ಗುರುವಾರ , ಏಪ್ರಿಲ್ 9, 2020
19 °C
ಹನೂರು ಪಟ್ಟಣದಲ್ಲಿ ಅನೈರ್ಮಲ್ಯ ತಾಂಡವ, ಸರಿಯಾಗಿ ಜನತೆಯಲ್ಲಿ ಮೂಡಿಲ್ಲ ಜಾಗೃತಿ

ಸ್ವಚ್ಛ ಹನೂರು ಎಂಬುದು ಬರೀ ಕನಸು!

ಬಿ.ಬಸವರಾಜು‌ Updated:

ಅಕ್ಷರ ಗಾತ್ರ : | |

Prajavani

ಹನೂರು: ನಿಗದಿತ ಸಮಯಕ್ಕೆ ಸರಿಯಾಗಿ ಬಾರದ ಕಸದ ವಾಹನ, ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ಕಿತ್ತು ಬಂದಿರುವ ಚರಂಡಿಗಳು, ಪ್ಲಾಸ್ಟಿಕ್ ತ್ಯಾಜ್ಯದಿಂದಲೇ ಆವೃತವಾಗಿರುವ ತಟ್ಟೆಹಳ್ಳ...

ಹನೂರು ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಒಮ್ಮೆ ಸುತ್ತಾಡಿದರೆ ಕಣ್ಣಿಗೆ ಕಾಣುವ ದೃಶ್ಯಗಳಿವು. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವು ವಾರ್ಡ್‍ಗಳಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ. ಕಸ ವಿಲೇವಾರಿ ಸಮರ್ಪಕವಾಗಿ ಆಗದಿರುವುದರಿಂದ ಸಮಸ್ಯೆ ಬಿಗಡಾಯಿಸಿದ್ದು, ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಭೀತಿಯಲ್ಲಿದ್ದಾರೆ. 

ಅಶುಚಿತ್ವದ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಾರೆ. ಆದರೆ ಸಮಸ್ಯೆ ಮಾತ್ರ ಬಗೆಹರಿಯುವುದಿಲ್ಲ ಎಂಬುದು ಸ್ಥಳೀಯರ ಆರೋಪ.

ನಿಗದಿಪಡಿಸಿದ ಸ್ಥಳದಲ್ಲೇ ತ್ಯಾಜ್ಯ ಹಾಕುವಂತೆ ಮೇಲಿಂದ ಮೇಲೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಕೆಲವು ವಾರ್ಡ್‌ಗಳಲ್ಲಿ ಜನರು ನಿಗದಿತ ಸ್ಥಳ ಬಿಟ್ಟು ಬೇರೆ ಕಡೆಗಳಲ್ಲೇ ಕಸವನ್ನು ಹಾಕುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಹೇಳುತ್ತಾರೆ. 

ಅಧಿಕಾರಿಗಳ ವಾದವನ್ನು ಪಟ್ಟಣದ ಜನ ಒಪ್ಪುತ್ತಿಲ್ಲ. ನಿಗದಿತ ಸ್ಥಳದಲ್ಲಿ ಕಸ ಹಾಕಿದರೂ ಬೀಡಾಡಿ ಜಾನುವಾರುಗಳು ಕಸವನ್ನು ಚೆಲ್ಲಾಪಿಲ್ಲಿ ಮಾಡುತ್ತವೆ. ಕಸ ಹಾಕಲು ಗುರುತಿಸಿರುವ ಸ್ಥಳಗಳಲ್ಲಿ ತೊಟ್ಟಿ ಇರಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎಂಬುದು ಸ್ಥಳೀಯ ನಿವಾಸಿಗಳ ಅಭಿಪ್ರಾಯ. 

ತಟ್ಟೆಹಳ್ಳ ಪ್ಲಾಸ್ಟಿಕ್‌ ಮಯ: ಪಟ್ಟಣದಲ್ಲಿರುವ ತಟ್ಟೆಹಳ್ಳ ಅವ್ಯವಸ್ಥೆ ಬಗ್ಗೆ ಸ್ಥಳೀಯರಿಂದ ವ್ಯಾಪಕ ದೂರು ಕೇಳಿ ಬಂದಿದ್ದರಿಂದ ₹1 ಕೋಟಿ ವೆಚ್ಚದಲ್ಲಿ ತಟ್ಟೆಹಳ್ಳದಲ್ಲಿ ಚರಂಡಿ ನಿರ್ಮಿಸಿ ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಅದು ಅವನತಿಯತ್ತ ಸಾಗಿದೆ ಎಂದು ಆರೋಪಿಸುತ್ತಾರೆ ಇಲ್ಲಿನ ಸ್ಥಳೀಯರು.

ಪಟ್ಟಣದಲ್ಲಿರುವ ಅಷ್ಟೂ ಚರಂಡಿಗಳ ನೀರು ಬಂದು ಸೇರುವುದು ತಟ್ಟೆಹಳ್ಳಕ್ಕೆ. ನಿರ್ವಹಣೆಯಿಲ್ಲದೇ ಹಳ್ಳ ಪೂರ್ತಿ ಪ್ಲಾಸ್ಟಿಕ್‍ಮಯವಾಗಿದೆ. ಚರಂಡಿ ನೀರಿನೊಂದಿಗೆ ಬರುವ ಪ್ಲಾಸ್ಟಿಕ್ ಮುಂದೆ ಹೋಗದೇ ಒಂದೇ ಕಡೆ ನಿಲ್ಲುವುದರಿಂದ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಅಲ್ಲದೇ ಹಳ್ಳದ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿರುವುದರಿಂದ ಸೊಳ್ಳೆಗಳ ಹಾಗೂ ವಿಷಜಂತುಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ.

ಮೂರನೇ ವಾರ್ಡಿನ ದೇವಾಂಗ ಪೇಟೆಯಲ್ಲಿರುವ ಚರಂಡಿ ಗಳೆಲ್ಲಾ ತುಂಬಿವೆ. ಇಲ್ಲಿರುವ ಚಲುವ ರಾಯಸ್ವಾಮಿ ದೇವಾಲಯಕ್ಕೆ ಭಕ್ತರು ಬರುತ್ತಾರೆ. ಆದರೆ ಇಲ್ಲಿನ ದುರ್ವಾಸನೆ ತಾಳಲಾರದೆ ಮಹಿಳೆಯರು ಮಕ್ಕಳು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಏಳನೆ ವಾರ್ಡ್‌ನ ಲ್ಲಿಯೂ ಇದೇ ಸಮಸ್ಯೆ ತಲೆ ದೋರಿದೆ.

‘ಪ್ರತಿದಿನ ಶಾಲಾ ಮಕ್ಕಳು ಈ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ ಚರಂಡಿ ತುಂಬಿ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುವುದರಿಂದ ಮಕ್ಕಳು ಪ್ರತಿದಿನ ಇದನ್ನು ಸಹಿಸಿಕೊಂಡೇ ಶಾಲೆಗೆ ತೆರಳಬೇಕಿದೆ. 6ನೇ ವಾರ್ಡ್‌ನಲ್ಲೂ ಈ ಸಮಸ್ಯೆ ಇದೆ. ಈಚೆಗೆ ಸುರಿದ ಮಳೆಗೆ ಚರಂಡಿ ನೀರೆಲ್ಲಾ ರಸ್ತೆ ಮೇಲೆ ಹರಿದಿತ್ತು. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಇಲ್ಲಿನ ನಿವಾಸಿಗಳು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು. 

ಒಂದೇ ವಾಹನ: ಪಟ್ಟಣದಲ್ಲಿ ಕಸವಿಲೇವಾರಿ ಸಮಪರ್ಕವಾಗಿ ನಡೆಯದೇ ಇರುವುದು ಇದಕ್ಕೆ ಪ್ರಮುಖ ಕಾರಣ. 13ನ ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸಲು ಪಟ್ಟಣ ಪಂಚಾಯಿತಿಯ ಬಳಿ ಇರುವುದು ಒಂದೇ ವಾಹನ. ಪ್ರತಿ ದಿನ ವಾರ್ಡ್‌ಗಳಲ್ಲಿ ಉತ್ಪತ್ತಿಯಾಗುವ ಕಸವ‌ನ್ನು ಒಂದೇ ಟ್ರ್ಯಾಕ್ಟರ್‌ನಲ್ಲಿ ಸಂಗ್ರಹಿಸಬೇಕು. ಒಂದೇ ಟ್ರ್ಯಾಕ್ಟರ್‌ ಪ್ರತಿ ದಿನ ಎಲ್ಲ ವಾರ್ಡ್‌ಗೆ ಹೋಗಬೇಕು ಎಂದರೆ ಕಷ್ಟ. ಕಸ ವಿಲೇವಾರಿ ಸುಲಲಿತವಾಗಿ
ನಡೆಯಬೇಕಾದರೆ, ಇಡೀ ಪಟ್ಟಣ ಪಂಚಾಯಿತಿಗೆ ಕನಿಷ್ಠ ನಾಲ್ಕು ವಾಹನಗಳು ಬೇಕು ಎಂದು ಹೇಳುತ್ತಾರೆ
ಅಧಿಕಾರಿಗಳು. 

ಜನರಲ್ಲಿ ಮೂಡದ ಜಾಗೃತಿ: ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಪಟ್ಟಣ ಪಂಚಾಯಿತಿ ಸಾಕಷ್ಟು ಪ್ರಯತ್ನ ಪಡುತ್ತಿದ್ದರೂ ಜನರಲ್ಲಿ ಇನ್ನೂ ಅರಿವು ಮೂಡಿದಂತೆ ಕಾಣುತ್ತಿಲ್ಲ. ಕೆಲವು ವಾರ್ಡ್‌ಗಳಲ್ಲಿ ನಿವಾಸಿಗಳು ಖಾಲಿ ನಿವೇಶನಗಳು, ಎಲ್ಲೆಂದರಲ್ಲಿ ಕಸವನ್ನು ಎಸೆಯುತ್ತಾರೆ. ಮೂಲದಲ್ಲೇ ಕಸ ಬೇರ್ಪಡಿಸಬೇಕು ಎಂಬ ನಿಯಮವೂ ಸರಿಯಾಗಿ ಪಾಲನೆಯಾಗುತ್ತಿಲ್ಲ. 

‘ಎರಡು ದಿನಗಳಿಗೊಮ್ಮೆ ಮನೆ ಮನೆಗಳಿಂದ ಕಸ ಸಂಗ್ರಹಿಸಲು ಪ್ರಯತ್ನಿಸುತ್ತೇವೆ. ಎರಡರಿಂದ ಮೂರು ದಿನ ಜನರು ಮನೆಗಳಲ್ಲಿ ಕಸ ಇಟ್ಟುಕೊಳ್ಳಬಹುದು. ಆದರೆ, ಪ್ಲಾಸ್ಟಿಕ್‌ ಚೀಲದಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಾರೆ. ಜನರ ಸಹಕಾರ ಇಲ್ಲದಿದ್ದರೆ ಸ್ವಚ್ಛತೆ ಕಾಪಾಡುವುದು ಸಾಧ್ಯವಿಲ್ಲ’ ಎಂದು ಅಸಹಾಯಕತೆ ತೋರುತ್ತಾರೆ ಅಧಿಕಾರಿಗಳು. 

ಪೌರಕಾರ್ಮಿಕರ ಕೊರತೆ

13 ವಾರ್ಡ್‍ಗಳನ್ನು ಹೊಂದಿರುವ ಪಟ್ಟಣ ಪಂಚಾಯಿತಿಯಲ್ಲಿ ಎದುರಾಗಿರುವ ಅಶುಚಿತ್ವಕ್ಕೆ ಪೌರಕಾರ್ಮಿಕರ ಕೊರತೆಯೇ ಕಾರಣ ಎಂಬುದು ನಿವಾಸಿಗಳ ಆರೋಪ.

ಪಂಚಾಯಿತಿಗೆ 17 ಪೌರ ಕಾರ್ಮಿಕರ ಹುದ್ದೆ ಮಂಜೂರಾಗಿದೆ. ಪ್ರಸಕ್ತ 11 ಕಾರ್ಮಿಕರಿದ್ದಾರೆ. ಹಬ್ಬ ಹಾಗೂ ವಿಶೇಷ ಸಂದರ್ಭದಲ್ಲಿ ದಿನಗೂಲಿ ಆಧಾರದ ಮೇಲೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿಕೊಂಡರೂ ಸ್ವಚ್ಛತೆ ಕಾಪಾಡಲು ಅಧಿಕಾರಿಗಳು ಪರದಾಡುವಂತಾಗಿದೆ.

ಒಂದು ವಾರ್ಡಿಗೆ ಕನಿಷ್ಠ ಇಬ್ಬರು ಪೌರಕಾರ್ಮಿಕರ ಅವಶ್ಯಕತೆಯಿದೆ. ಆದರೆ ಅಗತ್ಯವಿರುವ ಸಿಬ್ಬಂದಿಯೇ ಇಲ್ಲದಿರುವುದರಿಂದ ಕಾರ್ಯನಿರ್ವಹಿಸುವುದು ಕಷ್ಟವಾಗಿದೆ. ಸಿಬ್ಬಂದಿ ಕೊರತೆಯನ್ನು ನೀಗಿಸುವ ಸಲುವಾಗಿ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನಿಯೋಜಿಸಿಕೊಳ್ಳಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು.

‘ಸಮಸ್ಯೆ ನಿವಾರಣೆಗೆ ಯೋಜನೆ ಸಿದ್ಧ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮೂರ್ತಿ ಅವರು, ‘ಕಸ ವಿಲೇವಾರಿಗೆ ಒಂದೇ ವಾಹನ ಇರುವುದರಿಂದ ಒಂದೊಂದು ವಾರ್ಡ್‌ಗಳಿಗೆ ಎರಡು ದಿನಕ್ಕೊಮ್ಮೆ ಹೋಗುತ್ತಿದೆ. ಇದರಿಂದಾಗಿ ಸ್ವಲ್ಪ ಸಮಸ್ಯೆ ಆಗಿದೆ. ಹೆಚ್ಚುವರಿ ವಾಹನ ಸೌಲಭ್ಯಕ್ಕಾಗಿ ಸಭೆಯಲ್ಲಿ ಈಗಾಗಲೇ ಕ್ರಿಯಾಯೋಜನೆ ತಯಾರಿಸಿ ಹಿರಿಯ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಅಧಿಕಾರಿಗಳಿಂದ ಅನುಮತಿ ದೊರತರೆ ವಾಹನ ಸೌಲಭ್ಯಕ್ಕೆ ಕ್ರಮ ವಹಿಸಲಾಗುವುದು. ಇಲ್ಲದಿದ್ದರೆ ದಿನದ ಬಾಡಿಗೆ ಲೆಕ್ಕದಲ್ಲಿ ಖಾಸಗಿ ವಾಹನಗಳನ್ನು ಬಳಸಿಕೊಳ್ಳಲಾಗುವುದು’ ಎಂದು ಅವರು ಹೇಳಿದರು. 

‘ಪಟ್ಟಣದಲ್ಲಿರುವ ಸಮಸ್ಯೆ ಬಗ್ಗೆ ಈಗಾಗಲೇ ಸ್ಥಳೀಯ ಸದಸ್ಯರ ಜೊತೆ ಚರ್ಚಿಸಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಯೋಜನೆ ತಯಾರಿಸಲಾಗಿದೆ. ಪಟ್ಟಣದ ಸ್ವಚ್ಛತೆ ಕಾಪಾಡಲು ಅಧಿಕಾರಿಗಳ ಜೊತೆ ಜನರೂ ಸ್ಪಂದಿಸಬೇಕು’ ಎಂದು ಅವರು ಮನವಿ ಮಾಡಿದರು. 

ಸಮಸ್ಯೆ ನಿವಾರಿಸಿಲ್ಲ

ದೇವಾಂಗಪೇಟೆ ಬಡಾವಣೆಯಲ್ಲಿರುವ ಅಶುಚಿತ್ವದ ಬಗ್ಗೆ ಅಧಿಕಾರಿಗಳನ್ನು ಕರೆಸಿ ಸಮಸ್ಯೆ ತೋರಿಸಿದ್ದೇವೆ. ಸ್ಥಳಕ್ಕೆ ಬಂದು ಪರಿಶೀಲಿಸಿ ಹೋದ ಅಧಿಕಾರಿಗಳು ಇದುವರೆಗೂ ಬಡಾವಣೆಯಲ್ಲಿರುವ ಸಮಸ್ಯೆ ನಿವಾರಿಸಿಲ್ಲ.

– ಕೇಶವ, 3ನೇ, ವಾರ್ಡ್ ನಿವಾಸಿ

ವಾರ್ಡ್‌ಗಳ ನಿರ್ಲಕ್ಷ್ಯ

ಅಧಿಕಾರಿಗಳು ಪ್ರತಿದಿನ ಬಸ್‍ನಿಲ್ದಾಣ ಹಾಗೂ ಸುತ್ತಮುತ್ತಲಿನ ಶುಚಿತ್ವಕ್ಕೆ ಮಾತ್ರ ಗಮನ ನೀಡುತ್ತಿದ್ದಾರೆ. ಇತರೆ ವಾರ್ಡ್‍ಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಮನೆ ಮುಂದೆ ಇರುವ ಚರಂಡಿ ನೀರು ಮಳೆ ಬಂದರೆ ರಸ್ತೆ ಮೇಲೆಯೇ ಹರಿಯುತ್ತದೆ. ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮಕೈಗೊಳ್ಳಬೇಕು.

–ಚಂದ್ರಶೇಖರ್, 6ನೇ ವಾರ್ಡ್‌ ನಿವಾಸಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು