ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ರ್ರೀಯ ಪಕ್ಷಿಗಳ ದಿನ: ಪಕ್ಷಿಗಳ ಸುಂದರ ಜಗತ್ತಿಗೂ ಸಂಚಕಾರ!

Published 5 ಜನವರಿ 2024, 6:58 IST
Last Updated 5 ಜನವರಿ 2024, 6:58 IST
ಅಕ್ಷರ ಗಾತ್ರ

ಯಳಂದೂರು: ಅಣೆಕಟ್ಟೆ, ಕೆರೆಗಳು ಹಾಗೂ ಗಿರಿ ಶ್ರೇಣಿಗಳ ಸುಂದರ ಪರಿಸರಕ್ಕೆ ತಾಲ್ಲೂಕು ಹೆಸರುವಾಸಿ. ಇಲ್ಲಿನ ನಿಸರ್ಗ ಪ್ರಾಣಿ-ಪಕ್ಷಿಗಳ ತಾಣ. ನೂರಾರು ವಲಸೆಹಕ್ಕಿ, ಸ್ಥಳೀಯ ಪಕ್ಷಿಗಳ ಸಂಗಮ ಸ್ಥಳವಾಗಿದೆ.

ಅಪರೂಪದ ಗೂಬೆ, ಬಿಳಿ ಕಾಗೆ, ಹಸಿರು ಪಾರಿವಾಳ, ನವಿಲು,  ಬುಲ್‌ಬುಲ್, ಜೇನುಕುಟಿಗ, ಬಾಳೆಗಿಳಿ, ನೀಲಹಕ್ಕಿ, ಟ್ರೀಫೈ, ಮಿನಿವೆಟ್, ಮೈನಾ, ಬೀಸಣಿಗೆ ಬಾಲದ ಡ್ರೋಂಗೊ... ಸೇರಿದಂತೆ ಹಲವು ಹಕ್ಕಿಗಳು ಪಕ್ಷಿ ಪ್ರಿಯರನ್ನು ಆಕರ್ಷಿಸುತ್ತವೆ.

‘ಜಾಗತಿಕವಾಗಿ 10 ಸಾವಿರ ಪಕ್ಷಿ ಪ್ರಭೇದಗಳನ್ನು ದಾಖಲಿಸಲಾಗಿದೆ. ಭಾರತದಲ್ಲಿ 1,350ಕ್ಕೂ ಹೆಚ್ಚಿವೆ. ಕರ್ನಾಟಕದಲ್ಲಿ 570ಪಕ್ಷಿ ಸಂಕುಲಗಳಿವೆ. ಬಿಳಿಗಿರಿರಂಗನ ಬೆಟ್ಟದ ಕಾಡಿನ ಪ್ರಕೃತಿಯಲ್ಲಿ 274 ಬಾನಾಡಿಗಳನ್ನು ‌ದಾಖಲಿಸಲಾಗಿದೆ’ ಎಂದು ವನ್ಯಜೀವಿ ಛಾಯಾಗ್ರಾಹಕ ನವೀನ್‌ ಜಗಲಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬಿಳಿಗಿರಿಬನಕ್ಕೆ ಬೂದು ಡ್ರೋಂಗೊ ಹಾಗೂ ಗೋಲ್ಡನ್ ಆರಿಯೋಲ್ ವಲಸೆ ಬರುತ್ತವೆ. ಚಳಿಗಾಲ ಮುಗಿಯುವ ತನಕ ಇದ್ದು ಹೋಗುತ್ತವೆ. ಕೆಲವು ಹಕ್ಕಿಗಳು ಕಳೆದ ವರ್ಷ ವಾಸವಿದ್ದ ಸ್ಥಳ ಗುರುತಿಸಿ ಗೂಡು ಕಟ್ಟುತ್ತವೆ. ಅವು ಸೂರ್ಯ, ಚಂದ್ರ, ತಾರೆಗಳ ಚಲನವಲನ ಗಮನಿಸಿ ಸಾವಿರಾರು ಕಿಲೋ ಮೀಟರ್ ದೂರ ಕ್ರಮಿಸಿ ಇತ್ತ ಬರುತ್ತವೆ. ಇವುಗಳ ಸಂಚಾರ, ಸೃಜನಶಕ್ತಿ ಮತ್ತು ಮೂಲಸ್ಥಳದ ಸ್ಮರಣೆ ಪರಮ ವಿಸ್ಮಯಗಳ ಆಗರ. ಸಸ್ಯ, ವೃಕ್ಷ ನಮೂನೆಗಳ ಉಳಿವಿನಲ್ಲೂ ಹಕ್ಕಿಗಳ ಕೊಡುಗೆ ಅಪಾರ’ ಎಂದು ಏಟ್ರೀ ಸಂಸ್ಥೆಯ ಕ್ಷೇತ್ರಪಾಲಕ ಜಡೇಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಅರಣ್ಯ ನಾಶ, ಹವಾಮಾನ ಬದಲಾವಣೆ, ಜಾಗತಿಕ ತಾಪ ಏರಿಕೆಯಿಂದ ಶೇ 12 ಅಪರೂಪದ ಪಕ್ಷಿಗಳು ಅಳಿವಿನಂಚಿನಲ್ಲಿವೆ. 330 ಗಿಣಿಜಾತಿ ಅಪಾಯದಲ್ಲಿವೆ. ವಾಣಿಜ್ಯ ಉದ್ದೇಶಕ್ಕೆ ಹದ್ದುಗಳು, ಮಕಾವ್ಸ್, ಬಾರ್ಬೆಟ್ ಬಳಕೆಯಾದರೆ, ಕಕಾಪು, ಫ್ರೂಟ್ಡವ್,  ಗ್ರೇಟ್ ಇಂಡಿಯನ್ ಬಸ್ಟರ್ಡ್, ಕೆಂಪುತಲೆಯ ರಣಹದ್ದು, ಕಾಡುಗೂಬೆ, ಬಕಪಕ್ಷಿಗಳನ್ನು ಉಳಿಸಲು ಜಾಗೃತಿ ಮೂಡಿಸಬೇಕಿದೆ’ ಎಂದು ಹೇಳುತ್ತಾರೆ ವನ್ಯಜೀವಿ ಪ್ರೇಮಿಗಳು. 

‘ಚಳಿಗಾಲದಲ್ಲಿ ವಲಸೆ ಹಕ್ಕಿಗಳು ತಾಲ್ಲೂಕಿನ ಅರಣ್ಯಗಳಲ್ಲಿ ಮನೆ ಮಾಡಿ, ಗೂಡು ಕಟ್ಟಿ, ವಂಶಾಭಿವೃದ್ಧಿ ನಂತರ ಮೂಲ ನೆಲೆಗಳಿಗೆ ಹಿಂದಿರುಗುತ್ತವೆ. ಮಾಂಸ, ಅವುಗಳ ಗರಿಗಳು, ಎಣ್ಣೆ ಮತ್ತು ಬೇಟೆಯಿಂದ ಪಕ್ಷಿಗಳ ಬದುಕಿಗೆ ಕಂಟಕವಾಗಿದೆ. ಕೆಲವರು ಪಂಜರದಲ್ಲಿ ಇಟ್ಟು ಜೂಜಾಟಕ್ಕೆ ಬಳಸಿದರೆ, ಕೆಲವೆಡೆ ವಿದೇಶಕ್ಕೂ ಸಾಗಣೆ ಮಾಡಿ ಹಣ ಸಂಪಾದಿಸುವ ದಂಧೆ ಜಾಗತಿಕವಾಗಿ ನಡೆಯುತ್ತಿದೆ. ಪಕ್ಷಿಗಳ ಸಂತತಿ ಉಳಿಸಬೇಕಾದರೆ, ಇವುಗಳಿಗೆ ಕಡಿವಾಣ ಹಾಕಬೇಕಿದೆ’ ಎಂದು ಹೇಳುತ್ತಾರೆ ನವೀನ್‌ ಜಗಲಿ.  

ನೊಣ ಹಿಡುಕ ಹಕ್ಕಿ
ನೊಣ ಹಿಡುಕ ಹಕ್ಕಿ
ಬಿಆರ್‌ಟಿ ಅರಣ್ಯದಲ್ಲಿ ಕಂಡು ಬರುವ ಕಾಪ‍ರ್‌ ಸ್ಮಿತ್‌ 
ಬಿಆರ್‌ಟಿ ಅರಣ್ಯದಲ್ಲಿ ಕಂಡು ಬರುವ ಕಾಪ‍ರ್‌ ಸ್ಮಿತ್‌ 
ಮಾಂಸ, ಗರಿ, ಎಣ್ಣೆ, ಬೇಟೆ ಹಕ್ಕಿ ಬದುಕಿಗೆ ಕಂಟಕ ಜೂಜಾಟ, ವಿದೇಶಕ್ಕೆ ಸಾಗಣೆ ದಂಧೆ ಕಡಿವಾಣಕ್ಕೆ ಆಗ್ರಹ
ರಾಷ್ಟ್ರೀಯ ಪಕ್ಷಿಗಳ ದಿನ ಇಂದು
2002ರಿಂದ ಅಮೆರಿಕದಲ್ಲಿ ಜನವರಿ 5ರಂದು ರಾಷ್ಟ್ರೀಯ ಹಕ್ಕಿಗಳ ದಿನ ಆಚರಿಸಲಾಗುತ್ತಿದೆ. ಜನವರಿ ಐದು ಕ್ರಿಸ್‌ಮಸ್‌ ಹಕ್ಕಿಗಳ ಗಣತಿ ದಿನವೂ ಹೌದು.  ಕಾಡು ಪಕ್ಷಿಗಳನ್ನು ಎಣಿಸುವ ವಿಶ್ವದ ಅತಿದೊಡ್ಡ ನಾಗರಿಕ ವಿಜ್ಞಾನ ಯೋಜನೆಯ ಭಾಗವಾಗಿ ಗುರುತಿಸಲಾಯಿತು. ‘ಭಾರತದಲ್ಲಿ ಮಾನವನ ಹಸ್ತಕ್ಷೇಪ ಕೃಷಿಯಲ್ಲಿ ಅತಿಯಾದ ಕೀಟನಾಶಕ ಬಳಕೆ ಅಕ್ರಮ ಸಾಗಣೆ ಕಾಯಿಲೆ ಮತ್ತು ಅನಿರೀಕ್ಷಿತ ಅವಘಡಗಳಿಂದ ಹಕ್ಕಿ ಕುಟುಂಬದ ಅವಸಾನ ತಪ್ಪಿಸಬೇಕು.  ಸಿಂಗಾಪುರದಿಂದ ಸಿಕ್ಕಿಂ – ಕೇರಳ ರಾಜ್ಯದಿಂದ ಕಾಶ್ಮೀರ ತನಕ ಗಡಿ ಮೀರಿ ಹಾರಾಡುವ ಬಣ್ಣದ ಹಕ್ಕಿಗಳನ್ನು ಉಳಿಸಬೇಕು’ ಎಂಬುದು ಪಕ್ಷಿ ಪ್ರಿಯರ ಒತ್ತಾಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT