ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಯಲ್ಲಿ ಕ್ಷಿಪ್ರ ವಿಪತ್ತು ಕಾರ್ಯ ತಂಡ

ರಾಜ್ಯದಲ್ಲೇ ಮೊದಲ ಪ್ರಯತ್ನ, 50 ಸ್ವಯಂ ಸೇವಕರ ತರಬೇತಿಗೆ ನಿರ್ಧಾರ
Last Updated 20 ಫೆಬ್ರುವರಿ 2021, 7:40 IST
ಅಕ್ಷರ ಗಾತ್ರ

ಚಾಮರಾಜನಗರ: ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ತುರ್ತು ರಕ್ಷಣಾ ಕಾರ್ಯ ಕೈಗೊಳ್ಳಲು, ಜಿಲ್ಲೆಯಲ್ಲಿ 50 ಸ್ವಯಂ ಸೇವಕರನ್ನೊಳಗೊಂಡ ಕ್ಷಿಪ್ರ ವಿಪತ್ತು ಕಾರ್ಯ ತಂಡವನ್ನು (ಡಿ–ಆರ್‌ಎಟಿ) ಸ್ಥಾಪಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಇಡೀ ರಾಜ್ಯದಲ್ಲೇ ಇಂತಹ ಪ್ರಯತ್ನ ನಡೆಯುತ್ತಿರುವುದು ಇದೇ ಮೊದಲು. ಜಿ‌ಲ್ಲಾ‌ಧಿಕಾರಿ ಡಾ.ಎಂ.ಆರ್.ರವಿ ಅವರ ಪರಿಕಲ್ಪನೆಯ ಈ ಯೋಜನೆಗೆ ನೆಹರು ಯುವ ಕೇಂದ್ರ ಕೈಜೋಡಿಸಿದೆ. ಜಿಲ್ಲೆಯಲ್ಲಿ ಸಂಭವಿಸಬಹುದಾದ ವಿವಿಧ ರೀತಿಯ ನೈಸರ್ಗಿಕ ವಿಕೋಪಗಳನ್ನು ಗಮನದಲ್ಲಿಟ್ಟುಕೊಂಡು ಈ ತಂಡವನ್ನು ಸಜ್ಜುಗೊಳಿಸಲಾಗುತ್ತಿದೆ.

ನೆಹರು ಯುವ ಕೇಂದ್ರದ ಅಡಿಯಲ್ಲಿ, ಸ್ವಯಂ ಸೇವಕರು ವಿಪತ್ತು ನಿರ್ವಹಣಾ ತರಬೇತಿ ಪಡೆಯಲಿದ್ದಾರೆ. ಇದೇ 22ರಂದು ಸ್ವಯಂ ಸೇವಕರಿಗೆ ಜಿಲ್ಲಾಡಳಿತ ತರಬೇತಿ ನೀಡಲಿದೆ. ಪ್ರತಿ ತಾಲ್ಲೂಕಿನಿಂದ ತಲಾ 10 ಸ್ವಯಂ ಸೇವಕರನ್ನು ವಿಪತ್ತು ನಿರ್ವಹಣೆಯಲ್ಲಿ ಪಳಗಿಸಿ, ನಂತರ ಅವರ ಮೂಲಕ ಯುವಕ ಮಂಡಲ, ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳಿಗೆ ತರಬೇತಿ ನೀಡುವುದು ಜಿಲ್ಲಾ
ಡಳಿತದ ಯೋಚನೆ.

‘ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಇರುತ್ತದೆ. ಜಿಲ್ಲೆಯಲ್ಲಿ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಅದನ್ನು ನಿರ್ವಹಿಸುವುದು ಅದರ ಜವಾಬ್ದಾರಿ. ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಾಧಿಕಾರದ ಸದಸ್ಯರಾಗಿರುತ್ತಾರೆ. ಆದರೆ, ಯಾರೂ ವಿಪತ್ತು ನಿರ್ವಹಣೆಯ ತರಬೇತಿ ಪಡೆದಿರುವುದಿಲ್ಲ. ಈ ಉದ್ದೇಶಕ್ಕಾಗಿ ಪ್ರತ್ಯೇಕ ತಂಡವೊಂದರ ಅಗತ್ಯವಿದೆ. ಅದಕ್ಕಾಗಿ ಈ ಯೋಜನೆಯನ್ನು ರೂಪಿಸಲಾಯಿತು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ತಿಳಿಸಿದರು.

ತುರ್ತು ಪರಿಸ್ಥಿತಿಯಲ್ಲಿ ಅನುಕೂಲ: ‘ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚು. ಕಾಳ್ಗಿಚ್ಚು ಸಂಭವಿಸುತ್ತಿರುತ್ತದೆ. ಮಳೆಗಾಲದಲ್ಲಿ, ಕೊಳ್ಳೇಗಾಲ ಭಾಗದಲ್ಲಿ ಪ್ರವಾಹ ಉಂಟಾಗುತ್ತದೆ. ಬೆಟ್ಟ ಗುಡ್ಡದ ಪ್ರದೇಶಗಳಿರುವುದರಿಂದ ಭೂಕುಸಿತದ ಸಾಧ್ಯತೆಯೂ ಇದೆ. ದೇವಸ್ಥಾನಗಳಲ್ಲಿ ನಡೆಯುವ ಜಾತ್ರೆಯ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಹಾಗಾಗಿ, ಜಿಲ್ಲೆಯಲ್ಲಿ ಸಂಭವಿಸಬಹುದಾದ ವಿಪತ್ತುಗಳನ್ನು ಗಮನದಲ್ಲಿಟ್ಟುಕೊಂಡು ಸ್ವಯಂ ಸೇವಕರಿಗೆ ತರಬೇತಿ ನೀಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ವಿವರಿಸಿದರು.

ನೈಸರ್ಗಿಕ ಪ್ರಕೋಪ ಸಂಭವಿಸಿದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಲು ರಾಜ್ಯ ವಿಪತ್ತು ಕಾರ್ಯ ಪಡೆ (ಎಸ್‌ಡಿಆರ್‌ಎಫ್‌), ರಾಷ್ಟ್ರೀಯ ವಿಪತ್ತು ಕಾರ್ಯ ಪಡೆ (ಎನ್‌ಡಿಆರ್‌ಎಫ್‌) ಬರುತ್ತವೆ . ಈ ಪಡೆಗಳು ದೂರದಲ್ಲೆಲ್ಲೋ ಇರುತ್ತವೆ. ಅವು ತಲುಪುವಾಗ ಸಾಕಷ್ಟು ಸಮಯವೂ ಆಗುತ್ತದೆ. ಜಿಲ್ಲೆಯಲ್ಲೇ ಇಂತಹದ್ದೇ ಒಂದು ರಕ್ಷಣಾ ತಂಡ ಇದ್ದರೆ, ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ತಂಡದ ಅವಲಂಬನೆಯನ್ನು ಕಡಿಮೆ ಮಾಡಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT