ನಾಲ್ಕೈದು ಜನರಿಗೆ ಕೆಲಸವನ್ನು ಕೊಡುತ್ತಿದ್ದೆವು. ಕಳೆದ ವರ್ಷದಿಂದ ನಮಗೇ ಕೆಲಸ ಇಲ್ಲದಂತೆ ಆಗಿದೆ. ಹಾಗಾಗಿ, ಈ ಬಾರಿ ಯಾರನ್ನೂ ಕೆಲಸಕ್ಕೆ ಕರೆದಿಲ್ಲ. ಪ್ರತಿ ವರ್ಷ ನಮಗೆ 20ರಿಂದ 25ರಷ್ಟು ದೊಡ್ಡ ವಿಗ್ರಹಗಳಿಗೆ ಬೇಡಿಕೆ ಬರುತ್ತಿತ್ತು. ಅದೇ ಆಧಾರದಲ್ಲಿ ಕಳೆದ ವರ್ಷ 30 ಮೂರ್ತಿಗಳನ್ನು ತಯಾರಿಸಿದ್ದೆ. ಅವು ಹಾಗೆಯೇ ಇದೆ’ ಎಂದು ನಗರದ ಕಾರಾಗೃಹದ ಹಿಂಭಾಗದಲ್ಲಿರುವ ಮನೆಯ ಕೊಠಡಿಯೊಂದರಲ್ಲಿ ಸಾಲಾಗಿ ಜೋಡಿಸಿರುವ ಗಣೇಶ ಮೂರ್ತಿಗಳನ್ನು ತೋರಿಸಿದರು ಅಮಚವಾಡಿಯ ಸಿದ್ದಪ್ಪಾಜಿ ಅವರು.

‘ಕಳೆದ ವರ್ಷ ಚಿಕ್ಕ ಮೂರ್ತಿಗಳಷ್ಟೇ ಮಾರಾಟವಾಗಿದ್ದವು. ಅದರಿಂದ ನಮಗೆ ಏನೂ ಸಿಗುವುದಿಲ್ಲ. ₹4,000–₹5,000 ಬೆಲೆ ಬಾಳುವ ವಿಗ್ರಹಗಳು ಮಾರಾಟವಾದರೆ ಸ್ವಲ್ಪ ದುಡ್ಡು ಸಿಗುತ್ತದೆ. ಕಳೆದ ವರ್ಷ ಒಂದು ರೂಪಾಯಿ ಸಂಪಾದಿಸಿಲ್ಲ. ಈ ವರ್ಷ ಇದುವರೆಗೆ ಏನೂ ಆಗಿಲ್ಲ. ಜಿಲ್ಲಾಡಳಿತದ ತೀರ್ಮಾನದ ಬಳಿಕ ನೋಡಬೇಕು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾರಾಟಗಾರರು ಪುಟ್ಟ ಮೂರ್ತಿಯಿಂದ ಹಿಡಿದು ದೊಡ್ಡ ಮೂರ್ತಿಯವರೆಗೆ ಹತ್ತಾರು ವೈವಿಧ್ಯಮಯ ಗಣೇಶ ಮತ್ತು ಗೌರಿ ಶಿಲ್ಪಗಳನ್ನು ಇಟ್ಟು ಮಾರಾಟ ಮಾಡುತ್ತಿದ್ದರು. ಪ್ರತಿ ಗಣೇಶ ಮೂರ್ತಿಗೆ ಕನಿಷ್ಠ ₹100ಯಿಂದ ₹5,000 ತನಕ ಬೆಲೆ ಇರುತ್ತಿತ್ತು. ಜಿಲ್ಲಾ ಕೇಂದ್ರದಿಂದ ಮಾರಾಟದ ಪ್ರದೇಶಗಳಿಗೆ ಪೂರೈಕೆಯಾಗುತ್ತಿತ್ತು. ಎರಡುವರ್ಷಗಳಿಂದ ವ್ಯಾಪಾರ ಕುಸಿದಿರುವುದರಿಂದ ಈ ಬಾರಿ ಮಾಲೀಕರು ಹಳೆಯ ಗಣೇಶನ ಮೂರ್ತಿಗಳಿಗೆ ಬಣ್ಣ ಹಾಕಿ ಮಾರಾಟ ಮಾಡಿ ನಷ್ಟ ಸರಿದೂಗಿಸುವ ನತ್ತ ಚಿತ್ತ ಹರಿಸಿದ್ದಾರೆ’ ಎಂದು ಯಳಂದೂರಿನ ಗುರು ಅವರು ಹೇಳಿದರು.

‘ಕೋವಿಡ್ ಆರಂಭವಾದಗಿನಿಂದ ಎಲ್ಲ ಆಚರರಣೆಗಳಿಗೂ ಅವಕಾಶ ನಿರಾಕರಿಸಲಾಗಿತ್ತು. ಆದರೆ, ಮೂರ್ತಿ ತಯಾರಕರು ಮಾತ್ರ ಅವಕಾಶ ಸಿಗುತ್ತದೆ ಎಂಬ ಆಶಾಭಾವನೆಯಿಂದ ಸಾಲ ಸೋಲ ಮಾಡಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಆದರೆ ಗಣೇಶ ಗೌರಿ ವಿಗ್ರಹಗಳನ್ನು ಸಾರ್ವಜನಿಕರು ಹೆಚ್ಚು ಖರೀದಿಸದೇ ಇದ್ದುದರಿಂದ ಇರುವುದರಿಂದ ಕಳೆದ ವರ್ಷದ ಸಾಲವೇ ತೀರಿಲ್ಲ’ ಎಂದು ಗುಂಡ್ಲುಪೇಟೆಯ ಮೂರ್ತಿ ತಯಾರಿಕ ನಾಗರಾಜು ಅವರು ಹೇಳಿದರು.

‘ಈ ವರ್ಷವೂ ಹಬ್ಬಕ್ಕೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಮಣ್ಣು, ತೈಲ ವರ್ಣಕ್ಕೆ ಬಂಡವಾಳ ಹೂಡಿ ಕೆಲಸಗಾರರಿಂದ ಮೂರ್ತಿಗಳನ್ನು ತಯಾರು ಮಾಡಿ ಇಟ್ಟಿದ್ದೇವೆ. ಅವಕಾಶ ಸಿಕ್ಕರೆ ನಮ್ಮ ಜೀವನ ಸುಧಾರಣೆ ಆಗುತ್ತದೆ. ಇಲ್ಲವಾದಲ್ಲಿ ಸಾಲ ತಲೆ ಮೇಲೆ ಬರುತ್ತದೆ. ಕೋವಿಡ್ ಸಂದರ್ಭದಲ್ಲಿ ಅನೇಕರಿಗೆ ಪರಿಹಾರ ಸಿಕ್ಕಿತಾದರೂ ಗಣೇಶನ ಮೂರ್ತಿ ತಯಾರಿಕರಿಗೆ ಯಾವ ಪರಿಹಾರ ಸಿಗಲಿಲ್ಲ’ ಎಂದು ಅವರು ಅಳಲು ತೋಡಿಕೊಂಡರು.

‘ಹಬ್ಬಕ್ಕೆ ಎರಡು ಮೂರು ತಿಂಗಳು ಬಾಕಿ ಇರುವಾಗಲೇ ಗಣಪತಿ ಮೂರ್ತಿಗಳಿಗೆ ಬೇಡಿಕೆ ಬರುತ್ತಿತ್ತು. ಆದರೆ ಕೋವಿಡ್-19ರಿಂದಾಗಿ ಗಣಪತಿಗೆ ಬೇಡಿಕೆ ಕಡಿಮೆ ಆಗಿದೆ. ನಮ್ಮ ತಾತ ಮುತ್ತಾತರ ಕಾಲದಿಂದಲೂ ಮಣ್ಣಿನಿಂದ ಗಣಪತಿ ವಿಗ್ರಹಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೆವು. ಆದರೆ ಈಗ ಕೋವಿಡ್ ಕಾರಣ ಕಳೆದ ವರ್ಷದಿಂದ ಮಾಡುತ್ತಿಲ್ಲ. ಬೇರೆ ಊರಿನಿಂದ ತರಿಸಿಕೊಂಡು ಮಾರಾಟ ಮಾಡುತ್ತಿದ್ದೇವೆ’ ಎಂದು ಕೊಳ್ಳೇಗಾಲದ ಲಕ್ಷ್ಮೀಪತಿ ಅವರು ಹೇಳಿದರು.

ಇನ್ನೂ ಆರಂಭವಾಗದ ವ್ಯಾಪಾರ

ಸಾಮಾನ್ಯವಾಗಿ ಗಣೇಶನ ಹಬ್ಬಕ್ಕೆ 10 ದಿನಗಳಿರುವಾಗಲೇ ವ್ಯಾಪಾರಿಗಳು ತಮ್ಮ ಅಂಗಡಿಗಳಲ್ಲಿ ಅಥವಾ ರಸ್ತೆ ಬದಿಗಳಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಮಾರಾಟ ಆರಂಭಿಸುತ್ತಿದ್ದರು. ಈ ಬಾರಿ ಇನ್ನೂ ಆರಂಭವಾಗಿಲ್ಲ. ಚಾಮರಾಜನಗರದ ಅಂಗಡಿ ಬೀದಿಯಲ್ಲಿ ಒಂದು ಅಂಗಡಿ ಕಾಣಿಸುತ್ತಿದೆ.

ಚಾಮರಾಜನಗರದಲ್ಲಿ ಪ್ರತಿ ವರ್ಷ 10ರಿಂದ 12 ಮಂದಿ ಅಂಗಡಿಗಳನ್ನು ತೆರೆಯುತ್ತಾರೆ. ಕನಿಷ್ಠ ಎಂದರೂ ₹5ರಿಂದ ₹6 ಲಕ್ಷ ವ್ಯವಹಾರ ನಡೆಯುತ್ತದೆ ಎಂದು ಹೇಳುತ್ತಾರೆ ವಿಗ್ರಹ ತಯಾರಕ ಸಿದ್ದಪ್ಪಾಜಿ.

‘ಪ್ರತಿ ವರ್ಷ ಹಬ್ಬಕ್ಕೆ 8ರಿಂದ 10 ದಿನಗಳಿರುವಾಗ ಅಂಗಡಿ ಹಾಕುತ್ತಿದ್ದೆ. ‌ಕಳೆದ ವರ್ಷ ಹಬ್ಬದ ಆಚರಣೆಗೆ ಅವಕಾಶ ಇರಲಿಲ್ಲ. ಈ ವರ್ಷ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಜಿಲ್ಲಾಡಳಿತದ ಆದೇಶ ನೋಡಿಕೊಂಡು ಅಂಗಡಿ ಹಾಕುತ್ತೇನೆ’ ಎಂದು ವಿಗ್ರಹಗಳ ವ್ಯಾಪಾರಿ ಕಾಳಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

––

ಹೊಸ ವಿಗ್ರಹ ಮಾಡಿಲ್ಲ

ಕಳೆದ ವರ್ಷದಿಂದ ಗಣಪತಿ ಮೂರ್ತಿಗಳಿಗೆ ಬೇಡಿಕೆಯೇ ಇಲ್ಲ. ಹಾಗಾಗಿ, ಈ ವರ್ಷ ಗಣೇಶ ವಿಗ್ರಹಗಳನ್ನು ಮಾಡಿಯೇ ಇಲ್ಲ. ವಿದ್ಯಾಗಣಪತಿ ಮಂಡಳಿಗಳಿಗಾಗಿ ಕಳೆದ ವರ್ಷ ಮಾಡಿರುವ ವಿಗ್ರಹ ಮಾತ್ರ ನನ್ನ ಬಳಿ ಇದೆ. ಈ ಬಾರಿ ಸರ್ಕಾರ ಸಾರ್ವಜನಿಕ ಗಣೇಶೋತ್ಸವಗಳಿಗೆ ಅವಕಾಶ ನೀಡುತ್ತದೆಯೇ ಎಂಬುದನ್ನು ನೋಡಬೇಕು

ನಟರಾಜು, ಕಲಾವಿದ,ರಾಮಸಮುದ್ರ

ಕಳೆದ ವರ್ಷದ್ದೇ ಬಾಕಿ ಇದೆ

ಕಳೆದ ವರ್ಷ 30 ದೊಡ್ಡ ಮೂರ್ತಿಗಳನ್ನು ತಯಾರಿಸಿದ್ದೆವು. ಕೋವಿಡ್‌ ಹಾವಳಿ, ಲಾಕ್‌ಡೌನ್‌ನಿಂದಾಗಿ ಒಂದೇ ಒಂದು ಮೂರ್ತಿ ಮಾರಾಟವಾಗಿಲ್ಲ. ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಸಣ್ಣ ಗಣೇಶ ಹಾಗೂ ಗೌರಿ ವಿಗ್ರಹಗಳಷ್ಟೇ ಮಾರಾಟವಾಗಿದ್ದವು. ದೊಡ್ಡ ವಿಗ್ರಹಗಳಿಗೆ ಬೇಡಿಕೆ ಇಲ್ಲದೇ ಇದ್ದುದರಿಂದ ಪೂರ್ಣ ನಷ್ಟ ಅನುಭವಿಸಿದ್ದೆವು. ಈ ವರ್ಷ ಹೊಸ ಮೂರ್ತಿಗಳನ್ನು ಮಾಡಿಲ್ಲ. ಕಳೆದ ವರ್ಷದ್ದಕ್ಕೇ ಮತ್ತೆ ಬಣ್ಣ ಬಳಿದು ಮಾರಾಟಕ್ಕೆ ಇಟ್ಟಿದ್ದೇವೆ. ಚಿಕ್ಕದಾದ ಗೌರಿ ಗಣೇಶ ಮೂರ್ತಿಗಳನ್ನು ಮಾತ್ರ ತಯಾರಿಸಿದ್ದೇವೆ.

ಸಿದ್ದಪ್ಪಾಜಿ,ಗಣೇಶ ವಿಗ್ರಹ ತಯಾರಕ, ಚಾಮರಾಜನಗರ

ಆದಾಯಕ್ಕೆ ಧಕ್ಕೆ

ನಾವು ಗಣಪತಿ ವಿಗ್ರಹಗಳ ಮಾರಾಟವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಕಳೆದ ವರ್ಷ ಒಂದೇ ಒಂದು ವಿಗ್ರಹ ಮಾರಾಟವಾಗದೆ ಆದಾಯಕ್ಕೆ ಕುತ್ತು ಉಂಟಾಗಿದ್ದು, ಸಣ್ಣ ಮೂರ್ತಿಗಳಿಂದ ಮಾರಾಟದಿಂದ ಏನೂ ಆದಾಯ ಬರುವುದಿಲ್ಲ. ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪ್ರತಿಷ್ಠಾಪಿಸುವ ವಿಗ್ರಹಗಳು ಮಾರಾಟವಾದರೆ ಒಂದಿಷ್ಟು ಕಾಸು ಸಿಗುತ್ತದೆ. ಹಾಗಾಗಿ, ಸರ್ಕಾರ ಸಾರ್ವಜನಿಕ ಗಣೇಶೋತ್ಸವಗಳಿಗೆ ಅವಕಾಶ ನೀಡಬೇಕು. ಸರ್ಕಾರದ ನಿರ್ಧಾರವನ್ನೇ ನಿರೀಕ್ಷಿಸುತ್ತಿದ್ದೇವೆ.

ಗೌರಮ್ಮ,ಸಿದ್ದಪ್ಪಾಜಿ ಅವರ ಪತ್ನಿ

ನಿರ್ಬಂಧ ಸಡಿಲಿಸಿದರೆ ಅನುಕೂಲ

ಆರು ತಿಂಗಳ ಮೊದಲೇ ಗಣೇಶನ ಮೂರ್ತಿಗಳನ್ನು ತಯಾರಿಸುವ ಕೆಲಸದಲ್ಲಿ ಭಾಗಿಯಾಗುತ್ತೇವೆ. ಕಳೆದ ವರ್ಷ ಬೇಡಿಕೆ ಸಂಪೂರ್ಣ ಕುಸಿದಿತ್ತು. ಈ ವರ್ಷವಾದರೂ ತುಸು ಬೇಡಿಕೆ ಕಂಡು ಬಂದರೆ ನಮ್ಮ ಶ್ರಮ ಮತ್ತು ವಿನಿಯೋಗಿಸಿದ ಬಂಡವಾಳವನ್ನು ವಾಪಸ್ ಪಡೆಯಬಹುದು. ಗೌರಿ ಗಣೇಶನ ಹಬ್ಬದ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತೆರವುಗೊಳಿಸುವ ಬಗ್ಗೆ ಸಚಿವರು ಆಶ್ವಾಸನೆ ನೀಡಿದ್ದಾರೆ. ಇದು ಗಣೇಶ ಮೂರ್ತಿ ತಯಾರಿಕೆ ವಲಯದಲ್ಲಿ ಆಶಾ ಭಾವನೆ ಉಂಟು ಮಾಡಿದೆ

ಆಶಾ ಮಂಜುನಾಥ್,ಚಾಮರಾಜನಗರ

------

ಈ ವರ್ಷ ಗಣಪತಿ ಪ್ರತಿಷ್ಠಾಪಿಸುತ್ತೇವೆ. ಮೂರ್ತಿ ಸಿದ್ಧವಾಗಿಯೇ ಇದೆ. ಸರ್ಕಾರದ ನಿಯಮದಂತೆ ಕೋವಿಡ್‌ ನಿಯಮ ಪಾಲಿಸಿಕೊಂಡು ಆಚರಣೆ ಮಾಡುತ್ತೇವೆ

ಬಾಲಸುಬ್ರಹ್ಮಣ್ಯ, ವಿದ್ಯಾಗಣಪತಿ ಮಂಡಳಿ ಗೌರವ ಕಾರ್ಯದರ್ಶಿ

-------

ಜಿಲ್ಲೆಯಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡುವ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಢಾಧಿಕಾರಿ ಚರ್ಚಿಸಿ ನಿರ್ಧರಿಸಲಿದ್ದಾರೆ

ಎಸ್‌.ಟಿ.ಸೋಮಶೇಖರ್‌, ಜಿಲ್ಲಾ ಉಸ್ತುವಾರಿ ಸಚಿವ

–––––––––

ಪೂರಕ ಮಾಹಿತಿ: ಸೂರ್ಯನಾರಾಯಣ ವಿ. ನಾ.ಮಂಜುನಾಥಸ್ವಾಮಿ, ಅವಿನ್‌ ಪ್ರಕಾಶ್‌ ವಿ., ಮಲ್ಲೇಶ ಎಂ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT