ಸೋಮವಾರ, ಆಗಸ್ಟ್ 8, 2022
21 °C
ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯದ ಪೂರ್ಣ ಸಿದ್ಧತೆ, ರಸ್ತೆಗೆ ಉಕ್ಕುವ ಕೊಳಚೆ ನೀರು, ಜನರಿಗೆ ತೊಂದರೆ

ಮಳೆಗಾಲ ಶುರು: ಚರಂಡಿಯಲ್ಲಿನ್ನೂ ಹೂಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಗೆ ಮುಂಗಾರು ಕಾಲಿಟ್ಟಿದೆ. ವಾರದಿಂದೀಚೆಗೆ ಮಳೆಯಾಗುತ್ತಿದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಈ ಬಾರಿ ಮಳೆಗಾಲಕ್ಕೆ ಸಜ್ಜಾದಂತೆ ಕಾಣುತ್ತಿಲ್ಲ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸಾಧಾರಣ ಮಳೆಯಾದರೂ, ಬಹುತೇಕ ಕಡೆಗಳಲ್ಲಿ ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಗಳಲ್ಲಿ ಹರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೂ ನೀರು ನುಗ್ಗುತ್ತಿದೆ. 

ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಯಾಗಿರುವ ಬಿ.ರಾಚಯ್ಯ ಜೋಡಿ ರಸ್ತೆ ಸೇರಿದಂತೆ ಇತರ ಪ್ರಮುಖ ರಸ್ತೆಗಳು, ಬಡಾವಣೆಗಳ ರಸ್ತೆಗಳ ಬದಿ ಇರುವ ಚರಂಡಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಕೆಲಸ ಆಗಿಲ್ಲ. ಚರಂಡಿಗಳಲ್ಲಿ ಪ್ಲಾಸ್ಟಿಕ್‌, ಇತರೆ ತ್ಯಾಜ್ಯ, ಹೂಳು, ಕಳೆ ಗಿಡಗಳೆಲ್ಲ ತುಂಬಿ ನೀರಿನ ಸರಾಗ ಹರಿವಿಗೆ ತಡೆಯೊಡ್ಡಿ ಮಳೆಯ ಸಂದರ್ಭದಲ್ಲಿ ಅವಾಂತರವೇ ಸೃಷ್ಟಿಸುತ್ತಿದೆ. ಪ್ರತಿ ಬಾರಿ ಮಳೆ ಬಂದಾಗಲೂ ರಾಚಯ್ಯ ಜೋಡಿ ರಸ್ತೆಯಲ್ಲಿ ಸೆಸ್ಕ್‌ ಕಚೇರಿಯಿಂದ ಜಿಲ್ಲಾಡಳಿತದ ಭವನದ ಗೇಟಿನವರೆಗೆ ಕೊಳಚೆ ನೀರು ರಸ್ತೆಗೆ ಚೆಲ್ಲಿ ಗಲೀಜು ವಾತಾವರಣ ನಿರ್ಮಾಣವಾಗುತ್ತದೆ. 

ಮಳೆಗಾಲದ ಸಂದರ್ಭದಲ್ಲಿ ಚರಂಡಿ ಕಟ್ಟಿ ಕೊಳಚೆ ನೀರು ರಸ್ತೆಗಳಿಗೆ, ತಗ್ಗು ಪ್ರದೇಶಗಳಿಗೆ ನುಗ್ಗುವ ವಿಚಾರ ಸ್ಥಳೀಯ ಆಡಳಿತದ ಅಧಿಕಾರಿಗಳಿಗೆ ತಿಳಿಯದ್ದೇನಲ್ಲ. ಆದರೆ, ಅದನ್ನು ಸರಿ ಪಡಿಸುವ ಪ್ರಯತ್ನವೂ ಮಾಡುತ್ತದೆ. ಆದರೆ, ಅದು ವ್ಯವಸ್ಥಿತವಾಗಿ ನಡೆಯುವುದಿಲ್ಲ. 

ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಚರಂಡಿ ಕಟ್ಟಿಕೊಂಡು ಸಮಸ್ಯೆ ಉಂಟಾಗುವ ಆರು ಸ್ಥಳಗಳನ್ನು ನಗರಸಭೆ ಅಧಿಕಾರಿಗಳು ಗುರುತಿಸಿದ್ದಾರೆ. ಅಲ್ಲಿ ನೀರಿನ ಸರಾಗ ಹರಿವಿಗಾಗಿ ಪ್ಲಾಸ್ಟಿಕ್‌ ಹಾಗೂ ಇನ್ನಿತರ ತ್ಯಾಜ್ಯ ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಒಂದು ಬಾರಿ ಕಸಕಡ್ಡಿಗಳನ್ನು ತೆರವುಗೊಳಿಸುತ್ತಾರೆ ನಿಜ. ಆದರೆ, ಒಂದು ಮಳೆಗೆ ಬೇರೆ ಕಡೆಗಳಲ್ಲಿರುವ ತ್ಯಾಜ್ಯ ನೀರಿನಲ್ಲಿ ಕೊಚ್ಚಿಕೊಂಡು ಬಂದು ಮತ್ತೆ ಅದೇ ಜಾಗದಲ್ಲಿ ಸಂಗ್ರಹವಾಗುತ್ತದೆ. ಹೀಗಾಗಿ ಮತ್ತೆ ಸಮಸ್ಯೆ ಕಾಡುತ್ತದೆ. 

ಬಡಾವಣೆಗಳಲ್ಲಿನ ಚರಂಡಿಗಳೂ ಸ್ವಚ್ಛಗೊಳಿಸುವ ಕೆಲಸ ಆಗಿಲ್ಲ. ಕೆಲವು ಕಡೆಗಳಲ್ಲಿ ನಿವಾಸಿಗಳು ಒತ್ತಡ ಹಾಕಿದಾಗ, ಚರಂಡಿಯಲ್ಲಿನ ಹೂಳು ತೆಗೆಯಲಾಗುತ್ತದೆ. ಚರಂಡಿ ಸ್ವಚ್ಛಗೊಳಿಸುವ ಕಾರ್ಯ ಅಭಿಯಾನದ ರೀತಿಯಲ್ಲಿ ನಡೆಯುತ್ತಿಲ್ಲ.   

ವಾಸನೆ, ಕಾಯಿಲೆ ಭೀತಿ: ನೀರು ಸರಾಗವಾಗಿ ಹರಿಯದೇ ಕಟ್ಟಿಕೊಂಡಿರುವ ಚರಂಡಿ ಇರುವ ಪ್ರದೇಶದ ಸುತ್ತಮುತ್ತಲಿನ ಜನರಿಗೆ ಯಾವಾಗಲೂ ಕೊಳಚೆ ನೀರಿನ ವಾಸನೆ ಸೇವಿಸುವ ಶಿಕ್ಷೆ. ವಾಸನೆ ಸಮಸ್ಯೆ ಒಂದೆಡೆಯಾದರೆ, ಕೊಳಚೆ ನೀರು, ತ್ಯಾಜ್ಯದಿಂದ ರೋಗ ಬರುವ ಭೀತಿ ಸ್ಥಳೀಯ ನಿವಾಸಿಗಳನ್ನು ಕಾಡುತ್ತಿದೆ. 

ಆರಂಭವಾಗಿಲ್ಲ ಸ್ವಚ್ಛತಾ ಕಾರ್ಯ 

ಕೊಳ್ಳೇಗಾಲ: ಇಲ್ಲಿನ ನಗರಸಭಾ ವ್ಯಾಪ್ತಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಇರುವ 31 ವಾರ್ಡ್‌ಗಳ ಪೈಕಿ ಬಹುತೇಕ ಎಲ್ಲ ವಾರ್ಡ್‌ಗಳು ಚರಂಡಿಗಳು ಸುಸ್ಥಿತಿಯಲ್ಲಿಲ್ಲ. ಧಾರಾಕಾರವಾಗಿ ಒಂದು ಮಳೆ ಬಂದರೆ, ಚರಂಡಿ ನೀರೆಲ್ಲ ರಸ್ತೆಗೆ ಬರುತ್ತದೆ. ಚರಂಡಿ ಸ್ವಚ್ಛತಾ ಕಾರ್ಯ ಇನ್ನೂ ಆರಂಭವಾಗಿಲ್ಲ. ಮಳೆ ಬಂದು ರಸ್ತೆ, ಚರಂಡಿ ಕೆಟ್ಟರೆ ಮಾತ್ರ ಅಧಿಕಾರಿಗಳು ಅದರ ಬಗ್ಗೆ ಗಮನಹರಿಸುತ್ತಾರೆ.

ನಗರದಲ್ಲಿ ಕಸದ ಸಮಸ್ಯೆ ಇದ್ದೇ ಇದೆ. ಮಳೆಗಾಲದಲ್ಲಿ ತ್ಯಾಜ್ಯಗಳು ಚರಂಡಿ ಸೇರಿ ನೀರಿನ ಹರಿವಿಗೆ ತಡೆ ಒಡ್ಡುತ್ತವೆ. ನಗರದ ಸರ್ಕಟನ್ ಕಾಲುವೆ ಕಾಮಗಾರಿ ಎರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಕಾಮಗಾರಿ ಪೂರ್ಣವಾಗದೆ ಚರಂಡಿ ನೀರು ಅನೇಕ ಬಡಾವಣೆಗಳಿಗೆ ಹೋಗುತ್ತಿದೆ. ಅಕ್ಕ ಪಕ್ಕದ ನಿವಾಸಿಗಳು ನಿಂತ ಚರಂಡಿ ನೀರಿನ ವಾಸನೆ ಸೇವಿಸಿಕೊಂಡೇ ಬದುಕಬೇಕಾಗಿದೆ. ಬಹುತೇಕ ಎಲ್ಲ ಬಡಾವಣೆಯ ಚರಂಡಿ ನೀರು ಈ ಕಾಲುವೆಯ ಮೂಲಕವೇ ಹಾದು ಹೋಗುತ್ತದೆ. ಕಾಮಗಾರಿ ಪೂರ್ಣವಾಗದಿರುವುದರಿಂದ ಚರಂಡಿ ನೀರು ಗಬ್ಬು ನಾರುತ್ತಿದೆ.
 

ಅವೈಜ್ಞಾನಿಕ ಚರಂಡಿ, ಕಳಪೆ ಕಾಮಗಾರಿ

ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಚರಂಡಿಗಳು ಅವೈಜ್ಞಾನಿಕವಾಗಿದ್ದು, ಕಾಮಗಾರಿಯೂ ಕಳಪೆಯಾಗಿದೆ. ರಸ್ತೆಯಲ್ಲಿ ಹರಿಯುವ ನೀರು ಚರಂಡಿಗೆ ಸೇರುತ್ತಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಆರ್‌ಟಿಒ ಕಚೇರಿ, ಎಂಡಿಸಿಸಿ ಬ್ಯಾಂಕ್, ಮಡಹಳ್ಳಿ ವೃತ್ತದಲ್ಲಿ ಮಳೆ ನೀರು ನಿಂತು ಜನರ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಪುರಸಭೆಗೆ ದೂರು ನೀಡುತ್ತಲೇ ಇದ್ದಾರೆ. ಆದರೆ, ಪ್ರಯೋಜನ ಆಗುತ್ತಿಲ್ಲ. 

ಹಳೆ ಬಸ್ ನಿಲ್ದಾಣದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಹೆಚ್ಚು ಜನನಿಬಿಡ ಪ್ರದೇಶ. ನೀರು ಚರಂಡಿಗೆ ಸೇರದೇ ಇರುವುದರಿಂದ ರಸ್ತೆಯಲ್ಲೇ ನಿಂತು ಗುಂಡಿ ಬಿದ್ದಿದೆ. 

ಸರಾಗ ಹರಿವಿಗೆ ಅಡ್ಡಿ

ಹನೂರು: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ 13 ವಾರ್ಡ್ಗಳಿವೆ. ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಎರಡು ತಿಂಗಳ ಬಳಿಕ ಚರಂಡಿಯಿಂದ ಕಸ, ಹೂಳು ತೆಗೆಯುವ ಕೆಲಸ ನಡೆಯುತ್ತಿದೆ. ಕಸ ವಿಲೇವಾರಿ ಮಾಡಿದರೂ ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡದ ಕಾರಣ ಕಲುಷಿತ ನೀರು ಚರಂಡಿಯಲ್ಲಿ ನಿಂತಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಆಧಿಕಾರಿಗಳು ಹಾಗೂ ಆಡಳಿತ ವ್ಯವಸ್ಥೆ ವಿರುದ್ಧ ಅಸಮಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ.

‘ಬಡಾವಣೆಯ ಚರಂಡಿಗಳಲ್ಲಿ ವ್ಯವಸ್ಥೆ ಸರಿ ಇದೆ. ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಚರಂಡಿಗಳಲ್ಲಿ ಈ ಸಮಸ್ಯೆ ಉದ್ಧವಿಸಿದೆ. ಕೆಶಿಪ್‌ ಯೋಜನೆಯಡಿ ರಸ್ತೆ ನಿರ್ಮಾಣವಾಗುತ್ತಿರುವುದರಿಂದ ಚರಂಡಿ ನಿರ್ಮಾಣ ವಿಳಂಬವಾಗಿದೆ. ರಸ್ತೆ ಕಾಮಗಾರಿ ಮುಗಿದ ಬಳಿಕ ಸಮರ್ಪಕ ಚರಂಡಿ ವ್ಯವಸ್ಥೆ ಮಾಡಲಾಗುವುದು’ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು.

ಸಾರ್ವಜನಿಕರು ಏನಂತಾರೆ?

ಹೂಳು ತೆಗೆಸಿ

ಮಳೆಗಾಲದಲ್ಲಿ ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆಗೆ ಹರಿಯುತ್ತದೆ. ಆ ಕಾರಣ ನಗರದ ಎಲ್ಲಾ ಚರಂಡಿಗಳ ಹೊಳು ತೆಗೆಸಬೇಕು. ಜೊತೆಗೆ ನಿತ್ಯವೂ ಚರಂಡಿಗಳನ್ನು ಸ್ವಚ್ಛ ಮಾಡಬೇಕು. ರಸ್ತೆಗಳು ಕೆಸರು ಗದ್ದೆಯಾಗುತ್ತದೆ ಕೂಡಲೇ ಜನ ಪ್ರತಿನಿಧಿಗಳು ರಸ್ತೆ ಮತ್ತು ಚರಂಡಿಯನ್ನು ಸರಿಪಡಿಸಿ.

– ನಾಗೇಶ್, ಕೊಳ್ಳೇಗಾಲ ನಿವಾಸಿ

ದುರ್ವಾಸನೆ, ರೋಗ ಹರಡುವ ಭೀತಿ

ಚರಂಡಿಯಲ್ಲಿನ ಕಸ ತೆಗೆಸಿದ್ದಾರೆ. ಆದರೆ ಕೊಳಚೆ ನೀರು ಮಾತ್ರ ಚರಂಡಿಯೊಳಗೆ ನಿಂತಿದೆ. ಇದು ದುರ್ವಾಸನೆ ಬೀರುವುದರ ಜೊತೆಗೆ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಕಾಡುತ್ತಿದೆ. ಕೂಡಲೇ ಅಧಿಕಾರಿಗಳು ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕು.

–ರಾಜಮ್ಮ, ಹನೂರು

ಸಮನ್ವಯತೆಯಿಂದ ಕೆಲಸ ಮಾಡಿ

ಗುಂಡ್ಲುಪೇಟೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಮಟ್ಟಕ್ಕಿಂತ ಚರಂಡಿ ಎತ್ತರವಾಗಿರುವುದರಿಂದ ರಸ್ತೆಯಲ್ಲಿ ಬಿದ್ದ ನೀರು ಚರಂಡಿ ಸೇರದೆ ಇಳಿಮುಖವಾಗಿ ಹರಿದು ಸಂಗ್ರಹವಾಗುತ್ತಿದೆ. ಅಲ್ಲದೆ, ರಸ್ತೆಯ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿಗೆ ಬಳಸಿದ ವಸ್ತುಗಳು ಅಲ್ಲೇ ಬಿದ್ದಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯಲು ತೊಂದರೆಯಾಗುತ್ತಿದೆ. ವಾಹನಗಳಲ್ಲಿ ಅದರಲ್ಲೂ ದ್ವಿಚಕ್ರ ವಾಹನಗಳಲ್ಲಿ ಚಾಲನೆ ಮಾಡುವುದು ಕಷ್ಟಕರವಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ ಸಮಸ್ಯೆ ಬಗೆಹರಿಸಬೇಕು

–ಮಾಧು, ಗುಂಡ್ಲುಪೇಟೆ

ಕಾಯಿಲೆಯ ಭೀತಿಯಿಂದ ಜೀವನ

ಚಾಮರಾಜನಗರದ ಪುಟ್ಟಮ್ಮಣ್ಣಿ ದೇವಸ್ಥಾನ ರಸ್ತೆ ಹಾಗೂ ಸುಧಾಮ ನಗರ ರಸ್ತೆಯಲ್ಲಿ ಚರಂಡಿಯಲ್ಲೇ ಕಸಕಡ್ಡಿ, ಹೂಳು ತುಂಬಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಗಬ್ಬು ವಾಸನೆ ಹರಡಿದೆ. ಕೊಳಚೆ ನೀರಿನ ವಾಸನೆ ಸೇವಿಸುತ್ತಲೇ ಜೀವನ ನಡೆಸಬೇಕಾಗಿದೆ. ಚಿಕ್ಕ ಚಿಕ್ಕ ಮಕ್ಕಳಿದ್ದು, ಅವರಿಗೆಲ್ಲಿ ಕಾಯಿಲೆ ಬರುತ್ತದೋ ಎಂದು ಹೆದರಿಕೆಯಾಗುತ್ತಿದೆ. ಚರಂಡಿ ಸ್ವಚ್ಛಗೊಳಿಸಲು ಅಧಿಕಾರಿಗಳು ಕ್ರಮ ವಹಿಸಬೇಕು

–ನಾಗಮಣಿ, ಕಾಳಮ್ಮ, ಸ್ಥಳೀಯ ನಿವಾಸಿಗಳು, ಚಾಮರಾಜನಗರ

-------

ಅಧಿಕಾರಿಗಳು ಏನಂತಾರೆ?

ಸಮಸ್ಯೆ ಪರಿಹಾರಕ್ಕೆ ವ್ಯವಸ್ಥೆ

ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಚರಂಡಿ ಸಮಸ್ಯೆ ಉಂಟಾಗುವ ಆರು ಸ್ಥಳಗಳನ್ನು ಗುರುತಿಸಿ, ಅಲ್ಲಿ ನೀರಿನ ಹರಿವಿಗೆ ಇರುವ ಅಡೆತಡೆಯನ್ನು ಸರಿಪಡಿಸಲಾಗುತ್ತಿದೆ. 31 ವಾರ್ಟ್‌ಗಳನ್ನು ಮೂರು ವಲಯಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ವಾರ್ಡ್‌ಗೆ ಚರಂಡಿ ಸ್ವಚ್ಛಗೊಳಿಸಲು ಒಬ್ಬರನ್ನು ನಿಯೋಜಿಸಲಾಗಿದೆ. ಮಳೆ ಬಂದಾಗ ಸಮಸ್ಯೆ ಉಂಟಾದರೆ ಅವರು ತಕ್ಷಣ ಸರಿಪಡಿಸುತ್ತಾರೆ. ಬಿ.ರಾಚಯ್ಯ ಜೋಡಿ ರಸ್ತೆಗೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಚರಂಡಿ ನಿರ್ಮಿಸಲು ಸಾಧ್ಯವಾಗಿಲ್ಲ. 

–ಶರವಣ, ಆರೋಗ್ಯ ನಿರೀಕ್ಷಕ, ಚಾಮರಾಜನಗರ ನಗರಸಭೆ

ಶೀಘ್ರದಲ್ಲಿ ಚರಂಡಿ ಸ್ವಚ್ಛ

ಮಳೆಗಾಲಕ್ಕೂ ಮುನ್ನಾ ನಗರದ ಎಲ್ಲ ಚರಂಡಿಗಳ ಹೊಳು ತೆಗೆಸಿ ಸ್ವಚ್ಚ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸ್ಥಗಿತ ಅಥವಾ ನಿಧಾನಗತಿಯಲ್ಲಿ ನಡೆಯುತ್ತಿರುವ ರಸ್ತೆಗಳ ಕಾಮಗಾರಿಗಳನ್ನು ಬೇಗನೇ ಮುಗಿಸಲು ಸೂಚನೆ ನೀಡುತ್ತೇವೆ. ರಸ್ತೆಯಲ್ಲಿರುವ ಹಳ್ಳ ಕೊಳ್ಳಗಳನ್ನು ತಾತ್ಕಾಲಿಕವಾಗಿ ಮಣ್ಣಿನಿಂದ ಮುಚ್ಚಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು.

–ವಿಜಯ್, ಆಯುಕ್ತ, ಕೊಳ್ಳೇಗಾಲ ನಗರಸಭೆ

ಶೀಘ್ರ ಶಾಶ್ವತ ಪರಿಹಾರ

ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಚರಂಡಿಗಳಲ್ಲಿನ ಹೂಳು ತೆಗೆಸಲಾಗಿದೆ. ಕೆಲವು ಕಡೆ ಕಲುಷಿತ ನೀರು ಚರಂಡಿಯಲ್ಲಿ ನಿಲ್ಲುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಶೀಘ್ರದಲ್ಲೇ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು

–ಮೂರ್ತಿ, ಮುಖ್ಯಾಧಿಕಾರಿ, ಹನೂರು ಪಟ್ಟಣ ಪಂಚಾಯಿತಿ

ಕಾಮಗಾರಿ ತ್ವರಿತಕ್ಕೆ ಸೂಚನೆ

ಮಳೆಗಾಲದ ಸಂದರ್ಭದಲ್ಲಿ ಸಮಸ್ಯೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಕಾಮಗಾರಿ ವಿಳಂಬವಾಗಿರುವುದರಿಂದ ತೊಂದರೆ ಆಗುತ್ತಿದೆ. ಶೀಘ್ರವಾಗಿ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು

– ರಮೇಶ್‌, ಮುಖ್ಯಾಧಿಕಾರಿ ಗುಂಡ್ಲುಪೇಟೆ ಪುರಸಭೆ 

 

ಪ್ರಜಾವಾಣಿ ತಂಡ: ಸೂರ್ಯನಾರಾಯಣ ವಿ., ಅವಿನ್‌ ಪ್ರಕಾಶ್‌ ವಿ., ಮಲ್ಲೇಶ ಎಂ., ಬಿ.ಬಸವರಾಜು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು